/newsfirstlive-kannada/media/media_files/2025/11/24/congress-mla-lobbying-for-dks-2025-11-24-13-01-47.jpg)
ದೆಹಲಿಯಲ್ಲಿ ಬೀಡುಬಿಟ್ಟ ಕಾಂಗ್ರೆಸ್ ಶಾಸಕರು
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಕಿ ಉಳಿದಿರುವ ಎರಡೂವರೆ ವರ್ಷಗಳಲ್ಲೇ ರಾಜ್ಯದ ಮುಖ್ಯಮಂತ್ರಿ ಆಗಲೇಬೇಕೆಂದು ಶಪಥ ಮಾಡಿದ್ದಾರೆ. 2028 ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರುವ ಯಾವುದೇ ವಿಶ್ವಾಸ ಕಾಂಗ್ರೆಸ್ ನಾಯಕರಲ್ಲೂ ಇಲ್ಲ. ಹೀಗಾಗಿ ಈಗಲೇ ಸಿಎಂ ಆಗಬೇಕೆಂದು ಶಪಥ ಮಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಈಗ ಶಾಸಕರ ಬೆಂಬಲ ಒಗ್ಗೂಡಿಸುವ ಪ್ರಯತ್ನ ಆರಂಭಿಸಿದ್ದಾರೆ. ಒಕ್ಕಲಿಗ ಸಮುದಾಯದ ಆಚೆಗೂ ಶಾಸಕರ ಬೆಂಬಲ ಗಿಟ್ಟಿಸುವ ಕೆಲಸ ಆರಂಭಿಸಿದ್ದಾರೆ. ಮೊದಲ ಭಾರಿಗೆ ಶಾಸಕರಾಗಿ ಆಯ್ಕೆಯಾದವರಿಗೆ ಡಿಕೆಶಿ ಗಾಳ ಹಾಕಿದ್ದಾರೆ. ಕಳೆದ ಕೆಲ ತಿಂಗಳಿನಿಂದಲೇ ಈ ಬಗ್ಗೆ ಪ್ರಯತ್ನವನ್ನು ಡಿಕೆಶಿ ಸದ್ದಿಲ್ಲದೇ ನಡೆಸುತ್ತಿದ್ದರು. ಈಗ ಅದಕ್ಕೇ ವೇಗ ಸಿಕ್ಕಿದೆ.
ಸಿಎಂ ಸಿದ್ದರಾಮಯ್ಯಗೆ ಶಾಸಕರ ಬೆಂಬಲ ಇದೆ, ಸಿದ್ದರಾಮಯ್ಯ ಪರ ಶಾಸಕರ ಸಂಖ್ಯಾಬಲ ಇದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿಕೆಶಿಗೆ ಕಳೆದ ಭಾರಿ ಭೇಟಿಯಾದಾಗ ಹೇಳಿದ್ದಾರೆ. ಇದಾದ ಬಳಿಕ ತಾವು ಶಾಸಕರ ಸಂಖ್ಯಾಬಲ ತೋರಿಸಬೇಕೆಂದು ಡಿಕೆಶಿ ಈಗ ನಿರ್ಧರಿಸಿದಂತೆ ಕಾಣುತ್ತಿದೆ. ಹೀಗಾಗಿ ತಮ್ಮ ಪರ ಇರುವ ಶಾಸಕರನ್ನು ಒಗ್ಗೂಡಿಸಿ ಒಂದು ತಂಡದ ಬಳಿಕ ಮತ್ತೊಂದು ತಂಡವನ್ನು ಕಾಂಗ್ರೆಸ್ ಹೈಕಮ್ಯಾಂಡ್ ನಾಯಕರನ್ನು ಭೇಟಿಯಾಗಿ ಮನವೊಲಿಸಲು ಯತ್ನಿಸುತ್ತಿದ್ದಾರೆ.
ಇಂದು ಡಿಸಿಎಂ ಡಿಕೆಶಿ ಅವರಿಗೆ ರಾಜ್ಯದ ಸಿಎಂ ಹುದ್ದೆ ನೀಡಬೇಕೆಂದು ಕಾಂಗ್ರೆಸ್ ಹೈಕಮ್ಯಾಂಡ್ ಅನ್ನು ಆಗ್ರಹಿಸಲು ಮತ್ತೊಂದು ಶಾಸಕರ ತಂಡ ದೆಹಲಿಯಲ್ಲಿ ಬೀಡು ಬಿಟ್ಟಿದೆ. ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭೇಟಿಯಾಗಿ ಡಿಕೆಶಿ ಅವರಿಗೆ ಸಿಎಂ ಹುದ್ದೆ ನೀಡಬೇಕೆಂದು ಆಗ್ರಹಿಸಲು ಸಜ್ಜಾಗಿದೆ.
ದೆಹಲಿಯ ಪಂಚತಾರಾ ಹೋಟೇಲ್ ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು ಇಂದು ಮಧ್ಯಾಹ್ನ ಕೆ.ಸಿ.ವೇಣುಗೋಪಾಲ್ ಭೇಟಿಯಾಗಲು ಕಾಯುತ್ತಿದ್ದಾರೆ. ಶಾಸಕರಾದ ಶರತ್ ಬಚ್ಚೇಗೌಡ, ಶಾಸಕಿ ನಯನ ಮೋಟಮ್ಮ, ಶಾಸಕ ಇಕ್ಬಾಲ್ ಹುಸೇನ್ , ಶಾಸಕ ಉದಯ ಕದಲೂರು ಮತ್ತು ಶಾಸಕ ಹೆಚ್. ಸಿ ಬಾಲಕೃಷ್ಣ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕೆ.ಸಿ.ವೇಣುಗೋಪಾಲ್ ರನ್ನು ಭೇಟಿಯಾಗಲು ಈ ಶಾಸಕರ ಗುಂಪು ನಿರ್ಧರಿಸಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಎರಡೂವರೆ ವರ್ಷ ಪೂರೈಸಿದ್ದಾರೆ. ಬಾಕಿ ಉಳಿದ ಎರಡೂವರೆ ವರ್ಷದ ಅವಧಿಗೆ ಸಿಎಂ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಗೆ ನೀಡಬೇಕೆಂದು ಈ ಶಾಸಕರ ಬಣ ಆಗ್ರಹಿಸುತ್ತಿದ್ದಾರೆ.
ಕಳೆದ ವಾರವೂ ಡಿಕೆಶಿ ಬೆಂಬಲಿಸಿ ಸಚಿವ ಚೆಲುವರಾಯಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್ ಸದಸ್ಯರ ತಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿತ್ತು. ಈಗ ಮತ್ತೊಂದು ಶಾಸಕರ ತಂಡ ದೆಹಲಿ ತಲುಪಿದೆ.
/filters:format(webp)/newsfirstlive-kannada/media/media_files/2025/11/20/dks-supported-mla-delhi-tour-2025-11-20-16-50-40.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us