/newsfirstlive-kannada/media/post_attachments/wp-content/uploads/2024/10/DCM-Uddayanidhi-stallin-T-Shirt.jpg)
ಚೆನ್ನೈ: ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರು ಡಿಎಂಕೆ ಪಕ್ಷದ ಯಂಗ್ ಲೀಡರ್. ಈ ಯುವ ನಾಯಕ ನೋಡೋದಕ್ಕೂ ಸ್ಮಾರ್ಟ್ ಆಗಿದ್ದಾರೆ. ಯಾವಾಗಲೂ ಟೀ ಶರ್ಟ್‌ನಲ್ಲೇ ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಉದಯನಿಧಿ ಸ್ಟಾಲಿನ್ ಅವರ ಇದೇ ಟೀ ಶರ್ಟ್ ಟೀಕೆಗೆ ಗುರಿಯಾಗಿದೆ. ತಮಿಳುನಾಡು ರಾಜಕೀಯದಲ್ಲಿ ಹೊಸದೊಂದು ಚರ್ಚೆಗೆ ನಾಂದಿಯಾಡಿದೆ.
ಎಂ. ಸತ್ಯ ಕುಮಾರ್ ಎಂಬ ವಕೀಲರು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಡ್ರೆಸ್ ಕೋಡ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರು ಅರ್ಜಿ ಹಾಕಿದ್ದು, ಉದಯನಿಧಿ ಸ್ಟಾಲಿನ್ ಅವರು ವಸ್ತ್ರಸಂಹಿತೆಯ ನಿಯಮವನ್ನು ಉಲ್ಲಂಖಿಸಿದ್ದಾರೆ. ಇದರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಬೈ ಎಲೆಕ್ಷನ್; ಚನ್ನಪಟ್ಟಣ ಟಿಕೆಟ್ ಸಸ್ಪೆನ್ಸ್; 2 ಕ್ಷೇತ್ರಗಳಿಗೆ BJP ಅಭ್ಯರ್ಥಿಗಳ ಘೋಷಣೆ
ವಕೀಲ ಸತ್ಯ ಕುಮಾರ್ ಅವರು ತಮ್ಮ ಅರ್ಜಿಯಲ್ಲಿ ಡಿಸಿಎಂ ಉದಯನಿಧಿ ಸ್ಟಾಲಿನ್ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಟೀ-ಶರ್ಟ್, ಜೀನ್ಸ್ ಹಾಗೂ ಅನೌಪಚಾರಿಕವಾದ ಪಾದರಕ್ಷೆಗಳನ್ನು ಧರಿಸುತ್ತಾರೆ. ಇದು ತಮಿಳುನಾಡು ಸರ್ಕಾರದ ಡ್ರೆಸ್ ಕೋಡ್ ಅನ್ನ ಉಲ್ಲಂಘನೆ ಮಾಡಿದೆ ಎಂದು ಉಲ್ಲೇಖಿಸಿದ್ದಾರೆ.
ಇದರ ಜೊತೆಗೆ ಉದಯನಿಧಿ ಸ್ಟಾಲಿನ್ ಅವರು ಟೀ ಶರ್ಟ್ ಮೇಲೆ ತಮ್ಮ ಪಕ್ಷದ ಚಿಹ್ನೆಯನ್ನು ಪ್ರದರ್ಶಿಸುತ್ತಾರೆ. ಡಿಎಂಕೆ ಪಕ್ಷದ ಚಿಹ್ನೆ ಸದಾ ಸ್ಟಾಲಿನ್ ಅವರ ಟೀ ಶರ್ಟ್ ಮೇಲೆ ರಾರಾಜಿಸುತ್ತದೆ. ಇದನ್ನು ಖಂಡಿಸಿರುವ ವಕೀಲರು ಸರ್ಕಾರದ ಜನಪ್ರತಿನಿಧಿಯಾಗಿ ಪಕ್ಷದ ಚಿಹ್ನೆಯನ್ನು ಬಳಸುವುದು ತಪ್ಪು ಎಂದು ಟೀಕಿಸಿದ್ದಾರೆ. ಟೀ ಶರ್ಟ್ ಜೊತೆಗೆ ಪಕ್ಷದ ಚಿಹ್ನೆಯನ್ನು ಬಳಸದಂತೆ ಸೂಚಿಸಲು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಏನಿದು ಡ್ರೆಸ್ ಕೋಡ್?
