/newsfirstlive-kannada/media/media_files/2025/11/19/indira-gandhi-birthday-programme-2025-11-19-15-12-40.jpg)
ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಇಂದಿರಾಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು . ಈ ವೇಳೆ ಪುಸ್ತಕವೊಂದನ್ನು ಬಿಡುಗಡೆ ಮಾಡಲಾಯಿತು. ಪುಸ್ತಕ ಬಿಡುಗಡೆ ವೇಳೆ ಹಾಸ್ಯಮಯ ಘಟನೆಯೊಂದು ನಡೆದಿದೆ. ಈ ವೇಳೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್ ತಮ್ಮಲ್ಲೊಬ್ಬ ಒಳ್ಳೆಯ ಮಾರ್ಕೆಟಿಂಗ್ ಎಕ್ಸಿಕ್ಯುಟೀವ್ ಕೂಡ ಇದ್ದಾನೆ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಪುಸ್ತಕವನ್ನು ಉಚಿತವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೀಡಲಾಗುತ್ತಿತ್ತು. ಪುಸ್ತಕದ ಮೇಲೆಯೇ ನಾಟ್ ಫಾರ್ ಸೇಲ್ ಎಂದು ಕೂಡ ಮುದ್ರಿಸಲಾಗಿತ್ತು. ವೇದಿಕೆಯಲ್ಲಿ ಸಿಎಂ, ಡಿಸಿಎಂ ಪುಸ್ತಕವನ್ನು ಬಿಡುಗಡೆ ಮಾಡಿದ ಮೇಲೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಚಿತವಾಗಿ ಎಲ್ಲರಿಗೂ ಪುಸ್ತಕವನ್ನು ಹಂಚುತ್ತಿದ್ದರು.
ಇದು ವೇದಿಕೆಯಲ್ಲಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಮೈಕ್ ಕೈಗೆ ತೆಗೆದುಕೊಂಡ ಡಿಸಿಎಂ ಡಿ.ಕೆ.ಶಿವಕುಮಾರ್ , ಏಯ್.. ಯಾರೂ ಫ್ರೀಯಾಗಿ ಪುಸ್ತಕವನ್ನು ತೆಗೆದುಕೊಳ್ಳಬೇಡಿ, ರಾಹುಲ್ ಗಾಂಧಿ ಹೆಸರಲ್ಲಿ ಪುಸ್ತಕದ ಕಾಪಿ ರೈಟ್ಸ್ ಇದೆ . ಹೀಗಾಗಿ ಪುಸ್ತಕಕ್ಕೆ ಕಾಸು ಕೊಟ್ಟು ತೆಗೆದುಕೊಳ್ಳಿ . ಆಗ ಅದರ ಬೆಲೆ ಗೊತ್ತಾಗುತ್ತದೆ ಎಂದು ಮೈಕ್ ನಲ್ಲೇ ಅನೌನ್ಸ್ ಮಾಡಿದ್ದರು. ಆಗ ಪುಸ್ತಕದ ಮೇಲೆ ನಾಟ್ ಫಾರ್ ಸೇಲ್ ಅಂತ ಇದೆ ಸಾರ್ ಎಂದು ಕಾಂಗ್ರೆಸ್ ನಾಯಕ ನಾರಾಯಣ ಸ್ವಾಮಿ , ಡಿಸಿಎಂ ಡಿಕೆಶಿಗೆ ತೋರಿಸಿದ್ದರು. ಹೌದಾ, ಇರಲಿ ಬಿಡಿ, ಆದರೂ ಕಾಸು ಫಿಕ್ಸ್ ಮಾಡಿ ಅದಕ್ಕೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹುಕುಂ ಹೊರಡಿಸಿದ್ದರು. ಪುಸ್ತಕಕ್ಕೆ ಎಷ್ಟು ರೇಟ್ ಫಿಕ್ಸ್ ಮಾಡೋಣ ಎಂದು ಕಾರ್ಯಕರ್ತರು, ಮುಖಂಡರನ್ನು ಡಿ.ಕೆ ಶಿವಕುಮಾರ್ ಕೇಳಿದ್ದರು. ಆಗ ಮುಖಂಡರೆಲ್ಲಾ ನೂರು ರೂಪಾಯಿ ಫಿಕ್ಸ್ ಮಾಡಿ ಎಂದು ಹೇಳಿದ್ದರು.
ಓಕೆ, ಎಲ್ಲರೂ ಕೆಪಿಸಿಸಿಗೆ ನೂರು ರೂ. ಕೊಟ್ಟು ನಾಟ್ ಫಾರ್ ಸೇಲ್ ಪುಸ್ತಕ ತಗೋಳಿ, ಇದು ಕೆಪಿಸಿಸಿ ಗೆ ಹಣ ಹೋಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ ಶಿವಕುಮಾರ್ ಆದೇಶ ಹೊರಡಿಸಿದ್ದರು.
ತನ್ನ ಆಪ್ತರನ್ನು ಕರೆದು ಫ್ರೀ ಪುಸ್ತಕ ಕೊಟ್ಟರೆ ನೀವೇ ಕಾಸು ಕಟ್ಟಬೇಕಾಗುತ್ತದೆ ಎಂದು ಡಿ.ಕೆ ಫರ್ಮಾನು ಹೊರಡಿಸಿದ್ದರು. ಬಳಿಕ ಸ್ಥಳದಲ್ಲೇ ನೂರು ರೂಪಾಯಿ ಕೊಟ್ಟು ಇಂದಿರಾ ನುಡಿಮುತ್ತುಗಳು ಪುಸ್ತಕವನ್ನು ಕಾಂಗ್ರೆಸ್ ಕಾರ್ಯಕರ್ತರು ಖರೀದಿ ಮಾಡುವಂತೆ ಡಿಕೆಶಿ ಮಾಡಿದ್ದರು.
ದೇವಸ್ಥಾನ ಕಟ್ಟಬೇಕು ಅಂದ್ರೆ ಮನೆ ಮನೆಗೆ, ತಲೆ ತಲೆಗೆ ದುಡ್ಡು ಹಾಕ್ತಾರೋ ಇಲ್ಲವೋ, ಹಾಗೆಯೇ ಇದಕ್ಕೂ ಬೆಲೆ ಗೊತ್ತಾಗಲಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದರು.
ಉಚಿತವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುತ್ತಿದ್ದ ಪುಸ್ತಕವನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡುವಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಯಶಸ್ವಿಯಾದರು. ಕಾಂಗ್ರೆಸ್ ಪಕ್ಷಕ್ಕೂ ಪುಸ್ತಕ ಮಾರಾಟದ ಮೂಲಕವೂ ದುಡ್ಡು ಹರಿದು ಬಂತು. ಡಿಕೆಶಿ ಐಡಿಯಾ ಸಖತ್ತಾಗಿದೆ ಅಂತ ಕಾಂಗ್ರೆಸ್ ಕಾರ್ಯಕರ್ತರು ಖುಷಿಯಾದರು.
/filters:format(webp)/newsfirstlive-kannada/media/media_files/2025/11/19/indira-gandhi-birthday-programme02-2025-11-19-15-16-06.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us