Advertisment

ಇ-ಸ್ವತ್ತು ಮೂಲಕ ನಿಮ್ಮ ಆಸ್ತಿ ದಾಖಲೆ ಸರಿಪಡಿಸಿಕೊಳ್ಳಿ: ಗ್ರಾ.ಪಂ ವ್ಯಾಪ್ತಿಯ ಆಸ್ತಿಗಳಿಗೆ ಮತ್ತೆ ಇ ಸ್ವತ್ತು ನೀಡಿಕೆಗೆ ಚಾಲನೆ

ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಕ್ರಮ ನಿವೇಶನಗಳನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆಕ್ರಮ ಲೇಔಟ್ ಗಳ ನಿವೇಶನಗಳಿಗೆ ಇ-ಖಾತಾ ನೀಡಲು ಇ ಸ್ವತ್ತು 2.0 ಗೆ ಇಂದು ವಿಧಾನಸೌಧದಲ್ಲಿ ಚಾಲನೆ ನೀಡಲಾಗಿದೆ.

author-image
Chandramohan
RURAL AREA LAYOUT
Advertisment

ಕೇಂದ್ರ ಸರ್ಕಾರವು ನರೇಗಾ, ಜಲ ಜೀವನ್ ಮಿಷನ್ ಸೇರಿದಂತೆ ಇತರೆ ಯೋಜನೆಗಳ ವಿಚಾರದಲ್ಲಿ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು.

Advertisment

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸೋಮವಾರ ನಡೆದ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. 

“ನರೆಗಾ ಯೋಜನೆ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ, ಇದರಿಂದ ನಮ್ಮ ಸರ್ಕಾರಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ. ನಾವು ಜನರ ಹೃದಯಕ್ಕೆ ಹತ್ತಿರವಾಗುತ್ತೇವೆ ಎಂದು ಇದಕ್ಕೆ ಅನುದಾನ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನರೇಗಾ ಯೋಜನೆಯಡಿ 2021ರಲ್ಲಿ 14.65 ಕೋಟಿ ಮಾನವ ಕೂಲಿ ದಿನಗಳಿಗೆ ಅವಕಾಶವಿತ್ತು. ಈ ವರ್ಷ ಅದನ್ನು 9 ಕೋಟಿಗೆ ಇಳಿಸಿದ್ದಾರೆ. ಸುಮಾರು 40% ಕಡಿಮೆ ಮಾಡಿದ್ದಾರೆ. ನರೇಗಾ ಯೋಜನೆಯಡಿ 2021ರಲ್ಲಿ 5,910 ರೂ. ಕೋಟಿ ಅನುದಾನ ಬಂದಿತ್ತು. ಈ ವರ್ಷ 2,691 ಕೋಟಿ ರೂ. ಅನುದಾನ ಬಂದಿದೆ. ಈ ಯೋಜನೆಯಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂದು ನೀವೆಲ್ಲರೂ ಗಮನಿಸಬೇಕು” ಎಂದು ಡಿಕೆ ಶಿವಕುಮಾರ್‌ ತಿಳಿಸಿದರು. 

“ಜಲಜೀವನ್ ಮಿಷನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತಲಾ 45% ಅನುದಾನ ನೀಡಬೇಕು. 10% ಹಣವನ್ನು ಜನರಿಂದ ಪಡೆಯುವುದಾಗಿದೆ. ಕಳೆದ ವರ್ಷ ಈ ಯೋಜನೆಗೆ ರಾಜ್ಯ ಸರ್ಕಾರ 3700 ಕೋಟಿ ರೂ. ಅನ್ನು ನೀಡಿದರೆ, ಕೇಂದ್ರ ಸರ್ಕಾರ ನೀಡಿರುವ ಅನುದಾನ ಈವರೆಗೂ ಶೂನ್ಯ” ಎಂದು ತಿಳಿಸಿದರು.

