/newsfirstlive-kannada/media/media_files/2025/08/12/cm_siddarmaiah_dk_shivakumar-2025-08-12-12-21-06.jpg)
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್
ಕೆ.ಎನ್ ರಾಜಣ್ಣ ವಜಾಗೊಂಡ ಬೆನ್ನಲ್ಲೇ ಸಹಕಾರ ಖಾತೆ ಮೇಲೆ ಎಲ್ಲ ಕಾಂಗ್ರೆಸ್ ಶಾಸಕರ ಕಣ್ಣು ಬಿದ್ದಿದೆ. ಕೆ.ಎನ್. ರಾಜಣ್ಣ ಹೊಂದಿದ್ದ ಸಹಕಾರ ಖಾತೆ ಮೇಲೆ ಡಿಕೆಶಿ ಅಂಡ್ ಟೀಂ ಕಣ್ಣು ಕೂಡ ಬಿದ್ದಿದೆ. ಸಿಎಂ ಸಿದ್ದರಾಮಯ್ಯ ಬಳಿ ಇರುವ ಸಹಕಾರ ಖಾತೆಯನ್ನ ತಮ್ಮ ಬಣಕ್ಕೆ ಪಡೆದುಕೊಳ್ಳಲು ಡಿಕೆಶಿ ರಣತಂತ್ರ ರೂಪಿಸುತ್ತಿದ್ದಾರೆ. ಶತಾಯಗತಾಯ ಸಹಕಾರ ಖಾತೆಯನ್ನ ತಮ್ಮ ಬಣದ ಸಚಿವರಿಗೆ ಕೊಡಿಸಲು ಡಿಕೆಶಿ ತಂತ್ರ ರೂಪಿಸಿದ್ದಾರೆ. ತಮ್ಮ ಬಣದಲ್ಲಿ ಗುರುತಿಸಿಕೊಂಡಿರುವ ಹಿರಿಯೂರು ಕ್ಷೇತ್ರದ ಶಾಸಕ ಹಾಗೂ ಸಚಿವ ಡಿ.ಸುಧಾಕರ್ ಗೆ ಸಹಕಾರ ಖಾತೆಯನ್ನ ಕೊಡಿಸಲು ತೆರೆಮರೆ ತಂತ್ರ ರೂಪಿಸುತ್ತಿದ್ದಾರೆ. ಸದ್ಯಕ್ಕೆ ಡಿ.ಸುಧಾಕರ್ ಬಳಿ ಇರುವುದು ಒಂದು ಖಾತೆ ಮಾತ್ರ. ಅದೂ ಕೂಡ ಸಣ್ಣ ಖಾತೆ ಎಂಬ ಕಾರಣವನ್ನ ಮುಂದಿಟ್ಟುಕೊಂಡು ಸಹಕಾರ ಖಾತೆಗೆ ಒತ್ತಡ ಹಾಕುತ್ತಿದ್ದಾರೆ. ಡಿ.ಸುಧಾಕರ್ ಗೂ ಸಹಕಾರಿ ರಂಗದ ಹಿನ್ನಲೆ ಇದೆ. ಡಿ.ಸುಧಾಕರ್ ಸದ್ಯ ಚಿತ್ರದುರ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಕೂಡ ಆಗಿದ್ದಾರೆ. ಹೀಗಾಗಿ ಡಿ.ಸುಧಾಕರ್ ಗೆ ಸಹಕಾರ ಖಾತೆ ನೀಡಬೇಕೆಂದು ಡಿಸಿಎಂ ಡಿಕೆಶಿ ಲಾಬಿ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮೇಲೆ ಎಐಸಿಸಿ ನಾಯಕರ ಮೂಲಕ ಒತ್ತಡವನ್ನು ಡಿಕೆಶಿ ಹಾಕುತ್ತಿದ್ದಾರೆ. ಸದ್ಯ ಡಿ.ಸುಧಾಕರ್, ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲಿ ಯೋಜನೆ, ಸಾಂಖ್ಯಿಕ, ಅಂಕಿಅಂಶ, ಕಾರ್ಯಕ್ರಮಗಳ ಖಾತೆ ಸಚಿವರಾಗಿದ್ದಾರೆ.
