/newsfirstlive-kannada/media/media_files/2025/09/09/land-grabbing-narayanappa-and-lakkappa-2025-09-09-13-17-23.jpg)
ಎಸ್.ಟಿ.ಎಸ್ ಜೊತೆ ನಾರಾಯಣಪ್ಪ, ಲಕ್ಕಪ್ಪ, ದೂರಿನ ಪ್ರತಿ
ರಾಜ್ಯ ರಾಜಧಾನಿ ಬೆಂಗಳೂರಿನ ಮಗ್ಗುಲಲ್ಲೇ ಇರುವ ಭೂಮಿಗೂ ಚಿನ್ನದ ಬೆಲೆ ಬಂದು ಬಹಳಷ್ಟು ವರ್ಷಗಳೇ ಆಗಿ ಹೋಗಿವೆ. ಈಗ ಈ ಚಿನ್ನದ ಭೂಮಿ ಪಡೆಯಲು ಜನರ ಜೀವವನ್ನು ಬಲಿ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ. 24 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸಲು ಮೂವರು ಹೋರಾಟಗಾರರನ್ನು ಹತ್ಯೆ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ಈ ಹಿಂದಿನ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಎನ್.ಆರ್. ರಮೇಶ್ ಮಾಡಿದ್ದಾರೆ.
ಗ್ರೇಟರ್ ಬೆಂಗಳೂರು ಅಥಾರಿಟಿ ಭೂ ಪ್ರದೇಶದಿಂದ ಬರೀ 18 ಅಡಿ ದೂರದಲ್ಲಿರುವ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿಯ ದೊಡ್ಡ ಬೆಲೆ ಗ್ರಾಮದ ಸರ್ವೇ ನಂಬರ್ 7/5 ಮತ್ತು 7/6 ರಲ್ಲಿರುವ 39 ಎಕರೆ ವಿಸ್ತೀರ್ಣದ ಭೂಮಿ ಸಂಪೂರ್ಣ ಸರ್ಕಾರದ ಸ್ವತ್ತು ಆಗಿರುತ್ತೆ. ಆದರೇ, ದೊಡ್ಡ ಬೆಲೆ ಗ್ರಾಮದ ನಿವಾಸಿಗಳಾದ ನಾರಾಯಣಪ್ಪ ಮತ್ತು ಲಕ್ಕಪ್ಪ ಎಂಬ ಇಬ್ಬರು ಸೋದರರು ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಹಿಂಬಾಲಕರಾಗಿದ್ದಾರೆ. ಈ ನಾರಾಯಣಪ್ಪ ಮತ್ತು ಲಕ್ಕಪ್ಪ ಎಂಬ ಇಬ್ಬರು ಸೋದರರು 39 ಎಕರೆ ಪೈಕಿ 24 ಎಕರೆ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ ಎಂಬುದು ಎನ್.ಆರ್.ರಮೇಶ್ ಗಂಭೀರ ಆರೋಪ. ಜೊತೆಗೆ ಈ ಇಬ್ಬರು ಸೋದರರು ಮೂವರು ಹೋರಾಟಗಾರರ ಹತ್ಯೆಗೂ ಕಾರಣರಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಸಹ ಎನ್.ಆರ್.ರಮೇಶ್ ಮಾಡಿದ್ದಾರೆ.
39 ಎಕರೆ ಪೈಕಿ 24 ಎಕರೆ ಭೂಮಿಯನ್ನು ಉಳುವವನೆ ಭೂಮಿಯ ಒಡೆಯ ಕಾಯಿದೆಯಡಿ ನಾರಾಯಣಪ್ಪನ ಪತ್ನಿಯ ತಂದೆ ನರಸಿಂಹಯ್ಯ ಹಾಗೂ ಲಕ್ಕಪ್ಪನ ಪತ್ನಿಯ ತಂದೆ ಚೆನ್ನಪ್ಪ ಎಂಬುವವರಿಗೆ ಸರ್ಕಾರಿ ಭೂಮಿ ಹಸ್ತಾಂತರವಾದಂತೆ ನಕಲಿ ದಾಖಲೆ ಸೃಷ್ಟಿಸಿ, ಭೂಮಿಯನ್ನು ಕಬಳಿಸಿ ಕಾಂಪೌಂಡ್ ಹಾಕಿಕೊಂಡಿದ್ದಾರೆ. 24 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಪ್ರತಿ ಎಕರೆ ಭೂಮಿಯ ಬೆಲೆ 15 ಕೋಟಿ ರೂಪಾಯಿ ಆಗಿದ್ದು, ಒಟ್ಟಾರೆ 360 ಕೋಟಿ ರೂಪಾಯಿ ಬೆಲೆ ಬಾಳುತ್ತೆ ಎಂದು ಎನ್.ಆರ್. ರಮೇಶ್ ಹೇಳಿದ್ದಾರೆ.