Advertisment

“ಗ್ರಾಮೀಣಾಭಿವೃದ್ಧಿ ಇಲಾಖೆಯ 25 ಸಾವಿರ ಕೋಟಿ ಅನುದಾನದಲ್ಲಿ ಜಲಜೀವನ್ ಮಿಷನ್ ಗೆ 12 ಸಾವಿರ ಕೋಟಿ, ನರೇಗಾ ಯೋಜನೆಗೆ 2,400 ಕೋಟಿ, ಗ್ರಾಮಗಳ ರಸ್ತೆಗೆ 1,000 ಕೋಟಿ, ಸಿಎಂ ಮೂಲಭೂತ ಸೌಕರ್ಯಕ್ಕೆ 900 ಕೋಟಿ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲ್ಯಾಣ ಪಥ ಯೋಜನೆ ಜಾರಿ ಮಾಡಿದ್ದಾರೆ” ಎಂದರು. 

“ಇದೊಂದು ಐತಿಹಾಸಿಕ ಕಾರ್ಯಕ್ರಮ. ಶುಭ ಗಳಿಗೆಯಲ್ಲಿ ನಾವು ಸೇರಿದ್ದೇವೆ. ನಮ್ಮ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡಿದ್ದು, ನಾವು ಭೂಮಿ ಮೇಲೆ ಹುಟ್ಟಿ, ಸತ್ತ ನಂತರ ಭೂಮಿಯ ಒಳಗೆ ಸೇರುತ್ತೇವೆ. ಆದರೆ ಬದುಕಿದ್ದಾಗ ನಾವು ಮಾಡಿದ ಸಾಧನೆ ಮಾತ್ರ ಭೂಮಿಯ ಮೇಲೆ ಉಳಿದುಕೊಳ್ಳುತ್ತದೆ. ಈ ಹಸ್ತ ನಿಮ್ಮ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ಗಾಂಧೀಜಿ ಅವರು ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿ ನೂರು ವರ್ಷಗಳು ತುಂಬಿದೆ. ಅಂದು ಗಾಂಧೀಜಿ ಅವರು ವಹಿಸಿಕೊಂಡ ಜವಾಬ್ದಾರಿ ಸ್ಥಾನದಲ್ಲಿ ಇಂದು ನಮ್ಮದೇ ರಾಜ್ಯದವರಾದ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ” ಎಂದರು. 

ಇ-ಸ್ವತ್ತು ಮೂಲಕ ನಿಮ್ಮ ಆಸ್ತಿ ದಾಖಲೆ ಸರಿಪಡಿಸಿಕೊಳ್ಳಿ:DKS

“ಭಾರತದ ಭವಿಷ್ಯ ಅಡಗಿರುವುದು ಹಳ್ಳಿಯಲ್ಲಿ ಎಂದು ಗಾಂಧೀಜಿ ತಿಳಿಸಿದ್ದರು. ಪ್ರತಿ ಹಳ್ಳಿಯಲ್ಲಿ ಪಂಚಾಯ್ತಿ, ಸೊಸೈಟಿ, ಶಾಲೆ ಇರಬೇಕು ಎಂದು ಮಾರ್ಗದರ್ಶನ ನೀಡಿದರು. ಅವರ ಮಾರ್ಗದರ್ಶನದಂತೆ ನಾವು ಕೆಲಸ ಮಾಡುತ್ತಿದ್ದೇವೆ. ನಿಮ್ಮ ಮನೆ ಬಾಗಿಲಿಗೆ ಇ-ಸ್ವತ್ತು ತಂದುಕೊಡುವ ಕೆಲಸ ಮಾಡುತ್ತಿದ್ದೇವೆ. ಇದು ನಿಮ್ಮೆಲ್ಲರ ಬದುಕಿಗೆ ಹೊಸರೂಪ ನೀಡಿ, ಎಲ್ಲ ಪಂಚಾಯ್ತಿ ಆಸ್ತಿ ದಾಖಲೆಗಳಿಗೆ 11 ಬಿ ಖಾತೆಗಳನ್ನು ನೀಡಲಾಗುತ್ತಿದೆ. ನೀವು ಅರ್ಜಿ ಹಾಕಿ 15 ದಿನದ ಒಳಗೆ ಖಾತೆ ನೀಡಲು ಸರ್ಕಾರ ತೀರ್ಮಾನಿಸಿದೆ. ಯಾರೂ ಕಚೇರಿ ಅಲೆಯುವುದು ಬೇಡ ಎಂದು ಆನ್ಲೈನ್ ಹಾಗೂ ಬಾಪುಜಿ ಕೇಂದ್ರಗಳಲ್ಲಿ ವಿತರಣೆಗೆ ಅವಕಾಶ ನೀಡಲಾಗಿದೆ. 11 ಬಿ ಮೂಲಕ ತೆರಿಗೆ ಪಾವತಿಸಿ, ಆಸ್ತಿ ದಾಖಲೆ ಸರಿಪಡಿಸಿಕೊಳ್ಳಿ” ಎಂದು ತಿಳಿಸಿದರು. 

