/newsfirstlive-kannada/media/media_files/2025/09/17/cm-siddaramaiah-1-2025-09-17-18-10-03.jpg)
CM ಸಿದ್ದರಾಮಯ್ಯ
78 ನೇ ಕಲ್ಯಾಣ ಕರ್ನಾಟಕ ಉತ್ಸವ ದಿನದ ಅಂಗವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಎಂ ಸಿದ್ದರಾಮಯ್ಯ ಭರ್ಜರಿ ಗಿಫ್ಟ್ ನೀಡಿದ್ದಾರೆ. ಕಲ್ಯಾಣ ಉತ್ಸವ ನಿಮಿತ್ತ ರಾಷ್ಟ್ರ ಧ್ವಜಾರೋಹಣಕ್ಕೂ ಮುನ್ನವೇ ಬಂಪರ್ ಕೊಡುಗೆ ನೀಡುವ ಮೂಲಕ ಬಹುದಿನಗಳ ಬೇಡಿಕೆಯನ್ನ ಈಡೇರಿಸಿದ್ದಾರೆ. ಈ ಮೂಲಕ ನಮ್ಮ ಸರ್ಕಾರ ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಬದ್ಧವೆಂದು ಸಿದ್ದರಾಮಯ್ಯ ವಾಗ್ದಾನ ಮಾಡಿದ್ದಾರೆ.
ಕಲಬುರಗಿಯಲ್ಲಿ ಕಳೆಗಟ್ಟಿದ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭ.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಸಚಿವಾಲಯ ಘೋಷಿಸಿದ ಸಿದ್ದರಾಮಯ್ಯ.
ದೇಶಕ್ಕೆ ಸ್ವಾತಂತ್ರ್ಯ ಬಂದು ಒಂದು ವರ್ಷದ ಬಳಿಕ ಕಲ್ಯಾಣ ಕರ್ನಾಟಕ ಭಾಗಕ್ಕೆ 1948 ಸೆಪ್ಟೆಂಬರ್ 17 ರಂದು ಸ್ವಾತಂತ್ರ್ಯ ಸಿಕ್ಕಿತ್ತು. ಅದರ ಅಂಗವಾಗಿ ವಿಭಾಗೀಯ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ಹಾಗೂ ಉತ್ಸವ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಬೆಳಗ್ಗೆ 8.45 ಕ್ಕೆ ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ 9 ಗಂಟೆಗೆ ನಗರದ ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರೆದ ಜೀಪಿನಲ್ಲಿ ವಿವಿಧ ಪೊಲೀಸ್ ತುಕಡಿಗಳಿಂದ ಸಿಎಂ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಸಾವಿರಾರು ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆವವೇರಿಸಿದರು. ಕಾರ್ಯಕ್ರಮದ ಬಳಿಕ ಉತ್ಸವ ಉದ್ದೇಶಿಸಿ ಮಾತಾಡಿದ ಸಿಎಂ ಸಿದ್ದರಾಮಯ್ಯ, ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬದ್ದವಾಗಿದ್ದು, ಈ ಭಾಗದ ಜನರ ಹೋರಾಟಗಾರರ ಬಹುದಿನಗಳ ಬೇಡಿಕೆಯಾಗಿದ್ದ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಅಂತಾ ಹೇಳಿದರು. ಈ ಭಾಗಕ್ಕೆ 371(ಜೆ) ವಿಶೇಷ ಸ್ಥಾನಮಾನದ ಪ್ರಸ್ತಾವನೆಯನ್ನ ಅಂದಿನ ಪ್ರಧಾನಿ ವಾಜಪೇಯಿ ಹಾಗೂ ಗೃಹ ಸಚಿವ ಅಡ್ವಾಣಿ ತಿರಸ್ಕಾರ ಮಾಡಿದ್ದರು. ಆದ್ರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಲ್ಲಿಕಾರ್ಜುನ ಖರ್ಗೆಯವರ ಪರಿಶ್ರಮದಿಂದ 371(ಜೆ) ವಿಶೇಷ ಸ್ಥಾನಮಾನ ಸಿಕ್ಕಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ರು.
