/newsfirstlive-kannada/media/post_attachments/wp-content/uploads/2025/04/rajnath-singh-and-modi2.jpg)
ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬಳಿಕ ಭಾರತದ ಪ್ರತೀಕಾರ ಪಾಕಿಸ್ತಾನಿಯರ ಎದೆ ನಡುಗಿಸಿದೆ. ಭಾರತೀಯ ಸೇನೆ ಯಾವುದೇ ಗುಟ್ಟು ಬಿಟ್ಟು ಕೊಡದೇ ಯುದ್ಧದ ಭೀತಿಯಲ್ಲೇ ಬೆವರುವಂತೆ ಮಾಡಿದೆ. ಪ್ರಧಾನಿ ಮೋದಿ ಸರ್ಕಾರ ಸೇನೆಗೆ ಫ್ರೀ ಹ್ಯಾಂಡ್ ಕೊಟ್ಟ ಮೇಲೆ ಗಡಿಯಲ್ಲಿ ಯುದ್ಧದ ತಾಲೀಮು ಭರ್ಜರಿಯಾಗಿದೆ.
ಪಹಲ್ಗಾಮ್ ದಾಳಿಕೋರರಿಗೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಯೋಧರು ಕಾಯುತ್ತಿರುವಾಗಲೇ ಪಾಕ್ ವಿರುದ್ಧ ಪ್ರತೀಕಾರಕ್ಕೆ ಮುಹೂರ್ತ ಫಿಕ್ಸ್ ಆಯ್ತಾ ಅನ್ನೋ ಮಾತುಗಳು ಕೇಳಿ ಬಂದಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವರು ತಮ್ಮ ರಷ್ಯಾ ಪ್ರವಾಸವನ್ನು ರದ್ದುಗೊಳಿಸಿರೋದು.
ಪ್ರತೀಕಾರಕ್ಕೆ ಮುಹೂರ್ತ?
ಇದೇ ಮೇ 9ಕ್ಕೆ ರಷ್ಯಾದಲ್ಲಿ ವಿಕ್ಟರಿ ಪರೇಡ್ ಕಾರ್ಯಕ್ರಮ ನಿಗಧಿಯಾಗಿದೆ. ಈ ಕಾರ್ಯಕ್ರಮಕ್ಕೆ ಮೊದಲಿಗೆ ಪ್ರಧಾನಿ ಮೋದಿ ಅವರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದರು. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಹಿನ್ನೆಲೆ ಪ್ರಧಾನಿ ಅವರ ಬದಲಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ರಿಂದಲೂ ರಷ್ಯಾ ಭೇಟಿ ದಿಢೀರ್ ರದ್ದಾಗಿದೆ.
ಮೇ 9ಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಬದಲು ರಕ್ಷಣಾ ಇಲಾಖೆ ರಾಜ್ಯ ಖಾತೆ ಸಚಿವ ಸಂಜಯ್ ಸೇಠ್ ಅವರು ತೆರಳುತ್ತಿದ್ದಾರೆ. ಕೇಂದ್ರ ನಾಯಕರ ಈ ನಡೆ ಪಾಕಿಸ್ತಾನದ ವಿರುದ್ಧ ಶೀಘ್ರವೇ ಪ್ರತೀಕಾರದ ಸುಳಿವು ನೀಡುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಏನಿದು ರಷ್ಯಾ ವಿಕ್ಟರಿ ಪರೇಡ್?
ರಷ್ಯಾದಲ್ಲಿ ನಡೆಯುವ ವಿಕ್ಟರಿ ಪರೇಡ್ ಒಂದು ರೀತಿಯಲ್ಲಿ ಭಾರತದಲ್ಲಿ ನಡೆಯುವ ಕಾರ್ಗಿಲ್ ವಿಜಯ ದಿವಸ್ ಹಾಗೂ ಗಣರಾಜ್ಯೋತ್ಸವದ ಆಚರಣೆಯಂತೆ ಇರುತ್ತದೆ. ಮೇ 9ರಂದು ಮಾಸ್ಕೋದ ರೆಡ್ ಸ್ಕ್ವೇರ್‌ನಲ್ಲಿ ವಿಜಯ ದಿನದ ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ರಷ್ಯಾದ ಸಶಸ್ತ್ರ ಪಡೆಗಳ ವಾರ್ಷಿಕ ಮಿಲಿಟರಿ ಪರೇಡ್ ಮಾಡಲಾಗುತ್ತಿದೆ.
ಮಾಸ್ಕೋದ ರೆಡ್ ಸ್ಕ್ವೇರ್‌ನಲ್ಲಿ ನಡೆಯುವ ಮಿಲಿಟರಿ ಪರೇಡ್ ಇದಾಗಿದ್ದು, ರಷ್ಯಾದ ಅಧ್ಯಕ್ಷರು ರಷ್ಯಾದ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿ ಅವರ ಸಾಂವಿಧಾನಿಕ ಆದೇಶದ ಮೇರೆಗೆ ಗೌರವಾನ್ವಿತ ಅತಿಥಿಯಾಗಿ ಮತ್ತು ಮುಖ್ಯ ಭಾಷಣಕಾರರಾಗಿ ಭಾಗವಹಿಸುತ್ತಾರೆ. ಈ ವೇಳೆ ಮಿತ್ರ ರಾಷ್ಟ್ರಗಳ ನಾಯಕರನ್ನು ಗಣ್ಯ ಅತಿಥಿಯಾಗಿ ಭಾಗಿಯಾಗಲು ಆಹ್ವಾನಿಸಲಾಗುತ್ತದೆ.
ಇದನ್ನೂ ಓದಿ:ಚೆನ್ನೈ ಬೌಲರ್ಗೆ ವಾರ್ನ್ ಮಾಡಿದ್ರಾ ಕಿಂಗ್ ಕೊಹ್ಲಿ..? ಬಾಲ್ ಎಸೆದಿದ್ದಕ್ಕೆ ಕೋಪಿಸಿಕೊಂಡ ವಿರಾಟ್
ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕೆ ಭಾರತೀಯ ಸೇನೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಮೇ 9ನೇ ತಾರೀಖಿನೊಳಗೆ ಭಾರತದಿಂದ ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆ ಇದ್ದು, ಇದರ ಮೇಲ್ವಿಚಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಪ್ರವಾಸ ರದ್ದುಗೊಳಿಸಿದ್ರಾ ಅನ್ನೋ ಅನುಮಾನ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