ಚೂರು ಯಾಮಾರಿದ್ರೂ ಮಕ್ಕಳಿಗೆ ಮಲೇರಿಯಾ; ಪೋಷಕರು ಓದಲೇಬೇಕಾದ ಸ್ಟೋರಿ ಇದು

author-image
Ganesh Nachikethu
Updated On
ಚೂರು ಯಾಮಾರಿದ್ರೂ ಮಕ್ಕಳಿಗೆ ಮಲೇರಿಯಾ; ಪೋಷಕರು ಓದಲೇಬೇಕಾದ ಸ್ಟೋರಿ ಇದು
Advertisment
  • ಮಕ್ಕಳಲ್ಲಿ ಕಂಡು ಬರುವ ಮಲೇರಿಯಾದ ಸಾಮಾನ್ಯ ಲಕ್ಷಣಗಳೇನು ಗೊತ್ತಾ?
  • ಪೋಷಕರು ತಮ್ಮ ಮಕ್ಕಳನ್ನು ಮಲೇರಿಯಾದಿಂದ ಹೇಗೆ ರಕ್ಷಿಸಿಕೊಳ್ಳಬಹುದು?
  • ಸೋಂಕಿತ ಮಗುವಿನ ಸಂಪರ್ಕದಿಂದ ಮಕ್ಕಳಿಗೆ ಮಲೇರಿಯಾ ಹರಡುತ್ತದೆಯೇ?

ಪ್ರಪಂಚದಾದ್ಯಂತ ಮಲೇರಿಯಾ ನಿಯಂತ್ರಿಸಲು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತದೆ. ಎಷ್ಟೇ ಜಾಗೃತಿ ಮೂಡಿಸಿದ್ರೂ ಜನರಿಗೆ ಈ ಬಗ್ಗೆ ಅರಿವು ಕಡಿಮೆ. ಇದರ ಪರಿಣಾಮ ಮಲೇರಿಯಾ ಕಾಯಿಲೆಯು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಈ ಬಗ್ಗೆ ಪೋಷಕರು ಕೆಲವು ಕ್ರಮಗಳನ್ನು ಕೈಗೊಳ್ಳಲೇಬೇಕು.

ಮಲೇರಿಯಾ ಹರಡುವುದು ಹೇಗೆ?

ಮಲೇರಿಯಾ ಸೊಳ್ಳೆಯಿಂದ ಹರಡುವ ರೋಗವಾಗಿದೆ. ಪ್ಲಾಸ್ಮೋಡಿಯಂ ಫಾಲ್ಸಿಪಾರಮ್‌ ಎಂಬುದು ಇದಕ್ಕೆ ಕಾರಣವಾಗಿದೆ. ಈ ಕಾಯಿಲೆಯು ಮಕ್ಕಳು ಮತ್ತು ವಯಸ್ಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ವ್ಯಕ್ತಿಯು ಸೊಳ್ಳೆಯ ಕಡಿತಕ್ಕೆ ಒಳಗಾದ ನಂತರ ಮಲೇರಿಯಾದ ಪರಾವಲಂಬಿಗಳು ಆ ವ್ಯಕ್ತಿಯ ಯಕೃತ್ ಅನ್ನು ಸೇರಿಕೊಂಡು ಯಕೃತ್ತಿನ ಜೀವಕೋಶಗಳಲ್ಲಿ ದ್ವಿಗುಣಗೊಂಡು ಕೆಂಪು ರಕ್ತ ಕಣಗಳನ್ನು ಸೋಂಕಿಗೆ ಒಳಪಡಿಸುತ್ತವೆ. ಜ್ವರ, ತಲೆನೋವು, ವಾಕರಿಕೆ, ವಾಂತಿ ಮತ್ತು ಕೆಲವೊಮ್ಮೆ ಅತಿಸಾರ ಬೇಧಿಯಾಗುವುದು ಈ ಕಾಯಿಲೆಯ ಲಕ್ಷಣಗಳು. ಕಾಯಿಲೆ ಅತಿಯಾದಾಗ ಅಂಗಾಂಗ ವೈಫಲ್ಯಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ.

ಮಲೇರಿಯಾದ ಸಾಮಾನ್ಯ ಲಕ್ಷಣಗಳೇನು?

ಮಲೇರಿಯಾ ಸೋಂಕಿತ ಮಕ್ಕಳು ಸಾಮಾನ್ಯವಾಗಿ ಜ್ವರದಿಂದ ಬಳಲುತ್ತಿರುತ್ತಾರೆ. ಅದಲ್ಲದೆ ಶೀತ, ತಲೆನೋವು, ವಾಕರಿಕೆ, ವಾಂತಿ ಮತ್ತು ಭೇದಿ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಲೇರಿಯಾ ಹೊಂದಿರುವ ಎಲ್ಲಾ ಮಕ್ಕಳು ಜ್ವರದ ಜೊತೆಗೆ ಶೀತವನ್ನು ಹೊಂದಿರುವುದಿಲ್ಲ. ಆದರೆ ಅಸ್ವಸ್ಥತೆ ಅಥವಾ ಆಯಾಸದಂತಹ ಇತರ ರೋಗಲಕ್ಷಣಗಳನ್ನೂ ಹೊಂದಿರಬಹುದು.

publive-image

ಮಲೇರಿಯಾ ಪೀಡಿತ ಮಗುವಿನ ಆರೈಕೆ ಹೇಗಿರಬೇಕು?

