/newsfirstlive-kannada/media/post_attachments/wp-content/uploads/2025/06/ks-eshwarappa-meets-b-s-yediyurappa-5.jpg)
ಶಿವಮೊಗ್ಗ: ರಾಜಕೀಯದಲ್ಲಿ ಶತ್ರುಗಳು ಯಾರು ಇಲ್ಲ. ಮಿತ್ರರೂ ಯಾರು ಇಲ್ಲ. ಇದು ಸಾರ್ವಕಾಲಿಕ ಸತ್ಯವಾದ ಮಾತು. 2024ರ ಲೋಕಸಭಾ ಚುನಾವಣೆಯಲ್ಲಿ ಬಿ.ಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಕೆ.ಎಸ್ ಈಶ್ವರಪ್ಪನವರು ರಾಜಕೀಯ ಸಮರ ಸಾರಿದ್ದರು.
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ವಿರುದ್ಧ ಕೆ.ಎಸ್ ಈಶ್ವರಪ್ಪನವರು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಸ್ವತಂತ್ರ್ಯವಾಗಿ ಸ್ಪರ್ಧಿಸಿದ್ದಕ್ಕೆ ಬಿಜೆಪಿ ಪಕ್ಷ ಈಶ್ವರಪ್ಪನವರನ್ನು ಉಚ್ಛಾಟನೆ ಕೂಡ ಮಾಡಿತ್ತು.
ಒಂದು ವರ್ಷದ ರಾಜಕೀಯ ಜಿದ್ದಾಜಿದ್ದಿಯ ಬಳಿಕ ಈ ದಿಗ್ಗಜ ನಾಯಕರು ಪರಸ್ಪರ ಕೈ ಕುಲುಕಿದ್ದಾರೆ. ಯಡಿಯೂರಪ್ಪನವರು ಆಲಿಂಗನದ ಮೂಲಕ ಈಶ್ವರಪ್ಪನವರ ಮೇಲಿರುವ ಮುನಿಸು ಮರೆತು ಮುಗುಳ್ನಗೆ ಬೀರಿದ್ದಾರೆ.
ಬಿ.ಎಸ್ ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪನವರು ಕೆಲ ಕಾಲ ಕೈ, ಕೈ ಹಿಡಿದುಕೊಂಡು ಉಭಯ ಕುಶಲೋಪರಿ ವಿಚಾರಿಸಿದ್ದಾರೆ.
ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆಗೆ ರತ್ನ ಖಚಿತ ಚಿನ್ನದ ಮುಖವಾಡ ಸಮರ್ಪಣೆ.. ಇದು ಎಷ್ಟು ಕೆ.ಜಿ ಇದೆ?
ಇಬ್ಬರು ನಾಯಕರ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಆರತಕ್ಷತೆ ಸಮಾರಂಭ. ಇಂದು ಶಿಕಾರಿಪುರದ ಸುಮಧ್ವತಿ ಸಮೂಹ ಸಂಸ್ಥೆಗಳ ಆವರಣದಲ್ಲಿ ಸಂಸದ ಬಿ.ವೈ ರಾಘವೇಂದ್ರ ಪುತ್ರ ಸುಭಾಷ್ ಮತ್ತು ಸೊಸೆ ಶ್ರವಣರ ಆರತಕ್ಷತೆ ಸಮಾರಂಭ ನಡೀತು.
ಬಿ.ಎಸ್ ಯಡಿಯೂರಪ್ಪ ಕುಟುಂಬದ ಆಹ್ವಾನದ ಮೇರೆಗೆ ಕೆ.ಎಸ್ ಈಶ್ವರಪ್ಪನವರು ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವ ದಂಪತಿಗಳನ್ನು ಹಾರೈಸಿದ್ದಾರೆ. ಮಗನ ಮದುವೆ ಮತ್ತು ಆರತಕ್ಷತೆ ಕಾರ್ಯಕ್ರಮಕ್ಕೆ ಸಂಸದ ಬಿ.ವೈ ರಾಘವೇಂದ್ರ ಅವರು ಕೆ.ಎಸ್ ಈಶ್ವರಪ್ಪನವರ ಮನೆಗೆ ತೆರಳಿ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಇಂದು ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಕೆ.ಎಸ್ ಈಶ್ವರಪ್ಪ ಪಾಲ್ಗೊಂಡಿದ್ದಾರೆ.
ಮೊಮ್ಮಗನ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ ಕೆ.ಎಸ್ ಈಶ್ವರಪ್ಪನವರನ್ನು ಬಿ.ಎಸ್ ಯಡಿಯೂರಪ್ಪನವರು ಆತ್ಮೀಯವಾಗಿ ಬರಮಾಡಿಕೊಂಡರು. ವೇದಿಕೆಯಲ್ಲೇ ಕೆ.ಎಸ್ ಈಶ್ವರಪ್ಪರನ್ನು ಬರಮಾಡಿಕೊಂಡ ಯಡಿಯೂರಪ್ಪನವರು ಆತ್ಮೀಯವಾಗಿ ಮಾತನಾಡಿಸಿದರು.
ಕಳೆದ ಲೋಕಸಭಾ ಚುನಾವಣೆಯ ನಂತರ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗಿದ ಇಬ್ಬರು ರಾಜಕೀಯ ಮುಖಂಡರು ಮತ್ತೆ ಒಂದಾಗಿದ್ದಾರೆ. ರಾಜ್ಯ ರಾಜಕೀಯದ ಇಬ್ಬರು ದಿಗ್ಗಜ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಘಳಿಗೆಗೆ ಶಿವಮೊಗ್ಗದ ಜನತೆ ಸಾಕ್ಷಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