/newsfirstlive-kannada/media/media_files/2025/09/02/brs-kavitha-2025-09-02-14-53-33.jpg)
BRS ಪಕ್ಷದಿಂದ ಕೆ.ಕವಿತಾ ಸಸ್ಪೆಂಡ್!
ತೆಲಂಗಾಣದ ಬಿಆರ್‌ಎಸ್ ಪಕ್ಷದಲ್ಲಿ ಅಂತರಿಕ ಸಂಘರ್ಷ ಮುಗಿಲು ಮುಟ್ಟಿದೆ. ಬಿಆರ್‌ಎಸ್ ಪಕ್ಷದ ಸಂಸ್ಥಾಪಕ ಕೆ.ಚಂದ್ರಶೇಖರ್ ರಾವ್ ಅವರ ಮಗಳು ಕೆ.ಕವಿತಾ ಅವರನ್ನೇ ಇಂದು ಪಕ್ಷದಿಂದ ಅಮಾನತು ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿ ಕೆ.ಕವಿತಾರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಈ ವರ್ಷದ ಮೇ ತಿಂಗಳಿನಲ್ಲಿ ಕವಿತಾ ತಮ್ಮ ತಂದೆ ಕೆ.ಚಂದ್ರಶೇಖರ್ ರಾವ್ ಗೆ ಬರೆದಿದ್ದ ಪತ್ರ ಮಾಧ್ಯಮಗಳಿಗೆ ಸೋರಿಕೆಯಾಗಿತ್ತು. ತಮ್ಮ ತಂದೆ ಕೆ.ಚಂದ್ರಶೇಖರ್ ರಾವ್ ದೇವರು. ಆದರೇ, ಅವರನ್ನು ಕೆಲವು ರಾಕ್ಷಸರು ಸುತ್ತುವರಿದಿದ್ದಾರೆ ಎಂದು ಕೆ.ಕವಿತಾ ಹೇಳಿದ್ದರು.
ತಮ್ಮ ಸೋದರ ಮಾವ ಕೆ.ಹರೀಶ್ ರಾವ್ ಹಾಗೂ ಜೆ.ಸಂತೋಷ್ ಕುಮಾರ್ ಭಾರಿ ಪ್ರಮಾಣದ ಆಸ್ತಿ ಹೊಂದಿದ್ದಾರೆ ಎಂದು ಕೆ.ಕವಿತಾ ಹೇಳಿದ್ದರು. ಹರೀಶ್ ರಾವ್ ಮತ್ತು ಜೆ.ಸಂತೋಷ್ ಕುಮಾರ್ ಹಾಲಿ ಸಿಎಂ ರೇವಂತ್ ರೆಡ್ಡಿ ಜೊತೆ ಒಳಒಪ್ಪಂದ ಮಾಡಿಕೊಂಡು ತಮ್ಮ ತಂದೆ ಕೆ.ಚಂದ್ರಶೇಖರ್ ರಾವ್ ಇಮೇಜ್ ಹಾಳು ಮಾಡುತ್ತಿದ್ದಾರೆ ಎಂದು ಕೆ.ಕವಿತಾ ಹೇಳಿದ್ದರು.
ಹೀಗೆ ಹೇಳಿದ ಬಳಿಕ ಇಂದು ಕೆ.ಕವಿತಾರನ್ನೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಪಕ್ಷದಿಂದ ಅಮಾನತು ಮಾಡಲಾಗಿದೆ.
ಕೆ.ಕವಿತಾರನ್ನು ತಂದೆ ಕೆ.ಚಂದ್ರಶೇಖರ್ ರಾವ್ ಅವರೇ ಪಕ್ಷದಿಂದ ಅಮಾನತು ಮಾಡಿರುವುದು ವಿಶೇಷ. ಕವಿತಾ ಹೇಳಿಕೆ ಹಾಗೂ ಚಟುವಟಿಕೆಗಳು ಪಕ್ಷದ ತತ್ವ ಸಿದ್ದಾಂತ, ಶಿಸ್ತಿನ ಉಲಂಘನೆಯಾಗಿದೆ ಎಂದು ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಮಾಜಿ ಸಿಎಂ ಕೆಸಿಆರ್ ಹಾಗೂ ಪುತ್ರಿ ಕವಿತಾ
ಪಕ್ಷದಲ್ಲಿ ತಮ್ಮನ್ನು ಸೈಡ್ ಲೈನ್ ಮಾಡಲು ಹರೀಶ್ ರಾವ್ , ಸಂತೋಷ್ ಕುಮಾರ್ ಷಡ್ಯಂತ್ರ ಮಾಡಿದ್ದಾರೆ ಎಂದು ನಿನ್ನೆಯಷ್ಟೇ ಕವಿತಾ ಆರೋಪಿಸಿದ್ದರು.
ಕೆ.ಕವಿತಾ ಸದ್ಯ ತೆಲಂಗಾಣದ ವಿಧಾನ ಪರಿಷತ್ ಸದಸ್ಯೆಯಾಗಿದ್ದಾರೆ. ಕವಿತಾ ವಿರುದ್ಧ ಇ.ಡಿ. ದೆಹಲಿ ಅಬಕಾರಿ ಹಗರಣದ ಕೇಸ್ ಕೂಡ ದಾಖಲಿಸಿದೆ. ಈ ಕೇಸ್ ನಲ್ಲಿ ಕವಿತಾ ದೆಹಲಿಯ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಸದ್ಯ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಇದ್ದಾರೆ.
