/newsfirstlive-kannada/media/post_attachments/wp-content/uploads/2025/02/MODI_US_2.jpg)
ಎರಡು ದಿನಗಳ ಫ್ರಾನ್ಸ್ ಪ್ರವಾಸ ಅಂತ್ಯಗೊಳಿಸಿದ ಮೋದಿ ಅಮೆರಿಕಗೆ ಭೇಟಿ ನೀಡಿದ್ದಾರೆ. ಅಕ್ರಮ ವಲಸಿಗರನ್ನ ಭಾರತಕ್ಕೆ ಗಡಿಪಾರು ಮಾಡಿದ ಬೆನ್ನಲ್ಲೇ ನಮೋ ಅಮೆರಿಕಗೆ ಭೇಟಿ ನೀಡಿರೋದು ತೀವ್ರ ಕುತೂಹಲ ಮೂಡಿಸಿದೆ. ಎಐ ತಂತ್ರಜ್ಞಾನ, ಎಲಾನ್ ಮಸ್ಕ್ ಎಂಟ್ರಿ ಸೇರಿ ಹಲವು ವಿಷಯಗಳ ಜೊತೆ ಟ್ರಂಪ್ ಜೊತೆ ಮೋದಿ ಚರ್ಚಿಸಲಿದ್ದಾರೆ.
ಎಮಾನ್ಯುಯೆಲ್ ಮ್ಯಾಕ್ರನ್ ಸ್ನೇಹಕ್ಕೆ ಮನಸೋತ ನಮೋ!
ಫ್ರಾನ್ಸ್ ಪ್ರವಾಸದಲ್ಲಿದ್ದ ಮೋದಿ, ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರ ಜೊತೆಗೂಡಿ ಎಐ ಆ್ಯಕ್ಷನ್ ಶೃಂಗದಲ್ಲಿ ಭಾಗವಹಿಸಿದ್ದರು. ಬಂದರು ನಗರಿ ಮಾರ್ಸೆಲ್‌ಗೆ ಭೇಟಿ ನೀಡಿ ವಿಡಿ ಸಾರ್ವಕರ್ ಅವರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ್ದರು. ಭಾರತ-ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಮಾತುಕತೆ ಸಂದರ್ಭ ಉಭಯ ದೇಶಗಳ ವ್ಯಾಪಾರ, ಹೂಡಿಕೆ ಸಂಬಂಧಗಳನ್ನು ವೃದ್ಧಿಸುವ ಬಗ್ಗೆ ಚರ್ಚಿಸಿದರು. ಎಲ್ಲ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಒಪ್ಪಂದಕ್ಕೂ ಉಭಯ ನಾಯಕರು ಸಹಿ ಹಾಕಿದರು. ಇನ್ನೂ ಫ್ರಾನ್ಸ್ ಮ್ಯಾಕ್ರನ್ ತೋರಿದ ಸ್ನೇಹ, ಪ್ರೀತಿ, ವಿಶ್ವಾಸ ಮೋದಿಯನ್ನ ಮಂತ್ರ ಮುಗ್ಧರನ್ನಾಗಿಸಿತ್ತು.
ಫ್ರಾನ್ಸ್ ಭೇಟಿ ಬಳಿಕ ಅಮೆರಿಕದತ್ತ ನಮೋ ಹೆಜ್ಜೆ!
ಎರಡು ದಿನಗಳ ಫ್ರಾನ್ಸ್ ಪ್ರವಾಸ ಅಂತ್ಯಗೊಳಿಸಿರುವ ಪ್ರಧಾನಿ ಮೋದಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲು ಅಮೆರಿಕಕ್ಕೆ ತೆರಳಿದ್ದಾರೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಪ್ರಧಾನಿ ಮೋದಿ ಅಮೇರಿಕಗೆ ಭೇಟಿ ನೀಡಿದ್ದಾರೆ. 2 ದಿನಗಳ ಕಾಲ ಅಮೆರಿಕದಲ್ಲಿ ವಾಸ್ತವ್ಯ ಹೂಡಲಿರೋ ನಮೋ, ತೆರಿಗೆ ಯುದ್ಧ ಆರಂಭಿಸಿರುವ ಟ್ರಂಪ್ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಇನ್ನೂ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರನ್ನ ಭೇಟಿಯಾದ 4ನೇ ವಿದೇಶಿ ನಾಯಕ ಮೋದಿ ಅವರಾಗಿದ್ದಾರೆ.
