/newsfirstlive-kannada/media/post_attachments/wp-content/uploads/2023/07/Karnataka-Session.jpg)
ಬೆಳಗಾವಿಯಲ್ಲಿ ಅಸೆೆಂಬ್ಲಿಯ ಚಳಿಗಾಲದ ಅಧಿವೇಶನ
ವಿಧಾನಮಂಡಲ ಅಧಿವೇಶನಕ್ಕೆ ಬುಧವಾರ ಮೂರನೇ ದಿನ. ವಿಧಾನಸಭೆಯಲ್ಲಿ ಇಂದು ಸದ್ದು ಗದ್ದಲ, ಬಿಸಿ ಬಿಸಿ ಮಾತುಗಳ ವಿನಿಮಯದ ಜೊತೆಗೆ ಒಂದಿಷ್ಟು ಸ್ವಾರಸ್ಯಕರ ಮಾತು, ಕಾಲೆಳೆಯುವ ಪ್ರಸಂಗಗಳು ನಡೆದವು.
ನಾಯಕತ್ವ ಬದಲಾವಣೆ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಮಾತು ಸದನದ ಬಿಸಿ ಏರಿಸಿತು. ಆಡಳಿತ ಮತ್ತು ವಿಪಕ್ಷದ ನಡುವೆ ವಾಗ್ಬಾಣಗಳ ಪ್ರಯೋಗ ಆದವು. ಇದರ ಜೊತೆಗೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಅಶೋಕ್, ವಿಜಯೇಂದ್ರ ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಿಮ್ಮಯ್ಯ ಅಲ್ಲ, ತಮ್ಮಯ್ಯ
ಅಧ್ಯಕ್ಷರೇ ನೀವು ತಿಮ್ಮಯ್ಯ ಎಂದು ಕರೆಯುತ್ತಿರುವುದರಿಂದ ಇದೀಗ ಸದಸ್ಯರು ಹಾಗೆ ಕರೆಯುತ್ತಿದ್ದಾರೆ ಎಂದು ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ತಮ್ಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ " ತಮ್ಮಯ್ಯ, ಯಾರು ಕೂಡಾ ಅವರನ್ನು ತಿಮ್ಮಯ್ಯ ಅಂತ ಕರೀಬೇಡಿ. ತಿಮ್ಮಯ್ಯ ಎಂದು ಕರೆದರೆ ದಂಡ ವಿಧಿಸಲಾಗುತ್ತದೆ " ಎಂದು ಹಾಸ್ಯದ ದಾಟಿಯಲ್ಲಿ ಸ್ಪೀಕರ್ ಖಾದರ್ ಸೂಚಿಸಿದರು. ಈ ವೇಳೆ ಹೆಸರು ಸರಿಪಡಿಸುತ್ತಾ, ಪ್ರಿಯಾಂಕಾ ಖರ್ಗೆ ಕೂಡ ಮಧ್ಯೆ ಪ್ರವೇಶಿಸಿ ಮಾತನಾಡಿದ್ದರು. "ಹೆಸರಿನಲ್ಲಿ ವ್ಯತ್ಯಾಸ ಆದರೆ ಏನಾಗುತ್ತೆ ಎಂಬುದು ನನಗಿಂತ ಚೆನ್ನಾಗಿ ಯಾರಿಗೂ ಗೊತ್ತಿಲ್ಲ. ನನ್ನನ್ನು ಪ್ರಿಯಾಂಕಾ ಅಂದು ಬಿಟ್ಟು ಲಿಂಗವೇ ಬದಲಾವಣೆ ಮಾಡ್ತಾರೆ. ಹಾಗಾಗಿ ಕ್ಷಮೆ ಇರಲಿ" ಎಂದರು.
ಕಪ್ಪು ಪಟ್ಟಿ ಧರಿಸಿದ ಅರವಿಂದ ಬೆಲ್ಲದ್
ವಿಧಾನಸಭೆಗೆ ಬಿಜೆಪಿ ಶಾಸಕಾಂಗ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಕಪ್ಪು ಪಟ್ಟಿ ಧರಿಸಿ ಗಮನ ಸೆಳೆದರು. ಯಾಕಾಗಿ ಕಪ್ಪು ಪಟ್ಟಿ ಧರಿಸಿದ್ದೀರಾ? ಎಂದು ಸ್ಪೀಕರ್ ಯು.ಟಿ ಖಾದರ್ ಪ್ರಶ್ನಿಸಿದರು. "ಲಿಂಗಾಯತರ ಮೇಲೆ ದೌರ್ಜನ್ಯ ಆದ ಕರಾಳ ದಿನ ಇದು. ಕರಾಳ ದಿನಕ್ಕೆ ಒಂದು ವರ್ಷ ಆಗಿದೆ. ಈ ಸಂಬಂಧಿಸಿದಂತೆ ವಿಚಾರಣಾ ಆಯೋಗ ರಚನೆ ಮಾಡಲಾಗಿತ್ತು. ಆಯೋಗ ವರದಿ ಕೊಟ್ಟಿದೆ, ಆದರೆ ಯಾರ ಮೇಲೆ ಕ್ರಮ ಆಗಿಲ್ಲ" ಎಂದು ಸದನಕ್ಕೆ ತಿಳಿಸಿದರು. ಈ ಕಾರಣಕ್ಕಾಗಿ ಕಪ್ಪು ಪಟ್ಟಿ ಧರಿಸಿ ಬಂದಿದ್ದೇನೆ ಎಂದು ತಿಳಿಸಿದರು.
