/newsfirstlive-kannada/media/media_files/2025/10/17/kuruba-st-demand-2025-10-17-15-52-59.jpg)
ಕುರುಬ ಸಮುದಾಯದ ಹಿರಿಯ ನಾಯಕರಾದ ಮಾಜಿ ಸಚಿವ ಎಚ್.ವಿಶ್ವನಾಥ್ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇಬ್ಬರೂ ಈಗ ಒಂದಾಗಿದ್ದಾರೆ. ಕುರುಬ ಸಮುದಾಯದ ಹಿತಾಸಕ್ತಿಗಾಗಿ ಇಬ್ಬರೂ ನಾಯಕರು ಒಂದಾಗಿರುವುದು ವಿಶೇಷ. ಈ ಹಿಂದೆ ಕೆಲ ತಿಂಗಳುಗಳ ಕಾಲ ಎಚ್.ವಿಶ್ವನಾಥ್ ಕೂಡ ಬಿಜೆಪಿ ಪಕ್ಷದಲ್ಲೇ ಇದ್ದರು. ಬಿಜೆಪಿಯಿಂದ ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಇತ್ತ ಕೆ.ಎಸ್.ಈಶ್ವರಪ್ಪರನ್ನು ಬಿಜೆಪಿ ಪಕ್ಷದಿಂದಲೇ ಉಚ್ಛಾಟನೆ ಮಾಡಲಾಗಿದೆ. ಈಗ ಈ ಇಬ್ಬರೂ ಬಂಡಾಯ ಸ್ವಭಾವದ ನಾಯಕರು ಒಂದೇ ವೇದಿಕೆಗೆ ಬಂದಿದ್ದಾರೆ. ತಮ್ಮ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ಕೊಡಿಸಬೇಕೆಂದು ಇಬ್ಬರೂ ಒಂದಾಗಿರುವುದು ವಿಶೇಷ. ಎಚ್.ವಿಶ್ವನಾಥ್ ಹಾಗೂ ಕೆ.ಎಸ್. ಈಶ್ವರಪ್ಪ ಇಬ್ಬರೂ ಇಂದು ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕೆಂದು ಇಬ್ಬರೂ ಆಗ್ರಹಿಸಿದ್ದಾರೆ.
ಮೊದಲಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ವಿಜಯಪುರದಲ್ಲಿ ಈ ತಿಂಗಳ 24ರಂದು ಒಂದು ಸಭೆಯನ್ನು ಕರೆದಿದ್ದೇವೆ. ಕುರುಬ ಸಮುದಾಯವನ್ನು ST ಗೆ ಸೇರಿಸುವ ಸಂಬಂಧಿಸಿದಂತೆ ಸಭೆ ಮಾಡುತ್ತೇವೆ. ಸಭೆಯಲ್ಲಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ . ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಿ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಿ ಎಂದು ನಾವು ಕೇಳುತ್ತಿಲ್ಲ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಗೊಂದಲದಲ್ಲಿದ್ದಾರೆ. ಕುರುಬ ಸಮುದಾಯದ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ಕೂಡ ಈಗಾಗಲೇ ನಡೆದಿದೆ. ಕುಲಶಾಸ್ತ್ರೀಯ ಅಧ್ಯಯನದಲ್ಲಿ ಕುರುಬ ಸಮುದಾಯ ತೀರಾ ಹಿಂದುಳಿದಿದ್ದು, ಬಡವಾಗಿದೆ ಎಂದು ಹೇಳಿದೆ. ಇದನ್ನೆಲ್ಲಾ ರಾಜ್ಯ ಸರ್ಕಾರ ಅವಲೋಕಿಸಿಯೇ ಕೇಂದ್ರ ಸರ್ಕಾರಕ್ಕೆ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ಶಿಫಾರಸ್ಸು ಮಾಡಿದೆ. ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ನಾವೆಲ್ಲರೂ ಹೋರಾಟ ಮಾಡಿದ್ದೇವೆ.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಮಾತು ಕೇಳಿ ನನಗೆ ಆಶ್ಚರ್ಯ ಆಗಿದೆ . ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನಾನು ಹೋರಾಟ ಮಾಡಿಲ್ಲ, ಮಿಸ್ಟರ್ ಈಶ್ವರಪ್ಪ ಹೋರಾಟ ಮಾಡಿದ್ದಾರೆ ಎಂದಿದ್ದಾರೆ . ನಿಜ ಅವ್ರು ಸತ್ಯ ಒಪ್ಪಿಕೊಂಡಿದ್ದಾರೆ, ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಕೇಂದ್ರ ಸರ್ಕಾರ ಈಗ ಈ ಬಗ್ಗೆ ಗಮನ ಕೊಡಬೇಕು. ಹೊಸದಾಗಿ ಕೇಳುತ್ತಿಲ್ಲ, ಬಿಟ್ಟು ಹೋಗಿರೋದನ್ನು ಸೇರಿಸಿ ಎಂದಿದ್ದೇವೆ. ಶ್ರೀಗಳ ನೇತೃತ್ವದಲ್ಲಿ ಕೇಂದ್ರದ ನಾಯಕರ ಭೇಟಿಯಾಗಿ ಮನವಿ ಮಾಡಿದ್ದೇವು.
