/newsfirstlive-kannada/media/media_files/2025/08/04/rahul-gandhi-case-2025-08-04-13-17-07.jpg)
ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಿಗದಿಯಾಗಿದ್ದ ಕಾಂಗ್ರೆಸ್ ಪ್ರತಿಭಟನಾ ಕಾರ್ಯಕ್ರಮ ಮುಂದೂಡಿಕೆಯಾಗಿದೆ. ಆಗಸ್ಟ್ 5ರ ಬದಲು ಆಗಸ್ಟ್ 8 ರಂದು ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೋರೇನ್ ನಿಧನ ಹಿನ್ನಲೆಯಲ್ಲಿ ನಾಳೆಯ ಕಾರ್ಯಕ್ರಮವನ್ನು ಆಗಸ್ಟ್ 8 ಕ್ಕೆ ಮುಂದೂಡಲಾಗಿದೆ.
ಜಾರ್ಖಂಡ್ ಮಾಜಿ ಸಿಎಂ ಶಿಬು ಸೋರೆನ್ ಅಂತ್ಯಸಂಸ್ಕಾರದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗಿಯಾಗುತ್ತಿದ್ದಾರೆ. ನಾಳೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಇಬ್ಬರೂ ಜಾರ್ಖಂಡ್ ಗೆ ತೆರಳುತ್ತಿದ್ದಾರೆ. ಹೀಗಾಗಿ ನಾಳೆ ಬೆಂಗಳೂರಿಗೆ ಬಂದು ಕೇಂದ್ರ ಚುನಾವಣಾ ಆಯೋಗದ ವಿರುದ್ಧದ ಱಲಿಯಲ್ಲಿ ಭಾಗಿಯಾಗಲು ಸಾಧ್ಯವಾಗಲ್ಲ. ಈ ಕಾರಣದಿಂದಾಗಿ ಆಗಸ್ಟ್ 8 ರಂದು ಚುನಾವಣಾ ಆಯೋಗದ ವಿರುದ್ಧ ಬೆಂಗಳೂರಿನಲ್ಲಿ ಱಲಿ ನಡೆಸಲು ನಿರ್ಧರಿಸಿದ್ದಾರೆ.
/filters:format(webp)/newsfirstlive-kannada/media/media_files/2025/08/04/shibu-soren-2025-08-04-11-34-16.jpg)
ಈ ತೀರ್ಮಾನವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅಧಿಕೃತವಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮತಗಳ ಕಳವು ಆಗಿದೆ, ಆಕ್ರಮ ಆಗಿದೆ ಎಂದು ಆರೋಪಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಸಮಾವೇಶ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ ಕಳವು ಆಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಜೊತೆಗೆ ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ಮತ ಕಳವು ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಱಲಿಯಲ್ಲಿ ರಾಹುಲ್ ಗಾಂಧಿ ಬಿಡುಗಡೆ ಮಾಡುತ್ತಾರೆ ಎಂಬ ನಿರೀಕ್ಷೆ ಕಾಂಗ್ರೆಸ್ ಪಕ್ಷದ ನಾಯಕರಲ್ಲಿದೆ.