/newsfirstlive-kannada/media/media_files/2025/09/22/mysore-dasara-9-2025-09-22-10-33-11.jpg)
ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ
ಅರಮನೆ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಜೋರಾಗಿದೆ. ಮೊದಲ ದಿನವೇ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಅವರ ಅರ್ಧಕ್ಕೂ ಹೆಚ್ಚು ಸಚಿವ ಸಂಪುಟದ ಸಹೋದ್ಯೋಗಿಗಳು ಮೈಸೂರಲ್ಲಿ ಹಲವು ಸಮಾರಂಭಗಳಲ್ಲಿ ಭಾಗಿಯಾದರೆ, ಡಿಸಿಎಂ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಅಷ್ಟಕ್ಕೂ, ಮೊದಲ ದಿನ ಮೈಸೂರು ದಸರಾದಲ್ಲಿ ಏನೆಲ್ಲಾ ಆಯ್ತು.. ಬನ್ನೀ, ನೋಡ್ಕಂಡು ಬರೋಣಾ
ಏಕಕಾಲಕ್ಕೆ ತೆರೆದುಕೊಂಡ ಹಲವು ಕಾರ್ಯಕ್ರಮಗಳು
ವಿದ್ಯುತ್ ದೀಪಾಲಂಕಾರದಲ್ಲಿ ಮಿಂದೆದ್ದ ಅರಮನೆನಗರಿಯ ರಾಜಬೀದಿಗಳು
ಕಣ್ಮನ ಸೂರೆಗೊಂಡ ಫಲಪುಷ್ಪ ಪ್ರದರ್ಶನ
ನಾಡಹಬ್ಬ ದಸರೆಯ ಮೊದಲ ದಿನ ಹತ್ತು ಹಲವು ಕಾರ್ಯಕ್ರಮಗಳು ತೆರೆದುಕೊಂಡವು. ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಆಗುತ್ತಿದ್ದಂತೆ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಕುಪ್ಪಣ್ಣ ಪಾರ್ಕ್ ನಲ್ಲಿ ಸಿಎಂ ಸಿದ್ದರಾಮಯ್ಯ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ, ಹೂವಿನ ಅಲಂಕಾರಕ್ಕೆ ಮನಸೋತರು. ಮತ್ತೊಂದೆಡೆ, ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳಕ್ಕೆ ಕೆ ಹೆಚ್ ಮುನಿಯಪ್ಪ ಚಾಲನೆ ನೀಡಿದ್ರು.
ದಸರಾ ಕುಸ್ತಿ ಪಂದ್ಯಾವಳಿ ವಿವಿದೋದ್ದೇಶ ಕ್ರೀಡಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ, ಕುಸ್ತಿ ಪಂದ್ಯಾವಳಿಗಳಿಗೆ ಚಾಲನೆ ನೀಡಿದ್ರು. ಮತ್ತೊಂದೆಡೆ ಕಾವಾದಲ್ಲಿ ಚಿತ್ರಕಲಾ ಶಿಬಿರ, ಸ್ಕೌಟ್ಸ್ & ಗೈಡ್ಸ್ ಮೈದಾನದಲ್ಲಿ ಪುಸ್ತಕ ಮೇಳಕ್ಕೆ ಚಾಲನೆ ಸಿಕ್ತು. ಯೋಗ ದಸರಾ, ಯೋಗ ನೃತ್ಯ, ನಾಟಕ , ಪಂಚತತ್ವ ದರ್ಶನ ಕಾರ್ಯಕ್ರಮ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆರಂಭವಾದವು.
ಅಂಬಾ ವಿಲಾಸ ಅರಮನೆಯಲ್ಲಿ ಮೈಸೂರು ಮಹಾರಾಜರ ಖಾಸಗಿ ದರ್ಬಾರ್ ನಡೆಯಿತು. ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ ಚಾಮರಾಜ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸಿದ್ದರು. ಇದಕ್ಕಾಗಿ ಅರಮನೆಯ ಸ್ಟ್ರಾಂಗ್ ರೂಮುನಿಂದ ಮಹಾರಾಜರ ಸಿಂಹಾಸನವನ್ನು ಬಿಗಿ ಭದ್ರತೆಯಲ್ಲಿ ತರಲಾಗಿತ್ತು. ವರ್ಷಕ್ಕೊಮ್ಮೆ ಮೈಸೂರು ಮಹಾರಾಜರ ಸಿಂಹಾಸನವನ್ನು ನೋಡುವ ಅವಕಾಶ ಈ ಮೂಲಕ ಜನರಿಗೆ ಸಿಗುತ್ತೆ.
ಮಹಾರಾಜರ ಖಾಸಗಿ ದರ್ಬಾರ್ ಸಂಪ್ರದಾಯ, ದಸರಾದ ಆಚಾರದ ವಿಚಾರಗಳಿಗೆ ತಕ್ಕಂತೆ ನಡೆಯಿತು. ಈ ಮೂಲಕ ಮೈಸೂರು ದಸರಾದಲ್ಲಿ ಸಂಪ್ರದಾಯಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಲಾಯಿತು.
ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಂದ ಖಾಸಗಿ ದರ್ಬಾರ್
ಸಂಜೆ ವೇಳೆಗೆ ಸಯ್ಯಾಜಿರಾವ್ ನ ಹಸಿರು ಮಂಟಪದಲ್ಲಿ ವಿದ್ಯುತ್ ದೀಪಾಲಂಕಾರ ಉದ್ಘಾಟನೆ ಆಯ್ತು. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ವಸ್ತು ಪ್ರದರ್ಶನ ಅವರಣ ಉದ್ಘಾಟನೆ ಮಾಡಿದ್ರು .
ಇದೆಲ್ಲದ್ದಕ್ಕೂ ಹೈಲೈಟ್ಸ್ ಎಂಬಂತೆ ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿಎಂ ಸಿದ್ದರಾಮಯ್ಯ, ಸಾಹಿತಿ ಭಾನು ಮುಷ್ತಾಕ್ ಚಾಲನೆ ನೀಡಿ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಿದ್ರು
ಒಟ್ಟಾರೆ, ಮೊದಲ ದಿನದ ದಸರಾದಲ್ಲಿ ಜಗಮಗಿಸುವ ದೀಪಾಲಂಕಾರದ ಜೊತೆಗೆ ಹತ್ತು ಹಲವು ಕಾರ್ಯಕ್ರಮಗಳು ಉದ್ಘಾಟನೆ ಆಗಿವೆ. ಅರೆ, ಮತ್ತೇಕೆ ತಡ ಬನ್ನೀ ಎಲ್ಲರೂ ಮೈಸೂರಿಗೆ, ನಾಡಹಬ್ಬ ದಸರಾ ಎಂಜಾಯ್ ಮಾಡೋಣ ಅಂತ ಮೈಸೂರು ಜಿಲ್ಲಾಡಳಿತ ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.