ಧೈರ್ಯ, ದೃಢ ನಿಲುವು, ಸಂಕಲ್ಪ ಬಲ ಇದ್ದರೆ ಒಬ್ಬನೇ ಸಾಕು, 140 ಜನರ ಬಲ ಸಂಪಾದಿಸಬಲ್ಲ-ಡಿಕೆಶಿ

ಧೈರ್ಯ, ದೃಢ ನಿಲುವು, ಸಂಕಲ್ಪ ಬಲ ಇದ್ದರೆ ಒಬ್ಬನೇ ಸಾಕು, 140 ಜನರ ಬಲ ಸಂಪಾದಿಸಬಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ವಿಧಾನಸಭೆಯಲ್ಲಿ ಹೇಳಿದ್ದಾರೆ. ರಾಜಕೀಯ ಸಾಧ್ಯತೆಗಳ ಕಲೆ, ಇಲ್ಲಿ ಎಲ್ಲವೂ ಸಾಧ್ಯ. ನಾವಿಬ್ಬರೂ ಕೊಟ್ಟ ಮಾತು ಉಳಿಸಿಕೊಳ್ಳಲು ಜನಪರ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

author-image
Chandramohan
DK SHIVAKUMAR IN ASSEMBLY

ಅಸೆಂಬ್ಲಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

Advertisment

ರಾಜಕೀಯದಲ್ಲಿ ಎಲ್ಲವೂ ಸಾಧ್ಯ. ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ಇಲ್ಲಿ ಎಲ್ಲವೂ ಸಾಧ್ಯ. One man with Courage makes a majority ಎಂಬುದನ್ನು ನಾನು ನಂಬಿದ್ದೇನೆ. ದೃಢವಾದ ನಿಲುವು, ಸಂಕಲ್ಪ ಹೊಂದಿದ್ದರೆ, ಒಬ್ಬನೇ ಸಾಕು. ಆತನ ಜೊತೆ 140 ಜನರೂ ಇರುತ್ತಾರೆ, ಇನ್ನೂ ಜಾಸ್ತಿನೂ ಆಗುತ್ತಾರೆ. ನೋಡೋಣ 2028ರಲ್ಲಿ ಏನಾಗುತ್ತದೆ  ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ನೀಡುವಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಿಸಿದಾಗ ಡಿಸಿಎಂ ಅವರು ಮಾರುತ್ತರ ನೀಡಿದರು.

‘ಕಳೆದ ಒಂದು ತಿಂಗಳಿಂದ ಡಿ.ಕೆ. ಶಿವಕುಮಾರ್ ಅವರ ಮಾತು, ಟ್ವೀಟ್ ಗಳು ನೂರು ಅರ್ಥ ಬರುವಂತಿದ್ದು, ಎಲ್ಲರೂ ಗೊಂದಲಕ್ಕೆ ಒಳಗಾಗಿದ್ದಾರೆ’ ಎಂದು ಅಶೋಕ್ ಹೇಳಿದರು. ಆಗ DK  ಶಿವಕುಮಾರ್ ಅವರು ಸ್ಪಷ್ಟನೆ ಕೊಟ್ಟರು.

ಅಶೋಕ್ ಅವರೇ, ನೀವು ಹಿರಿಯ ರಾಜಕಾರಣಿ. ಯಾರು ಏನಾದರೂ ಮಾತನಾಡಲಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ವಿದ್ಯಾರ್ಥಿ ನಾಯಕನಿಂದ ಬೆಳೆದು ಬಂದವನು. ನನ್ನದೇ ಆದ ಮೌಲ್ಯಗಳನ್ನು ಪಾಲಿಸಿಕೊಂಡು, ಉಳಿಸಿಕೊಂಡು ಬಂದಿದ್ದೇನೆ. ಪಕ್ಷ ನನಗೆ ಚಿಕ್ಕ ವಯಸ್ಸಿಗೆ ಟಿಕೆಟ್ ಕೊಟ್ಟಿದ್ದು, ಇಲ್ಲಿಯವರೆಗೂ ಬೆಳೆದಿದ್ದೇನೆ. ರಾಜಕೀಯದಲ್ಲಿ ಏಳು ಬೀಳು ಸಹಜ. ನಾನು ಎಂತೆಂಥಹವರ ಏಳು ಬೀಳು ನೋಡಿದ್ದೇನೆ. ನಾನು ಬಿದ್ದಿದ್ದೇನೆ, ಎದ್ದಿದ್ದೇನೆ, ಜೈಲುವಾಸ ಎಲ್ಲವನ್ನೂ ಅನುಭವಿಸಿದ್ದೇನೆ. ಇನ್ನು ಒಂದು ತಿಂಗಳು ಕಳೆದರೆ ನಾನು ಪಕ್ಷದ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತದೆ” ಎಂದರು.

