/newsfirstlive-kannada/media/media_files/2025/12/16/sonia-gandhi-and-rahul-gandhi-2025-12-16-12-15-08.jpg)
ಸಂಕ್ರಾಂತಿ ಬಂತು.. ಸುಗ್ಗಿ ತಂತು ಹಿಗ್ಗಿ ಕುಣಿದಾಡಿರೋ.. ಸದ್ಯ ರಾಜ್ಯ ಕಾಂಗ್ರೆಸ್​​ನಲ್ಲಿ ಸಂಕ್ರಾಂತಿ ಹತ್ತಿರವಾಗ್ತಿದ್ದಂತೆ ಒಂದು ಬಣ.. ಹಿಗ್ಗಿ ಕುಣಿದಾಡಲು ತುದಿಗಾಲಲ್ಲಿ ನಿಂತು ಕಾಯ್ತಿದೆ. ಸದ್ಯ ತಾಳ್ಮೆಯಿಂದ ಕಾಯ್ತಿರುವ ಟ್ರಬಲ್ ಶೂಟರ್​​.. ಹೈಕಮಾಂಡ್​​ನ ವಿಳಂಬ ನಡೆಗೆ ಬೇಸರಗೊಂಡಿದ್ದು, ಇದೀಗ ದೆಹಲಿಗೆ ದೌಡಾಯಿಸಲು ಮುಂದಾಗಿದ್ದಾರೆ. ಖರ್ಗೆಯನ್ನೂ ಭೇಟಿಯಾಗಿ ದೆಹಲಿ ಟ್ರಿಪ್​ ಬಗ್ಗೆ ಡಿಕೆಶಿ ಮಾಹಿತಿ ಕೊಟ್ಟಿದ್ದಾರಂತೆ.
ಸಂಕ್ರಾಂತಿ.. ಬದಲಾವಣೆಯ ಸಂಕೇತ.. ಸೂರ್ಯ ತನ್ನ ಪಥವನ್ನು ಬದಲಿಸುವ ದಿನ.. ಸದ್ಯ ಸಂಕ್ರಾಂತಿ ಹತ್ತಿರವಾಗ್ತಿದ್ದಂತೆ.. ರಾಜ್ಯ ಕಾಂಗ್ರೆಸ್​​​ನಲ್ಲೂ ಪಥ ಬದಲಾವಣೆಯ ಮಾತುಗಳು ಪಿಸುಗೊಡುತ್ತಿವೆ. ದೆಹಲಿಯಲ್ಲಿ ನಡೆದ ಒಪ್ಪಂದದಂತೆ ತಮಗೆ ಸಿಎಂ ಹುದ್ದೆ ಬಿಟ್ಟುಕೊಡಲೇಬೇಕು ಎಂದು ಪಟ್ಟು ಹಿಡಿದಿರುವ ಡಿಸಿಎಂ, ಸಂಕ್ರಾಂತಿ ಬಳಿಕ ಸಿಡಿದೇಳುವ ಲಕ್ಷಣ ಗೋಚರಿಸಿದೆ..
ಸಿಎಂ ಕುರ್ಚಿ ಕದನ.. ಸಂಕ್ರಾಂತಿ ಬಳಿಕ ಸಿಡಿದೇಳುವರೇ ಡಿಕೆಶಿ?
ನಾಯಕತ್ವ ಸಂಬಂಧ ದೆಹಲಿ ಭೇಟಿಗೆ ಮುಂದಾದ ಕನಕಾಧಿಪತಿ!
ಹೌದು... ಅಧಿಕಾರ ಹಂಚಿಕೆಯ ಗೊಂದಲ ಸೌಹಾರ್ದಯುತವಾಗಿ ಬಗೆ ಹರಿಯಲಿ.. ಪಕ್ಷಕ್ಕೆ ಡ್ಯಾಮೇಜ್​ ಆಗದಂತೆ ಸುಸೂತ್ರವಾಗಿ ಎಲ್ಲವೂ ಮುಗಿಯಲಿ ಎಂದು ಇಷ್ಟು ದಿನ ಸಹನೆಯಿಂದ ಕಾದು ಕುಳಿತಿದ್ದ ಡಿಕೆಶಿ, ಇದೀಗ ಒಂದು ಹೆಜ್ಜೆ ಮುಂದಿಟ್ಟಂತೆ ಕಾಣ್ತಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ.. ಬೇರೆಯವರನ್ನು ತಮ್ಮ ಸ್ಥಾನದಲ್ಲೇ ಕುಳಿತುಕೊಳ್ಳಿ ಅಂದದ್ದು. ಇನ್ನು ಡಿಸಿಎಂ ಡಿಕೆಶಿ ಕೇಂದ್ರ ಸರ್ಕಾರವನ್ನು ಟೀಕಿಸುವ ನೆಪದಲ್ಲಿ ಕೊಟ್ಟ ಮಾತು ಹೇಳಿಕೆಯನ್ನು ಸ್ಮರಿಸಿದ್ದು, ರಾಜ್ಯದಲ್ಲಿ ಮತ್ತೆ ಕುರ್ಚಿ ಕದನ ಜ್ವಾಲಾಮುಖಿಯಂತೆ ಸ್ಫೋಟಗೊಳ್ಳುತ್ತಾ ಎಂಬ ಪ್ರಶ್ನೆಯನ್ನ ಹುಟ್ಟಿ ಹಾಕಿದೆ. ಇದೇ ಹೊತ್ತಲ್ಲಿ ಡಿಸಿಎಂ ಡಿಕೆಶಿ ಸಂಕ್ರಾಂತಿ ಮರು ದಿನವೇ ದೆಹಲಿಗೆ ಫ್ಲೈಟ್​​ ಹತ್ತಲು ಮುಂದಾಗಿರೋದು ಕುತೂಹಲವನ್ನು ಹೆಚ್ಚಿಸಿದೆ.