360 ಕೋಟಿ ಮೌಲ್ಯದ ಸರ್ಕಾರಿ ಭೂಕಬಳಿಕೆ ಹಗರಣ ಇದು. ಶಾಸಕ ಎಸ್.ಟಿ.ಸೋಮಶೇಖರ್ ಆಪ್ತರಾದ ನಾರಾಯಣಪ್ಪ, ಲಕ್ಕಪ್ಪನ ವಿರುದ್ಧ ಸರ್ಕಾರಿ ಭೂಮಿ ಕಬಳಿಕೆಯ ಗಂಭೀರ ಆರೋಪವನ್ನು ಎನ್.ಆರ್.ರಮೇಶ್ ಮಾಡಿದ್ದಾರೆ. ಭೂ ಕಬಳಿಕೆ ಜೊತೆ ಮೂವರು ಹೋರಾಟಗಾರರ ಹತ್ಯೆಗೂ ಕಾರಣವಾಗಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ. ಈ ಭೂಕಬಳಿಕೆ ಪ್ರಶ್ನಿಸಿ ಸ್ಥಳೀಯರು ಹಾಗೂ ಹೋರಾಟಗಾರರಿಂದ ಹೋರಾಟವೂ ನಡೆದಿದೆ. ಭೂಗಳ್ಳತನ ವಿರುದ್ಧ ಹೋರಾಟ ಮಾಡ್ತಿದ್ದ ನಿವೃತ್ತ ಯೋಧ ಕೈಲಾಸ್ 2002ರಲ್ಲಿ ಹತ್ಯೆ ಮಾಡಲಾಗಿತ್ತು . 2003ರಲ್ಲಿ ಶ್ರೀಮತಿ ಲಕ್ಷ್ಮಮ್ಮ ಹತ್ಯೆ ಆಗಿತ್ತು. 2003ರಲ್ಲಿ ಮತ್ತೊಬ್ಬ ಹೋರಾಟಗಾರ ವೆಂಕಟಪ್ಪ ಅನುಮಾನಾಸ್ಪಾದವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹತ್ಯೆಗಳ ಹಿಂದೆ ನಾರಾಯಣಪ್ಪ ಮತ್ತು ಲಕ್ಕಪ್ಪ ಇದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಬೃಹತ್ ಹಗರಣದ ಮರು ತನಿಖೆಗೆ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ. ಬೆಂಗಳೂರು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಹಾಗೂ ಜಿಲ್ಲಾಧಿಕಾರಿಗೆ ಎನ್ ಆರ್ ರಮೇಶ್ ಲಿಖಿತ ದೂರು ಸಲ್ಲಿಸಿದ್ದಾರೆ. ಜೊತೆಗೆ ಭೂಮಿಯ ದಾಖಲೆಗಳನ್ನು ಪೊಲೀಸ್ ಕಮೀಷನರ್ ಹಾಗೂ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ಭೂ ಕಬಳಿಕೆ ಹಾಗೂ ಮೂವರ ಹತ್ಯೆ ಕೇಸ್ ಬಗ್ಗೆ ಮರು ತನಿಖೆ ನಡೆಯಬೇಕೆಂದು ಎನ್.ಆರ್. ರಮೇಶ್ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.
ಒತ್ತುವರಿಯಾದ ಹಾಗೂ ಸೋದರರು ಕಬಳಿಸುವ ಸರ್ಕಾರಿ ಜಾಗವನ್ನು ಸರ್ಕಾರ ಮತ್ತೆ ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ಎನ್.ಆರ್. ರಮೇಶ್ ದೂರು ನೀಡಿದ್ದಾರೆ.
15 ಎಕರೆ ಜಾಗವನ್ನ ಸಂಶಯಾಸ್ಪದವಾಗಿ 75 ವರ್ಷಗಳ ಹಿಂದೆ ವಶ ಪಡಿಸಿಕೊಂಡಿದ್ದಾರೆ. ಕೇವಲ 100 ರೂಪಾಯಿಗೆ ಖರೀದಿ ಮಾಡಿರುವ ದಾಖಲೆ ಸೃಷ್ಟಿಸಿದ್ದಾರೆ. ಈ ವಿಚಾರವಾಗಿ 2000 ಇಸವಿಯಿಂದ ಗ್ರಾಮಸ್ಥರು ಹೋರಾಟ ಮಾಡುತ್ತಾ ಬಂದರು. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರ ಕಚೇರಿಯಲ್ಲಿರುವ ಭ್ರಷ್ಟ ಅಧಿಕಾರಿಗಳನ್ನು ಬಳಸಿ ಸ್ವತ್ತು ಅನ್ನು ತಮ್ಮ ಸುಪರ್ದಿಗೆ ರಾಜಕೀಯ ಪ್ರಭಾವದಿಂದ ತೆಗೆದುಕೊಂಡಿದ್ದಾರೆ . ಈ ವಿಚಾರವಾಗಿ ಹೋರಾಟ ಮಾಡಿದ್ದ ಮೂವರು ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಸಾವಿನ ಬಗ್ಗೆ ಮರುತನಿಖೆ ಮಾಡಬೇಕೆಂದು ಒತ್ತಾಯಿಸುತ್ತಿದ್ದೇನೆ. ಸಿಎಂ, ಗೃಹಸಚಿವರು, ನಗರ ಪೊಲೀಸ್ ಆಯುಕ್ತರಿಗೂ ಮನವಿ ಮಾಡಿದ್ದೇನೆ ಎಂದು ಎನ್.ಆರ್.ರಮೇಶ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.