/newsfirstlive-kannada/media/media_files/2025/09/16/high-court-of-karnataka-2025-09-16-15-16-25.jpg)
ಕರ್ನಾಟಕ ಹೈಕೋರ್ಟ್ ನಲ್ಲಿ ಸಮೀಕ್ಷೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ
ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಪ್ರಶ್ನಿಸಿ ನಾಲ್ಕೈದು ಸಮುದಾಯಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿವೆ. ಈ ಅರ್ಜಿಗಳನ್ನು ಇಂದು ಹೈಕೋರ್ಟ್ ಸಿಜೆ ಅವರ ಪೀಠ ವಿಚಾರಣೆ ನಡೆಸಿದೆ. ಸರ್ವೇಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಅರ್ಜಿದಾರರ ಪರ ವಕೀಲರು ಹೈಕೋರ್ಟ್ ಗೆ ಮನವಿ ಮಾಡಿದ್ದರು. ಈ ಬಗ್ಗೆ ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಹೇಳಿದೆ. ಹೀಗಾಗಿ ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಭವಿಷ್ಯ ನಾಳೆ ಮಧ್ಯಾಹ್ನ ಹೈಕೋರ್ಟ್ ನೀಡುವ ಆದೇಶವನ್ನ ಅವಲಂಬಿಸಿದೆ.
ಇನ್ನೂ ಹೈಕೋರ್ಟ್ ಸಿಜೆ ಪೀಠದಲ್ಲಿ ಅರ್ಜಿದಾರರ ಪರ ವಕೀಲರು ಹಾಗೂ ರಾಜ್ಯ, ಕೇಂದ್ರ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ಹಳೆಯ ಸರ್ವೆ ಕೈಬಿಟ್ಟಿಲ್ಲವೆಂದು ವಾದಿಸಿದ್ದರು. ಈಗ 420 ಕೋಟಿ ವೆಚ್ಚ ಮಾಡಿ ಸರ್ವೆ ಮಾಡಲಾಗುತ್ತಿದೆ. ಶಿಕ್ಷಕರು, ಆಶಾ ಕಾರ್ಯಕರ್ತೆಯರ ಮೂಲಕ ಬೃಹತ್ ಸರ್ವೆ ಮಾಡಲಾಗುತ್ತಿದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮ ಜಾರಿಗೆ ಅಂಕಿಅಂಶ ಸಂಗ್ರಹಿಸಲಾಗುತ್ತಿದೆ. ಇದೇ ರೀತಿಯ ಅರ್ಜಿಯಲ್ಲಿ ಮಧ್ಯಂತರ ತಡೆ ನೀಡಿರಲಿಲ್ಲ ಎಂದು ಅಭಿಷೇಕ್ ಮನುಸಿಂಘ್ವಿ ವಾದಿಸಿದ್ದರು. ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಅರ್ಜಿದಾರರ ಪರ ವಕೀಲರು ಸಮೀಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಹೈಕೋರ್ಟ್ ಅನ್ನು ಕೋರಿದ್ದರು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಹಾಗೂ ವಿವೇಕ್ ಸುಬ್ಬಾರೆಡ್ಡಿ ವಾದಿಸಿದ್ದರು. ಹಿರಿಯ ವಕೀಲ ಜಯಕುಮಾರ್ ಪಾಟೀಲ್ ಕೂಡ ಅರ್ಜಿದಾರರ ಪರ ವಾದಿಸಿದ್ದರು.
ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಹಾಗೂ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ
ಅರ್ಜಿದಾರರ ವಾದದಲ್ಲಿ ಹುರುಳಿರುವಂತಿದೆ. ಹೀಗಾಗಿ ಸಮೀಕ್ಷೆಯನ್ನು ಸದ್ಯಕ್ಕೆ ಮುಂದೂಡಲು ಸಾಧ್ಯವೇ ಎಂದು ಹೈಕೋರ್ಟ್ ಸಿಜೆ ವಿಭು ಬಖ್ರು, ರಾಜ್ಯ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ್ದರು. ದಸರಾ ಬಳಿಕ ಅಂತಿಮ ವಿಚಾರಣೆ ನಡೆಸಬಹುದು ಎಂದು ಸಿಜೆ ಹೇಳಿದ್ದರು.
ಈಗ ಮಧ್ಯಂತರ ತಡೆ ಬೇಕಿಲ್ಲವೆಂದು ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದರು. ಈಗ ಸರ್ವೆಗೆ ಅವಕಾಶ ನೀಡಿದರೆ ಅಂಕಿಅಂಶ ಸಂಗ್ರಹವಾಗುತ್ತದೆ ಎಂದು ಹೈಕೋರ್ಟ್ ಹೇಳಿತು. ಒಮ್ಮೆ ಅಂಕಿ ಅಂಶ ಸಂಗ್ರಹವಾದರೆ, ಮರಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತು. ನಾಳೆ 2.30 ಕ್ಕೆ ಮಧ್ಯಂತರ ತಡೆಯಾಜ್ಞೆ ಬಗ್ಗೆ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಸಿಜೆ ವಿಭು ಭಕ್ರು ಹೇಳಿದ್ದರು.
ಅಂಕಿ ಅಂಶ ಸರ್ವೇ ಕೂಡ ಗಣತಿಯ ಸ್ವರೂಪದಲ್ಲಿದೆ ಎಂದು ಸರ್ವೇಗೆ ಕೇಂದ್ರ ಸರ್ಕಾರದ ಎಎಸ್ ಜಿ ಅರವಿಂದ್ ಕಾಮತ್ ವಿರೋಧ ವ್ಯಕ್ತಪಡಿಸಿದ್ದರು. ನಾಳೆ ಮಧ್ಯಾಹ್ನ ಜಾತಿ ಗಣತಿ ಭವಿಷ್ಯವನ್ನು ಹೈಕೋರ್ಟ್ ನಿರ್ಧರಿಸಲಿದೆ.
ಸಮೀಕ್ಷೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದ ಹೈಕೋರ್ಟ್
ಎಲ್ಲ ಅರ್ಜಿದಾರರೂ ಸೇರಿ ನಿಮ್ಮ ಲಿಖಿತ ಸಾರಾಂಶ ಸಲ್ಲಿಸಿ, ಪ್ರತಿಯೊಬ್ಬರಿಗೂ ಎಷ್ಟು ಸಮಯ ಬೇಕೆಂದು ತಿಳಿಸಿ ಎಂದು ಸಿಜೆ ವಿಭು ಬಖ್ರು ಹೇಳಿದ್ದರು.
ಅಲ್ಲಿಯವರಿಗೆ ಸರ್ಕಾರದ ಅಧಿಸೂಚನೆಗೆ ತಡೆ ನೀಡಬೇಕು ಎಂದು ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಹೈಕೋರ್ಟ್ ಗೆ ಮನವಿ ಮಾಡಿದ್ದರು. ಆದರೇ, ಹೈಕೋರ್ಟ್ ಈಗ ಸಮೀಕ್ಷೆಗೆ ತಡೆಯಾಜ್ಞೆ ನೀಡಲು ಆಗದು ಎಂದು ಹೇಳಿತು. ಈ ಅರ್ಜಿ ವಿಷಯಗಳು ನಿರ್ಧಾರವಾದ ಮೇಲೆ ಅವರು ಸಮೀಕ್ಷೆ ಮುಂದುವರಿಸಬಹುದುಎಂದು ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದಿಸಿದ್ದರು.
ನಾವು ಅಂತಿಮವಾಗಿ ಈ ಎಲ್ಲ ಅರ್ಜಿಗಳನ್ನು ವಿಚಾರಣೆ ನಡೆಸಬೇಕು ಎಂದು ಕೊಂಡಿದ್ದೇವೆ. ಮಧ್ಯಂತರ ಪರಿಹಾರ ಪರಿಗಣಿಸಲು ಬಯಸುವುದಿಲ್ಲ ಎಂದು ಹೈಕೋರ್ಟ್ ಹೇಳಿತು.
ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸುತ್ತಾ, ಮಧ್ಯಂತರ ಪರಿಹಾರಕ್ಕೆ ನಮ್ಮ ವಿರೋಧವಿದೆ ಎಂದರು.
ಆದರೇ, ಅರ್ಜಿಯ ವಿಚಾರಣೆ ಮುಗಿಯುವವರೆಗೆ ಸಮೀಕ್ಷೆಯನ್ನು ಮುಂದೂಡಬೇಕಾಗುತ್ತದೆ ಎಂದು ಹೈಕೋರ್ಟ್ ಸಿಜೆ ಪೀಠ ಹೇಳಿತು. ಅಂತಿಮವಾಗಿ ನಾಳೆ ಮಧ್ಯಾಹ್ನ 2.30ಕ್ಕೆ ಸಮೀಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವುದಾಗಿ ಹೈಕೋರ್ಟ್ ಹೇಳಿದೆ. ಹೀಗಾಗಿ ನಾಳೆ ಮಧ್ಯಾಹ್ನದ ವಿಚಾರಣೆಯ ಬಳಿಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಭವಿಷ್ಯ ನಿರ್ಧಾರವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.