"ಸಿಎಂ ಸಿದ್ದರಾಮಯ್ಯ ಅವರು ಸೇರಿದಂತೆ 139 ಶಾಸಕರೂ ನನ್ನ ಬಲ. ಸಿದ್ದರಾಮಯ್ಯ ಅವರು 100 % ನನ್ನ ಜತೆಗಿದ್ದಾರೆ. ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ನಾವಿಬ್ಬರೂ ಪರಸ್ಪರ ಕೈಜೋಡಿಸಿ, ಜತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ, ಮುಂದೆಯೂ ಕೆಲಸ ಮಾಡುತ್ತೇವೆ. ನಾವು ಜನಕ್ಕೆ ಮಾತು ಕೊಟ್ಟಿದ್ದು, ಆ ಮಾತನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ. ನಾವು ನುಡಿದಂತೆ ನಡೆಯುತ್ತಿದ್ದೇವೆ, ಮುಂದೆಯೂ ನಡೆಯುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಅವರ ಕಷ್ಟಕಾಲದಲ್ಲಿ ನಾನು ನಿಂತಿದ್ದೇನೆ, ಮುಂದೆಯೂ ನಿಲ್ಲುತ್ತೇನೆ. ಅವರು ಕೂಡ ಕಷ್ಟ ಕಾಲದಲ್ಲಿ ನನ್ನ ಜತೆ ನಿಲ್ಲಲಿದ್ದಾರೆ" ಎಂದು ಹೇಳಿದರು.

ನಿಮ್ಮ ಟ್ವೀಟ್ ಅರ್ಥವೇನು ಎಂದು ಅಶೋಕ್ ಅವರು ಮತ್ತೆ ಕೇಳಿದಾಗ, “ನೀವು ಟ್ವೀಟ್ ಅನ್ನು ಯಾವ ರೀತಿ ಅರ್ಥ ಮಾಡಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರ” ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ನೀವು ಯಾವ ವಿಚಾರಕ್ಕೆ ತಾಳ್ಮೆ ಬಗ್ಗೆ ಮಾತನಾಡಿದ್ದೀರಿ ಎಂದಾಗ, “ಯಾರ್ಯಾರೋ ಮಾತನಾಡುವುದಕ್ಕೆ ನಾನು ಉತ್ತರ ನೀಡಲು ಆಗುವುದಿಲ್ಲ. ನಮ್ಮ ಪಕ್ಷದಲ್ಲಿ ಹಾಗೂ ನಿಮ್ಮ (ಬಿಜೆಪಿ) ಪಕ್ಷದಲ್ಲಿ ಸಂಖ್ಯಾಬಲಕ್ಕಿಂತ ಪಕ್ಷವೇ ತೀರ್ಮಾನ ಮಾಡುತ್ತದೆ. ನಿಮ್ಮ ಸರ್ಕಾರದಲ್ಲಿ ಎಷ್ಟೋ ಸಿಎಂ ಬದಲಾದರು, ಸಚಿವ ಸಂಪುಟಗಳೇ ಬದಲಾದವು. ಹೀಗಾಗಿ ನಿಮ್ಮ ಮಾತಿಗೆ ನಾನು ಜಗ್ಗುವುದಿಲ್ಲ, ನೀವು ಸುಮ್ಮನೇ ತಲೆಕೆಡಿಸಿಕೊಳ್ಳಬೇಡಿ” ಎಂದು ಡಿ.ಕೆ.ಶಿವಕುಮಾರ್  ತಿಳಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DK Shivakumar Legislative Assembly DCM DK SHIVAKUMAR special assembly session
Advertisment