ನಾಯಕತ್ವ ಬದಲಾವಣೆ ವಿಷ್ಯದಲ್ಲಿ ಹೈಕಮಾಂಡ್​ ವಿಳಂಬ ನಡೆ
ಮಾತುಕತೆ ಕರೆಯಬಹುದೆಂದು ಎದರು ನೋಡ್ತಿರುವ ಸಿಎಂ ಡಿಸಿಎಂ
CM ಸ್ಥಾನದ ಸ್ಪಷ್ಟ ಚಿತ್ರಣಕ್ಕಾಗಿ ಜಾತಕಪಕ್ಷಿಯಂತೆ ಕಾಯ್ತಿರುವ ಡಿಕೆ
ಗೊಂದಲಗಳ ನಡುವೆಯೇ ಹೈಕಮಾಂಡ್​ ಭೇಟಿಗೆ ಮುಂದಾದ ಡಿಕೆಶಿ
ಸಂಕ್ರಾಂತಿ ಮರುದಿನ ಜನವರಿ 16ಕ್ಕೆ ದೆಹಲಿಗೆ ತೆರಳಲು ಡಿಕೆಶಿ ಪ್ಲಾನ್​
ನಾಯಕತ್ವ ಸಂಬಂಧ ಹೈಕಮಾಂಡ್ ನಾಯಕರ ಭೇಟಿಗೆ ಮುಂದು
ಶತಾಯಗತಾಯ ಸಿಎಂ ಗಾದಿ ಪಡೆಯಲು ದೆಹಲಿಗೆ ತೆರಳ್ತಿರೋ ಡಿಕೆಶಿ
ದೆಹಲಿ ಭೇಟಿ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ಜೊತೆ ಚರ್ಚಿಸಿರುವ DCM
ದೆಹಲಿ ಭೇಟಿ ವೇಳೆ ಸೋನಿಯಾ ಗಾಂಧಿ ಭೇಟಿ ಮಾಡಿಸಲು ಒತ್ತಾಯ
ರಾಹುಲ್ ಭೇಟಿಗೂ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿರುವ ಡಿಕೆಶಿ
ಗ್ಯಾರೆಂಟಿ ಸರ್ಕಾರಕ್ಕೆ ಎರಡೂವರ್ಷ ಆಗಿದ್ದು.. ಸಿಎಂ ಸಿದ್ದರಾಮಯ್ಯ ಕನಸು ನನಸಾಗಿದೆ. ಆದ್ರೂ ನಾಯಕತ್ವ ಬದಲಾವಣೆ ವಿಷ್ಯದಲ್ಲಿ ಹೈಕಮಾಂಡ್​ ವಿಳಂಬ ಹೆಜ್ಜೆ ಇಟ್ಟಿದೆ. ಇತ್ತ ಸಿಎಂ. ಡಿಸಿಎಂ ಇಬ್ಬರೂ ಮಾತುಕತೆ ಕರೆಯಬಹುದೆಂದು ಎದರು ನೋಡ್ತಿದ್ದಾರೆ. ಅದರಲ್ಲೂ ಡಿಕೆಶಿಯಂತೂ CM ಸ್ಥಾನದ ಸ್ಪಷ್ಟ ಚಿತ್ರಣಕ್ಕಾಗಿ ಜಾತಕಪಕ್ಷಿಯಂತೆ ಕಾಯ್ತಿದ್ದಾರೆ. ಈ ಗೊಂದಲಗಳ ನಡುವೆಯೇ ಇದೀಗ ಡಿಸಿಎಂ ಡಿಕೆಶಿ ಹೈಕಮಾಂಡ್​ ಭೇಟಿಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಸಂಕ್ರಾಂತಿ ಮರುದಿನ ಜನವರಿ 16ಕ್ಕೆ ದೆಹಲಿಗೆ ತೆರಳಲು ಡಿಕೆಶಿ ಪ್ಲಾನ್​ ಮಾಡಿದ್ದು. ನಾಯಕತ್ವ ಸಂಬಂಧ ಹೈಕಮಾಂಡ್ ನಾಯಕರ ಭೇಟಿಗೆ ಚಿಂತನೆ ನಡೆಸಿದ್ದಾರೆ. ಶತಾಯಗತಾಯ ಸಿಎಂ ಗಾದಿ ಪಡೆಯಲೇ ಬೇಕೆಂದು ಪಣ ತೊಟ್ಟಿರುವ ಡಿಕೆಶಿ, ತಮ್ಮ ದೆಹಲಿ ಭೇಟಿ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ಜೊತೆಗೂ ಚರ್ಚಿಸಿದ್ದು, ದೆಹಲಿ ಭೇಟಿ ವೇಳೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿಸುವಂತೆ ಮಲ್ಲಿಕಾರ್ಜುನ ಖರ್ಗೆಗೆ ಒತ್ತಾಯ ಮಾಡಿದ್ದಾರಂತೆ. ಅಷ್ಟೇ ಅಲ್ಲ. ರಾಹುಲ್ ಭೇಟಿಗೂ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳಿಂದ ತಿಳಿದು ಬಂದಿದೆ.