ತಮಿಳುನಾಡಿನಲ್ಲಿ ಸರ್ಕಾರಿ ನೌಕರರು, ಜನಪ್ರತಿನಿಧಿಗಳಿಗೆ ವಿಶೇಷವಾದ ಡ್ರೆಸ್ ಕೋಡ್ ನಿಯಮವಿದೆ. 2019ರ ಜೂನ್ 1ರಂದು ಡ್ರೆಸ್ ಕೋಡ್ ರೂಲ್ಸ್ ಅನ್ನು ತಮಿಳುನಾಡು ಸರ್ಕಾರ ಜಾರಿಗೆ ತಂದಿದೆ. ಈ ಕಾನೂನಿನ ಪ್ರಕಾರ ತಮಿಳುನಾಡಿನ ಸರ್ಕಾರಿ ನೌಕರರು, ಶಾಸಕರು ಸಂಪ್ರದಾಯ ಬದ್ಧ ಉಡುಗೆಯನ್ನೇ ಧರಿಸಬೇಕು ಎನ್ನುವುದು ಕಡ್ಡಾಯವಾಗಿದೆ.
ಈ ಡ್ರೆಸ್ ಕೋಡ್ ಪ್ರಕಾರ ಸಾರ್ವಜನಿಕ ಸೇವೆಯಲ್ಲಿರುವ ಪುರುಷರು ಶರ್ಟ್ ಮತ್ತು ಫಾರ್ಮಲ್ ಪ್ಯಾಂಟ್ ಅಥವಾ ಪಂಚೆಗಳನ್ನೇ ಬಳಸಬೇಕು. ಅಥವಾ ತಮಿಳುನಾಡು, ಭಾರತೀಯ ಸಂಪ್ರದಾಯಬದ್ಧ ಉಡುಪನ್ನು ಧರಿಸಬಹುದಾಗಿದೆ. ಮಹಿಳೆಯರು ಸೀರೆ, ದುಪ್ಪಟ್ಟಾ ಇರುವ ಚೂಡಿದಾರ್ ಸೂಟ್ಸ್ ಅನ್ನೇ ಬಳಸಬೇಕು.
ಮುಂದೇನು?
ತಮಿಳುನಾಡು ರಾಜಕೀಯದ ಇತಿಹಾಸದಲ್ಲಿ ಅಗ್ರ ನಾಯಕರು ಪಂಚೆ ಹಾಗೂ ಶರ್ಟ್ ಧರಿಸಿಯೇ ರಾಜ್ಯಭಾರ ಮಾಡಿದ್ದಾರೆ. ಶರ್ಟ್ ಮತ್ತು ಪಂಚೆ ಧರಿಸುವುದೇ ಒಂದು ಸಂಪ್ರದಾಯವಾಗಿದೆ. ಮಾಜಿ ಸಿಎಂ ಎಂ. ಕರುಣಾನಿಧಿ, ಹಾಲಿ ಸಿಎಂ ಎಂ.ಕೆ ಸ್ಟಾಲಿನ್ ಅವರು ಇದನ್ನೇ ಪಾಲಿಸುತ್ತಿದ್ದರು. ಇದೀಗ ಕರುಣಾನಿಧಿ ಅವರ ಕುಟುಂಬದ ಕುಡಿ ಉದಯನಿಧಿ ಸ್ಟಾಲಿನ್ ಅವರ ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ವಿವಾದ ಸದ್ಯ ಹೈಕೋರ್ಟ್ ಮೆಟ್ಟಿಲೇರಿದೆ. ಮದ್ರಾಸ್ ಹೈಕೋರ್ಟ್ ಈ ಅರ್ಜಿಗೆ ಯಾವ ರೀತಿ ಉತ್ತರಿಸುತ್ತೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