/newsfirstlive-kannada/media/post_attachments/wp-content/uploads/2024/07/DELHI-IAS-ASPIRANT-1.jpg)
ಪ್ಯಾರಿಸ್: 2024ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಪ್ಯಾರಿಸ್ ಅಂಗಳ ದೊಡ್ಡದಾಗಿ ಸಿದ್ಧತೆಯನ್ನು ನಡೆಸಿದೆ. ಪ್ಯಾರಿಸ್ ಅಂದ್ರೆನೆ ಸೌಂದರ್ಯಕ್ಕೆ, ಪ್ರೀತಿಗೆ, ಪ್ರಣಯಕ್ಕೆ ಮತ್ತೊಂದು ಹೆಸರು. ಈ ನಗರಕ್ಕೆ ಭೇಟಿ ನೀಡುವ ಕನಸು ಹೊತ್ತಿರುವ ಅದೆಷ್ಟೋ ಸಂಖ್ಯೆಯ ಪ್ರೇಮಿಗಳು ದಂಪತಿಗಳು ಇದ್ದಾರೆ. ಅವರಿಗೆಲ್ಲಾ ಈಗ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನೋಡುವ ಒಂದು ನೆಪವಂತೂ ದಕ್ಕಿದೆ. ಒಲಿಂಪಿಕ್ಸ್ ಕ್ರೀಡಾ ಹಬ್ಬಕ್ಕೆ ಪ್ಯಾರಿಸ್ ಅಂತೂ ನವವಧುವಿನಂತೆ ಸಿಂಗಾರಗೊಳ್ಳುತ್ತಿದೆ. ಎಲ್ಲ ಕಡೆಯೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಬೆಟ್ಟದಂತಹ ಕೆಲಸಗಳನ್ನು ಸರಳವಾಗಿ ಮಾಡಿ ಮುಗಿಸುತ್ತಿರುವ ಫ್ಯಾನ್ಸ್ ಸರ್ಕಾರಕ್ಕೆ ದೊಡ್ಡ ಸವಾಲೊಂದು ಈಗ ಎದುರಾಗಿದೆ. ಗಣಪನ ಮದುವೆಗೆ ನೂರೆಂಟು ವಿಘ್ನ ಅನ್ನೋ ಹಾಗೆ, ಪ್ಯಾರಿಸ್ ಒಲಿಂಪಿಕ್ಸ್ ಹಬ್ಬಕ್ಕೆ ಈಗ ಗಣಪನ ವಾಹನವೇ ನೂರೆಂಟು ವಿಘ್ನ ಮಾಡುತ್ತಿದ್ದಾನೆ. ರಾಮನವಮಿಗೂ ಇಮಾಮ್ ಸಾಬಿಗೂ ಏನ್ ಸಂಬಂಧ ಅನ್ನೋ ತರ ಪ್ಯಾರಿಸ್ ಒಲಂಪಿಕ್ಸ್ಗೂ ಇಲಿಗೂ ಯಾವ ಸಂಬಂಧ ಅಂತ ನಿಮಗೆ ಅನಿಸಬಹುದು. ಅಸಲಿಗೆ ಇರೋ ಸಮಸ್ಯೆಯೇ ಇದು.
ಪ್ರಣಯದೂರಿಗೂ ಮೂಷಿಕ ಸಂತತಿಗೂ ಇದೆ ಒಂದು ನಂಟು
ಪ್ಯಾರಿಸ್ಗೂ ಹಾಗೂ ಮೂಷಿಕ ಸಂತತಿಗೂ ಒಂದು ಶತಮಾನಗಳ ನಂಟು ಇದೆ. ಅದನ್ನು ಅತ್ಯಂತ ಜನಪ್ರಿಯ ಱಟೋಟ್ಯೂಲ್ ಅನ್ನೋ ಸಿನಿಮಾದಲ್ಲಿ ಸ್ಪಷ್ಟವಾಗಿ ಚಿತ್ರಿಸಲಾಗಿದೆ. ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್ನ ಹಬ್ಬಕ್ಕೆ ಪ್ರಣಯದೂರು ಒಂದು ಕಡೆ ಸಿದ್ಧವಾಗುತ್ತಿದೆ. ಮತ್ತೊಂದು ಕಡೆ ನಗರದ ಅಭಿವೃದ್ಧಿಗೆ ಸಂಬಂಧಿಸಿದ ನಗರ ಪಾಲಿಕೆ ಸಿಬ್ಬಂದಿಗಳು ದಿನರಾತ್ರಿಗಳನ್ನು ಒಂದು ಮಾಡಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಪ್ಯಾರಿಸ್‌ನಲ್ಲಿ ಜನಸಾಗರ ಕಾಣಸಿಗಲಿದೆ. ಯಾರಿಗೂ ಕೊಂಚವೂ ತೊಂದರೆ ಆಗದಂತೆ ನೋಡಿಕೊಳ್ಳಲು ಈಗ ಸ್ಥಳೀಯ ಪಾಲಿಕೆ ಸಿಬ್ಬಂದಿಗಳು ಇಲಿಗಳ ಬೇಟೆಗೆ ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ:12 ಭೀಕರ ವಿಮಾನ ಪತನ.. ನೇಪಾಳಕ್ಕಿದೆ ಕರಾಳ ದುರಂತಗಳ ಇತಿಹಾಸ; ಎಷ್ಟು ಸಾವು? ಕಾರಣವೇನು?
