/newsfirstlive-kannada/media/post_attachments/wp-content/uploads/2024/07/pm-modi1.jpg)
3ನೇ ಬಾರಿ ಅಧಿಕಾರಕ್ಕೇರಿದ ಬಳಿಕ ಪ್ರಧಾನಿ ಮೋದಿ ರಷ್ಯಾ ಪ್ರವಾಸದಲ್ಲಿದ್ದಾರೆ. 2019ರ ಬಳಿಕ ಮೊದಲ ರಷ್ಯಾಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಉಕ್ರೇನ್ ವಿರುದ್ಧ ಯುದ್ಧ ನಿಲ್ಲಿಸುವಂತೆ ರಷ್ಯಾಕ್ಕೆ ಮನವಿ ಮಾಡಿದ್ದಾರೆ. ಇದೇ ವೇಳೆ ರಷ್ಯಾದಲ್ಲಿರುವ ಭಾರತೀಯ ಸೇನೆಯನ್ನು ವಾಪಸ್ ಕಳುಹಿಸಲು ರಷ್ಯಾ ಅಧ್ಯಕ್ಷ ಪುಟಿನ್ ಒಪ್ಪಿದ್ದಾರೆ. ಮತ್ತೊಂದೆಡೆ ಪ್ರಧಾನಿ ಮೋದಿ ರಷ್ಯಾ ಭೇಟಿಗೆ ಉಕ್ರೇನ್ ಟೀಕಿಸಿದೆ.
ಉಕ್ರೇನ್ ವಿರುದ್ಧ ಯುದ್ಧ ಕೊನೆಗಳಿಸಲು ಮೋದಿ ತಾಕೀತು
2019ರ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ರಷ್ಯಾಗೆ ಭೇಟಿ ನೀಡಿದ್ದು ಯುದ್ಧ ನಿಲ್ಲಿಸುವಂತೆ ಭಾರತ ರಷ್ಯಾಕ್ಕೆ ಮನವಿ ಮಾಡಿದೆ. ಪ್ರಾದೇಶಿಕ ಸಮಗ್ರತೆ ಹಾಗೂ ಸಾರ್ವಭೌಮತ್ವ ಸೇರಿದಂತೆ ವಿಶ್ವಸಂಸ್ಥೆಯನ್ನು ಗೌರವಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಯುದ್ಧಭೂಮಿಯಲ್ಲಿ ಯಾವುದೇ ಪರಿಹಾರ ಸಿಗಲ್ಲ, ಮಾತುಕತೆ ಹಾಗೂ ರಾಜತಾಂತ್ರಿಕತೆ ಮೂಲಕ ಸಿಗಲಿದೆ ಅಂತ ಮೋದಿ ಮನವಿ ಮಾಡಿದ್ದಾರೆ.
ರಷ್ಯಾದಲ್ಲಿ ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು
ಇನ್ನು, ರಷ್ಯಾ ಜೊತೆಗಿನ ಮಾತುಕತೆಯಲ್ಲಿ ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ರಷ್ಯಾ ಸೇನೆಯಲ್ಲಿರುವ ಭಾರತೀಯರನ್ನು ಬಿಡುಗಡೆ ಮಾಡಲು ಪುಟಿನ್ ಸಮ್ಮತಿಸಿದ್ದಾರೆ ಎನ್ನಲಾಗಿದೆ. ಸುಮಾರು 200 ಭಾರತೀಯರು ರಷ್ಯಾ ಸೇನೆಯಲ್ಲಿ ಭದ್ರತಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದು ಕಳೆದ ತಿಂಗಳು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಇಬ್ಬರು ಮೃತಪಟ್ಟಿದ್ದರು, ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಭಾರತ ಮಹತ್ವದ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ:ಅನಿಲ್ ಅಂಬಾನಿ ಸಾಮ್ರಾಜ್ಯಕ್ಕೆ ಹೊಸ ಆಶಾಕಿರಣ.. ಜೈ ಅನ್ಮೋಲ್ ಯಶಸ್ಸಿನ ಗುಟ್ಟೇನು ಗೊತ್ತಾ?
ರಷ್ಯಾದಲ್ಲಿ ಎರಡು ಹೊಸ ರಾಯಭಾರ ಕಚೇರಿ ತೆರೆಯಲು ನಿರ್ಧಾರ!