ವಲಸಿಗರ ಗಡಿಪಾರು ಬೆನ್ನಲ್ಲೇ ಮೋದಿ ಅಮೆರಿಕ ಭೇಟಿ!
ಅಮೆರಿಕವು ಭಾರತೀಯ ವಲಸಿಗರ ಕೈಗಳಿಗೆ ಕೋಳ ತೊಡಿಸಿ ಅವಮಾನ ಮಾಡಿದೆ ಎಂಬ ವಿಚಾರದಲ್ಲಿ ರಾಜಕೀಯ ವಿವಾದ ಭುಗಿಲೆದ್ದಿರುವ ಮಧ್ಯದಲ್ಲೇ ಮೋದಿ ಅಮೆರಿಕಗೆ ಭೇಟಿ ನೀಡಿರೋದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಇನ್ನೂ ಮಹತ್ವದ ದ್ವಿಪಕ್ಷೀಯ ಒಪ್ಪಂದಕ್ಕೆ ಉಭಯ ದೇಶಗಳ ನಾಯಕರು ಸಹಿ ಹಾಕಲಿದ್ದಾರೆ. ಇನ್ನೂ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿರೋ ಎಐ ತಂತ್ರಜ್ಞಾನದ ಬಗ್ಗೆ ಮೋದಿ ಮತ್ತು ಟ್ರಂಪ್ ಚರ್ಚಿಸಲಿದ್ದಾರೆ.
ಭಾರತಕ್ಕೆ ಎಲಾನ್ ಮಸ್ಕ್ ಎಂಟ್ರಿ ಬಗ್ಗೆಯೂ ನಮೋ ಚರ್ಚೆ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಮಾಪ್ತ ಬಿಲಿನಿಯೇರ್ ಎಲಾನ್ ಮಸ್ಕ್ ತಮ್ಮ ಬಹುಕೋಟಿ ಉದ್ಯಮವನ್ನು ವಿಶ್ವದಾದ್ಯಂತ ವಿಸ್ತರಿಸಲು ಮುಂದಾಗಿದ್ದಾರೆ. ಈಗಾಗಲೇ, ಉಕ್ರೇನ್ ದೇಶಕ್ಕೆ ಸೇವೆ ವಿಸ್ತರಿಸುವುದಾಗಿ ಹೇಳಿರುವ ಎಲಾನ್ ಮಸ್ಕ್, ಭಾರತಕ್ಕೆ ಎಂಟ್ರಿ ಆಗಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಮೋದಿ ಟ್ರಂಪ್ ಜೊತೆ ಚರ್ಚಿಸಲಿದ್ದಾರೆ.
ಇದನ್ನೂ ಓದಿ:ಭೀಮಾ ತೀರದ ಹಂತಕ ಬಾಗಪ್ಪ ಕುರಿತು ಕುತೂಹಲಕಾರಿ ವಿಷಯ ಬಹಿರಂಗ.. ಏನು ಮಾಡಲು ಯೋಜಿಸಿದ್ದ ಗೊತ್ತಾ?
ಓರ್ವನನ್ನ ವಶಕ್ಕೆ ಪಡೆದು ಮುಂಬೈ ಪೊಲೀಸರಿಂದ ವಿಚಾರಣೆ
ಕಳೆದ ಫೆಬ್ರುವರಿ 11ರಂದು ಪ್ರಧಾನಿ ಮೋದಿ ಫ್ರಾನ್ಸ್‌ಗೆ ತೆರಳುವ ವಿಮಾನದ ಮೇಲೆ ಭಯೋತ್ಪಾದಕರು ದಾಳಿ ನಡೆಸಬಹುದು ಎಂದು ಅಪರಿಚಿತನೊಬ್ಬ ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದ. ಈ ಕರೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಪೊಲೀಸರು ಓರ್ವನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜೊತೆಗೆ, ಇತರ ಏಜೆನ್ಸಿಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಬಲಿಷ್ಠ ರಾಷ್ಟ್ರಗಳ ಜೊತೆ ಬಾಂಧವ್ಯ ಬೆಸೆಯಲು ಮುಂದಾಗಿರೋ ನಮೋ ವಿಶ್ವದ ಗಮನ ಸೆಳೆದಿದ್ದಾರೆ. ಕ್ಷಣಕ್ಕೊಂದು ಆದೇಶ ಹೊರಡಿಸ್ತಿರೋ ಟ್ರಂಪ್ ಜೊತೆ ಮೋದಿ ಏನೆಲ್ಲಾ ಚರ್ಚೆ ಮಾಡ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