ಈಗ ರಾಜ್ಯ ಸರ್ಕಾರ ಅನುಮೋದಿಸಿರುವಾಗ ಕೇಂದ್ರ ಸರ್ಕಾರ ಬಿಟ್ಟು ಹೋಗಿರುವ ಕುರುಬ ಸಮಾಜ ವನ್ನು ಎಸ್ಟಿಗೆ ಸೇರಿಸಬೇಕು. ಕೇಂದ್ರ ಸರ್ಕಾರದ ಗಮನ ಸೆಳೆಯಲು ಇದೇ 24ಕ್ಕೆ ವಿಜಯಪುರದಲ್ಲಿ ಸಭೆ ಸೇರಿ ನಿರ್ಣಯ ಮಾಡುತ್ತೇವೆ. ಯಾವ ಕಾರಣಕ್ಕೂ ಬೇರೆ ಸಮಾಜಗಳಿಗೆ ಅನ್ಯಾಯ ಆಗಿ, ಮೀಸಲಾತಿ ಕೊಡಿ ಎಂದು ನಾವು ಕೇಳಲ್ಲ. ಎಸ್.ಟಿ. ಮೀಸಲಾತಿ ಪ್ರಮಾಣವನ್ನು 15 ರಿಂದ 20 ಪರ್ಸೆಂಟ್ ವರೆಗೆ ಕೊಡಲಿ. ಕುಲಶಾಸ್ತ್ರೀಯ ಅಧ್ಯಯನದ ಪ್ರಕಾರ ಕುರುಬರಿಗೂ ಎಸ್ಟಿ ಮೀಸಲಾತಿ ಕೊಡಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇನ್ನೂ ಮಾಜಿ ಸಚಿವ ಹೆಚ್ ವಿಶ್ವನಾಥ್ ಮಾತನಾಡಿ, ಕುರುಬ ಸಮಾಜಕ್ಕೆ ST ಮೀಸಲಾತಿ ಕೊಡಬೇಕು. ನಾವು ಏನು ಇದನ್ನು ಹೊಸದಾಗಿ ಕೇಳುತ್ತಿಲ್ಲ. ಮೀಸಲಾತಿ ವಿಚಾರದಲ್ಲಿ ಆಯಾ ಸಂದರ್ಭಕ್ಕೆ ತಕ್ಕಂತೆ ಆಯಾ ಸರ್ಕಾರಗಳು ತೀರ್ಮಾನ ತೆಗೆದುಕೊಳ್ಳುತ್ತಾ ಬಂದಿವೆ . ಆದ್ರೆ ಈಗ ಮೀಸಲಾತಿಯೇ ದೊಡ್ಡ ಸಮಸ್ಯೆ ಆಗಿದೆ . ಕೊಡಗಿನಲ್ಲಿ ಇರುವ ಕುರುಬ ನಿರ್ಬಂಧ ಪ್ರದೇಶ ತೆಗೆಯಬೇಕು. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವಂತೆ ಮನವಿ ಮಾಡುತ್ತೇನೆ ಎಂದು ಎಚ್.ವಿಶ್ವನಾಥ್ ಹೇಳಿದ್ದಾರೆ.
ಇದರ ಮಧ್ಯೆ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ , ನಾವು ಹೊಸದಾಗಿ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಕೇಳುತ್ತಿಲ್ಲ. ಬಿಟ್ಟು ಹೋಗಿರುವುದನ್ನು ಸೇರಿಸಿ ಎಂದಷ್ಟೇ ಕೇಳುತ್ತಿದ್ದೇವೆ. ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಬಿ.ಎಲ್. ಸಂತೋಷ್ ಅವರನ್ನೂ ಭೇಟಿಯಾಗಿ ಮನವಿ ಮಾಡಿದ್ದೇವು. ಬಿಟ್ಟು ಹೋಗಿರುವ ಕುರುಬ ಸಮುದಾಯವನ್ನ ಎಸ್ ಟಿ ಗೆ ಸೇರಿಸಿ . 20% ವರೆಗೂ ಎಸ್ ಟಿ ಮೀಸಲಾತಿ ಏರಿಕೆಯಾಗಲಿ ಎಂದು ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.
ಛತ್ತೀಸ್ ಗಢ್ ಸೇರಿ ಬೇರೆ ರಾಜ್ಯಗಳಲ್ಲಿ 22%ವರೆಗೆ ಮೀಸಲಾತಿ ಇದೆ. ರಾಜ್ಯದಲ್ಲಿ ಕುರುಬ ಬುಡಕಟ್ಟಿನ ಪ್ರದೇಶದ ನಿರ್ಬಂಧವನ್ನು ತೆಗೆದುಹಾಕುವುದು & ರಾಜ್ಯಾದ್ಯಂತ ಪರಿಶಿಷ್ಟ ಪಂಗಡ ( ST ) ಎಂದು ಗುರುತಿಸಲು ಆಗ್ರಹಿಸುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