Advertisment

ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆಗೆ ಕಸರತ್ತು.. ಹಲವು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಫೈನಲ್‌; ಲಿಸ್ಟ್ ಇಲ್ಲಿದೆ ನೋಡಿ



ಭೂ ದಾಖಲೆ ನೀಡುವುದು ಸರ್ಕಾರದ ಆರನೇ ಗ್ಯಾರಂಟಿ: DKS

“ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಉಳುವವನಿಗೆ ಭೂಮಿ, ಬಗರ್ ಹುಕುಂ ಸಾಗುವಳಿ ಜಮೀನು ಸಕ್ರಮ ಮಾಡಿದೆ. ಅರಣ್ಯ ಪ್ರದೇಶದಲ್ಲೂ ವಾಸಿಸುವವರಿಗೆ ಕಾನೂನಿನ ಅಡಿಯಲ್ಲಿ ಸಹಾಯ ಮಾಡಿದೆ. ನಿಮ್ಮ ಭೂಮಿ ಹಾಗೂ ಆಸ್ತಿ ದಾಖಲೆ ಸರಿಪಡಿಸುವುದು ನಮ್ಮ ಆರನೇ ಗ್ಯಾರಂಟಿ ಯೋಜನೆಯಾಗಿದೆ. ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳನ್ನು ಇ ಖಾತಾ ಅಭಿಯಾನ ಮಾಡಿದ್ದು, 6 ಲಕ್ಷ ಜನರಿಗೆ ಇ ಖಾತಾ ವಿತರಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಕೃಷ್ಣ ಬೈರೇಗೌಡರು ಹಾಗೂ ಪ್ರಿಯಾಂಕ್ ಖರ್ಗೆ ಅವರು ಸೇರಿ 1,11,111 ಜನರಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಿಂದ ಹೊರಗಿರುವ ತಾಂಡಾಗಳನ್ನು ಸಕ್ರಮ ಮಾಡಿ ಹಕ್ಕುಪತ್ರ, ಭೂ ದಾಖಲೆಗಳನ್ನು ವಿತರಿಸಿದ್ದೇವೆ” ಎಂದು ವಿವರಿಸಿದರು.

“ಹಸಿದವರಿಗೆ ಅನ್ನ, ಉದ್ಯೋಗ ನೀಡುತ್ತಿರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಜನರ ಶಕ್ತಿಯೇ ನಮ್ಮ ಶಕ್ತಿ. ಜನರೇ ನಮ್ಮ ಆಸ್ತಿ. ನಾನು ತಾಲೂಕು ಪಂಚಾಯ್ತಿ ಅಧ್ಯಕ್ಷನಾಗಿದ್ದು, ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರನ್ನು ಬೆಳೆಸಬೇಕು ಎಂಬ ರಾಜೀವ್ ಗಾಂಧಿ ಅವರ ಕಲ್ಪನೆ, ಈ ದೇಶದಲ್ಲಿ ಹೊಸ ನಾಯಕರನ್ನು ತಯಾರಾಗುವಂತೆ ಮಾಡಿದೆ. ಇದಕ್ಕಾಗಿ ಸಂವಿಧಾನಕ್ಕೆ 73, 74ನೇ ತಿದ್ದುಪಡಿ ತರಲಾಯಿತು. ರಾಷ್ಟ್ರಪತಿಯಾಗಿದ್ದ ಮಾಜಿ ಸಿಎಂ ಬಿ.ಡಿ ಜತ್ತಿ ಬಿಜಾಪುರ ಜಿಲ್ಲೆಯ ಪಂಚಾಯ್ತಿ ಅಧ್ಯಕ್ಷರಾಗಿದ್ದರು, ವಿಲಾಸ್ ರಾವ್ ದೇಶಮುಖ್ ಅವರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದರು. ಪ್ರಥಮ ಪ್ರಧಾನಿ ನೆಹರೂ ಅವರು ಕೂಡ ಅಲಹಬಾದ್ ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದರು. ಕೆಂಗಲ್ ಹನುಮಂತಯ್ಯ ಅವರು ಕೂಡ ಬೆಂಗಳೂರು ಸಿಎಂಸಿ ಅಧ್ಯಕ್ಷರಾಗಿದ್ದರು. ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಗ್ರಾಮೀಣ ಭಾಗದ ಜನನರಿಗೆ ನಾಯಕತ್ವ ನೀಡಬೇಕು ಎಂಬುದು ಕಾಂಗ್ರೆಸ್ ಸರ್ಕಾರದ ಮೂಲ ಉದ್ದೇಶ” ಎಂದು ಹೇಳಿದರು. 

