ಮಸೂದೆಗೆ ಒಪ್ಪಿಗೆ ನೀಡಲು ರಾಜ್ಯಪಾಲರು, ರಾಷ್ಟ್ರಪತಿಗೆ ಕಾಲಮಿತಿ ನಿಗದಿಪಡಿಸಲು ಆಗಲ್ಲ: ಸುಪ್ರೀಂಕೋರ್ಟ್ ನಿಂದ ಮಹತ್ವದ ತೀರ್ಪು

ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲರು, ರಾಷ್ಟ್ರಪತಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ನ ಸಂವಿಧಾನಿಕ ಪೀಠ ಇಂದು ಮಹತ್ವದ ತೀರ್ಪು ನೀಡಿದೆ. ಆದರೇ, ಅನಿರ್ದಿಷ್ಟಾವಧಿ ಒಪ್ಪಿಗೆ ನೀಡದೇ ಇದ್ದಾಗ, ನ್ಯಾಯಾಂಗ ಮಧ್ಯಪ್ರವೇಶ ಮಾಡಬಹುದು ಎಂದು ಕೂಡ ಹೇಳಿದೆ.

author-image
Chandramohan
SUPREME COURT AND CJI GAVAI

ಸುಪ್ರೀಂಕೋರ್ಟ್ ನಿಂದ ಪ್ರೆಸಿಡೆಂಟ್ ರೆಫರೆನ್ಸ್ ಬಗ್ಗೆ ತೀರ್ಪು

Advertisment
  • ಸುಪ್ರೀಂಕೋರ್ಟ್ ನಿಂದ ಪ್ರೆಸಿಡೆಂಟ್ ರೆಫರೆನ್ಸ್ ಬಗ್ಗೆ ತೀರ್ಪು
  • ಮಸೂದೆಗೆ ಒಪ್ಪಿಗೆ ನೀಡಲು ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಇಲ್ಲ-ಸುಪ್ರೀಂಕೋರ್ಟ್
  • ಅನಿರ್ದಿಷ್ಟಾವಧಿ ಒಪ್ಪಿಗೆ ನೀಡದೇ ಇದ್ದಾಗ ಮಾತ್ರ ನ್ಯಾಯಾಂಗದ ಮಧ್ಯಪ್ರವೇಶ
  • ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರ ಕಾರ್ಯನಿರ್ವಹಣೆ

ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ  ಅಂಗೀಕರಿಸಿದ್ದ  ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಲು ಕಾಲಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.   ಆದರೇ, ಮಸೂದೆಗೆ ಅಂಕಿತ ಹಾಕುವ ಬಗ್ಗೆ ಸುದೀರ್ಘ ಕಾಲ ವಿಳಂಬ ಮಾಡಿದಾಗ, ನ್ಯಾಯಾಂಗವು ಪರಾಮರ್ಶೆ ನಡೆಸಿ, ಸೂಕ್ತ ಕಾಲಮಿತಿಯಲ್ಲಿ ತೀರ್ಮಾನ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಸೂಚಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಹಿಂದೆ ಸುಪ್ರೀಂಕೋರ್ಟ್, ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕುವುದಕ್ಕೆ ಕಾಲಮಿತಿ ನಿಗದಿಪಡಿಸಿ ಕೊಟ್ಟಿದ್ದ ತೀರ್ಪಿನ ಬಗ್ಗೆ ವಿಶೇಷ ಪ್ರೆಸಿಡೆಂಟ್ ರೆಫರೆನ್ಸ್ ಅನ್ನು ಸುಪ್ರೀಂಕೋರ್ಟ್ ಗೆ ಕಳಿಸಿದ್ದರು. ಇದರ ವಿಚಾರಣೆ ನಡೆಸಿ ಇಂದು ಸುಪ್ರೀಂಕೋರ್ಟ್ ನ ಸಿಜೆಐ  ಬಿ.ಆರ್. ಗವಾಯಿ ನೇತೃತ್ವದ  ಸಂವಿಧಾನಿಕ ಪೀಠ ತೀರ್ಪು ನೀಡಿದೆ. 
ರಾಜ್ಯಪಾಲರಿಗೆ ಮೂರು ಆಯ್ಕೆಗಳಿವೆ. ಮಸೂದೆಗೆ ಒಪ್ಪಿಗೆ ನೀಡುವುದು. ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳಿಸುವುದು ಅಥವಾ ಮಸೂದೆಯನ್ನು ವಿಧಾನಸಭೆಗೆ ವಾಪಸ್ ಕಳಿಸುವುದು. ರಾಜ್ಯಪಾಲರಿಗೆ ಈ ಮೂರು ಆಯ್ಕೆಗಳಲ್ಲಿ ಒಂದು ಅನ್ನು ಆಯ್ಕೆ ಮಾಡಿಕೊಳ್ಳುವ ವಿವೇಚನಾಧಿಕಾರ ಇದೆ. ಆದರೇ, ಈ ತೀರ್ಮಾನಗಳಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡಲು ಆಗಲ್ಲ. 
 ಈ ಹಿಂದೆ ಸುಪ್ರೀಂಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿದಂತೆ, ಮಸೂದೆಗೆ ಡೀಮ್ಡ್ ಒಪ್ಪಿಗೆ ಸಿಕ್ಕಿದೆ ಎಂಬ ಭಾವನೆಗೆ  ಸಂವಿಧಾನವು ಅವಕಾಶ ಕೊಡಲ್ಲ ಎಂದು ಇಂದು ಸಂವಿಧಾನಿಕ ಪೀಠ ಹೇಳಿದೆ. ಪರಿಗಣಿತ ಒಪ್ಪಿಗೆ ನೀಡುವುದನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ.

