/newsfirstlive-kannada/media/media_files/2025/09/03/gst-council-meeting-begins03-2025-09-03-12-39-56.jpg)
ದೆಹಲಿಯಲ್ಲಿ ಜಿಎಸ್‌ಟಿ ಕೌನ್ಸಿಲ್ ಸಭೆ ಆರಂಭ
ಎರಡು ದಿನಗಳ ಜಿಎಸ್‌ಟಿ ಕೌನ್ಸಿಲ್ ಸಭೆ ದೆಹಲಿಯಲ್ಲಿ ಇಂದು ಬೆಳಿಗ್ಗೆ ಆರಂಭವಾಗಿದೆ. ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಆರಂಭವಾಗಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲ ರಾಜ್ಯಗಳ ಹಣಕಾಸು ಸಚಿವರು ಹಾಗೂ ಅವರ ಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಕೇಂದ್ರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯ ಮಹತ್ವಾಕಾಂಕ್ಷೆಯ ಪರಿಷ್ಕರಣೆಯ ಭಾಗವಾಗಿ ಎಲೆಕ್ಟ್ರಿಕ್ ವಾಹನಗಳ (ಇವಿ) ಮೇಲೆ ಶೇಕಡಾ 5 ರಷ್ಟು ತೆರಿಗೆ ವಿಧಿಸಲು ಒತ್ತಾಯಿಸುವ ಸಾಧ್ಯತೆಯಿದೆ. ಬೆಣ್ಣೆಯಿಂದ ಎಲೆಕ್ಟ್ರಾನಿಕ್ಸ್ ವರೆಗೆ ದಿನನಿತ್ಯ ಬಳಸುವ ವಸ್ತುಗಳ ಮೇಲಿನ ತೆರಿಗೆ ದರಗಳನ್ನು ಕಡಿಮೆ ಮಾಡಲು ಈ ಸುಧಾರಣೆ ಪ್ರಯತ್ನಿಸುತ್ತದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಹಣಕಾಸು ಸಚಿವರನ್ನು ಒಳಗೊಂಡ ಮಂಡಳಿಯು ಅಧಿವೇಶನದಲ್ಲಿ ಈ ಪ್ರಸ್ತಾವನೆಯ ಕುರಿತು ಚರ್ಚೆ ನಡೆಯಲಿದೆ. ನಾಳೆ ಸಂಜೆ ಸಭೆಯ ಕೊನೆಯಲ್ಲಿ ಅಂತಿಮ ನಿರ್ಧಾರಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಸದ್ಯ ಇರುವ ಜಿಎಸ್‌ಟಿ ಸ್ಲ್ಯಾಬ್ ಗಳ ಪೈಕಿ ಶೇ.5 ಮತ್ತು ಶೇ.18ರ ಎರಡು ಸ್ಲ್ಯಾಬ್ ಗಳನ್ನು ಮಾತ್ರ ಉಳಿಸಿಕೊಳ್ಳುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತೆ. ದೇಶದ ಮಧ್ಯಮ ವರ್ಗ ಬಳಸುವ ಎಲ್ಲ ಉತ್ಪನ್ನಗಳ ಜಿಎಸ್‌ಟಿ ದರಗಳನ್ನು ಈ ಮೂಲಕವಾಗಿ ಕಡಿಮೆ ಮಾಡಲಾಗುತ್ತೆ. ಜನರಿಗೆ ಜಿಎಸ್‌ಟಿ ತೆರಿಗೆ ಇಳಿಕೆಯ ಲಾಭ ಸಿಗುವಂತೆ ಮಾಡಲು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತಿದೆ.
ಇನ್ನೂ ಕಾರ್ ಗಳು, ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್ , ಲ್ಯಾಪ್ ಟಾಪ್ ಸೇರಿದಂತೆ ಎಲ್ಲ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಜಿಎಸ್‌ಟಿ ದರವು ಕೂಡ ಕಡಿಮೆಯಾಗಲಿದೆ. ಇದರಿಂದಾಗಿ ದೇಶದಲ್ಲರಿ ಆಗಸ್ಟ್ ತಿಂಗಳಲ್ಲಿ ಕಾರ್ ಗಳ ಮಾರಾಟ ಗಣನೀಯವಾಗಿ ಕುಸಿತವಾಗಿದೆ. ಕಾರ್ ಗಳ ಜಿಎಸ್‌ಟಿ ದರ ಕಡಿಮೆಯಾದ ಮೇಲೆ ಕಾರ್ ಖರೀದಿ ಮಾಡೋಣ ಎಂದು ಕಾರ್ ಖರೀದಿಸುವ ಗ್ರಾಹಕರು ಕಾರ್ ಖರೀದಿಯನ್ನು ಸೆಪ್ಟೆಂಬರ್ , ಆಕ್ಟೋಬರ್ ತಿಂಗಳಿಗೆ ಮುಂದೂಡಿದ್ದಾರೆ.