ದ್ವೇಷ ಭಾಷಣ ಮಸೂದೆ ಮಂಡನೆ, ಬಿಜೆಪಿ ವಿರೋಧ
ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬುಧವಾರ ವಿಧಾನಸಭೆಯಲ್ಲಿ "ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ" ವನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಈ ವಿಧೇಯಕವನ್ನು ಮಂಡನೆ ಮಾಡಿದರು. ಆದರೆ ವಿಧೇಯಕಕ್ಕೆ ಬಿಜೆಪಿ ಸದಸ್ಯರು ಒಕ್ಕೊರಲಿನಿಂದ ವಿರೋಧ ಸೂಚಿಸಿದರು.
ಯತ್ನಾಳ್, ಬಿಜೆಪಿ ಶಾಸಕರಿಂದ ಬಾಗಿಲು ಮುಚ್ಚಿ ಮಾತುಕತೆ!
ನಾಯಕತ್ವ ವಿಚಾರವಾಗಿ ಬಿಜೆಪಿಯಲ್ಲೂ ಗೊಂದಲ ಮುಗಿದಿಲ್ಲ. ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಒಂದಲ್ಲಾ ಒಂದು ಸ್ವರೂಪದಲ್ಲಿ ಹೊರಬರುತ್ತಿದೆ. ಸುವರ್ಣ ಸೌಧ ವಿಧಾನಸಭೆ ಮೊಗಸಾಲೆಯಲ್ಲಿರುವ ವಿಪಕ್ಷ ನಾಯಕ ಆರ್ ಅಶೋಕ್ ಕಚೇರಿಯಲ್ಲಿ ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಬಿಜೆಪಿಯ ಕೆಲವು ಶಾಸಕರು ಬಾಗಿಲು ಮುಚ್ಚಿ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ವಿಜಯೇಂದ್ರ ಎಂಟ್ರಿ ಕೊಟ್ಟಾಗ ಯತ್ನಾಳ್ ಹಾಗೂ ಜೊತೆಗಿದ್ದ ಶಾಸಕರು ಹೊರ ನಡೆದರು.
ಬಾವಿಗಿಳಿದು ಯತ್ನಾಳ್ ಏಕಾಂಗಿ ಪ್ರತಿಭಟನೆ
ಉತ್ತರ ಕರ್ನಾಟಕ ಭಾಗದ ಚರ್ಚೆಯಲ್ಲಿ ಶಿವಲಿಂಗೇಗೌಡ ಮಾತನಾಡುವ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದವರು ಯಾರೂ ಮಾತನಾಡಿಲ್ಲ. ಶಿವಲಿಂಗೇಗೌಡ ಅವರು ಹಳೇ ಮೈಸೂರು ಭಾಗದವರು. ಹೀಗಾಗಿ ಉತ್ತರ ಕರ್ನಾಟಕದವರು ಮಾತನಾಡಲಿ ಎಂದು ಯತ್ನಾಳ್ ಆಗ್ರಹಿಸಿದರು.
ಉತ್ತರ ಕರ್ನಾಟಕ ರವರೆಗೆ ಅವಕಾಶ ಇಲ್ಲ ಎಂದು ಆರೋಪಿಸಿ ಬಾವಿಗಿಳಿದು ಯತ್ನಾಳ್ ಪ್ರತಿಭಟನೆ ನಡೆಸಿದರು.
ಎಥೆನಾಲ್ ಬದಲು ಯತ್ನಾಳ್ ಎಂದ ಕೆ.ಎಂ.ಶಿವಲಿಂಗೇಗೌಡ
ಇನ್ನೂ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡುವಾಗ ಎಥೆನಾಲ್ ಎನ್ನುವ ಬದಲು ಯತ್ನಾಳ್ ಎಂದು ಹೇಳಿಬಿಟ್ಟರು. ತಕ್ಷಣ ಬಿಜೆಪಿ ಸದಸ್ಯರು ಅದು ಯತ್ನಾಳ್ ಅಲ್ಲ, ಎಥೆನಾಲ್ ಎಂದು ಉಚ್ಛಾರಣೆಯನ್ನು ಸರಿಪಡಿಸುವ ಯತ್ನ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us