/newsfirstlive-kannada/media/media_files/2025/12/23/dcm-dk-shivakumar-meets-manohar-lal-khattar-1-2025-12-23-18-09-14.jpg)
ದೆಹಲಿ ಯಾತ್ರೆಯಲ್ಲಿ ರಾಹುಲ್ ಗಾಂಧಿ ಭೇಟಿಯಾಗ್ತಾರಾ ಡಿಕೆಶಿ?
ಹೊಸ ವರ್ಷ ಸಮೀಪಿಸ್ತಿದೆ.. ರಾಜ್ಯ ರಾಜಕೀಯದಲ್ಲಿ ಹೊಸ ಅಲೆ ಏಳುತ್ತಾ? ಎಂಬ ಕುತೂಹಲ ಮೂಡಿದೆ. ವರ್ಷಾಂತ್ಯಕ್ಕೆ ಕ್ರಾಂತಿ ಆಗುತ್ತಾ? ಅನ್ನೋ ಕೌತುಕ ಕಾಡಿದೆ. ಇದ್ರ ಮಧ್ಯೆ ಇಂದ್ರಪ್ರಸ್ಥದತ್ತ ಕನಕಾಧಿಪತಿ ಇಟ್ಟಿರೋ ಹೆಜ್ಜೆ ನೂರು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಕಣ್ಮಂದೆ ಗದ್ದುಗೆ ಗುದ್ದಾಟ ನಡೀತಿದ್ರೂ ರಾಹುಲ್ ಗಾಂಧಿಯ ಮೌನ ಅಚ್ಚರಿ ಮೂಡಿಸಿದೆ. ಇದು ಸರ್ಕಾರವನ್ನ ಆಡಿಕೊಳ್ಳುವ ಬಿಜೆಪಿಗೆ ಆಹಾರವಾಗಿದೆ.
ಒಬ್ರು ಕಾಂಗ್ರೆಸ್‌ನ ಶಕ್ತಿ.. ಇನ್ನೊಬ್ರು ಹಸ್ತಮನೆಯ ಆಸ್ತಿ.. ಇಬ್ಬರ ಮಧ್ಯೆ ಕುರ್ಚಿಗಾಗಿ ಜಂಗೀಕುಸ್ತಿ.. ತಗ್ಗೋದೆ ಇಲ್ಲ ಅಂತ ಸಿದ್ದು.. ಬಗ್ಗೋದೆ ಇಲ್ಲ ಅಂತ ಡಿಕೆ.. ಇದು ಗದ್ದುಗೆಯ ಯುದ್ಧ.. ಅರ್ಥಾತ್ ಸಿಎಂ ಪಟ್ಟಕ್ಕಾಗಿ ಇಬ್ಬರು ಘಟಾನುಘಟಿಗಳ ಮಧ್ಯೆ ನಡೆಯುತ್ತಿರೋ ಮಲ್ಲಯುದ್ಧ. ಹೊಸ ವರ್ಷಕ್ಕೆ ಈ ಸಮರಕ್ಕೆ ವಿರಾಮ ಸಿಗುತ್ತಾ? ಇಲ್ಲ ಮಹಾಯುದ್ಧವೇ ನಡೆಯುತ್ತಾ ಅನ್ನೋದೆ ಸದ್ಯದ ಕೌತುಕ.
ಮುಖ್ಯಮಂತ್ರಿ ಗಾದಿ ಗುದ್ದಾಟ.. ಡಿಕೆಶಿ ದೆಹಲಿ ಯಾತ್ರೆ!
‘ಕನಕಪುರ ಕಲಿ’ಗೆ ಆಗುತ್ತಾ ರಾಹುಲ್ ಗಾಂಧಿ ದರ್ಶನ?
ನಾನೇ ಮುಖ್ಯಮಂತ್ರಿ ಅಂತ ಸಿದ್ದರಾಮಯ್ಯ ಪಂಚ ವರ್ಷದ ಜಪದಲ್ಲಿ ತೊಡಗಿದ್ದಾರೆ. ಸದನದಲ್ಲೂ ಇದನ್ನೇ ಸ್ಟಾಂಗ್ ಆಗಿ ಸ್ಮರಿಸಿದ್ದಾರೆ. ಇದನ್ನೆಲ್ಲಾ ಕೇಳಿ ಸೈಲೆಂಟ್ ಆಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಡೆಲ್ಲಿಯಾತ್ರೆ ಮಾಡಿದ್ದಾರೆ. ಹೈಕಮಾಂಡ್ ನಾಯಕರಿಗೆ ದಂಡ ಹೊಡೆದು ಸಿಎಂ ಹುದ್ದೆಗೇರುವ ಸರ್ಕಸ್ ಮಾಡಲು ಮುಂದಾಗಿದ್ದಾರೆ. ಆದ್ರೆ, ಕಳೆದ ಹಲವು ದಿನಗಳಿಂದ ಡಿಕೆಶಿ ಡೆಲ್ಲಿ ಫ್ಲೈಟ್ ಹತ್ತಿ ಹೋದ್ರೂ ಕಿಮ್ಮತ್ತಿಲ್ಲದಂತಾಗಿದೆ. ಎಐಸಿಸಿ ನಾಯಕ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಗದೇ ವಾಪಸ್ ಬರೋದು ವ್ಯಥೆಯಾಗಿದೆ. ಈ ಬಾರಿಯಾದ್ರೂ ರಾಹುಲ್ ಗಾಂಧಿಯ ಭೇಟಿ ಆಗಬಹುದು ಎಂಬ ಭರವಸೆಯಲ್ಲಿ ಕನಕಾಧಿಪತಿ ಇಂದ್ರಪ್ರಸ್ಥದಲ್ಲಿ ಠಿಕಾಣಿ ಹೂಡಿದ್ದಾರೆ.
