/newsfirstlive-kannada/media/media_files/2025/09/17/valmiki-nayaka-prassananda-puri-swamiji-2025-09-17-14-32-05.jpg)
ವಾಲ್ಮೀಕಿ ನಾಯಕ ಸಮುದಾಯದ ಪ್ರಸನ್ನಾನಂದ ಪುರಿ ಸ್ವಾಮೀಜಿ
ಕುರುಬರನ್ನ ಎಸ್‌ಟಿಗೆ ಸೇರಿಸಿದ್ರೆ ವಾಲ್ಮೀಕಿ ನಾಯಕ ಸಮುದಾಯಕ್ಕೆ ಆಗೋ ಅನ್ಯಾಯ ಏನು?
ನಾಳೆ ರಾಜನಹಳ್ಳಿ ಮಠದಲ್ಲಿ ಸಭೆ ಕರೆದ ಪ್ರಸನ್ನಾನಂದಪುರಿ ಸ್ವಾಮೀಜಿ
ರಾಜ್ಯದ ಕುರುಬ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರ್ಪಡೆ ಮಾಡುವ ಪ್ರಕ್ರಿಯೆಗೆ ವೇಗ ಸಿಕ್ಕಿದೆ. ಈ ಬಗ್ಗೆ ನಿನ್ನೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ನಡೆಯಬೇಕಾಗಿದ್ದ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ. ಆದರೇ, ಕುರುಬ ಸಮುದಾಯ ಈ ಹಿಂದಿನಿಂದಲೂ ತಮ್ಮನ್ನು ಎಸ್.ಟಿ. ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಹೋರಾಟ ಮಾಡುತ್ತಿದೆ. ಈಗಾಗಲೇ ಜೇನು ಕುರುಬ, ಕಾಡು ಕುರುಬ ಸಮುದಾಯಗಳು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿ ಎಸ್‌ಟಿ ಮೀಸಲಾತಿ ಲಾಭ ಪಡೆಯುತ್ತಿವೆ.
ಈಗ ಕುರುಬ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರ್ಪಡೆ ಮಾಡುವುದಕ್ಕೆ ನಿರೀಕ್ಷೆಯಂತೆ ವಾಲ್ಮೀಕಿ ನಾಯಕ ಸಮುದಾಯದಿಂದ ವಿರೋಧ ವ್ಯಕ್ತವಾಗುತ್ತಿದೆ. ವಾಲ್ಮೀಕಿ ನಾಯಕ ಸಮುದಾಯದ ಪೀಠಾಧೀಪತಿಗಳಾದ ಪ್ರಸನ್ನಾನಂದಪುರಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿರುವ ರಾಜನಹಳ್ಳಿ ಪೀಠದಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ ವಾಲ್ಮೀಕಿ ಮಠದಲ್ಲಿ ಸಭೆ ಕರೆದಿದ್ದಾರೆ. ಎಸ್.ಟಿ. ಪಟ್ಟಿಗೆ ಕುರುಬ ಸಮುದಾಯ ಸೇರ್ಪಡೆಯನ್ನು ವಿರೋಧಿಸಲು ಈ ಸಭೆ ಕರೆಯಲಾಗಿದೆ. ಸಭೆಗೆ ವಾಲ್ಮೀಕಿ ನಾಯಕ ಸಮುದಾಯದ ಮಾಜಿ ಶಾಸಕರು, ಹಾಲಿ ಶಾಸಕರು & ಸಚಿವರಿಗೂ ಆಹ್ವಾನ ನೀಡಲಾಗಿದೆ.
ಕುರುಬ ಸಮುದಾಯವನ್ನು ಎಸ್.ಟಿ. ಸೇರ್ಪಡೆ ಮಾಡುವುದನ್ನು ವಿರೋಧಿಸುವುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಸಿ, ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತೆ.
