/newsfirstlive-kannada/media/media_files/2025/09/25/wipro-azim-premji-letter-to-cm-2025-09-25-18-55-18.jpg)
ಅಜೀಂ ಪ್ರೇಮ್‌ಜೀ ಅವರಿಂದ ಸಿಎಂಗೆ ಪತ್ರ ಬರೆದು ಪ್ರತ್ಯುತ್ತರ
ಬೆಂಗಳೂರಿನ ಸರ್ಜಾಪುರದಲ್ಲಿ ವಿಪ್ರೋ ಕಂಪನಿಯ ಕ್ಯಾಂಪಸ್ ನಲ್ಲಿ ವಾಹನಗಳ ಸೀಮಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರು ವಿಪ್ರೋ ಕಂಪನಿಯ ಮುಖ್ಯಸ್ಥ ಅಜೀಂ ಪ್ರೇಮ್‌ಜೀ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಈ ಮನವಿ ಪತ್ರಕ್ಕೆ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಪ್ರತ್ಯುತ್ತರ ಬರೆದಿದ್ದಾರೆ. ಬೆಂಗಳೂರಿನ ಔಟರ್ ರಿಂಗ್ ರೋಡ್ ನಲ್ಲಿ ರಸ್ತೆ ಟ್ರಾಫಿಕ್ ಕಡಿಮೆ ಮಾಡಲು ವಿಪ್ರೋ ಕಂಪನಿಯ ಕ್ಯಾಂಪಸ್ ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜೀ ಉತ್ತರ ನೀಡಿದ್ದಾರೆ.
ಕರ್ನಾಟಕದ ಅಭಿವೃದ್ದಿಗೆ ವಿಪ್ರೋ ಕೊಡುಗೆಯನ್ನು ಗುರುತಿಸಿದ್ದಕ್ಕಾಗಿ ತಮಗೆ ಧನ್ಯವಾದಗಳು. ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ನಿಮ್ಮ ನಾಯಕತ್ವದಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಬೆಂಗಳೂರಿನ ಔಟರ್ ರಿಂಗ್ ರೋಡ್ ರಫ್ತು ಆಧರಿತ ಎಕಾನಾಮಿಕ್ ಹಬ್ ಆಗಿದೆ.
ಟ್ರಾಫಿಕ್ ಜಾಮ್ ಸಮಸ್ಯೆಯೂ ಸಂಕೀರ್ಣವಾಗಿದ್ದು, ಬಹಳಷ್ಟು ಅಂಶಗಳಿಂದ ಪ್ರಭಾವಿತವಾಗಿದೆ. ಇದಕ್ಕೆ ಸಿಂಗಲ್ ಪಾಯಿಂಟ್ ಪರಿಹಾರ ಅಥವಾ ಸಿಲ್ವರ್ ಬುಲೆಟ್ ಇಲ್ಲ. ಇದಕ್ಕಾಗಿ ನಗರ ಟ್ರಾನ್ಸ್ ಪೋರ್ಟ್ ಮ್ಯಾನೇಜ್ ಮೆಂಟ್‌ನಲ್ಲಿ ವಿಶ್ವ ದರ್ಜೆಯ ಪರಿಣಿತರಿಂದ ವೈಜ್ಞಾನಿಕ, ಸಮಗ್ರ ಅಧ್ಯಯನವಾಗಬೇಕು. ಇದರಿಂದ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯಲ್ಲಿ ಪರಿಣಾಮಕಾರಿ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗುತ್ತೆ. ಈ ಪರಿಹಾರದ ಭಾಗವಾಗಲು, ವಿಪ್ರೋ ಕಂಪನಿಯು ಎಕ್ಸ್ ಫರ್ಟ್ ಗಳ ಅಧ್ಯಯನದ ವೆಚ್ಚದ ಸ್ಪಲ್ಪ ಭಾಗವನ್ನು ಭರಿಸಲು ಸಿದ್ದವಾಗಿದೆ.
ವಿಪ್ರೋದ ಸರ್ಜಾಪುರ ಕ್ಯಾಂಪಸ್ ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕೊಡಲು ಕಾನೂನು, ಅಡಳಿತ, ಸಾಂಸ್ಥಿಕ ಸವಾಲುಗಳ ಸಮಸ್ಯೆ ಇದೆ. ವಿಪ್ರೋ ಕ್ಯಾಂಪಸ್ ಖಾಸಗಿ ಸ್ವತ್ತು ಆಗಿದ್ದು, ಷೇರು ಮಾರುಕಟ್ಟೆಯಲ್ಲಿ ನೋಂದಾಣಿ ಕಂಪನಿಯ ಸ್ವತ್ತು ಆಗಿದೆ. ಇದರೊಳಗಡೆ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಸಾಧ್ಯವಿಲ್ಲ. ಎಲ್ಲದ್ದಕ್ಕಿಂತ ಹೆಚ್ಚಾಗಿ ಖಾಸಗಿ ಸ್ವತ್ತಿನ ಮೂಲಕ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ಕೊಡುವುದು ಸುಸ್ಥಿರ ಮತ್ತು ದೀರ್ಘಾವಧಿಯ ಪರಿಹಾರ ಆಗಲ್ಲ.
ವಿಪ್ರೋ ಕಂಪನಿಯು ಕರ್ನಾಟಕ ಸರ್ಕಾರದೊಂದಿಗೆ ಸೇರಿ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಲು ಬದ್ದವಾಗಿದೆ. ನಮ್ಮ ಟೀಮ್, ನಿಮ್ಮ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಲು ಸಿದ್ದವಾಗಿದೆ ಎಂದು ವಿಪ್ರೋ ಕಂಪನಿಯ ಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜೀ ಅವರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.