/newsfirstlive-kannada/media/media_files/2025/11/22/cm-siddaramaiah-and-rahul-gandhi02-2025-11-22-18-23-26.jpg)
ಭಾನುವಾರ ದೆಹಲಿಯಲ್ಲಿ ಹೈ ವೋಲ್ಟೇಜ್ ಸಭೆ
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಿಎಂ ಸ್ಥಾನದ ಬಗೆಗಿನ ಬಿಕ್ಕಟ್ಟಿನ ಬಗ್ಗೆ ಇದೇ ವಾರದ ಅಂತ್ಯದೊಳಗೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಭಾನುವಾರ ದೆಹಲಿಯಲ್ಲಿ ಸೋನಿಯಾಗಾಂಧಿ ನೇತೃತ್ವದಲ್ಲಿ ಹೈ ವೋಲ್ಟೇಜ್ ಸಭೆ ನಡೆಯಲಿದೆ. ಈ ಸಭೆಯಲ್ಲೇ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರನ್ನು ಮುಂದುವರಿಸಬೇಕಾ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತೆ.
ವಿದೇಶ ಪ್ರವಾಸಕ್ಕೆ ತೆರಳಿದ್ದ ಸೋನಿಯಾಗಾಂಧಿ ಇಂದು ವಿದೇಶದಿಂದ ದೆಹಲಿಗೆ ಆಗಮಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಕೂಡ ದೆಹಲಿಯಲ್ಲೇ ಇದ್ದಾರೆ. ರಾಹುಲ್ ಗಾಂಧಿ ಕೂಡ ದೆಹಲಿಯಲ್ಲಿದ್ದಾರೆ. ಇನ್ನೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿನ್ನೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ನಿನ್ನೆ ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಬಗ್ಗೆ ಖರ್ಗೆ, ರಾಹುಲ್ ಗಾಂಧಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ.
ಭಾನುವಾರವೂ ಕಾಂಗ್ರೆಸ್ ಹೈಕಮ್ಯಾಂಡ್ ನಾಯಕರಿಗೆ ಸೋಮವಾರದಿಂದ ಆರಂಭವಾಗುವ ಪಾರ್ಲಿಮೆಂಟ್‌ನ ಚಳಿಗಾಲದ ಅಧಿವೇಶನದ ಸ್ಟ್ರಾಟಜಿ ಬಗ್ಗೆ ಸಭೆ ಸೇರಿ ಚರ್ಚೆ ನಡೆಸಬೇಕಾಗಿದೆ. ಅದರ ಮಧ್ಯೆಯೇ ಕರ್ನಾಟಕದ ಸಿಎಂ ಕುರ್ಚಿ ಗುದ್ದಾಟಕ್ಕೆ ತೆರೆ ಎಳೆಯುವ ಮಹತ್ವದ ಸಭೆಯನ್ನು ನಡೆಸುವ ನಿರೀಕ್ಷೆ ಇದೆ.
ಕಾಂಗ್ರೆಸ್ ಹೈಕಮ್ಯಾಂಡ್ ನಾಯಕರು ಸಭೆ ಸೇರಿ ಚರ್ಚೆ ನಡೆಸಿ ತೀರ್ಮಾನ ಕೈಗೊಂಡು ಅದನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ತಿಳಿಸುವರು.
ಇನ್ನೂ ಕಾಂಗ್ರೆಸ್ ನ ಹೈಕಮ್ಯಾಂಡ್ ನಾಯಕರ ಜೊತೆ ಚರ್ಚೆ ನಡೆಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ರಾತ್ರಿ ಇಲ್ಲವೇ ನಾಳೆ ಬೆಳಿಗ್ಗೆ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಇನ್ನೂ ಡಿ.ಕೆ.ಶಿವಕುಮಾರ್ ಸೋದರ ಡಿ.ಕೆ.ಸುರೇಶ್ ಇಂದು ಮಧ್ಯಾಹ್ನವೇ ಬೆಂಗಳೂರಿನಿಂದ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಡಿ.ಕೆ.ಸುರೇಶ್ ಇಂದು ರಾತ್ರಿ ಮಲ್ಲಿಕಾರ್ಜುನ ಖರ್ಗೆ ಮತ್ತು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಕಾಂಗ್ರೆಸ್ ಹೈಕಮ್ಯಾಂಡ್ ಭಾನುವಾರನೇ ಕರ್ನಾಟಕದ ಸಿಎಂ ಸ್ಥಾನದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯರನ್ನು ಮುಂದುವರಿಸಬೇಕೋ ಇಲ್ಲವೇ ಡಿಕೆಶಿಗೆ ಸಿಎಂ ಸ್ಥಾನ ನೀಡಬೇಕೋ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us