ಕಲ್ಯಾಣ ಕರ್ನಾಟಕ ಭಾಗದ ಇತರ ಜಿಲ್ಲೆಗಳಲ್ಲಿ ಸಹ ಕಳೆಗಟ್ಟಿದ ಸಂಭ್ರಮ
6 ಜಿಲ್ಲೆಗಳಲ್ಲಿ ಸಹ ಕಲ್ಯಾಣ ಕರ್ನಾಟಕ ಉತ್ಸವ ದಿನ ಆಚರಣೆ
ಕಲಬುರಗಿ ಅಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕ ಭಾಗದ ಇತರ ಜಿಲ್ಲೆಗಳಲ್ಲೂ ಸಹ 78 ನೇ ಕಲ್ಯಾಣ ಕರ್ನಾಟಕ ವಿಮೋಚನಾ ಹಾಗೂ ಉತ್ಸವ ದಿನವನ್ನ ಅದ್ಧೂರಿಯಾಗಿ ಆಚರಿಸಲಾಗಿದೆ. ಬೀದರನಲ್ಲಿ ಸಚಿವ ಈಶ್ವರ ಖಂಡ್ರೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ರೆ, ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶಾನಪುರ ಧ್ವಜಾರೋಹಣ ನೆರವೇರಿಸಿದರು, ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ, ರಾಯಚೂರಿನಲ್ಲಿ ಸಚಿವ ಡಾ: ಶರಣಪ್ರಕಾಶ್ ಪಾಟೀಲ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ರೆ ಅತ್ತ ಬಳ್ಳಾರಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಇನ್ನು ಕಲ್ಯಾಣ ಕರ್ನಾಟಕ ಉತ್ಸವ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯ್ದ ಸಾಧಕರಿಗೆ ಸಿಎಂ ಸಿದ್ದರಾಮಯ್ಯ ಸನ್ಮಾನ ಮಾಡಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ ನೇರವಾಗಿ ಶ್ರೀ ಶರಣಬಸವೇಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ಇತ್ತಿಚಿಗೆ ಲಿಂಗೈಕ್ಯರಾದ ಶ್ರೀ ಶರಣಬಸವಪ್ಪ ಅಪ್ಪಾ ಅವರ ಕುಟುಂಬಸ್ಥರನ್ನ ಭೇಟಿ ಮಾಡಿ ಸಾಂತ್ವನ ಹೇಳಿದರು. ಬಳಿಕ ಕಲಬುರಗಿ ತಾಲೂಕಿನ ಫರಹತ್ತಬಾದ್ ಬಳಿ ಅತಿವೃಷ್ಟಿಯಿಂದ ಹಾಳಾದ ಬೆಳೆಗಳನ್ನ ವೀಕ್ಷಣೆ ಮಾಡಿದರು. ಬೆಳೆ ಹಾನಿ ವಿಕ್ಷಣೆ ಬಳಿಕ ಮಾತಾಡಿದ ಸಿಎಂ ಸಿದ್ದರಾಮಯ್ಯ, ಜಂಟಿ ಬೆಳೆ ಸಮೀಕ್ಷೆ ವರದಿ ನೋಡಿ ಪರಿಹಾರ ನೀಡೋದಾಗಿ ಭರವಸೆ ನೀಡಿದ್ರು.
ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದ ಬಳಿಕ ಸಿಟಿ ಬಸ್ ನಿಲ್ದಾಣದ ಬಳಿಯ ರಾಯಣ್ಣ ವೃತ್ತದಲ್ಲಿ ಸ್ಥಾಪಿಸಿರುವ 14 ಅಡಿ ಎತ್ತರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದ್ರು. ಆನಂತರ ಕುರುಬ ಸಮಾಜದಿಂದ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಜಾತ್ರಾ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಬೃಹತ್ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಜ್ಯೋತಿ ಬೆಳಗಿಸುವುದರ ಮೂಲಕ ಸಿಎಂ ಸಿದ್ದರಾಮಯ್ಯ ಅಭಿನಂದನಾ ಸಮಾರಂಭ ಉದ್ಘಾಟನೆ ಮಾಡಿದರು. ಬಳಿಕ ಸಮಾವೇಶ ಉದ್ದೇಶಿಸಿ ಮಾತಾಡಿದ ಸಿಎಂ ಸಿದ್ದರಾಮಯ್ಯ, ಸಂಗೊಳ್ಳಿ ರಾಯಣ್ಣರ ಸ್ಪೂರ್ತಿ ಹಾಗೂ ಹೆಸರು ಉಳಿಯುವ ನಿಟ್ಟಿನಲ್ಲಿ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಲ್ಯಾಣ ಕರ್ನಾಟಕ ಉತ್ಸವ ದಿನದಂದೆ ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ಪ್ರತ್ಯೇಕ ಸಚಿವಾಲಯವನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡುವ ಮೂಲಕ ಈ ಭಾಗದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವೆಂಬ ಸ್ಪಷ್ಟ ಸಂದೇಶ ನೀಡಿದೆ. ಈ ಭಾಗದ ಜನರಲ್ಲಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಒಟ್ಟಿನಲ್ಲಿ ಕಲ್ಯಾಣ ನಾಡಿನ ಉತ್ಸವದಲ್ಲಿ ಸಿದ್ದರಾಮಯ್ಯ ಬಂಫರ್ ಕೊಡುಗೆ ಕೊಟ್ಟಿದ್ದಾರೆ. ಇತ್ತ ಅಭಿನಂದನಾ ಸಮಾರಂಭದ ಮೂಲಕ ಸಿದ್ದರಾಮಯ್ಯ ಸಮುದಾಯದ ಶಕ್ತಿ ಪ್ರದರ್ಶನ ಮಾಡಿದಂತಾಗಿದೆ. ಅದೇನೇ ಇದ್ರು ಸಹ ಅತಿವೃಷ್ಟಿಯಿಂದ ಹಾಳಾದ ಬೆಳೆಗೆ ಸರ್ಕಾರ ಆದಷ್ಟು ಬೇಗ ಪರಿಹಾರ ನೀಡಲಿ ಅನ್ನೋದು ಅನ್ನದಾತರ ಆಶಯವಾಗಿದೆ.
ಬಜರಂಗಿ ನ್ಯೂಸ್ ಫಸ್ಟ್ ಕಲಬುರಗಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.