ಕ್ರೀಡಾಕೂಟ ಆರಂಭಕ್ಕೂ ಮುನ್ನ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಹಿನ್ನೆಲೆಯಲ್ಲಿ ಸಂಭ್ರಮ ನಡೆಯುವ ಸ್ಥಳಗಳನ್ನೆಲ್ಲಾ ಇಲಿಗಳು ಇವೆಯಾ ಇಲ್ಲವಾ ಅನ್ನೋದನ್ನ ಪರಿಶೀಲಿಸಲಾಗುತ್ತಿದೆ ಎಂದು ಪ್ಯಾರಿಸ್ನ ಡೆಪ್ಯೂಟಿ ಮೇಯರ್ ಆ್ಯನೆ ಕ್ಲೌರ್ ಬೌಕ್ಸ್ ಹೇಳಿದ್ದಾರೆ.
ಪ್ಯಾರಿಸಿಗರಿಗೆ ಇಲಿಯ ಸಂತತಿಗಳ ದೀರ್ಘಕಾಲದಿಂದಲೂ ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಲೇ ಇವೆ. ಪ್ಯಾರಿಸ್ ಸುಮಾರು 60 ಲಕ್ಷ ಇಲಿಗಳ ತವರು ಮನೆಯೆಂದಲೇ ಕರೆಯುತ್ತಾರೆ. ಅಷ್ಟೊಂದು ಇಲಿಗಳು ಇದೊಂದೇ ನಗರದಲ್ಲಿ ನೆಲೆ ಕಂಡು ಕೊಂಡಿವೆ. ಅದು ಕೂಡ ಪ್ಯಾರಿಸ್‌ನಲ್ಲಿ ವಾಸಿಸುವ ಒಬ್ಬ ವ್ಯಕ್ತಿಗೆ ಎರಡು ಇಲಿಗಳು ಇವೆ ಅಂತ ಲೆಕ್ಕ ಹಾಕಲಾಗಿದೆ. ಅಂದ್ರೆ ಈ ನಗರದಲ್ಲಿ 30 ಲಕ್ಷ ಜನರು ವಾಸಿಸುತ್ತಿದ್ದಾರೆ. ಆದ್ರೆ ಮನುಷ್ಯರಿಗಿಂತಲೂ ಇಲಿಗಳ ಸಂಖ್ಯೆಯೇ ಇಲ್ಲಿ ಜಾಸ್ತಿ ಇವೆ. ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ದೇಶ ವಿದೇಶಗಳಿಂದ ಜನರು ಹಾಗೂ ಗಣ್ಯರು ಆಗಮಿಸಲಿದ್ದಾರೆ. ಅವರ ಎದುರು ಪ್ಯಾರಿಸ್ ನಗರದ ಇಲಿಗಳು ದೇಶದ ಮಾನವನ್ನು ಹರಾಜು ಹಾಕದಿರಲಿ ಅನ್ನೋ ನಿಟ್ಟಿನಲ್ಲಿ ಈಗ ಕೆಲಸಗಳು ವೇಗದಿಂದ ಸಾಗುತ್ತಿವೆ.
ಇದನ್ನೂ ಓದಿ:ವೈರ್ಲೆಸ್ ಚಾರ್ಜಿಂಗ್ ರಸ್ತೆಯನ್ನೇ ನಿರ್ಮಿಸಿದ ಈ ದೇಶ.. ಇನ್ಮುಂದೆ ಚಾರ್ಜಿಂಗ್ ಸ್ಟೇಷನ್ಗೆ ಹೋಗಬೇಕಾಗಿಲ್ಲ!
