/newsfirstlive-kannada/media/media_files/2025/09/25/bangalore-business-corridor-2025-09-25-19-44-51.jpg)
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಗೆ ಭೂಸ್ವಾಧೀನಕ್ಕೆ ಯತ್ನ
ಬೆಂಗಳೂರು ಬ್ಯುಸಿನೆಸ್​ ಕಾರಿಡಾರ್​​​​ (ಬಿಬಿಸಿ) ಭೂಮಿ ಪರಿಹಾರ ಸಂಬಂಧ ಇಂದು ಬಿಡಿಎ ರೈತರ ಜೊತೆ ಮಹತ್ವದ ಸಭೆ ನಡೆಸಿತು. ಜಮೀನು ಮಾಲೀಕರೊಂದಿಗೆ ಪ್ರಾಧಿಕಾರ ನಡೆಸಿದ ಸಂಧಾನ ಸೂತ್ರ ಸಭೆಯಲ್ಲಿ ಏನೆಲ್ಲಾ ಆಯ್ತು ಅನ್ನೋದ್ರ ಕಂಪ್ಲೀಟ್​ ಡಿಟೇಲ್ಸ್ ಇಲ್ಲಿದೆ..!
- ಭೂಮಾಲೀಕರ ಮನವೊಲಿಕೆಗೆ ಬಿಡಿಎ ಕಸರತ್ತು..!
- ಮಾರುಕಟ್ಟೆ ಬೆಲೆಯ ಪರಿಹಾರ, ಪುನರ್ವಸತಿಗೆ ರೈತರು ಪಟ್ಟು..!
- ಸಭೆಯಲ್ಲಿ ಸರ್ಕಾರದ ವಿರುದ್ಧ ರೈತರಿಂದ ಭುಗಿಲೆದ್ದ ಆಕ್ರೋಶ
ಬಿಡಿಎ ಅಧ್ಯಕ್ಷ ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯ ಪ್ರಗತಿ ಪರಿಶೀಲನೆಗಾಗಿ ಇಂದು ಸಭೆ ನಡೆಸಲಾಯ್ತು. ಭೂಮಿ ಪರಿಹಾರದ ಕುರಿತು ಬಿಡಿಎ ಮತ್ತು ರೈತರ ನಡುವೆ ಭಿನ್ನಾಭಿಪ್ರಾಯಗಳ ಸರಿಪಡಿಸುವ ಪ್ರಯತ್ನವನ್ನು ಅಧ್ಯಕ್ಷರು ಮತ್ತು ಅಧಿಕಾರಿಗಳು ಮಾಡಿದ್ರು. ಭೂ ಸ್ವಾಧೀನ ಕಾಯ್ದೆ - 1894 ರನ್ವಯ ಸಂಧಾನ ಸೂತ್ರದಡಿ ಪರಿಹಾರ ನೀಡೋದಾಗಿ ಬಿಡಿಎ ಹೇಳಿದ್ರೆ, ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯಿದೆಯಡಿ, ಇವತ್ತಿನ ಮಾರುಕಟ್ಟೆ ಬೆಲೆಗೆ ಪರಿಹಾರ ನಿಗದಿ ಮಾಡ್ಬೇಕು ಅಂತಾ ರೈತರು ಪಟ್ಟು ಹಿಡಿದ್ರು. ಜೊತೆಗೆ ಭೂಮಿ ಕಳೆದುಕೊಂಡ ರೈತ ಕುಟುಂಬಗಳಿಗೆ ಪುನರ್ವಸತಿ, ಸರ್ಕಾರಿ ಕೆಲಸ ಸೇರಿದಂತೆ ಹತ್ತಾರು ಬೇಡಿಕೆಗಳನ್ನ ರೈತರು ಪ್ರಸ್ತಾಪಿಸಿದ್ರು.
74 ಕಿ.ಮೀ ಉದ್ದದ ಪೆರಿಫೆರಲ್​​​ ರಿಂಗ್​​ ರಸ್ತೆ ನಿರ್ಮಾಣಕ್ಕೆ 2557 ಎಕರೆ ಅಗತ್ಯವಿದೆ. 77 ಗ್ರಾಮಗಳಲ್ಲಿ ಹಾದು ಹೋಗಲಿರುವ 10 ಫಥದ ಈ ರಸ್ತೆ ತುಮಕೂರು ರಸ್ತೆಯಿಂದ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸಲಿದೆ. ಆದ್ರೆ ಈ ಯೋಜನೆ ನೋಟಿಫಿಕೇಶನ್​​ ಆಗಿ 20 ವರ್ಷ ಕಳೆದ್ರೂ ಆರಂಭ ಮಾತ್ರ ಆಗಿಲ್ಲ. ಇದೀಗ ರೈತರ ಮನವೊಲಿಸಿ ಯೋಜನೆ ಕೈಗೆತ್ತಿಕೊಳ್ಳಬೇಕೆಂಬ ಸಂಕಲ್ಪ ಮಾಡಿರುವ ಸರ್ಕಾರ ನಿರಂತರವಾಗಿ ರೈತರ ಜೊತೆ ಸಭೆ ಮೇಲೆ ಸಭೆ ನಡೆಸ್ತಿದೆ. ಇವತ್ತೂ ಬಿಡಿಎ ಅಧ್ಯಕ್ಷ ಎನ್​​.ಎ ಹ್ಯಾರೀಸ್​, ಬಿಬಿಸಿ ಅಧ್ಯಕ್ಷ ನಿವೃತ್ತ ಐಎಎಸ್​ ಅಧಿಕಾರಿ ಅತೀಕ್​​, ಬಿಡಿಎ ಕಮಿಷನರ್​​​ ಮಣಿವಣ್ಣನ್​​​​ ರೈತರ ಮನವೊಲಿಸುವ ಪ್ರಯತ್ನ ಮಾಡಿದ್ರು...
ಬಿಬಿಸಿ ಯೋಜನೆಗೆ 2007ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಈವರೆಗೆ ಯೋಜನೆ ಅನುಷ್ಠಾನಗೊಂಡಿಲ್ಲ. ಬೆರಳೆಣಿಕೆಯಷ್ಟು ಜಮೀನಿಗೆ ಪರಿಹಾರ ನೀಡಲಾಗಿದ್ದು, ಆ ಜಮೀನನ್ನೂ ಬಿಡಿಎ ವಶಕ್ಕೆ ಪಡೆದಿಲ್ಲ. ಹಾಗಾಗಿ ರೈತರು ಹೊಸ ಅಧಿಸೂಚನೆ ಸೇರಿದಂತೆ 2013ರ ಕೇಂದ್ರ ಸರ್ಕಾರದ ಭೂಸ್ವಾಧೀನ ಕಾಯ್ದೆಯಡಿ ಪರಿಹಾರಕ್ಕೆ ಪಟ್ಟು ಹಿಡಿದಿದ್ದಾರೆ. ಯೋಜನೆ ಜಾರಿ ಮಾಡಲೇಬೇಕು ಅಂತಿರೋ ಸರ್ಕಾರ ಯಾವ ನಿಲುವು ತೆಗೆದುಕೊಳ್ಳಲಿದೆ ಅನ್ನೋದನ್ನು ಕಾದು ನೋಡ್ಬೇಕು.
ರಘುಪಾಲ್​​​, ನ್ಯೂಸ್​​ಫಸ್ಟ್​, ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.