/newsfirstlive-kannada/media/media_files/2025/08/05/high_court-2025-08-05-15-55-01.jpg)
ರಾಜ್ಯದಲ್ಲಿ ಇಂಧನ ಇಲಾಖೆಯು ಎಲ್ಲ ಮನೆಗಳಲ್ಲಿ ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಆದೇಶ ನೀಡಿತ್ತು. ಬಳಿಕ ಟೆಂಡರ್ ಅನ್ನು ಕೂಡ ನೀಡಿತ್ತು. ಆದರೇ, ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ನಾಯಕರಾದ ಶಾಸಕ ಸಿ.ಎನ್.ಅಶ್ವಥ್ ನಾರಾಯಣ್, ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್, ಶಾಸಕ ಧೀರಜ್ ಮುನಿರಾಜ್ ಸೇರಿದಂತೆ ಕೆಲವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದರು. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಈ ಅರ್ಜಿಗೆ ಮನ್ನಣೆ ನೀಡಿ, ರಾಜ್ಯದ ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ಬೆಸ್ಕಾಂ ಎಂ.ಡಿ. ಸೇರಿದಂತೆ ಅಧಿಕಾರಿಗಳ ವಿರುದ್ಧ ತನಿಖೆಗೆ ಲೋಕಾಯುಕ್ತಕ್ಕೆ ಆದೇಶ ನೀಡಿತ್ತು.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ಈ ಆದೇಶವನ್ನು ಪ್ರಶ್ನಿಸಿ ಇಂಧನ ಸಚಿವ ಕೆ.ಜೆ.ಜಾರ್ಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಇಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿತು. ವಾದ- ಪ್ರತಿವಾದ ಆಲಿಸಿದ ಹೈಕೋರ್ಟ್, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆ, ಟೆಂಡರ್ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆಗೆ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಪ್ರತಿವಾದಿಗಳಾದ ಮಲ್ಲೇಶ್ವರ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಎಸ್.ಆರ್.ವಿಶ್ವನಾಥ್, ಶಾಸಕ ಧೀರಜ್ ಮುನಿರಾಜ್ ಅವರಿಗೆ ನೋಟೀಸ್ ಜಾರಿ ಮಾಡಿದೆ. ಎರಡು ವಾರಗಳ ಕಾಲ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಅಷ್ಟರೊಳಗೆ ಪ್ರತಿವಾದಿಗಳು ಹೈಕೋರ್ಟ್ ಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಬೇಕು.
ಹೈಕೋರ್ಟ್ ಆದೇಶದಿಂದಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಗೆ ಬಿಗ್ ರೀಲೀಫ್ ಸಿಕ್ಕಂತಾಗಿದೆ. ಪ್ರತಿವಾದಿಗಳ ವಾದವನ್ನು ಆಲಿಸಿದ ಬಳಿಕ ಹೈಕೋರ್ಟ್, ಜನಪ್ರತಿನಿಧಿಗಳ ಕೋರ್ಟ್, ಸಚಿವ ಕೆ.ಜೆ.ಜಾರ್ಜ್ ವಿರುದ್ಧ ತನಿಖೆಗೆ ಆದೇಶ ನೀಡಿರುವುದು ಸರಿಯೇ ತಪ್ಪೇ ಎಂಬ ಬಗ್ಗೆ ತನ್ನ ಅಂತಿಮ ಆದೇಶ ನೀಡಲಿದೆ.
ಹೈಕೋರ್ಟ್ ನಲ್ಲಿ ಇಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಪರವಾಗಿ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ಮತ್ತು ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದ್ದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಪ್ರಬಲ ವಾದಮಂಡನೆ
ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಕೋರಲಾಗಿತ್ತು. ಬೆಸ್ಕಾಂ ವ್ಯಾಪ್ತಿಯಲ್ಲಿನ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕರಣ ಇದು. ಒಂದು ರಾಜಕೀಯ ಪಕ್ಷ ಮತ್ತೊಂದು ಪಕ್ಷದ ವಿರುದ್ಧ ಕೇಸ್ ಹಾಕುವ ಸಂಪ್ರದಾಯ ಇದು ಎಂದು ಹಿರಿಯ ವಕೀಲ ಸಿ.ವಿ.ನಾಗೇಶ್ ವಾದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, ತಮಿಳುನಾಡಿನಲ್ಲಿ ಇದ್ದ ಸಂಪ್ರದಾಯ ಇಲ್ಲೂ ಶುರುವಾಗಿದೆ ಎಂದು ಹೇಳಿತು.