ನಾಳೆ ರಾಹುಲ್ ಗಾಂಧಿ​ ಭೇಟಿಯಾಗಲಿರುವ ಸಿಎಂ ಸಿದ್ದು
ಸಂಕ್ರಾಂತಿ ಮರುದಿನ ದೆಹಲಿಗೆ ತೆರಳಿ, ಹೈಕಮಾಂಡ್​​ ಭೇಟಿಯಾಗಲು ಡಿಸಿಎಂ ಡಿಕೆಶಿ ಮುಂದಾಗಿದ್ದಾರೆ. ಆದ್ರೆ ಸಿಎಂ ಸಿದ್ದರಾಮಯ್ಯ ನಾಳೆಯೇ ರಾಹುಲ್​ ಗಾಂಧಿಯವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ನಾಳೆ ಕೇರಳಕ್ಕೆ ಭೇಟಿ ನೀಡಲಿದ್ದಾರೆ. ರಾಹುಲ್​ ಗಾಂಧಿ ಮೈಸೂರು ಮಾರ್ಗವಾಗಿಯೇ ಕೇರಳಕ್ಕೆ ತೆರಳಲಿದ್ದಾರೆ. ಹೀಗಾಗಿ ನಾಳೆ ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್​ ಗಾಂಧಿಯನ್ನು ಸ್ವಾಗತಿಸಲಿರುವ ಸಿಎಂ, ಇದೇ ವೇಳೆ, ರಾಹುಲ್​​ ಗಾಂಧಿ ಜೊತೆ ಮಹತ್ವದ ಚರ್ಚೆಯನ್ನು ನಡೆಸಲಿದ್ದಾರೆ ಎಂದು ಹೇಳಲಾಗ್ತಿದೆ.
ಅವಶ್ಯಕತೆ ಇದ್ದಾಗ ದೆಹಲಿಗೆ ಕರೆಯುತ್ತೇವೆ -ಖರ್ಗೆ
ಸಿಎಂ, ಡಿಸಿಎಂಗೆ ದೆಹಲಿ ಬುಲಾವ್​ ಬಗ್ಗೆ ಪ್ರತಿಕ್ರಿಯಿಸಿರೋ ಎಐಸಿಸಿ ಅಧ್ಯಕ್ಷ ಖರ್ಗೆ, ನಮಗೆ ಯಾವಾಗ ಅವಶ್ಯಕತೆ ಇರೋತ್ತೋ.. ಆಗ ಕರೆಯುತ್ತೇವೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.
/filters:format(webp)/newsfirstlive-kannada/media/media_files/2026/01/12/dks-want-to-meet-sonia-gandhi-2026-01-12-17-44-36.jpg)
ಒಟ್ಟಾರೆ ರಾಜ್ಯ ನಾಯಕತ್ವ ಬದಲಾವಣೆ ವಿಷ್ಯ ಕಾಂಗ್ರೆಸ್​ ಹೈಕಮಾಂಡ್​ಗೆ ಕಗ್ಗಂಟಾಗಿ ಪರಿಣಮಿಸಿದೆ. ಇದನ್ನು ಯಾವ ರೀತಿ ಬಗೆಹರಿಸಬೇಕು ಅನ್ನೋದು ಸರಿಯಾಗಿ ಗೊತ್ತಾಗದೇ.. ಅವಶ್ಯತಕೆ ಇದ್ದಾಗ ದೆಹಲಿಗೆ ಕರೆಯುತ್ತೇವೆ ಅನ್ನುತ್ತಲೇ ಕಾಲವನ್ನು ದೂಡುತ್ತಿದೆ. ಹೀಗಾಗಿ ಹೈಕಮಾಂಡ್​ ನಡೆಯಿಂದ ಡಿಸಿಎಂ ಡಿಕೆಶಿಯ ತಾಳ್ಮೆ ಕಟ್ಟೆಯೊಡೆದು.. ಹಸ್ತ ಪಡೆಯಲ್ಲಿ ಸಂಕ್ರಾಂತಿ ಆಗುತ್ತಾ.. ಅಥವಾ.. ಅಸ್ಸಾಂ ಸವಾಲು ಗೆದ್ದು ಶಕ್ತಿ ಪ್ರದರ್ಶಿಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.
ನ್ಯೂಸ್​ಫಸ್ಟ್​ ಬ್ಯೂರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us