ಪ್ರೇಮಿಗಳ ದಿನದಂದು ವಿಶೇಷ ಹಾಡು ಬರೆದ ಪ್ರೇಮ ಕವಿ; ಕೆ ಕಲ್ಯಾಣ್ ಬರೆದ ಕವಿತೆ ಹೇಗಿದೆ?

author-image
Gopal Kulkarni
Updated On
ಪ್ರೇಮಿಗಳ ದಿನದಂದು ವಿಶೇಷ ಹಾಡು ಬರೆದ ಪ್ರೇಮ ಕವಿ; ಕೆ ಕಲ್ಯಾಣ್ ಬರೆದ ಕವಿತೆ ಹೇಗಿದೆ?
Advertisment
  • ಪ್ರೇಮಿಗಳ ದಿನಕ್ಕಾಗಿ ಪ್ರೇಮ ಕವಿತೆ ಬರೆದ ಪ್ರೇಮ ಕವಿ
  • ಕೆ.ಕಲ್ಯಾಣ್​ರಿಂದ​ ವ್ಯಾಲೆಂಟೈನ್ಸ್ ಡೇಗಾಗಿ ವಿಶೇಷ ಕವಿತೆ
  • ಕವಿತೆ ಒಂದೊಂದು ಸಾಲು ಪ್ರೇಮಿಗಳ ಹೃದಯ ತಟ್ಟುತ್ತೆ

ಚಿತ್ರ ಸಾಹಿತ್ಯದಲ್ಲಿ ಅನೇಕ ಸಾಹಿತಿಗಳು ಪ್ರೇಮ ಗೀತೆಗಳನ್ನು ಬರೆದಿದ್ದಾರೆ. ಅದರಲ್ಲಿ ಅತಿಹೆಚ್ಚು ಮನ್ನಣೆ ಪಡೆದವರು ಅಂದ್ರೆ ಒಂದು ಹಂಸಲೇಖ, ಕೆ.ಕಲ್ಯಾಣ್ ಮತ್ತು ಜಯಂತ್ ಕಾಯ್ಕಿಣಿಯವರು. ಅದರಲ್ಲೂ ಕೆ. ಕಲ್ಯಾಣ್​​ ಅವರನ್ನು ಪ್ರೇಮಕವಿ ಎಂದೇ ಬಣ್ಣಿಸಲಾಗುತ್ತದೆ. ಅವರು ಬರೆದ ಒಂದೊಂದು ಪ್ರೇಮಭರೀತ ಕವಿತೆಗಳು ಕರುನಾಡಿನ ಜನರ ಹೃದಯ ಮಿಡಿತವನ್ನು ಇಮ್ಮಡಿಗೊಳಿಸಿದೆ. ಆಕಾಶ ಚಿತ್ರ ನೀನೇ ನೀನೇ ಇರಬಹುದು, ಅಮೃತವರ್ಷಿಣಿ ಸಿನಿಮಾದ ಎಲ್ಲಾ ಹಾಡುಗಳು, ಚಂದ್ರಮುಖಿ ಪ್ರಾಣ ಸಖಿ ಸಿನಿಮಾ ಎಲ್ಲ ಹಾಡುಗಳು ಕೆ.ಕಲ್ಯಾಣ್​ ಅವರನ್ನು ಕರುನಾಡಿನ ಮನೆ ಮನೆಗೆ ತಲುಪಿಸಿದ ಹಾಡುಗಳು. ನಮ್ಮೂರ ಮಂದಾರ ಹೂವೆ ಸಿನಿಮಾಗೆ ಅವರು ಬರೆದ ಗೀತೆಗಳು ಎಂದಿಗೂ ಅಮರಕಾವ್ಯಗಳಾಗಿ ಗುರುತಿಸಿಕೊಂಡಿವೆ.

ಇದನ್ನೂ ಓದಿ: ಪ್ರೇಮಿಗಳಿಗೆ ಈ ಸ್ಟಾರ್​ ಜೋಡಿಯೇ ಪ್ರೇರಣೆ; ಯಶ್,​ ರಾಧಿಕಾ ಪಂಡಿತ್ ಮಧ್ಯೆ ಲವ್ ಹುಟ್ಟಿದ್ದು ಹೇಗೆ?

