/newsfirstlive-kannada/media/post_attachments/wp-content/uploads/2025/02/UDP_CHICKEN-1.jpg)
ಕರಾವಳಿಯ ಜನಪ್ರಿಯ ಜನಪದ ಕ್ರೀಡೆ ಕೋಳಿ ಅಂಕ ಕೇವಲ ಕ್ರೀಡೆ ಮಾತ್ರವಲ್ಲ, ಅಲ್ಲಿನ ಜನರ ನಂಬಿಕೆ, ಸಂಪ್ರದಾಯ ಆಗಿದೆ. ಆದರೆ ಈ ಸಂಪ್ರದಾಯಕ್ಕೆ ಇದೀಗ ಪೊಲೀಸರ ಕಟ್ಟುನಿಟ್ಟಿನ ರೂಲ್ಸ್ ಬ್ರೇಕ್ ಹಾಕಿದೆ. ಈ ಬೆನ್ನಲ್ಲೇ ಶಾಸಕರು ಅಖಾಡಕ್ಕೆ ಧುಮುಕಿದ್ದಾರೆ.
ಕರಾವಳಿಯ ಜನಪ್ರಿಯ ಜನಪದ ಕ್ರೀಡೆ ಕೋಳಿ ಅಂಕ. ಈ ಕೋಳಿ ಕಾಳಗವನ್ನ ಜಾತ್ರೆ, ಉತ್ಸವ, ಕೋಲಗಳು ನಡೆದ ಮರುದಿನ ನಡೆಸಲಾಗುತ್ತೆ. ಯಾವುದೇ ಆಚರಣೆಗಳು ನಡೆದ ಮರುದಿನ ಕೋಳಿಯ ರಕ್ತ ಭೂಮಿಗೆ ಬೀಳಬೇಕು ಅನ್ನೋದು ಅನಾಧಿಕಾಲದ ಸಂಪ್ರದಾಯ. ಕೋಳಿಯ ರಕ್ತ ಭೂಮಿ ಸೇರಿದರೆ ಮಾತ್ರ ದೈವ, ದೇವರು ಸಂತೃಪ್ತವಾಗಿ ಲೋಕ ಸುಭೀಕ್ಷೆ ಆಗುತ್ತೆ ಎಂಬ ನಂಬಿಕೆಯಿದೆ. ಆದ್ರೆ ಇದೇ ಕೋಳಿ ಅಂಕದ ವಿಚಾರದಲ್ಲಿ ಕಳೆದ ಒಂದೂವರೆ ವರ್ಷದಿಂದ ಪೊಲೀಸ್ ಇಲಾಖೆ ಜೊತೆ ಉಡುಪಿಯ ಜನ ಜಟಾಪಟಿಗೆ ಇಳಿದಿದ್ದಾರೆ.
ಕಟ್ಟುನಿಟ್ಟಿನ ರೂಲ್ಸ್.. ಕೋಳಿಯಂಕಕ್ಕೆ ಬಿತ್ತು ಬ್ರೇಕ್
ಕರಾವಳಿಯ ಜನಪ್ರಿಯ ಜನಪದ ಕ್ರೀಡೆ ಕೋಳಿ ಅಂಕಕ್ಕೆ ಪೊಲೀಸರಿಂದ ಅಡ್ಡಿ ಉಂಟಾಗಿದೆ. ಜಾತ್ರೆ, ಕೋಳಿ ಅಂಕಗಳಲ್ಲಿ ಜೂಜು ನಡೆಯುತ್ತೆಂದು ಆರೋಪಿಸಿ ಒಂದೂವರೆ ವರ್ಷದಿಂದ ಕೋಳಿಯಂಕಕ್ಕೆ ಅವಕಾಶ ನಿರಾಕರಿಸಲಾಗ್ತಿದೆ. ಉಡುಪಿಯಲ್ಲಿ ಜಾತ್ರೆಯ ಸೀಸನ್ ಶುರುವಾಗಿದೆ. ಹಾಗಾಗಿ ಕೋಳಿ ಅಂಕಕ್ಕೆ ಅವಕಾಶ ನೀಡಬೇಕು ಎಂಬ ಒತ್ತಾಯ ಮತ್ತೆ ಶುರುವಾಗಿದೆ.
ಕೋಳಿ ಪಡೆ ಆಗಲೇಬೇಕು, ಈ ಸಲ ಮಾಡಲೇಬೇಕು. ನಮ್ಮ ಅಜ್ಜಂದಿರ ಕಾಲದಿಂದಲೀ ಕೋಳಿ ಅಂಕ ನಡೆಯುತ್ತಿದೆ. ಈಗ ಯಾವುದಕ್ಕೂ ಪೊಲೀಸರು ಬಿಡುತ್ತಿಲ್ಲ. ಪಡೆ ನಡೆಯಬೇಕು ಎನ್ನುವುದು ನಮ್ಮ ಒತ್ತಾಯ.
ಭಾಸ್ಕರ್, ಕೋಳಿ ವ್ಯಾಪಾರಿ
ಕಂಬಳ ಆಯ್ತು ಯಕ್ಷಗಾನ ಆಯ್ತು ಈಗ ಕೋಳಿ ಅಂಕಕ್ಕೂ ಆತಂಕ ಅನ್ನೋದು ಜಿಲ್ಲೆಯ ಜನರ ಅಸಮಾಧಾನ. ಕೋಳಿ ಅಂಕವನ್ನ ನಂಬಿಕೊಂಡು ಉದ್ಯೋಗ ಕಟ್ಟಿಕೊಂಡವರಿಗೂ ಆರ್ಥಿಕ ಹೊಡೆತ ಬಿದ್ದಿದೆ. ಆರಾಧನಾ ಪ್ರಕ್ರಿಯೆಯ ಭಾಗವಾದ ಕೋಳಿಯಂಕಕ್ಕೆ ಅಡ್ಡಿಪಡಿಸಬಾರದೆಂದು ಒತ್ತಾಯಿಸಲು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಗಳನ್ನು ಭೇಟಿಯಾಗಿದ್ದಾರೆ. ಆಚರಣೆಗೆ ಯಾವುದೇ ಅಡ್ಡಿಪಡಿಸಬೇಡಿ ಎಂದು ನಿಯೋಗದ ಜೊತೆ ತರಳಿ ಮನವಿ ನೀಡಿದ್ದಾರೆ.
ಇದನ್ನೂ ಓದಿ:ಹಿರಿಯ ನಟನ ಮನೆಯಲ್ಲಿ ಮುಗಿಯದ ಜಗಳ.. ತಂದೆಯಿಂದಲೇ ದೂರು, ಆ್ಯಕ್ಟರ್ ಮನೋಜ್ ಅರೆಸ್ಟ್!
ಕಂಬಳ ಬಗ್ಗೆ ಸಾಕಷ್ಟು ಹೋರಾಟಗಳು ಆದ ಮೇಲೆ ಕೋರ್ಟ್ಗೆ ಹೋದ ಮೇಲೆ ಸರ್ಕಾರದಿಂದ ಅದಕ್ಕೆ ಅನುಮತಿ ಸಿಕ್ಕಿದೆ. ಸರ್ಕಾರದ ಮುಂದೆ ಈ ವಿಚಾರ ಪ್ರಸ್ತಾಪ ಮಾಡುತ್ತೇವೆ. ಇಲ್ಲದಿದ್ದರೇ ಜನಪರ ಹೋರಾಟದ ಮೂಲಕ ತುಳುನಾಡು ಗೌರವ ಉಳಿಸುತ್ತೇವೆ.
ಯಶ್ ಪಾಲ್ ಸುವರ್ಣ, ಶಾಸಕ
ಕಂಬಳಕ್ಕೆ ಹೇಗೆ ಹೋರಾಟ ಮಾಡಿ ಮರಳಿ ಪಡೆದ್ವೋ ಅದೇ ರೀತಿ ನಮ್ಮ ನಂಬಿಕೆಗೆ ಧಕ್ಕೆ ಬಂದ್ರೆ ಕೋಳಿಯಂಕದ ವಿಚಾರದಲ್ಲೂ ಹೋರಾಟದ ದಾರಿ ಹಿಡಿಯೋ ಸುಳಿವನ್ನ ಶಾಸಕರು ಕೊಟ್ಟಿದ್ದಾರೆ. ಸದ್ಯ ಜನರ ಮನವಿಗೆ ಪೊಲೀಸ್ ಇಲಾಖೆ ಮನ್ನಣೆ ಕೊಡುತ್ತಾ ಕಾದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