ಮಾಸ್ಕೋದ ಕಾರ್ಲಟನ್ ಹೋಟೆಲ್ನಲ್ಲಿ ಅನಿವಾಸಿ ಭಾರತೀಯರನ್ನ ಪ್ರಧಾನಿ ಮೋದಿ ಭೇಟಿ ಮಾಡಿದ್ರು. ಪುಟ್ಟಪುಟ್ಟ ಮಕ್ಕಳು ಭಾರತದ ಬಾವುಟ ಹಿಡಿದು ಪ್ರಧಾನಿ ಮೋದಿಗೆ ಹಸ್ತಲಾಘವ ಮಾಡಿದ್ರು. ಇದೇ ವೇಳೆ ರಷ್ಯಾ-ಭಾರತದ ನಡುವೆ ಮತ್ತಷ್ಟು ವ್ಯಾಪಾರ ಹಾಗೂ ಪ್ರಯಾಣ ಉತ್ತೇಜನಕ್ಕಾಗಿ ಎರಡು ಹೊಸ ರಾಯಭಾರ ಕಚೇರಿಗಳನ್ನು ತೆರೆಯಲು ನಿರ್ಧರಿಸಿದ್ದೇವೆ ಅಂತ ಘೋಷಿಸಿದ್ರು.
ಮಾಸ್ಕೋದ ನ್ಯೂಕ್ಲಿಯರ್ ಸೆಂಟರ್ಗೆ ಪ್ರಧಾನಿ ಮೋದಿ ಭೇಟಿ
ಬಳಿಕ ಪ್ರಧಾನಿ ಮೋದಿ ಮಾಸ್ಕೋದ ಆಟಮ್ ಸೆಂಟರ್ಗೆ ಭೇಟಿ ನೀಡಿದ್ದಾರೆ. ಭಾರತ-ರಷ್ಯಾ ಪಾಲುದಾರಿಕೆಯಲ್ಲಿ ಪರಮಾಣು ಸಹಕಾರ ಮತ್ತು ವೈಜ್ಞಾನಿಕ ಪ್ರಗತಿಯ ಕ್ಷೇತ್ರದಲ್ಲಿ ಪ್ರಮುಖ ಘಟ್ಟ ಆಗಿದೆ. ಇದೇ ವೇಳೆ ಪ್ರಧಾನಿ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಪುಟಿನ್ ಗೌರವಿಸಿದ್ದಾರೆ. ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಪ್ರಧಾನಿ ಮೋದಿಗೆ ಸೇಂಟ್ ಆ್ಯಂಡ್ರ್ಯು ದಿ ಅಪೋಸ್ಟಲ್ ಪ್ರಶಸ್ತಿ ಕೂಡ ಪ್ರದಾನ ಮಾಡಿದ್ದಾರೆ. ಬಳಿಕ ಮಾಸ್ಕೋದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕಳೆದ 10 ವರ್ಷಗಳಲ್ಲಿ ಭಾರತ ಮಾಡಿರುವ ಅಭಿವೃದ್ಧಿ ಕೇವಲ ಟ್ರೈಲರ್, ಇನ್ನೊಂದು ದಶಕದಲ್ಲಿ ಮತ್ತಷ್ಟು ಬೆಳೆಯಲಿದ್ದೇವೆ ಅಂತ ಹೇಳಿದ್ದಾರೆ.
ಇದನ್ನೂ ಓದಿ:ದೇವರು ಇಚ್ಛಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ.. ನಾಯಕತ್ವದ ಬಗ್ಗೆ ಸೂರ್ಯ ಕುಮಾರ್ ಏನಂದ್ರು ಗೊತ್ತಾ?
ಪ್ರಧಾನಿ ಮೋದಿ ರಷ್ಯಾ ಭೇಟಿಗೆ ಉಕ್ರೇನ್ ಅಧ್ಯಕ್ಷ ಟೀಕೆ!
ಪ್ರಧಾನಿ ಮೋದಿ ರಷ್ಯಾ ಭೇಟಿಗೆ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕೀ ಅಸಮಾಧಾನ ಹೊರಹಾಕಿದ್ದಾರೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕ, ವಿಶ್ವದ ಅತ್ಯಂತ ರಕ್ತಸಿಕ್ತ ಕ್ರಿಮಿನಲ್ನನ್ನು ಅಪ್ಪಿಕೊಂಡಿದ್ದಾರೆ ಅಂತ ಕಟುವಾಗಿ ಟೀಕಿಸಿದ್ದಾರೆ. ಒಟ್ಟಾರೆ, ಪ್ರಧಾನಿ ಮೋದಿ ರಷ್ಯಾ ಭೇಟಿಯಲ್ಲಿ ಶೀಘ್ರದಲ್ಲೇ ಯುದ್ಧ ನಿಲ್ಲಿಸುವಂತೆ ಮನವೊಲಿಸಿ ಶಾಂತಿಗೆ ಕರೆ ನೀಡಿರೋದು ಮಹತ್ವ ಪಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