ದೆಹಲಿ ಭೇಟಿ ವೇಳೆ ಕೆಲ ಕೇಂದ್ರ ಸಚಿವರನ್ನ ಭೇಟಿ ಮಾಡೋದಾಗಿ ಡಿಕೆಶಿ ಹೇಳ್ಕೊಂಡಿದ್ದಾರೆ. ಅದರಂತೆ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ ಲಾಲ್ ಕಟ್ಟರ್ ಅವರನ್ನ ಭೇಟಿಯಾಗಿದ್ದಾರೆ.
ಕಣ್ಮುಂದೆ ಕುರ್ಚಿ ಕದನ.. ‘ಕೈ’ ‘ಹೈ’ ನಾಯಕರು ಸೈಲೆಂಟ್!
ಕಳೆದ ಮೂರ್ನಾಲ್ಕು ತಿಂಗಳಿನಿಂದ ವರುಣಾಧಿಪತಿ-ಕನಕಾಧಿಪತಿ ಮಧ್ಯೆ ಗದ್ದುಗೆ ಗುದ್ದಾಟ ಮಿತಿಮೀರಿದೆ. ಇಷ್ಟಾದ್ರೂ ಹೈಕಮಾಂಡ್ ನಾಯಕರು ಮಧ್ಯೆ ಪ್ರವೇಶ ಮಾಡದೇ ಮೌನಕ್ಕೆ ಜಾರಿದ್ದಾರೆ. ಅದರಲ್ಲೂ ಎಐಸಿಸಿ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ಕ್ಯಾರೆ ಎನ್ನದೇ ಕದನ ಕೌತುಕವನ್ನ ನೋಡುತ್ತಾ ಮೌನಕ್ಕೆ ಜಾರಿದ್ದಾರೆ. ಡಿಕೆಶಿ ಭೇಟಿಗೆ ಅವಕಾಶವನ್ನ ನೀಡದೇ ದೂರ ಇಟ್ಟಿದ್ದಾರೆ. ಇತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಹೇಳೋದು ಏನು ಇಲ್ಲ ಅಂತ ಕೈಮುಗಿದಿದ್ದಾರೆ.
/filters:format(webp)/newsfirstlive-kannada/media/media_files/2025/10/02/cm-and-dcm-watching-empty-chair-2025-10-02-13-14-49.jpg)
ಕಾಂಗ್ರೆಸ್ ಕಲಹವೇ ಕಮಲ ಕಲಿಗಳಿಗೆ ಭೂರಿ ಭೋಜನ!
ಕಾಂಗ್ರೆಸ್‌ನಲ್ಲಿ ನಡೆಯುತ್ತಿರೋ ಕುರ್ಚಿ ಕಲಹ ಬಿಜೆಪಿ ನಾಯಕರಿಗೆ ಬೊಂಬಾಟ್ ಭೋಜನವಾಗಿದೆ. ಹಸ್ತಮನೆಯ ಹೈಕಮಾಂಡ್ ಸೈಲೆಂಟ್ ಆಗಿರೋದನ್ನೇ ಹಿಡಿದು ಬಿಜೆಪಿ ನಾಯಕರು ತಿವಿಯುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಗದ್ದುಗೆ ಗುದ್ದಾಟ ಬಿಡಿಸಲು ರಾಹುಲ್ ಗಾಂಧಿಗೆ ಪುರುಸೊತ್ತೇ ಇಲ್ಲ. ವಿದೇಶದಲ್ಲಿ ದೇಶ ವಿರೋಧಿ ಕೆಲಸ ಮಾಡೋದ್ರಲ್ಲೇ ಬ್ಯುಸಿಯಾಗಿದ್ದಾರೆ ಅಂತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲಿ ಹೈ ಇದೆ, ಕಮಾಂಡ್ ಇಲ್ಲವೇ ಇಲ್ಲ ಅಂತ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ.
ಮುಖ್ಯಮಂತ್ರಿ ಗಾದಿಗಾಗಿ ಕಾಂಗ್ರೆಸ್‌ನಲ್ಲಿ ನಡೀತಿರೋ ಅಂತಃಕಲಹ ವರ್ಷಾಂತ್ಯದಲ್ಲಿ ಮತ್ತಷ್ಟು ಹೆಚ್ಚಾಗಿದೆ. ಸಂಕ್ರಾಂತಿಗೆ ಸಂ ‘ಕ್ರಾಂತಿ’ ಆಗಬಹುದಾ ಎಂಬ ಕೌತುಕ ಕಾಡಿದೆ. ಇದೆಲ್ಲದರ ಮಧ್ಯೆ ಹೈಕಮಾಂಡ್ ನಾಯಕರು ಮೌನ ಮುರಿಯುತ್ತಾರಾ? ಡಿಕೆಶಿ-ಸಿಎಂ ಜೊತೆ ಮಾತನಾಡುತ್ತಾರಾ? ಸಿಎಂ ಕದನಕ್ಕೆ ತೆರೆ ಎಳೆಯುತ್ತಾರಾ ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆ.
ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯುರೋ, ನ್ಯೂಸ್‌ಫಸ್ಟ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us