ಕುರುಬರನ್ನ STಗೆ ಸೇರಿಸಿದ್ರೆ ವಾಲ್ಮೀಕಿ ಸಮಾಜಕ್ಕೆ ಅನ್ಯಾಯವಾಗುತ್ತೆ. ಇದರ ಬಗ್ಗೆ ವಾಲ್ಮೀಕಿ ಸಮುದಾಯದ ನಾಯಕರು ಧ್ವನಿ ಎತ್ತುತ್ತಿಲ್ಲ. ಸದ್ಯ ವಾಲ್ಮೀಕಿ ಸಮುದಾಯಕ್ಕೆ ಕೇವಲ 7.5 ಮೀಸಲಾತಿ ಮಾತ್ರ ಇದೆ. ಕುರುಬ ಸಮಾಜ STಗೆ ಸೇರಿದ್ರೆ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗುತ್ತೆ ಎಂಬ ಅಸಮಾಧಾನ ವಾಲ್ಮೀಕಿ ನಾಯಕ ಸಮುದಾಯದ ಜನರಲ್ಲಿದೆ. ಇನ್ನೂ ಜಾತಿಗಣತಿಯಲ್ಲಿ ದಲಿತ ಕ್ರಿಶ್ಚಿಯನ್, ನಾಯಕ ಕ್ರಿಶ್ಚಿಯನ್ ಅಂತ ಇದೆ. ಈ ಬಗ್ಗೆಯೂ ವಾಲ್ಮೀಕಿ ಸಮುದಾಯದ ಮೀಟಿಂಗ್ನಲ್ಲಿ ಚರ್ಚೆ ನಡೆಯಲಿದೆ.
ಸಿಎಂ ಸಿದ್ದು ಹೇಳೋದು ಏನು?
ಕುರುಬರು ST ಸೇರ್ಪಡೆಗೆ ವಾಲ್ಮೀಕಿ ಸಮುದಾಯ ವಿರೋಧ ಇದೆ ನಿಜ. ಆದರೇ, ಕುರುಬರನ್ನು ST ಸೇರ್ಪಡೆಗೆ ಯಾರು ವಿರೋಧ ಮಾಡಬಾರದು. ಕುರುಬರನ್ನು ST ಗೆ ಸೇರ್ಪಡೆ ಮಾಡೋದು ಕೇಂದ್ರ ಸರ್ಕಾರ ಎಂದು ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ಜಾರಿಕೊಳ್ಳಲು ಸಿಎಂ ಸಿದ್ದರಾಮಯ್ಯ ಜಾಣ ನಡೆ ಇಡುತ್ತಿದ್ದಾರೆ.
ಕುರುಬರು ಎಸ್‌ಟಿಗೆ ಸೇರಿದ್ರೆ ವಾಲ್ಮೀಕಿ ನಾಯಕ ಸಮುದಾಯಕ್ಕೆ ಏನು ನಷ್ಟ?
01) ಎಸ್‌ಟಿಯಲ್ಲಿ ಜನಸಂಖ್ಯೆ ಜಾಸ್ತಿಯಾಗುತ್ತೆ.. ಆದ್ರೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಏರಿಕೆ ಮಾಡಬೇಕಾಗುತ್ತೆ, ಮೀಸಲಾತಿ ಪ್ರಮಾಣ ಏರಿಕೆ ತಡವಾಗುತ್ತೆ
02) ಎಸ್‌ಟಿಗೆ ಇರೋದು 15 ಮೀಸಲು ವಿಧಾನಸಭಾ ಕ್ಷೇತ್ರಗಳು. ಕುರುಬರು ಬಂದ್ರೆ ಅವರೇ ಎಸ್‌ಟಿ ಗ್ರೂಪ್‌ನಲ್ಲಿ ದೊಡ್ಡ ಜಾತಿ ಆಗುತ್ತೆ. ಹೀಗಾಗಿ ಅವರಿಗೆ ಬಹುಪಾಲು 15 ಮೀಸಲು ವಿಧಾನಸಭಾ, 2 ಲೋಕಸಭಾ ಸೀಟು ಹೋಗುತ್ತೆ
03) ಸದ್ಯಕ್ಕೆ ಇರೋ ಎಸ್‌ಟಿ ಗ್ರೂಪ್‌ನಲ್ಲಿ ಇತರ ಜಾತಿಗಳ ಜೊತೆ ಹೋರಾಟ ವಾಲ್ಮೀಕಿ ನಾಯಕ ಸಮುದಾಯಕ್ಕೆ ಸುಲಭ. ಆದ್ರೆ, ಕುರುಬರು ಎಸ್‌ಟಿ ಗೆ ಬಂದರೇ, ಶಿಕ್ಷಣ, ಉದ್ಯೋಗಕ್ಕಾಗಿ ಕುರುಬ ಸಮುದಾಯದ ಜೊತೆ ವಾಲ್ಮೀಕಿ ನಾಯಕ ಸಮುದಾಯದ ಯುವಜನತೆ ಹೋರಾಟ ಮಾಡೋದು ಕಷ್ಟವಾಗುತ್ತೆ.