ಬಿಆರ್‌ಎಸ್ ಪಕ್ಷದಲ್ಲಿ ಕವಿತಾ ಹಾಗೂ ಹಿರಿಯ ಸೋದರ ಕೆ.ಟಿ.ರಾಮರಾವ್ ನಡುವೆ ಪಕ್ಷದ ಮೇಲಿನ ಹಿಡಿತಕ್ಕಾಗಿ ಅಂತರಿಕ ಸಂಘರ್ಷಗಳು ಕೂಡ ನಡೆಯುತ್ತಿವೆ. ಇಂಥ ಹೊತ್ತಿನಲ್ಲಿ ತಂದೆಯೇ ಮಗಳನ್ನು ಪಕ್ಷದಿಂದ ಸಸ್ಪೆಂಡ್ ಮಾಡಿ ಹೊರ ಹಾಕಿರುವುದು ಮಗ ಕೆ.ಟಿ.ರಾಮರಾವ್ ರಾಜಕೀಯ ಬೆಳವಣಿಗೆಗೆ ಅಡ್ಡಿಯಾಗದಿರಲೆಂದು ಕೈಗೊಂಡ ಮುನ್ನೆಚ್ಚರಿಕೆ ಕ್ರಮ ಎಂಬ ವಿಶ್ಲೇಷಣೆಗಳು ತೆಲುಗು ರಾಜ್ಯಗಳಲ್ಲಿ ನಡೆಯುತ್ತಿವೆ.
ಈ ಹಿಂದೆ ತಮಿಳುನಾಡಿನಲ್ಲಿ ಡಿಎಂಕೆ ಅಧಿನಾಯಕ ಕೆ.ಕರುಣಾನಿಧಿ ತಾವು ಬದುಕಿದ್ದಾಗಲೇ ತಮ್ಮ ಕಿರಿಯ ಮಗ ಸ್ಟಾಲಿನ್ ರನ್ನೇ ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದರು. ಹಿರಿಯ ಮಗನನ್ನೇ ಕರುಣಾನಿಧಿ ದೂರ ಇಟ್ಟಿದ್ದರು. ಈಗ ಅದೇ ಮಾದರಿಯಲ್ಲಿ ಕೆಸಿಆರ್ ಮಗನ ರಾಜಕೀಯ ಭವಿಷ್ಯಕ್ಕಾಗಿ ಮಗಳನ್ನು ಪಕ್ಷದಿಂದಲೇ ಸಸ್ಪೆಂಡ್ ಮಾಡಿದ್ದಾರೆ. ಕೆ.ಕವಿತಾಗೂ ರಾಜಕೀಯ ಮಹತ್ವಾಕಾಂಕ್ಷೆ ಇದೆ. ಈ ಮಹತ್ವಾಕಾಂಕ್ಷೆ ಕೆಟಿಆರ್ ಬೆಳವಣಿಗೆಗೆ ಅಡ್ಡಿಯಾಗದಿರಲೆಂದು ಈ ಸಸ್ಪೆಂಡ್ ಅಸ್ತ್ರ ಪ್ರಯೋಗ ಮಾಡಿರಬಹುದು ಎಂಬ ಚರ್ಚೆಗಳು ತೆಲಂಗಾಣ ರಾಜಕೀಯದಲ್ಲಿ ನಡೆಯುತ್ತಿವೆ.
ನಿನ್ನೆಯಷ್ಟೇ ತೆಲಂಗಾಣ ಕಾಂಗ್ರೆಸ್ ಸರ್ಕಾರವು ಕಾಳೇಶ್ವರ ನೀರಾವರಿ ಪ್ರಾಜೆಕ್ಟ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅದರ ತನಿಖೆಯನ್ನು ಸಿಬಿಐಗೆ ವಹಿಸಿದೆ. ತೆಲಂಗಾಣದಲ್ಲಿ ಕೆಸಿಆರ್ ಸಿಎಂ ಆಗಿದ್ದಾಗ, ಕಾಳೇಶ್ವರಂ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಈಗ ಕೆಸಿಆರ್ ಸಿಬಿಐ ತನಿಖೆಯನ್ನು ಎದುರಿಸಬೇಕಾಗಿದೆ. ಇದಾದ ಮಾರನೇ ದಿನವೇ ಪುತ್ರಿ ಕೆ.ಕವಿತಾರನ್ನು ಬಿಆರ್‌ಎಸ್ ಪಕ್ಷದಿಂದ ಅಮಾನತು ಮಾಡುವ ತೀರ್ಮಾನವನ್ನು ತಂದೆ ಕೆಸಿಆರ್ ಪ್ರಕಟಿಸಿದ್ದಾರೆ. ಈಗ ರಾಜಕೀಯ ಮಹತ್ವಾಕಾಂಕ್ಷೆ ಇರುವ ಕೆ.ಕವಿತಾ ಏನು ಮಾಡ್ತಾರೆ ಎಂಬ ಕುತೂಹಲ ಇದೆ. ತಮ್ಮದೇ ಹೊಸ ಪಕ್ಷವನ್ನು ಕೆ.ಕವಿತಾ ಹುಟ್ಟು ಹಾಕಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.