ಮಲೇರಿಯಾ ಪೀಡಿತ ಮಗುವಿನ ಆರೈಕೆಯಲ್ಲಿ ಪೋಷಕರು ಪ್ರಮುಖ ಪಾತ್ರವಹಿಸುತ್ತಾರೆ. ಕಾಯಿಲೆಯಿಂದ ಕೂಡಿರುವ ಮಗುವಿಗೆ ಪ್ಯಾರಾಸಿಟಮಾಲ್‌ನಂತಹ ಜ್ವರ ನಿಯಂತ್ರಿಸುವ ಔಷಧಗಳನ್ನು ನೀಡುವುದು, ಮಗುವಿಗೆ ಸಾಕಷ್ಟು ವಿಶ್ರಾಂತಿ ನೀಡುವುದು ಮತ್ತು ಮಗುವಿನ ದೇಹ ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಕುಡಿಯಲು ಅವರನ್ನು ಪ್ರೋತ್ಸಾಹಿಸುವುದರ ಜೊತೆಗೆ ಉತ್ತಮ ಆರೈಕೆಯನ್ನು ಒದಗಿಸುವುದು ಅತ್ಯಗತ್ಯ. ಮುಖ್ಯವಾಗಿ ವೈದ್ಯರ ಸಲಹೆಯ ಮೇರೆಗೆ ಮಗುವನ್ನು ಆರೈಕೆ ಮಾಡುವ ಮೂಲಕ ಸೋಂಕು ಮುಕ್ತವಾಗುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ.

ಮಲೇರಿಯಾ ಪೀಡಿತರಲ್ಲಿ ಕಂಡುಬರುವ ಅಪಾಯಕಾರಿ ಚಿಹ್ನೆಗಳು ಯಾವುವು?

ಮಲೇರಿಯಾದಿಂದ ಬಳಲುತ್ತಿರುವ ಮಗುವು ಕಾಮಾಲೆ (ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು) ರೋಗಗ್ರಸ್ತವಾಗುವಿಕೆ, ಮೂತ್ರ ಅಥವಾ ಮಲದಲ್ಲಿ ರಕ್ತ ಕಂಡುಬರುವುದು ಅಥವಾ ಸೂಕ್ತ ಔಷಧಿಗಳನ್ನು ತೆಗೆದುಕೊಂಡರೂ ನಿರಂತರವಾಗಿ ಜ್ವರ ಕಾಣಿಸಿಕೊಳ್ಳುವಂತಹ ಅಪಾಯಕಾರಿ ಚಿಹ್ನೆಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಸಲಹೆ ತೆಗೆದುಕೊಳ್ಳುವುದು ಪೋಷಕರ ಕರ್ತವ್ಯ.

ಮಕ್ಕಳನ್ನು ಮಲೇರಿಯಾದಿಂದ ಹೇಗೆ ರಕ್ಷಿಸಿಕೊಳ್ಳಬಹುದು?

ಸೊಳ್ಳೆಗಳನ್ನು ದೂರವಿಡಲು ಸೊಳ್ಳೆ ನಿವಾರಕಗಳು ಮತ್ತು ಸೊಳ್ಳೆ ಬತ್ತಿಗಳನ್ನು ಬಳಸುವುದು. ಬೆಳಗ್ಗೆ ಮತ್ತು ಮುಸ್ಸಂಜೆ ವೇಳೆ ಸೊಳ್ಳೆಗಳು ಹೆಚ್ಚು, ಹೀಗಾಗಿ ಮಕ್ಕಳು ಮೈತಂಬಾ ಉಡುಪುಗಳನ್ನು ಧರಿಸುವಂತೆ ನೋಡಿಕೊಳ್ಳಬೇಕು. ಮನೆಯ ಆವರಣದಲ್ಲಿ ನೀರು ನಿಂತಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಮನೆಯ ಸುತ್ತ ನಿಂತ ನೀರನ್ನು ಸ್ವಚ್ಛಗೊಳಿಸುವುದು ಪ್ರಮುಖವಾದುದು. ಎರಡು ತಿಂಗಳೊಳಗಿನ ಶಿಶುಗಳಿಗೆ ಸೊಳ್ಳೆ ಪರದೆಗಳನ್ನು ಬಳಸುವುದು ಮುಖ್ಯ. ಸೊಳ್ಳೆಗಳು ಹೆಚ್ಚಿರುವ ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ಮಕ್ಕಳು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಪೋಷಕರು ನೋಡಿಕೊಳ್ಳಬೇಕು. ಸೊಳ್ಳೆ ಕಡಿತ ಮತ್ತು ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು ಎನ್ನುವುದು ತಜ್ಞರ ಸಲಹೆ.

ಇದನ್ನೂ ಓದಿ: PhonePe, Google Pay ಬಳಕೆದಾರರೇ ಎಚ್ಚರ! UPI ಪೇಮೆಂಟ್​ ದಿಢೀರ್​ ಸ್ಥಗಿತ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment