/newsfirstlive-kannada/media/media_files/2026/02/02/16th-finance-commission-2026-02-02-17-03-28.jpg)
16ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಶೇ.4.13 ರಷ್ಟು ಹಣ ಹಂಚಿಕೆ
ಕೇಂದ್ರದ ಎನ್‌ಡಿಎ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾಲು ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ಆರೋಪ ಮಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕದ ತೆರಿಗೆ ಪಾಲು ಅನ್ನು ಶೇ.3.64 ರಷ್ಟು ಮಾತ್ರ ಎಂದು ನಿಗದಿಪಡಿಸಿ ಹಂಚಿಕೆ ಮಾಡಿದ್ದು ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಆರೋಪಿಸುತ್ತಿತ್ತು. ಇದಕ್ಕೆ ಈಗ 16ನೇ ಹಣಕಾಸು ಆಯೋಗದ ಶಿಫಾರಸ್ಸಿನಲ್ಲಿ ಪರಿಹಾರ ಸಿಕ್ಕಿದೆ. ಕೇಂದ್ರದ ತೆರಿಗೆಯಲ್ಲಿ ರಾಜ್ಯದ ತೆರಿಗೆ ಪಾಲು ಅನ್ನು ಅರವಿಂದ್ ಪನಗರಿಯಾ ಅಧ್ಯಕ್ಷತೆಯ 16ನೇ ಹಣಕಾಸು ಆಯೋಗವು ಶೇ.4.13 ರಷ್ಟು ಎಂದು ನಿಗದಿಪಡಿಸಿ ಹಂಚಿಕೆ ಮಾಡಿದೆ.
ನಿನ್ನೆ ಲೋಕಸಭೆಯಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 16ನೇ ಹಣಕಾಸು ಆಯೋಗದ ಶಿಫಾರಸ್ಸು ವರದಿಯನ್ನು ಮಂಡಿಸಿದ್ದಾರೆ. ಜೊತೆಗೆ 16ನೇ ಹಣಕಾಸು ಆಯೋಗದ ಶಿಫಾರಸ್ಸು ವರದಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡು ಅಂಗೀಕರಿಸಿದೆ ಎಂದು ಕೂಡ ಹೇಳಿದ್ದಾರೆ.
16ನೇ ಹಣಕಾಸು ಆಯೋಗದ ಶಿಫಾರಸ್ಸು ವರದಿಯ ಪ್ರಕಾರ, ಈಗ ಕೇಂದ್ರ ಸರ್ಕಾರವು ತೆರಿಗೆಯಲ್ಲಿ ಶೇ.4.13 ರಷ್ಟು ಅನ್ನು ಕರ್ನಾಟಕಕ್ಕೆ ನೀಡಬೇಕಾಗಿದೆ. ಇದರಿಂದ ಕೇಂದ್ರದಿಂದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಿಗುವ ತೆರಿಗೆ ಪಾಲಿನ ಹಣದಲ್ಲಿ ಹೆಚ್ಚಳವಾಗಲಿದೆ. ಕರ್ನಾಟಕ ರಾಜ್ಯಕ್ಕೆ 2026- 27ನೇ ಸಾಲಿನಲ್ಲಿ ₹63,049 ಕೋಟಿ ತೆರಿಗೆ ಪಾಲು ನೀಡಲು ಕೇಂದ್ರದ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸಚಿವರುಗಳು ಹೇಳಿದ್ದಾರೆ. ಆದರೇ 14ನೇ ಹಣಕಾಸು ಆಯೋಗದ ಶಿಫಾರಸ್ಸ ವರದಿಯಲ್ಲಿ ಕೇಂದ್ರದ ತೆರಿಗೆಯಲ್ಲಿ ಕರ್ನಾಟಕದ ರಾಜ್ಯದ ಪಾಲು ಅನ್ನು ಶೇ.4.71 ಎಂದು ನಿಗದಿಪಡಿಸಿ ಹಂಚಿಕೆ ಮಾಡಲಾಗಿತ್ತು. 14 ನೇ ಹಣಕಾಸು ಆಯೋಗದ ವರದಿಗೆ ಹೋಲಿಸಿದರೇ, ಈಗ 16ನೇ ಹಣಕಾಸು ಆಯೋಗದ ವರದಿಯಲ್ಲಿ ಕರ್ನಾಟಕದ ತೆರಿಗೆ ಪಾಲಿನ ಶೇಕಡಾವಾರು ಪ್ರಮಾಣ ಕಡಿಮೆಯೇ ಇದೆ.
ಈಗಲೂ ಉತ್ತರ ಪ್ರದೇಶದಂಥ ರಾಜ್ಯಕ್ಕೆ ಕೇಂದ್ರದ ತೆರಿಗೆಯಲ್ಲಿ ಸಿಗುವ ಹಣದ ಪ್ರಮಾಣ ಹೆಚ್ಚಾಗಿಯೇ ಇದೆ. ಕರ್ನಾಟಕವು ಜನಸಂಖ್ಯೆ ನಿಯಂತ್ರಣ, ಬಡತನ ನಿರ್ಮೂಲನೆಯಲ್ಲಿ ಮಾಡಿದ ಸಾಧನೆಗಾಗಿ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಲ್ಲಿ ಕರ್ನಾಟಕಕ್ಕೆ ಕಡಿಮೆ ತೆರಿಗೆ ಪಾಲು ಅನ್ನು ಹಂಚಿಕೆ ಮಾಡಲಾಗಿತ್ತು. ಆದರೇ ಈಗ 16ನೇ ಹಣಕಾಸು ಆಯೋಗದ ವರದಿಯಲ್ಲಿ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ತೆರಿಗೆ ಪಾಲಿನಲ್ಲಿ ಶೇ.0.48 ರಷ್ಟು ಹೆಚ್ಚಳವಾಗಿದೆ. ಆದರೇ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಳವಾಗಬೇಕಾಗಿತ್ತು ಎಂಬುದು ಸಿಎಂ ಸಿದ್ದರಾಮಯ್ಯ ಅವರ ಒತ್ತಾಯ ಹಾಗೂ ಅಭಿಪ್ರಾಯ.
ಇನ್ನೂ ಕೇಂದ್ರದ ತೆರಿಗೆ ಪಾಲಿನಲ್ಲಿ ಕರ್ನಾಟಕದ ತೆರಿಗೆ ಹಣ ಹೆಚ್ಚಳಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾರಣ ಎಂದು ಜೆಡಿಎಸ್ ಹೇಳುತ್ತಿದೆ. ನೀತಿ ಆಯೋಗದ ಸದಸ್ಯರಾಗಿರುವ ಕುಮಾರಸ್ವಾಮಿ ಅವರು 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ್ ಪನಗಾರಿಯಾ ಅವರ ಮೇಲೆ ಒತ್ತಡ ಹೇರಿ ಮನವೊಲಿಸಿ, ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ತೆರಿಗೆ ಪಾಲು ಅನ್ನು ಹೆಚ್ಚಳ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜೆಡಿಎಸ್ ನಾಯಕರು ಹೇಳಿಕೊಂಡಿದ್ದಾರೆ. ಹೀಗಾಗಿ ಇದರ ಕ್ರೆಡಿಟ್ ಎಚ್.ಡಿ.ಕೆ.ಗೆ ಸಲ್ಲಬೇಕು ಅನ್ನೋದು ಜೆಡಿಎಸ್ ವಾದ. ಕುಮಾರಸ್ವಾಮಿ ಅವರೇ ಕೇಂದ್ರದ ತೆರಿಗೆಯಲ್ಲಿ ಕರ್ನಾಟಕದ ತೆರಿಗೆ ಪಾಲು ಹೆಚ್ಚಳ ಮಾಡುವಂತೆ ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಮನವಿ ಮಾಡಿದ್ದರು. ಕರ್ನಾಟಕಕ್ಕೆ ಎರಡು ಹೈಸ್ಪೀಡ್ ರೈಲು ಯೋಜನೆಯನ್ನು ತರುವಲ್ಲೂ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.
ಜೊತೆಗೆ ಕರ್ನಾಟಕದ ತೆಂಗು, ಕೋಕ್ಕೋ, ಶ್ರೀಗಂಧ ಬೆಳೆಗಾರರ ಪರವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಮನವರಿಕೆ ಮಾಡಿಕೊಟ್ಟಿದ್ದರು. ಹೀಗಾಗಿ ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ಹಿತಾಸಕ್ತಿ ಕಾಪಾಡುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ ಎಂದು ಜೆಡಿಎಸ್ ಹೇಳಿದೆ.
16 ನೇ ಹಣಕಾಸು ಆಯೋಗದ ಶಿಫಾರಸ್ಸು ವಿರುದ್ಧ " ಕೈ" ಹೋರಾಟಕ್ಕೆ ನಿರ್ಧಾರ
ಆದರೇ, ಇದರ ನಡುವೆಯೂ ಕೇಂದ್ರದ ವಿರುದ್ಧ ಹೋರಾಟಕ್ಕೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಮುಂದಾಗಿದೆ. ರಾಜ್ಯಕ್ಕೆ ಅನುದಾನ ನೀಡದೆ ತಾರತಮ್ಯ ಮಾಡುತ್ತಿದೆ ಎಂದು ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಸದನದೊಳಗೆ ಹಾಗೂ ಸದನದ ಹೊರಗೆ ಕೇಂದ್ರದ ವಿರುದ್ಧ ಬೀದಿಗಳಿದು ಹೋರಾಡಲು ಕಾಂಗ್ರೆಸ್ ಪಕ್ಷ ತಂತ್ರ ರೂಪಿಸಿದೆ. ಈಗಾಗಲೇ ನರೇಗಾ ಸಂಬಂಧ ದೇಶಾದ್ಯಂತ ಕಾಂಗ್ರೆಸ್ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದೆ.
ರಾಜ್ಯದಲ್ಲೂ ಸದನದ ಹೊರಗೆ ಹಾಗೂ ಒಳಗೆ ಹೋರಾಟವನ್ನು ಕೈಪಡೆ ನಡೆಸುತ್ತಿದೆ. ಇದೀಗ ನಿನ್ನೆ ಮಂಡಿಸಿರುವ ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಯವಾಗಿದೆ ಎಂಬ ಆಕ್ರೋಶವನ್ನು ವ್ಯಕ್ತಪಡಿಸುತ್ತಿದೆ. ಅನುದಾನ ಹಂಚಿಕೆ, ರಾಜ್ಯದ ಪಾಲಿನ ಜಿಎಸ್‌ಟಿ ಸೇರಿದಂತೆ ಹಲ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದೆ.
ನಿರಂತರವಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಜನರ ಮುಂದೆ ಹೋಗಲು ಕೈ ನಾಯಕರು ನಿರ್ಧರಿಸಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ . ಇದರೊಂದಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಕೇಂದ್ರದ ವಿರುದ್ಧ ನಿಲ್ಲುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ನಾಯಕರು ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us