ಹೀಗೆ ಪ್ರೇಮ ಕವಿ ಬರೆದ ಒಂದೊಂದು ಪ್ರೇಮ ಗೀತೆಗಳು ಯುಗಳ ಗೀತೆಗಳು ಕರ್ನಾಟಕದ ಜನರ ಬಾಯಿಯಲ್ಲಿ ಅದೆಷ್ಟು ಬಾರಿ ಗುನುಗುನಿಸಿವೆಯೋ ಗೊತ್ತಿಲ್ಲ. ಪ್ರೇಮದಾಚೆ ಕೆ.ಕಲ್ಯಾಣ್ ಮತ್ಯಾವುದನ್ನು ಬರೆಯಲೇ ಇಲ್ಲ. ಪ್ರೇಮದ ಆಳವನ್ನು ಅಕ್ಷರದಲ್ಲಿ ಪೋಣಿಸಿ ನಮಗೆ ಕೊಟ್ಟ ಅಪರೂಪದ ಕವಿ ಕೆ.ಕಲ್ಯಾಣ್​ ಈಗ ಅವರು ಪ್ರೇಮಿಗಳ ದಿನದಂದೇ, ಪ್ರೇಮಿಗಳಿಗಾಗಿಯೇ, ಪ್ರೇಮದಿಂದ, ಪ್ರೇಮ ಕವಿತೆಯೊಂದನ್ನು ಬರೆದು ನ್ಯೂಸ್​ಫಸ್ಟ್ ಜೊತೆ ಹಂಚಿಕೊಂಡಿದ್ದಾರೆ.

ಪ್ರೀತಿಯೆಂದರೆ
ಒಬ್ಬರನ್ನೊಬ್ಬರು
ಗೆಲ್ಲುವುದಲ್ಲ..l
ಒಬ್ಬರಿಗೊಬ್ಬರು
ಸೋಲುವುದು..ll

ಪ್ರೇಮಿಗಳು ಎಂದರೆ
ಒಬ್ಬರಿಗೊಬ್ಬರು
ಸ್ಪರ್ಧಿಗಳಲ್ಲ..l
ಒಬ್ಬರೊಳಗೊಬ್ಬರು
ಹುಡುಕುವ
ನೆಮ್ಮದಿಗಳು..ll

ತುಟಿಗಳು ಹೃದಯದ
ಮುಂಬಾಗಿಲು..
ಮುತ್ತುಗಳೇ
ಭಾವ ಝಲ್ಲರಿಯ
ತೋರಣ..l
ಹಂಚಿ ಹಾಡುವ
ಆಸೆಗಳಿಗೆಲ್ಲಾ
ಹೃದಯ ಒಂದು ಕಾರಣ..ll

ಪ್ರೀತಿಸುವಾಗ
ಹತ್ತಿರವಾಗಿರಿ..l
ಪ್ರೇಮಿಸುವಾಗ
ಎಚ್ಚರವಾಗಿರಿ..ll

ನಂಬಿಕೆಯಲ್ಲಿ
ಗುರುತರವಾಗಿರಿ..l
ಮೌನಗಳ ಕೂಗಿಗೆ
ಉತ್ತರವಾಗಿರಿ..ll

ನಕ್ಷತ್ರಗಳನ್ನು
ಎಣಿಸುವ ಭರದಲ್ಲಿ
ಚಂದಿರನನ್ನು
ಮರೆಯಬೇಡಿ..l
ಕಂಡವರನ್ನು
ಹುಡುಕುವ ಭರದಲ್ಲಿ
ಪ್ರೀತಿಸಿದವರನ್ನು
ಮರೆಯಬೇಡಿ..ll

ವ್ಯಾಲೆಂಟೈನ್
ಒಬ್ಬ ಸಂತ..l
ಅವನ ಹೆಸರಲ್ಲಿ
ಆಗಿಬಿಡಿ ಸ್ವಂತ..ll

ಕಾಲದ
ಹೂ ಗೊಂಚಲಲ್ಲಿ
ಮೊದಲ ಪರಿಮಳ
ನೀವಾಗಿರಿ..l
ಸಾರ್ಥಕತೆಯ
ಹೊಂಬಿಸಿಲಲ್ಲಿ
ಕಿರಣಗಳ ಕದಿವ ನೆಲ
ನಿಮ್ಮ ಬದುಕಾಗಿರಲಿ..ll

"Happy ಪ್ರೇಮಿಗಳ ಹಬ್ಬ.."
ಕೆ ಕಲ್ಯಾಣ್..

ಸದ್ಯ ಕೆ. ಕಲ್ಯಾಣ ಬರೆದ ಈ ಪ್ರೇಮ ಗೀತೆ ಜನರನ್ನು ತುಂಬಾ ಸೆಳೆಯುತ್ತಿದೆ. ಈ ರೀತಿ ಕಲ್ಯಾಣ್ ಬಿಟ್ಟು ಮತ್ಯಾರು ಬರೆಯಲು ಸಾಧ್ಯ ಎಂದು ಜನರು ಹೇಳುತ್ತಿದ್ದಾರೆ. ಕೆ.ಕಲ್ಯಾಣ್​ ಬರೆದ ಹಾಡನ್ನು ನೀವು ಕೂಡ ಓದಿ ಪ್ರೀತಿಯ ಹೊಳೆಯಲ್ಲಿ ಮಿಂದೇಳಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment