/newsfirstlive-kannada/media/media_files/2025/09/24/twitter-v_s-center-2025-09-24-17-47-46.jpg)
ಟ್ವೀಟರ್ ವರ್ಸಸ್ ಕೇಂದ್ರ ಸರ್ಕಾರ ಅರ್ಜಿಯ ತೀರ್ಪು ಪ್ರಕಟ
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅನಿರ್ಬಂಧಿತ ಅಭಿವ್ಯಕ್ತಿ ಸ್ವಾತಂತ್ರ್ಯವು ಕಾನೂನು ಇಲ್ಲದಿರುವಿಕೆಗೆ ಕಾರಣವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಟ್ವೀಟರ್ ನ ಟ್ವೀಟ್ ಗಳನ್ನು ಬ್ಲಾಕ್ ಮಾಡುವ ಆದೇಶ ನೀಡುವ ಕೇಂದ್ರ ಸರ್ಕಾರದ ಸಹಯೋಗ್ ಪೋರ್ಟಲ್ ಅಧಿಕಾರಗಳನ್ನು ಪ್ರಶ್ನಿಸಿ ಟ್ವೀಟರ್ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.
ಟ್ವೀಟರ್ ಅಥವಾ ಎಕ್ಸ್ ನ ಟ್ವೀಟ್ ಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರುವುದನ್ನು ಪ್ರಶ್ನಿಸಿ, ಟ್ವೀಟರ್ ಸಂಸ್ಥೆಯು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ಟ್ವೀಟರ್ ನ ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದ್ದು, ಟ್ವೀಟರ್ ಅರ್ಜಿಯನ್ನು ವಜಾಗೊಳಿಸಿದೆ.
ಕರ್ನಾಟಕ ಹೈಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ಪರ ವಕೀಲರು ಮತ್ತು ಟ್ವೀಟರ್ ಪರ ವಕೀಲರು ಸುದೀರ್ಘ ವಾದ ಮಂಡನೆ ಮಾಡಿದ್ದರು. ಹೈಕೋರ್ಟ್ ನ ಜಸ್ಟೀಸ್ ಎಂ.ನಾಗಪ್ರಸನ್ನ ಪೀಠದಲ್ಲಿ ವಾದಮಂಡನೆಯ ಬಳಿಕ ತೀರ್ಪು ಕಾಯ್ದಿರಿಸಲಾಗಿತ್ತು. ಇಂದು ಹೈಕೋರ್ಟ್, ಕಾಯ್ದಿರಿಸಿದ್ದ ತೀರ್ಪು ಪ್ರಕಟಿಸಿದೆ.
ಕಠಿಣ ಪದಗಳಿಂದ ಎಕ್ಸ್ ಅಥವಾ ಟ್ವೀಟರ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸಾಮಾಜಿಕ ಜಾಲತಾಣಗಳನ್ನು ಅರಾಜಕತೆಯ ಸ್ವಾತಂತ್ರ್ಯದಲ್ಲಿ ಬಿಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ದೇಶದ ನಾಗರಿಕರು ಮತ್ತು ಟ್ವೀಟರ್ ಮಧ್ಯೆ ಸಹಯೋಗ್ ಪೋರ್ಟಲ್ ಭರವಸೆ ಬೆಳಕಾಗಿ ಕೆಲಸ ಮಾಡಲಿದೆ ಎಂದು ಹೈಕೋರ್ಟ್ ಹೇಳಿದೆ. ದೇಶದಲ್ಲಿ ಸೈಬರ್ ಕ್ರೈಮ್ ಗಳನ್ನು ತಡೆಯುವ ವ್ಯವಸ್ಥೆಯಾಗಿ ಸಹಯೋಗ್ ಪೋರ್ಟಲ್ ಕೆಲಸ ಮಾಡಲಿದೆ.
ಭಾರತದಲ್ಲಿ ಭಾರತೀಯನಲ್ಲದೆ ಮತ್ಯಾರಿಗೂ ವಾಕ್ ಸ್ವಾತಂತ್ರ್ಯದ ಹಕ್ಕು ಅನ್ನು ನೀಡಲಾಗದು. ಅಮೇರಿಕಾ ದೇಶದಲ್ಲೇ ಎಕ್ಸ್ ಮೇಲೆ ನಿಯಂತ್ರಣ ಹೇರಲಾಗಿದೆ. ಕೇಂದ್ರ ಸರ್ಕಾರ ಸಹಯೋಗ್ ಪೋರ್ಟಲ್ ಬಳಸುವುದರ ವಿರುದ್ಧ ನಿಯಂತ್ರಣ ಸಾಧ್ಯವಿಲ್ಲ. ನಾಗರೀಕ ಸಮಾಜದ ಅರೋಗ್ಯ ಕಾಪಾಡಲು, ಮಹಿಳೆ ಮತ್ತು ಮಕ್ಕಳ ಗೌರವ ಕಾಪಾಡಲು ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಅಗತ್ಯ. ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಫ್ , ಸ್ನಾಪ್ ಚಾಟ್, ಇನ್ಸಾ ಟಾಗ್ರಾಮ್ ಮುಂತಾದ ಸಾಮಾಜಿಕ ತಾಣಗಳ ಮೇಲೆ ನಿಯಂತ್ರಣ ಹೇರುವುದು ಈ ಕಾಲದ ಅತ್ಯಂತ ಅವಶ್ಯವಾಗಿದೆ ಎಂದ ನ್ಯಾಯಮೂರ್ತಿ ನಾಗಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ. ಟ್ವೀಟರ್ ಅಥವಾ ಎಕ್ಸ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಅಮೆರಿಕಾದ ನ್ಯಾಯಾಂಗದ ಅಲೋಚನೆಗಳನ್ನು ಭಾರತದ ಸಂವಿಧಾನಿಕ ಅಲೋಚನೆಯಲ್ಲಿ ನೆಡಲು ಸಾಧ್ಯವಿಲ್ಲ. ಯಾವುದೇ ಪ್ಲಾಟ್ ಫಾರಂ ಭಾರತದ ಮಾರುಕಟ್ಟೆ ಸ್ಥಳವನ್ನು ತನ್ನ ಪ್ಲೇ ಗ್ರೌಂಡ್ ಆಗಿ ಟ್ರೀಟ್ ಮಾಡಬಾರದು. ಇನ್ನೂ ಎಕ್ಸ್ ಕಂಪನಿ ಅಥವಾ ಸಂಸ್ಥೆಯು ಭಾರತದ ನಾಗರಿಕನೇ ಅಲ್ಲ. ಹೀಗಾಗಿ ಭಾರತದ ಸಂವಿಧಾನದ 19ನೇ ವಿಧಿಯ ಉಲಂಘನೆಯಾಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ.
ಸಾಮಾಜಿಕ ಮಾಧ್ಯಮಗಳ ಮೇಲ ಸರ್ಕಾರದ ನಿಯಂತ್ರಣ ಈ ಕಾಲದ ಅಗತ್ಯ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಎಕ್ಸ್ ಕಾರ್ಪ್ ಅರ್ಜಿಯನ್ನು ತಿರಸ್ಕರಿಸಿ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ತೀರ್ಪು ನೀಡಿದ್ದಾರೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಟ್ವೀಟರ್ ಅಥವಾ ಎಕ್ಸ್ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದು. ಈ ಅವಕಾಶ ಕಾನೂನಿನಲ್ಲಿದೆ.
ಸಹಯೋಗ್ ಪೋರ್ಟಲ್ ಹೇಗೆ ಕೆಲಸ ಮಾಡುತ್ತೆ?
ಇನ್ನೂ ಕೇಂದ್ರ ಸರ್ಕಾರವು 2024 ರಲ್ಲಿ ಸಹಯೋಗ್ ಪೋರ್ಟಲ್ ಅನ್ನು ಆರಂಭಿಸಿದೆ. ಟ್ವೀಟರ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಅಂಶಗಳನ್ನು ಬ್ಲಾಕ್ ಮಾಡಲು ತ್ವರಿತಗತಿಯಲ್ಲಿ ಆರ್ಡರ್ ನೀಡುವ ಪೋರ್ಟಲ್ ಆಗಿದೆ. ಮಧ್ಯಸ್ಥ ಸಂಸ್ಥೆಗಳಾದ ಟ್ವೀಟರ್, ಎಕ್ಸ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ನೋಟೀಸ್ ಕಳಿಸಿ, ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕುವಂತೆ, ಬ್ಲಾಕ್ ಮಾಡುವಂತೆ ಸೂಚಿಸುತ್ತೆ. ಐ.ಟಿ. ಆ್ಯಕ್ಟ್ 2000 ಅಡಿಯಲ್ಲಿ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕುವ ಕೆಲಸವನ್ನು ಸಹಯೋಗ್ ಪೋರ್ಟಲ್ ಮಾಡಲಿದೆ.
ಆದರೇ, ಈ ಸಹಯೋಗ್ ಪೋರ್ಟಲ್ ಅನ್ನು ಎಲಾನ್ ಮಸ್ಕ್ ಅವರ ಮಾಲೀಕತ್ವದ ಟ್ವೀಟರ್, ಸೆನ್ಸಾರ್ ಪೋರ್ಟಲ್ ಎಂದು ಕರೆದಿತ್ತು. ಐ.ಟಿ. ಕಾಯಿದೆಯ ಸೆಕ್ಷನ್ 79 (3)(ಬಿ) ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಕಂಟೆಂಟ್ ಬ್ಲಾಕ್ ಮಾಡುವ ಅಧಿಕಾರ ಇಲ್ಲ ಎಂದು ಟ್ವೀಟರ್ ವಾದಿಸಿತ್ತು. ಆದರೇ, ಈ ವಾದಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಕಂಟೆಂಟ್ ಬ್ಲಾಕ್ ಮಾಡುವಂತೆ ಸೂಚಿಸುವ ಅಧಿಕಾರ ಕೇಂದ್ರ ಸರ್ಕಾರ ಹಾಗೂ ಸಹಯೋಗ್ ಪೋರ್ಟಲ್ ಗೆ ಇದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಈಗ ಹೈಕೋರ್ಟ್ ಕೇಂದ್ರ ಸರ್ಕಾರದ ವಾದವನ್ನು ಪುರಸ್ಕರಿಸಿದೆ. ಟ್ವೀಟರ್ ವಾದವನ್ನು ತಿರಸ್ಕರಿಸಿ ತೀರ್ಪು ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