ಬಳಿಕ ವಾದ ಮುಂದುವರಿಸಿದ ವಕೀಲ ಸಿ.ವಿ.ನಾಗೇಶ್ ಅವರು, ಸಚಿವ ಜಾರ್ಜ್ ಹಾಗೂ ಹಿರಿಯ ಅಧಿಕಾರಿಗಳನ್ನ ಆರೋಪಿಗಳನ್ನಾಗಿ ಮಾಡಲಾಗಿದೆ. ನಾವು ಪ್ರಕರಣದ ಮೆರಿಟ್ ಮೇಲೆ ವಾದಿಸ್ತಿಲ್ಲ ಅಂತಾ ಸ್ಪಷ್ಟಪಡಿಸುತ್ತೇನೆ. ಲೋಕಾಯುಕ್ತ ಎಸ್ಪಿಗೆ ಮುಂದಿನ ವಿಚಾರಣೆ ವೇಳೆಗೆ ವರದಿ ಸಲ್ಲಿಸಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ ಎಂದು ವಕೀಲ ಸಿ.ವಿ.ನಾಗೇಶ್ ವಾದಿಸಿದ್ದರು.
ಸಾರ್ವಜನಿಕ ಸೇವಕರಿಗಿಂತ ಪೊಲೀಸ್ ಅಧಿಕಾರಿ ಮೇಲ್ದರ್ಜೆಯಲ್ಲಿ ಇರಲ್ಲ. ಹೀಗಾಗಿ ಅವರಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗದು. ಇದು ನ್ಯಾಯಾಲಯದ ವ್ಯಾಪ್ತಿಯನ್ನು ಮೀರಿದೆ. ವಿಚಾರಣಾಧೀನ ನ್ಯಾಯಾಲಯ ತನಿಖಾ ವರದಿ ಸಲ್ಲಿಸಲು ಆದೇಶ ನೀಡಿದೆ. ವರದಿ ಸಲ್ಲಿಕೆಗೆ ಲೋಕಾಯುಕ್ತ ಎಸ್ಪಿಗೆ ಆದೇಶ ನೀಡಿದೆ. ಆದ್ರೆ ಸಿಆರ್‌ಪಿಸಿ ಸೆಕ್ಷನ್ 175 ಅಡಿ ಅದಕ್ಕೆ ಅವಕಾಶವೇ ಇಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಪರವಾಗಿ ಹೈಕೋರ್ಟ್ ನಲ್ಲಿ ಬಲವಾದ ವಾದಮಂಡನೆ ಮಾಡಿದ್ದರು.
ಕೆ.ಜೆ.ಜಾರ್ಜ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ವಾದವನ್ನು ಆಲಿಸಿದ ಬಳಿಕ ಹೈಕೋರ್ಟ್, ದೂರುದಾರರಾದ ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಯಲಹಂಕ ಶಾಸಕ ವಿಶ್ವನಾಥ್, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಹಾಗೂ ಲೋಕಾಯುಕ್ತ ಎಸ್ಪಿಗೆ ನೋಟೀಸ್ ನೀಡಿತು. ಹೈಕೋರ್ಟ್ ಗೆ ಸಚಿವ ಕೆ.ಜೆ.ಜಾರ್ಜ್ ಸಲ್ಲಿಸಿರುವ ಮೇಲ್ಮನವಿ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಲು ಹೈಕೋರ್ಟ್ 2 ವಾರ ಕಾಲಾವಕಾಶ ನೀಡಿದೆ.
ಇನ್ನೂ ಪ್ರತಿವಾದಿಗಳಾದ ಬಿಜೆಪಿ ನಾಯಕರ ಪರ ಹಿರಿಯ ವಕೀಲೆ ಲಕ್ಷ್ಮೀ ಅಯ್ಯಂಗಾರ್ ವಾದ ಮಾಡಿದ್ದರು. ಸದ್ಯ ಪ್ರಕರಣದ ಪ್ರಾಥಮಿಕ ಹಂತದ ತನಿಖೆ ನಡೆಸಲಾಗ್ತಿದೆ. ಈ ಹಂತದಲ್ಲಿ ಮಧ್ಯಂತರ ಆದೇಶ ನೀಡುವ ಅವಶ್ಯಕತೆ ಇಲ್ಲ ಎಂದು ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ವಾದಿಸಿದ್ದರು.