ನನ್ನ ಕೆಲಸ ನೋಡಿ ಬಿಜೆಪಿ, ಕೇಂದ್ರ ಸರ್ಕಾರ ಗಾಬರಿಯಾಗಿತ್ತು-ಡಿಕೆಶಿ

“ನರೇಗಾ ಯೋಜನೆಯಲ್ಲಿ ನನ್ನ ಕ್ಷೇತ್ರದಲ್ಲಿ 250 ಕೋಟಿಯಷ್ಟು ಕೆಲಸ ಮಾಡಿಸಿದ್ದೆ. ಇದನ್ನು ನೋಡಿ ಎಲ್ಲರೂ ಗಾಬರಿಯಾದರು. ಬಿಜೆಪಿ, ಕೇಂದ್ರ ಸರ್ಕಾರ ನಾನು ಹಣ ಲೂಟಿ ಮಾಡಿದ್ದೇನೆ, ಸುಳ್ಳು ಲೆಕ್ಕ ಕೊಟ್ಟಿದ್ದೇನೆ ಎಂದು ತಂಡಗಳನ್ನು ಕಳುಹಿಸಿ ಅನೇಕ ಕಡೆ ತನಿಖೆ ಮಾಡಿಸಿತು. ನಾನು 60-70 ಸಾವಿರ ಮನೆಗಳಿಗೆ ನರೇಗಾ ಯೋಜನೆ ಮೂಲಕ ಜಮೀನು ಮಟ್ಟ, ದನದ ಕೊಟ್ಟಿಗೆ, ಕೋಳಿ ಸಾಕಾಣೆ, ಆಶ್ರಯ ಮನೆ, ಇಂಗುಗುಂಡಿ, ಪಂಚಾಯ್ತಿ ಕಚೇರಿ, ಪಾರ್ಕ್ ನಿರ್ಮಾಣ ಹೀಗೆ ಏನೆಲ್ಲಾ ವ್ಯವಸ್ಥೆ ಇದೆ ಅದನ್ನು ಮಾಡಿದ್ದೆವು. ಕುರಿ ಶೆಡ್ ಕಟ್ಟಲು 30-40 ಸಾವಿರ ನೆರವು ನೀಡಿದ್ದೆ. ಕೋವಿಡ್ ಸಮಯದಲ್ಲಿ ಪಂಚಾಯ್ತಿಯವರನ್ನು ಬಳಸಿಕೊಂಡು ಪ್ರತಿ ಕುಟುಂಬಕ್ಕೆ 10 ಸಾವಿರ ವೆಚ್ಚದ ಆಹಾರ ಸಾಮಗ್ರಿ ವಿತರಣೆ ಮಾಡಿದ್ದೆವು. ಇದಕ್ಕೆ ಮಾಜಿ ಮುಖ್ಯಮಂತ್ರಿಯೊಬ್ಬರು ನಮ್ಮ ಜಿಲ್ಲಾಧಿಕಾರಿ ಮೇಲೆ ದೂರು ನೀಡುತ್ತಿದ್ದರು. ಆಗ ನಾನು ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ, ಕಾನೂನು ಪುಸ್ತಕ ತೆಗೆದು ನೋಡು. ನಮ್ಮ ಹಣದಲ್ಲಿ ಪಂಚಾಯ್ತಿ ತೀರ್ಮಾನ ಮಾಡಿದೆ ಎಂದು ಹೇಳಿದೆ. ಈ ಯೋಜನೆ ಜಾರಿ ಮಾಡಿದ್ದಕ್ಕೆ ನಮ್ಮ ತಾಲೂಕಿಗೆ ಪ್ರಶಸ್ತಿ ನೀಡಿದರು. ನನಗೆ ಪ್ರಶಸ್ತಿ ನೀಡಬೇಕಾಗುತ್ತದೆ ಎಂದು ನಮ್ಮ ತಾಲೂಕು ಪಂಚಾಯ್ತಿ ಅಧ್ಯಕ್ಷನಿಗೆ ಪ್ರಶಸ್ತಿ ನೀಡಿದರು” ಎಂದು ತಿಳಿಸಿದರು.