SUPREME COURT AND PRESIDENT


 

ಆದರೇ, ರಾಜ್ಯಪಾಲರು ಮಸೂದೆಯ ಬಗ್ಗೆ ತೀರ್ಮಾನ ಕೈಗೊಳ್ಳದೇ ಅನಿರ್ದಿಷ್ಟಾವಧಿ ಕಾಲ ಕುಳಿತುಕೊಳ್ಳುವಂತಿಲ್ಲ. ಇಡೀ ಪ್ರಕ್ರಿಯೆಯನ್ನು ಹಾಳಾಗುವಂತೆ ಮಾಡಬಾರದು. ರಾಜ್ಯಪಾಲರು ಸುದೀರ್ಘಕಾಲದವರೆಗೂ ಯಾವುದೇ ವಿವರಣೆ ನೀಡದೇ, ಅನಿರ್ದಿಷ್ಟವಾಧಿವರೆಗೂ ತೀರ್ಮಾನ ಕೈಗೊಳ್ಳದೇ ಇದ್ದಾಗ, ಕೋರ್ಟ್ ಗಳು ಮಧ್ಯಪ್ರವೇಶ ಮಾಡಬಹುದು ಎಂದು ಇಂದು ಸುಪ್ರೀಂಕೋರ್ಟ್ ನ ಸಂವಿಧಾನಿಕ ಪೀಠ ತೀರ್ಪು ನೀಡಿದೆ. 
ಸಂವಿಧಾನದ 200ನೇ ವಿಧಿಯಡಿ ನೀಡಿರುವ ಅಧಿಕಾರವನ್ನು ಮೀರಿ ರಾಜ್ಯಪಾಲರು ವರ್ತಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. 
ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಕಠಿಣವಾದ ಕಾಲಮಿತಿಯನ್ನು ಕೋರ್ಟ್ ಗಳು ಹೇರಲು ಸಾಧ್ಯವಿಲ್ಲ. ಆದರೇ, ಏಕಪಕ್ಷೀಯವಾಗಿ ಮಸೂದೆಗಳಿಗೆ ಒಪ್ಪಿಗೆ ನೀಡದೇ ತಡೆ ಹಿಡಿಯುವುದು ಫೆಡರಲಿಸಂನ ಉಲಂಘನೆಯಾಗುತ್ತೆ ಎಂದು ಸುಪ್ರೀಂಕೋರ್ಟ್ , ರಾಜ್ಯಪಾಲರುಗಳನ್ನು ಎಚ್ಚರಿಸಿದೆ. 
 ಸಂವಿಧಾನದ 200 ನೇ ವಿಧಿಯಡಿ ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗೆ ಒಂದು ವೇಳೆ ರಾಜ್ಯಪಾಲರು  ಒಪ್ಪಿಗೆ ನೀಡದೇ ತಡೆ ಹಿಡಿದರೇ, ಅದು ಫೆಡರಲಿಸಂ ಹಿತಾಸಕ್ತಿಯ ಉಲಂಘಿಸಿದಂತಾಗುತ್ತೆ ಎಂದು ಸುಪ್ರೀಂಕೋರ್ಟ್ ಹೇಳಿದೆ. 

ಸುಪ್ರೀಂಕೋರ್ಟ್ ಕಾನೂನು ರೂಪಿಸುವ ಶಾಸಕಾಂಗದ ಜವಾಬ್ದಾರಿಯನ್ನು ನಿರ್ವಹಿಸಲಾಗಲ್ಲ. ಆದರೇ, ವಿವರಣೆ ನೀಡಲಾಗದ ಅನಿರ್ದಿಷ್ಟಾವಧಿ ವಿಳಂಬದ ಸಂದರ್ಭದಲ್ಲಿ ನ್ಯಾಯಾಂಗವು ಮಧ್ಯಪ್ರವೇಶ ಮಾಡಬಹುದು ಎಂದು ಸುಪ್ರೀಂಕೋರ್ಟ್ ಇಂದಿನ ತೀರ್ಪಿನಲ್ಲಿ ಹೇಳಿದೆ. 

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ  ಅವರು ಸುಪ್ರೀಂಕೋರ್ಟ್ ಇಂದಿನ ತೀರ್ಪು ಅನ್ನು ಸ್ವಾಗತಿಸಿದ್ದಾರೆ. ಜೊತೆಗೆ ಹಿರಿಯ ವಕೀಲ ಕಪಿಲ್ ಸಿಬಲ್ ಕೂಡ ತೀರ್ಪು ಅನ್ನು ಸ್ವಾಗತಿಸಿದ್ದಾರೆ. 

Supreme court verdict on President reference
Advertisment