ಅಷ್ಟಕ್ಕೂ ಸಹಕಾರ ಖಾತೆ ಪಡೆಯುವುದರ ಹಿಂದಿರುವ ಲೆಕ್ಕಾಚಾರ ಏನು ಎಂಬುದನ್ನ ನೋಡೋದಾದ್ರೆ, ತಮ್ಮ ಸಹೋದರ ಡಿ.ಕೆ.ಸುರೇಶ್ ಗೆ ಕೆಎಂಎಫ್ ಅಧ್ಯಕ್ಷ ಪಟ್ಟ ಕಟ್ಟುವ ಲೆಕ್ಕಾಚಾರ ಹಾಕಿಕೊಂಡಿರುವ ಡಿಕೆಶಿ. ಸಹಕಾರಿ ರಂಗದ ಪ್ರತಿಷ್ಠಿತ ಸಂಸ್ಥೆಗಳಾದ ಕೆಎಂಎಫ್ ಹಾಗೂ ಅಪೆಕ್ಸ್ ಬ್ಯಾಂಕ್ ಸುಪರ್ದಿಗೆ ಪಡೆಯುವ ಲೆಕ್ಕಾಚಾರ ಕೂಡ ಡಿ.ಕೆ.ಶಿವಕುಮಾರ್ ಗೆ ಇದೆ. ಕೆ.ಎನ್. ರಾಜಣ್ಣ ಸಹಕಾರ ಖಾತೆ ಹೊಂದಿದ್ದಾಗ ಡಿಕೆ ಬ್ರದರ್ಸ್ ಗೆ ಕೇರ್ ಮಾಡದೇ ಕೆ.ಎನ್. ರಾಜಣ್ಣ ತಮ್ಮ ಪಾಡಿಗೆ ತಾವು ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಖುದ್ದು ವಿಧಾನಸೌಧದ ಕೆ.ಎನ್. ರಾಜಣ್ಣ ಕೊಠಡಿಗೆ ತೆರಳಿ ಒಂದು ತಾಸು ಡಿಕೆಶಿ ಕಾದರೂ ಕೆ.ಎನ್. ರಾಜಣ್ಣ ಕಚೇರಿಗೆ ಬಂದು ಡಿಕೆಶಿಯನ್ನು ಭೇಟಿಯಾಗಿರಲೇ ಇಲ್ಲ. ಇದೀಗ ಸಹಕಾರ ಖಾತೆಯಿಂದ ಕೆ.ಎನ್. ರಾಜಣ್ಣ ವಜಾಗೊಂಡಿರುವ ಬೆನ್ನಲ್ಲೆ ಸಹಕಾರ ಖಾತೆಗಾಗಿ ಇನ್ನಿಲ್ಲದ ಒತ್ತಡವನ್ನು ಡಿ.ಕೆ ಅಂಡ್ ಟೀಮ್ ಹಾಕುತ್ತಿದೆ.