Advertisment

“ಎಲ್ಲಿಯವರೆಗೂ ನಿಮ್ಮಲ್ಲಿ ಪ್ರಾಮಾಣಿಕತೆ, ಬದ್ಧತೆ ಇರುತ್ತದೆ ಅಲ್ಲಿಯವರೆಗೂ ಕೆಲಸ ಮಾಡಲು ಅವಕಾಶವಿರುತ್ತದೆ. ನರೇಗಾ ವಿಚಾರದಲ್ಲಿ ನಾನು ಸೋನಿಯಾ ಗಾಂಧಿ ಹಾಗೂ ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೆ. ನಾನು ಸಿದ್ದರಾಮಯ್ಯ ಅವರು ಬಳ್ಳಾರಿ ಪಾದಯಾತ್ರೆ ಮಾಡುವಾಗ ಮೊಳಲ್ಕಾಲ್ಮೂರು ಬಳಿ ಸುಮಾರು 50 ಮಹಿಳೆಯರು ತಮ್ಮ ಕಷ್ಟವನ್ನು ನಮ್ಮ ಬಳಿ ಹೇಳಿಕೊಂಡರು. ಅವರ ಕೂಲಿ 50 ರೂ. ಎಂದು ಹೇಳಿಕೊಂಡರು. ನಾನು ಈ ವಿಚಾರವನ್ನು ಸಿ.ಪಿ ಜೋಷಿ ಹಾಗೂ ಸೋನಿಯಾ ಗಾಂಧಿ ಅವರ ಮುಂದೆ ಪ್ರಸ್ತಾಪಿಸಿದೆ. ಆಗ ಸೋನಿಯಾ ಗಾಂಧಿ ಅವರು ಸಿ.ಪಿ ಜೋಷಿ ಅವರಿಗೆ ಸೂಚಿಸಿ, ರೈತರು ತಮ್ಮ ಸ್ವಂತ ಜಮೀನಿನಲ್ಲಿ ಮಟ್ಟ ಮಾಡಲು, ರೇಷ್ಮೆ ಸೇರಿದಂತೆ ಅನೇಕ ಬೆಳೆ ಹಾಕಲು ನರೇಗಾದಲ್ಲಿ ಹಣ ಪಡೆಯಲು ಅವಕಾಶ ಕಲ್ಪಿಸುವ ಕಾನೂನು ತಂದರು. ಈ ಯೋಜನೆಯನ್ನು ನೀವು ಸರಿಯಾಗಿ ಬಳಸಿಕೊಳ್ಳಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಕರೆ ನೀಡಿದರು.

ಕರ್ನಾಟಕದಲ್ಲಿ  1.48 ಕೋಟಿ ಮನೆಗಳಿದ್ದು, 53 ಲಕ್ಷ ಮನೆಗಳ ಇ ಸ್ವತ್ತು ಮಾಡಿದ್ದು, 95 ಲಕ್ಷ ಮನೆಗಳು ಬಾಕಿ ಇವೆ. ನೀವೆಲ್ಲರೂ ಈ ಸೇವೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ 1,272 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. ಪ್ರಧಾನಮಂತ್ರಿಗಳು ಇದನ್ನು ಅಭಿನಂದಿಸಿದ್ದಾರೆ.