ಕುರುಬರ ಎಸ್‌ಟಿ ಸೇರ್ಪಡೆ ಬಹುತೇಕ ಕನ್ಫರ್ಮ್ .
ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುತ್ತಾರಾ ವಾಲ್ಮೀಕಿ ನಾಯಕ ಸಮುದಾಯ?
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕುರುಬ ಸಮುದಾಯವನ್ನ ಎಸ್‌ಟಿಗೆ ಸೇರ್ಪಡೆ ಮಾಡೋ ಬಗ್ಗೆ ಮಾತಾಡಿದ್ದಾರೆ. ಹೀಗಾಗಿ ಕುರುಬರನ್ನ ಎಸ್‌ಟಿಗೆ ಸೇರ್ಪಡೆ ಮಾಡೋದು ಬಹುತೇಕ ಕನ್ಫರ್ಮ್. ರಾಜ್ಯ ಸರ್ಕಾರವು ಕುರುಬ ಸಮುದಾಯವನ್ನು ಎಸ್.ಟಿ.ಸೇರ್ಪಡೆ ಮಾಡುವುದರ ಪರವಾಗಿಯೇ ಇದೆ. ಆದರೇ, ಈ ಬಗ್ಗೆ ಅಂತಿಮ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕಾಗಿದೆ.
ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಕೆಟಗರಿ ಏಕೆ ಬೇಕು?
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿದರೇ, ಎಸ್.ಟಿ. ಸಮುದಾಯಕ್ಕೆ ಇರುವ ಹೆಚ್ಚಿನ ಹಣಕಾಸು ಸೌಲಭ್ಯಗಳನ್ನು ರಾಜ್ಯ, ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಬಹುದು. ಜೊತೆಗೆ ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್ ಕೋರ್ಸ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳಿಗೆ ಸೇರುವಾಗ ಎಸ್.ಟಿ. ಪಂಗಡಕ್ಕೆ ಶುಲ್ಕ ಭಾರಿ ಕಡಿಮೆ ಇದೆ. ಇದರ ಲಾಭ ಕುರುಬರಿಗೂ ಸಿಗುತ್ತೆ. ಈಗ ಸದ್ಯ 2ಎ ನಲ್ಲಿ ಕುರುಬ ಸಮುದಾಯ ಇರುವುದರಿಂದ ಕಡಿಮೆ ಫೀಜು ಸೌಲಭ್ಯ ಸಿಗುತ್ತಿಲ್ಲ.
ಸದ್ಯ 2 ಎ ಕೆಟಗರಿಯಲ್ಲಿ ಕುರುಬ ಸಮುದಾಯ ಇದ್ದು, 2ಎ ಕೆಟಗರಿಯಲ್ಲಿ 100 ಜಾತಿಗಳಿವೆ. ಇದರ ಬದಲು 50 ಜಾತಿಗಳಿರುವ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿ ಅಲ್ಲಿ, ಶೇ.14 ರಿಂದ ಶೇ.15 ರಷ್ಟು ಮೀಸಲಾತಿ ಪಡೆದು ವಾಲ್ಮೀಕಿ ನಾಯಕ ಸಮುದಾಯದ ಜೊತೆಗೆ ಉದ್ಯೋಗ, ಶಿಕ್ಷಣದ ಸೀಟುಗಳಿಗಾಗಿ ಹೋರಾಟ ಮಾಡಿ ಸೀಟು, ಉದ್ಯೋಗ ಪಡೆಯುವುದು ಸುಲಭ ಎಂಬ ಲೆಕ್ಕಾಚಾರ ಕುರುಬ ಸಮುದಾಯದಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.