ಪ್ಯಾರಿಸ್ನ ಅರ್ಧ ಜನಸಂಖ್ಯೆಯನ್ನೇ ನುಂಗಿದ್ದ ಇಲಿಗಳು
ಪ್ಯಾರಿಸ್ಗೂ ಇಲಿಗಳಿಗೂ ಇರುವ ನಂಟು 14ನೇ ಶತಮಾನಕ್ಕೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಇಡೀ ಪ್ಯಾರಿಸ್ ಎಂಬ ಪ್ಯಾರಿಸ್ ನಗರಕ್ಕೆ ಪ್ಲೇಗ್ ಎಂಬ ಮಹಾಮಾರಿಯನ್ನು ಅತಿವೇಗವಾಗಿ ಹರಡಿದ್ದವು ಇಲ್ಲಿಯ ಇಲಿಗಳು. ಆ ಕಾಲದಲ್ಲಿ ಇಲ್ಲಿ ವಾಸವಿದ್ದ ಜನಸಂಖ್ಯೆಯ ಅರ್ಧದಷ್ಟು ಜನರನ್ನು ನುಂಗಿ ನೀರು ಕುಡಿದು ಬಿಟ್ಟಿದ್ದವು ಈ ಇಲಿಗಳು. ಅಂದಿನಿಂದಲೂ ಈ ಇಲಿಗಳ ಜೊತೆ ಇಲ್ಲಿಯ ಜನರ ಒಂದು ಹೋರಾಟ ನಿರಂತರವಾಗಿ ಸಾಗುತ್ತಲೇ ಬಂದಿದೆ.
ಇತ್ತೀಚೆಗೆ ಅಂದ್ರೆ 2017ರವರೆಗೂ ಕೂಡ ಈ ಒಂದು ಯುದ್ಧವನ್ನು ಬೇರೆಯದ್ದೆ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಇಲಿಗಳ ನಿಯಂತ್ರಣ ಸಾಧ್ಯವಾಗದಿದ್ದ ಪಕ್ಷದಲ್ಲಿ ಕೊನೆಗೆ ಅವುಗಳ ಸಂತತಿಯೂ ಇನ್ಮುಂದೆ ಬೆಳೆಯದಂತೆ ತಡೆ ಹಿಡಿಯಲು ಒಂದಿಷ್ಟು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇಲಿಯ ಬೇಟೆಗಾಗಿಯೇ ಈಗ ಸ್ಮ್ಯಾಶ್ ಟೀಮ್ ಅನ್ನೋ ಒಂದು ತಂಡವನ್ನು ರಚನೆ ಮಾಡಲಾಗಿದೆ. ಅವರು ಪ್ಯಾರಿಸ್ ಆರ್ಗನೈಸರ್ ಕಮಿಟಿಯೊಂದಿಗೆ ಸೇರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲಿಗಳ ಪ್ರವೇಶ ನಿರ್ಗಮನದ ಹಾದಿಗಳನ್ನು ಹುಡುಕಿ ಅವುಗಳನ್ನು ಸೀಲ್ ಮಾಡುವ ಕಾರ್ಯ ಜೋರಾಗಿ ನಡೆದಿದೆ. ಇಲಿಗಳ ನಿಯಂತ್ರಣಕ್ಕೆ ಬೇಕಾದ ಇನ್ನುಳಿದ ಕ್ರಮಗಳನ್ನು ಕೂಡ ಕೈಗೊಳ್ಳಲಾಗಿದೆ. ಇವೆಲ್ಲವೂ ಎಷ್ಟರ ಮಟ್ಟಿಗೆ ಸಫಲವಾಗಲಿದೆ ಅನ್ನೋದೇ ಸದ್ಯ ಎಲ್ಲರ ಮುಂದಿರುವ ಪ್ರಶ್ನೆ. ಶತಮಾನಗಳಿಂದಲೂ ಪ್ಯಾರಿಸ್ಗೆ ಪೀಡೆಯಾಗಿ ಕಾಡುತ್ತಿರುವ ಇಲಿಗಳು ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನೆಮ್ಮದಿಯಾಗಿ ಮುಗಿಸಲು ಬಿಡುತ್ತವೆಯಾ ಅನ್ನೋ ಯಕ್ಷಪ್ರಶ್ನೆ ಇನ್ನೂ ಜೀವಂತವಾಗಿಯೇ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