/newsfirstlive-kannada/media/media_files/2025/09/02/bhovi-development-corporation-chairmen-2025-09-02-12-20-30.jpg)
ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರವಿಕುಮಾರ್ ಗೆ ರಾಜೀನಾಮೆ ಸೂಚನೆ
ಭೋವಿ ನಿಗಮದ ಅಧ್ಯಕ್ಷರ ಮೇಲೆ ಕಮೀಷನ್ ಆರೋಪ ಕೇಳಿ ಬಂದಿದೆ. ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರವಿಕುಮಾರ್ ಲಂಚ ಕೇಳಿದ್ದಾರೆ ಎಂದು ವಿಡಿಯೋ ಸಹಿತ ಸಾಕ್ಷ್ಯವನ್ನು ಪ್ರತಿಪಕ್ಷಗಳು ಬಿಡುಗಡೆ ಮಾಡಿವೆ. ಬಿಜೆಪಿ ಮತ್ತು ಜೆಡಿಎಸ್ ವಿಡಿಯೋ ಸಹಿತ ಸಾಕ್ಷ್ಯವನ್ನು ಬಿಡುಗಡೆ ಮಾಡಿವೆ. ಸಹಾಯಧನ ನೀಡಲು ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರವಿಕುಮಾರ್ 5 ಲಕ್ಷ ರೂಪಾಯಿ ಲಂಚ ಕೇಳಿದ್ದಾರೆ. ನಿಗಮದಿಂದ ಭೋವಿ ಸಮುದಾಯದ ಜನರಿಗೆ ಒಂದು ಎಕರೆ ಭೂಮಿ ಖರೀದಿಗೆ 25 ಲಕ್ಷ ರೂಪಾಯಿ ಸಹಾಯಧನವನ್ನು ಭೂ ಒಡೆತನ ಯೋಜನೆಯಡಿ ನೀಡಲಾಗುತ್ತೆ. ಭೂ ರಹಿತ ಭೋವಿ ಸಮುದಾಯದ ಕಾರ್ಮಿಕ ಮಹಿಳೆಯರು ಭೂಮಿಯನ್ನು ಹೊಂದಲು ರಾಜ್ಯ ಸರ್ಕಾರ ಭೋವಿ ಅಭಿವೃದ್ದಿ ನಿಗಮದ ಮೂಲಕ ಸಹಾಯ ಧನ ನೀಡುತ್ತೆ. ಆದರೇ, ಈ ಸಹಾಯ ಧನ ನೀಡಲು ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರವಿಕುಮಾರ್ ಫಲಾನುಭವಿಗಳಿಂದ 5 ಲಕ್ಷ ರೂಪಾಯಿ ಲಂಚ ಕೇಳಿರುವುದನ್ನು ಸ್ಟಿಂಗ್ ಅಪರೇಷನ್ ನಲ್ಲಿ ಫಲಾನುಭವಿಗಳೇ ರೆಕಾರ್ಡ್ ಮಾಡಿದ್ದರು. ಇದರ ವಿಡಿಯೋವನ್ನು ಬಿಜೆಪಿ ಮತ್ತು ಜೆಡಿಎಸ್ ನಿನ್ನೆ ಬಿಡುಗಡೆ ಮಾಡಿದ್ದವು.
ಈ ವಿಷಯದಿಂದ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನಗೊಂಡಿದ್ದಾರೆ. ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರವಿಕುಮಾರ್ ಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರವಿಕುಮಾರ್ ಇಂದು ಅಥವಾ ನಾಳೆಯೊಳಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಭ್ರಷ್ಟಾಚಾರದ ಆರೋಪ ರವಿಕುಮಾರ್ ತಲೆ ದಂಡಕ್ಕೆ ಕಾರಣವಾಗಿದೆ. ರವಿಕುಮಾರ್ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಶಿವಮೊಗ್ಗ ಗ್ರಾಮೀಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ಅಭಿವೃದ್ದಿ ನಿಗಮದಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದ ಆರೋಪ ಕೇಳಿ ಬಂದಿತ್ತು. ಅದರ ಬಗ್ಗೆಯೂ ಪೊಲೀಸ್ ಠಾಣೆ, ಸಿಐಡಿಯಲ್ಲಿ ಕೇಸ್ ದಾಖಲಾಗಿ ಪೊಲೀಸರು ತನಿಖೆ ನಡೆಸಿದ್ದರು. ಈಗ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.