/newsfirstlive-kannada/media/post_attachments/wp-content/uploads/2025/03/Yatnal-In-Session.jpg)
ಸದನದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ವಿಧಾನಮಂಡಲ ಅಧಿವೇಶನಕ್ಕೆ ಇಂದಿಗೆ ನಾಲ್ಕನೇ ದಿನ. ಗುರುವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಚರ್ಚೆಯ ಜೊತೆಗೆ ಕೆಲವೊಂದು ಸ್ವಾರಸ್ಯಕರ ಮಾತುಗಳು ಗಮನ ಸೆಳೆದವು.
ಸಿ ಅಶ್ವಥ್ ಹಾಡನ್ನು ಉಲ್ಲೇಖಿಸಿ ಕಾಣದ ಕುರ್ಚಿಗೆ ಹಂಬಲಿಸುತ್ತಿದೆ ಮನ, ಕೂರಬಲ್ಲನೇ ಒಂದು ದಿನ ಎಂದು ಡಿಕೆ ಶಿವಕುಮಾರ್ ಅವರ ಕಾಲೆಳೆಯುವ ಕೆಲಸವನ್ನು ವಿರೋಧ ಪಕ್ಷದ ಸದಸ್ಯರು ಮಾಡಿದ್ದರು. ಮತ್ತೊಂದು ಕಡೆ ಸಿದ್ದರಾಮಯ್ಯ ಇತಿಹಾಸ ರಚನೆ ಮಾಡುತ್ತಾರೆ. ಆ ದಿನಕ್ಕಾಗಿ ಕಾಯುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕಿಚಾಯಿಸಿದರು.
ಇವೆಲ್ಲದರ ನಡುವೆ ಉತ್ತರ ಕರ್ನಾಟಕದ ಜನರ ಬವಣೆಯನ್ನು ಸದನದಲ್ಲಿ ತೆರೆದಿಟ್ಟ ಕಾಂಗ್ರೆಸ್ ಶಾಸಕ ರಾಜು ಕಾಗೆ ಸರ್ಕಾರದ ವಿರುದ್ದನೇ ಅಸಮಾಧಾನ ಹೊರಹಾಕಿದರು. ಹಾಗಾದರೆ ಈ ದಿನದ ಹೈಲೈಟ್ಸ್ ಏನೇನು? ಇಲ್ಲಿದೆ ಮಾಹಿತಿ.
ಕಾಣದ ಕುರ್ಚಿಗೆ ಹಂಬಲಿಸುತ್ತಿದೆ ಮನ
ಕಾಣದ ಕಡಲಿಗೆ ಹಂಬಲಿಸುತ್ತಿದೆ ಮನ ಎಂಬ ಸಿ ಅಶ್ವಥ್ ಹಾಡನ್ನು ನಾಯಕತ್ವ ಬದಲಾವಣೆ ಕುರಿತಾಗಿ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಜಟಾಪಟಿಗೆ ಬಳಕೆ ಮಾಡಿದ ಬಿಜೆಪಿಯ ವಿ. ಸುನೀಲ್ ಕುಮಾರ್, ಕಾಣದ ಕುರ್ಚಿಗೆ ಹಂಬಲಿಸುತ್ತಿದೆ ಮನ. ಕೂರಬಲ್ಲನೇ ಒಂದು ದಿನ ಎಂಬ ಸ್ಥಿತಿ ಡಿಕೆ ಶಿವಕುಮಾರ್ ಅವರದ್ದಾಗಿದೆ ಎಂದು ಕಾಲೆಳೆದರು. ಮೇಕೆದಾಟು ವಿಚಾರವಾಗಿ ಜೊತೆಯಾಗಿ ಕೇಂದ್ರಕ್ಕೆ ಮನವಿ ಮಾಡೋಣ ಎಂದು ಡಿಕೆ ಶಿವಕುಮಾರ್ ಕೈ ಮುಗಿದು ಕೇಳಿದ ಸಂದರ್ಭದಲ್ಲಿ ಈ ನಯ ವಿನಯ ದಿಢೀರ್ ಏಕೆ ಎಂದು ಪ್ರಶ್ನಿಸಿ ಟಾಂಗ್ ನೀಡಿದರು.
ಸಿದ್ದು ದಾಖಲೆ ಮುರೀತಾರೆ, ಆದರೆ!
ಉತ್ತರ ಕರ್ನಾಟಕದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿದ್ದರಾಮಯ್ಯ ಅವರ ಕಾಲೆಳೆದರು. "1950 ರಿಂದ ದಕ್ಷಿಣ ಕರ್ನಾಟಕದವರು 15 ಜನ ಮುಖ್ಯಮಂತ್ರಿ ಗಳಾಗಿದ್ದಾರೆ. ಉತ್ತರ ಕರ್ನಾಟಕದವರು 8 ಬಾರಿ ಆಗಿದ್ದಾರೆ. ಯಾವ ಮುಖ್ಯಮಂತ್ರಿಯೂ ಐದು ವರ್ಷಗಳನ್ನು ಪೂರೈಸಿಲ್ಲ. ಆರು ತಿಂಗಳು, ಒಂದು ವರ್ಷ ಅಂತಾ ಏನಾದರೂ ಭ್ರಷ್ಟಾಚಾರ ಆರೋಪ ಬಂದ ಇಳಿಸಲಾಗಿದೆ.
ಬಹುಶಃ ಸಿದ್ದರಾಮಯ್ಯನೇ ಇತಿಹಾಸ ರಚನೆ ಮಾಡ್ತಿದ್ದಾರೆ.
ಅದಕ್ಕಾಗಿಯೇ ನಮ್ಮ ಸಿದ್ದರಾಮಯ್ಯ ಆ ದಿನಗಳನ್ನು ಕಾಯ್ತಾ ಇದ್ದಾರೆ. ಸಿದ್ದರಾಮಯ್ಯನವರು ದೇವರಾಜ್ ಅರಸ್ ದಾಖಲೆ ಮುರಿದು, ಇನ್ನೂ ಮುಂದುವರಿದು ಆಮೇಲೆ ಯೋಚನೆ ಮಾಡ್ತೀನಿ ಅಂದಿದ್ದಾರೆ ಹೊರತು ಕುರ್ಚಿ ಬಿಡುತ್ತೇನೆ ಅಂತಾ ಹೇಳಿಲ್ಲ" ಎಂದು ಡಿಕೆಶಿಗೆ ಟಾಂಗ್ ಕೊಟ್ಟರು.
ಅಪ್ಪ, ಅಮ್ಮ ಇಲ್ಲ, ಇಲ್ಲಿ ಖಾಲಿ, ಅಲ್ಲಿ ಜಾಲಿ
ಉತ್ತರ ಕರ್ನಾಟಕದ ಚರ್ಚೆಯ ಸಂದರ್ಭದಲ್ಲಿ ರಾಜು ಕಾಗೆ ಬೆಂಬಲಕ್ಕೆ ಬಂದ ಪ್ರತಿಪಕ್ಷ ನಾಯಕ ಆರ್ ಅಶೋಕ್, "ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಇವಾಗ ಶಾಸಕರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಅಂದರೆ, ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ ಅಂತಾ ಹೇಳಬೇಕಾ? ಅಥವಾ ಬೇರೊಂದು ಪದ ಬಳಸಬೇಕಾ? ಅಧಿಕಾರಿಗಳು ಜಾಲಿ ಜಾಲಿ, ಸರ್ಕಾರ ಖಾಲಿ ಖಾಲಿ ಖಾಲಿ. ಒಂದು ಮನೆಯಲ್ಲಿ ಯಜಮಾನ ಸರಿಯಾಗಿದ್ರೆ ಎಲ್ಲವೂ ಸರಿ ಇರುತ್ತದೆ. ಆದರೆ ತಂದೆ ತಾಯಿಯೇ ಇಲ್ಲ ಅಂದರೆ ಆ ಮನೆ ಪರಿಸ್ಥಿತಿ ಏನು? ಹಾಗಾಗಿದೆ ಸರ್ಕಾರದ ನಾಯಕತ್ವ ಕಥೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಿಕ್ಷೆ ಬೇಡುವ ಸ್ಥಿತಿ ನಮ್ಮದು!
ಉತ್ತರ ಕರ್ನಾಟಕದ ಶಾಸಕರು ಬೆಂಗಳೂರಿಗೆ ಬಂದು ಭಿಕ್ಷುಕರ ತರ ಭಿಕ್ಷೆ ಬೇಡಬೇಕಾದ ಸ್ಥಿತಿ ಇದೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಮೂಲಕ ರಾಜ್ಯದ ಸ್ಥಿತಿಗತಿ ಬಗ್ಗೆ ವಾಸ್ತವ ಬಿಚ್ಚಿಟ್ಟರು. ಉತ್ತರ ಕರ್ನಾಟಕ ದವರು ಇಲ್ಲಿಗೆ ಬಂದು ಕೈಮುಗಿದು ಎಲ್ಲರ ಮುಂದೆ ನಿಲ್ಲಬೇಕು. ಭಿಕ್ಷುಕರ ತರ ಭಿಕ್ಷೆ ಬೇಡಬೇಕು. ನೂರು ಸಲ ಭಿಕ್ಷೆ ಬೇಡಿದರೆ ಹತ್ತು ಪೈಸೆ, ಇಪ್ಪತ್ತು ಪೈಸೆ ಹಾಕ್ತಾರೆ ಎಂದು ಬೇಸರ ಹೊರಹಾಕಿದರು. 224 ಶಾಸಕರು ಹಾಗೂ ಕನ್ನಡ ಸಂಘಟನೆಗಳು ವಿರೋಧ ಮಾಡಿದರೂ ನಾನು ಪ್ರತ್ಯೇಕ ರಾಜ್ಯದ ಬೇಡಿಕೆಗೆ ಬದ್ಧವಾಗಿದ್ದೇನೆ ಎಂದು ಕಾಗೆ ಹೇಳಿದರು. ಈ ಬಗ್ಗೆ ನಾನು ಸಾಯುವವರೆಗೆ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us