ಆಕಾಶ ಎಷ್ಟೇ ದೊಡ್ಡದಿದ್ದರೂ ಸೂರ್ಯ, ಚಂದ್ರ ನಕ್ಷತ್ರಕ್ಕೆ ಹೆಚ್ಚಿನ ಬೆಲೆ ಇದೆ. ಅದೇ ರೀತಿ ವ್ಯಕ್ತಿ ಎಷ್ಟೇ ದೊಡ್ಡವನು ಚಿಕ್ಕವನಿದ್ದರೂ ನೀವು ಮಾಡುವ ಸಣ್ಣ ಕೆಲಸವನ್ನು ಸಮಾಜ ಗುರುತಿಸುತ್ತದೆ. ನಿಮಗೆ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಅವಕಾಶ ಸಿಕ್ಕಾಗ ಯಾವ ರೀತಿ ಬಳಸಿಕೊಳ್ಳುತ್ತೀರಿ ಎಂಬುದು ಮುಖ್ಯ.  ಬೆಳಕಿಲ್ಲದ ದಾರಿಯನ್ನು ನಡೆಯಬಹುದು. ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ. ನೀವುಗಳು ಕೂಡ ಪಂಚಾಯ್ತಿ ಸದಸ್ಯರಾಗಿದ್ದು, ತಮ್ಮ ಅವಧಿಯಲ್ಲಿ ಉದಾಹರಣೆ ಬಿಟ್ಟು ಹೋಗಬೇಕು ಎಂಬ ಕನಸಿರಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್  ಕಿವಿಮಾತು ಹೇಳಿದರು.

Advertisment

“ನಾನು ರಾಜ್ಯಶಾಸ್ತ್ರ ವಿಷಯದಲ್ಲಿ ಎಂಎ ಪದವಿ ಪಾಸ್ ಮಾಡಿದ್ದೇ 2007-08ರಲ್ಲಿ. ಅದರಲ್ಲಿ ಸ್ಥಳೀಯ ಸಂಸ್ಥೆಗಳ ಬಗ್ಗೆ ಉತ್ತರ ಪತ್ರಿಕೆಯಲ್ಲಿ ನನ್ನ ಅನುಭವದ ಮೇಲೆ ಉತ್ತರಿಸಿದ್ದೆ. ಆ ಪತ್ರಿಕೆಯಲ್ಲಿ ನನಗೆ ಹೆಚ್ಚು ಅಂಕ ಬಂದಿದೆ ಎಂದು ಪ್ರಾಧ್ಯಾಪಕರು ಹೇಳುತ್ತಿದ್ದರು. ನೀವುಗಳು ಕಾನೂನು ತಿಳಿಯಬೇಕು. ಕಾನೂನು ಬಿಟ್ಟು ಕೆಲಸ ಮಾಡಬೇಡಿ. ಈ ರೀತಿ ಮಾಡಿದವರು ಪ್ರಕರಣದಲ್ಲಿ ಸಿಲುಕಿ ಕೋರ್ಟ್ ಕೇಸ್ ಗಳಲ್ಲಿ ಸಿಲುಕಿ ಅಲೆಯುತ್ತಿದ್ದಾರೆ. ನಿನ್ನನ್ನು ನೀನು ನಿಯಂತ್ರಿಸಬೇಕಾದರೆ ನಿನ್ನ ಮೆದುಳು ಪ್ರಯೋಗಿಸು, ನೀನು ಬೇರೆಯವರನ್ನು ನಿಯಂತ್ರಿಸಬೇಕಾದರೆ ನಿಮ್ಮ ಹೃದಯ ಪ್ರಯೋಗಿಸು ಎಂದು ಮಹಾತ್ಮಾ ಗಾಂಧಿ ಅವರು ಹೇಳಿದ್ದಾರೆ. ನೀವುಗಳು ಪ್ರೀತಿಯಿಂದ ಜನರ ಸೇವೆ, ಜನರ ಕೆಲಸ ಮಾಡಿ” ಎಂದು ಡಿಸಿಎಂ ಡಿಕೆಶಿ ಸಲಹೆ ನೀಡಿದರು.

dk shivakumar (6)
ಡಿಕೆ ಶಿವಕುಮಾರ್, ಉಪಮುಖ್ಯಮಂತ್ರಿ




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

E KHATHA TO GRAM PANCHAYAT PROPERTIES
Advertisment
Advertisment
Advertisment