ಇತ್ತ ಡಿಸಿಎಂ ಡಿಕೆಶಿ ತಂತ್ರಗಾರಿಕೆ ಗೊತ್ತಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅಂಡ್ ಟೀಂ ಕೂಡ ಆಲರ್ಟ್ ಆಗಿದೆ. ಸಹಕಾರ ಖಾತೆಯನ್ನ ಬೇರೆಯವರಿಗೆ ಕೊಡದಂತೆ ಸಿಎಂ ಮೇಲೆ ದಲಿತ ಸಚಿವರು ಒತ್ತಡ ಹಾಕಿದ್ದಾರೆ. ಖುದ್ದು ಯಾರಿಗೂ ಸಹಕಾರ ಖಾತೆಯನ್ನು ನೀಡದೆ ತಮ್ಮ ಬಳಿಯೇ ಉಳಿಸಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಮೇಲೆ ಸಚಿವ ಸತೀಶ್ ಜಾರಕಿಹೊಳಿ ಅಂಡ್ ಟೀಮ್ ಒತ್ತಡ ಹಾಕುತ್ತಿದೆ. ಕೆ.ಎನ್. ರಾಜಣ್ಣ ತಮ್ಮದೇ ವಾಲ್ಮೀಕಿ ಸಮುದಾಯದ ನಾಯಕರು. ಸಹಕಾರ ಖಾತೆಯು ಸಿಎಂ ಬಳಿಯೇ ಇರಲಿ, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಿದಲ್ಲಿ ನಮ್ಮ ವಾಲ್ಮೀಕಿ ನಾಯಕ ಸಮುದಾಯಕ್ಕೆ ಸಹಕಾರ ಖಾತೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯಗೆ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸಚಿವ ಸ್ಥಾನದಿಂದ ರಾಜಣ್ಣ ವಜಾ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯರನ್ನು ವಾಲ್ಮೀಕಿ ಸಮುದಾಯ ಶಾಸಕರು ಭೇಟಿ ನೀಡಿದ್ದಾರೆ. ವಿಧಾನಸಭೆಯ ಮೊಗಸಾಲೆಯ ಸಿಎಂ ಕಚೇರಿಯಲ್ಲಿ ಭೇಟಿ ಮಾಡಿದ ವಾಲ್ಮೀಕಿ ಸಮುದಾಯದ ಕೈ ಶಾಸಕರು ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚೆ ನಡೆಸಿದ್ದಾರೆ. ವಾಲ್ಮೀಕಿ ನಾಯಕ ಸಮುದಾಯದವರಾದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿದ ಶಾಸಕರು, ರಾಜಣ್ಣರಿಂದ ತೆರವಾದ ಸಹಕಾರ ಖಾತೆಯನ್ನು ತಮ್ಮ ಸಮುದಾಯಕ್ಕೆ ನೀಡಬೇಕೆಂದು ಚರ್ಚೆ ಮಾಡಿದ್ದಾರೆ. ಈ ನಿಯೋಗದಲ್ಲಿ ವಾಲ್ಮೀಕಿ ಸಮುದಾಯದ ಶಾಸಕರಾದ ಎನ್.ಟಿ ಶ್ರೀನಿವಾಸ್, ಶಾಸಕ ದೇವೇಂದ್ರಪ್ಪ, ಅನಿಲ್ ಚಿಕ್ಕಮಾದು, ಬಸವನಗೌಡ ದದ್ದಲ್, ಬಸವರಾಜ್ ತುರುವಿಹಾಳ್, ರಘುಮೂರ್ತಿ, ರಾಜೇಂದ್ರ ರಾಜಣ್ಣ, ದೇವೇಂದ್ರಪ್ಪ, ಗೋವಿಂದಪ್ಪ ಸೇರಿದಂತೆ ಹಲ ಶಾಸಕರಿದ್ದರು. ಬಿ.ನಾಗೇಂದ್ರ, ರಾಜಣ್ಣರಿಂದ ತೆರವಾಗಿರುವ 2 ಸಚಿವ ಸ್ಥಾನಗಳನ್ನ ವಾಲ್ಮೀಕಿ ನಾಯಕ ಸಮುದಾಯಕ್ಕೆ ನೀಡುವಂತೆ ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಹೈಕಮಾಂಡ್ ಬಳಿ ಚರ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ನಾಯಕ ಸಮುದಾಯದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕರುಗಳ ನಿಯೋಗಕ್ಕೆ ತಿಳಿಸಿದ್ದಾರೆ.
ಯೋಜನೆ, ಸಾಂಖ್ಯಿಕ, ಅಂಕಿಅಂಶ ಖಾತೆ ಸಚಿವ ಡಿ.ಸುಧಾಕರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.