GSTಕೌನ್ಸಿಲ್ ಸಭೆಯಲ್ಲಿ ಭಾಗಿಯಾದ ಎಲ್ಲ ರಾಜ್ಯದ ಹಣಕಾಸು ಸಚಿವರು
ಇನ್ನೂ ಎಲೆಕ್ಟ್ರಿಕ್ ಕಾರ್ ಗಳ ಜಿಎಸ್‌ಟಿಯನ್ನು ಶೇ.5 ಕ್ಕೆ ಇಳಿಕೆ ಮಾಡಿದರೇ, ಎಲೆಕ್ಟ್ರಿಕ್ ಕಾರ್ ಗಳ ಮಾರಾಟ ಕೂಡ ದೇಶದಲ್ಲಿ ಹೆಚ್ಚಾಗಲಿದೆ.
ಇನ್ನೂ ಜಿಎಸ್‌ಟಿ ಸ್ಲ್ಯಾಬ್ ಗಳನ್ನು ಎರಡಕ್ಕೆ ಇಳಿಕೆ ಮಾಡುವುದರಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 50 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹ ನಷ್ಟವಾಗಲಿದೆ. ಆದರೇ, ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವುದರಿಂದ ಹೆಚ್ಚಿನ ಆದಾಯ ಸಂಗ್ರಹವಾಗಬಹುದು, ಉತ್ಪನ್ನಗಳ ಬೇಡಿಕೆ ಹೆಚ್ಚಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿ ಆರ್ಥಿಕತೆಗೆ ಉತ್ತೇಜನ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಕೇಂದ್ರ ಸರ್ಕಾರ ಇದೆ.
ಇನ್ನೂ ದೇಶದಲ್ಲಿ ಹೆಲ್ತ್ ಇನ್ಸೂರೆನ್ಸ್ ಮತ್ತು ಟರ್ಮ್ ಇನ್ಸೂರೆನ್ಸ್ , ಲೈಫ್ ಇನ್ಸೂರೆನ್ಸ್ ಗಳ ಮೇಲಿನ ಜಿಎಸ್‌ಟಿ ಯನ್ನು ಶೂನ್ಯಕ್ಕೆ ಇಳಿಸುವ ಸಾಧ್ಯತೆಯೂ ಇದೆ. ಹೆಲ್ತ್ , ಲೈಫ್ ಇನ್ಸೂರೆನ್ಸ್ ಮೇಲಿನ ಜಿಎಸ್‌ಟಿಯನ್ನು ಶೂನ್ಯಕ್ಕೆ ಇಳಿಸಿದರೇ, ಅದರ ಲಾಭ ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾವಣೆಯಾಗಬೇಕೆಂದು ರಾಜ್ಯ ಸರ್ಕಾರಗಳು ಗ್ಯಾರಂಟಿಯನ್ನು ಕೇಳಿವೆ.
ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಆರಂಭವಾಗಿರುವ ಜಿಎಸ್‌ಟಿ ಕೌನ್ಸಿಲ್ ಸಭೆ
ಏಪ್ರಿಲ್ ನಿಂದ 12 ಲಕ್ಷ ರೂಪಾಯಿವರೆಗಿನ ಗಳಿಕೆಯ ಮೇಲಿನ ಇನ್ ಕಮ್ ಟ್ಯಾಕ್ಸ್ ಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಈಗ ಜಿಎಸ್‌ಟಿ ಸುಧಾರಣೆಯಿಂದ ದೇಶದಲ್ಲಿ 5.31 ಲಕ್ಷ ರೂಪಾಯಿ ಉತ್ಪನ್ನಗಳ ಬಳಕೆ ಅಥವಾ ಅನುಭೋಗಕ್ಕೆ ಉತ್ತೇಜನ ಸಿಗಲಿದೆ. ಇದು ದೇಶದ ಜಿಡಿಪಿಯ ಶೇ.1.6 ರಷ್ಟಾಗುತ್ತೆ ಎಂದು ಎಸ್‌ಬಿಐ ರಿಸರ್ಚ್ ವರದಿ ಹೇಳಿದೆ.
ಇನ್ನೂ ಜಿಎಸ್‌ಟಿ ಸ್ಲ್ಯಾಬ್ ಇಳಿಕೆಯಿಂದ ರಾಜ್ಯ ಸರ್ಕಾರಗಳ ಆದಾಯ ಸಂಗ್ರಹದಲ್ಲಿ ಇಳಿಕೆಯಾಗಬಾರದು. ಬರೀ ಕೆಲ ಕಂಪನಿಗಳಿಗೆ ಮಾತ್ರ ಲಾಭ ಮಾಡಿಕೊಡುವಂತಿರಬಾರದು. ರಾಜ್ಯ ಸರ್ಕಾರಗಳ ಆದಾಯ ನಷ್ಟಕ್ಕೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಕರ್ನಾಟಕ, ತಮಿಳುನಾಡು , ಕೇರಳ, ಪಂಜಾಬ್ ಸೇರಿದಂತೆ ಬಿಜೆಪಿಯೇತರ 8 ರಾಜ್ಯ ಸರ್ಕಾರಗಳು ಇಂದಿನ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.