/newsfirstlive-kannada/media/media_files/2025/08/22/mysore-sandal-soap-advertise022-2025-08-22-13-04-15.jpg)
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿನಲ್ಲಿ ನಟಿ ತಮನ್ನಾ ಭಾಟಿಯಾ
ಅಭಿವೃದ್ಧಿಗೆ ದುಡ್ಡಿಲ್ಲ ಅಂದರೂ ಸೋಪ್ ನ ಜಾಹಿರಾತಿಗೇನೂ ದುಡ್ಡಿನ ಕೊರತೆ ಇಲ್ಲ. ಮೈಸೂರು ಸ್ಯಾಂಡಲ್ ಸೋಪ್ ನ ಪ್ರಚಾರಕ್ಕಾಗಿ ಬರೋಬ್ಬರಿ 56 ಕೋಟಿ ರೂಪಾಯಿ ಹಣವನ್ನು ಸರ್ಕಾರ ಖರ್ಚು ಮಾಡಿದೆ. ಎರಡು ವರ್ಷಗಳಲ್ಲಿ ಜಾಹೀರಾತುಗೆ 48.88 ಕೋಟಿ ರೂಪಾಯಿ ಹಣವನ್ನು ರಾಜ್ಯ ಸರ್ಕಾರ ಖರ್ಚು ಮಾಡಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ ಖರ್ಚು ಮಾಡಲಾಗಿದೆ. ಇನ್ನೂ ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರದ ರಾಯಭಾರಿಗಳಿಗೆ 6.35 ಕೋಟಿ ರೂಪಾಯಿ ಹಣವನ್ನು ನೀಡಲಾಗಿದೆ. ಬಹುಭಾಷಾ ನಟಿ ತಮನ್ನಾ ಭಾಟಿಯಾಗೆ 6.27 ಕೋಟಿ ರೂಪಾಯಿ ಹಣವನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ ನೀಡಲಾಗಿದೆ. ಇನ್ನೂ ನಟಿ ಐಶಾನಿ ಶೆಟ್ಟಿಗೆ 15 ಲಕ್ಷ ರೂಪಾಯಿ ನೀಡಲಾಗಿದೆ. ಕರ್ನಾಟಕ ಮೂಲದ ವ್ಯಕ್ತಿ ಗಳ ರೀಲ್ಸ್ ಜಾಹಿರಾತುಗೆ 62.87 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಒಟ್ಟು 56 ಕೋಟಿಗೂ ಹೆಚ್ಚು ಹಣವನ್ನು ಜಾಹಿರಾತುಗೆ ಖರ್ಚು ಮಾಡಲಾಗಿದೆ. ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಶ್ನೆಗೆ ರಾಜ್ಯ ಸರ್ಕಾರ ನೀಡಿರುವ ಉತ್ತರದಲ್ಲಿ ಖರ್ಚಿನ ಬಗ್ಗೆ ಉಲ್ಲೇಖ ಮಾಡಲಾಗಿದೆ.
ವಿಧಾನಸಭೆಯ ಅಧಿವೇಶನದಲ್ಲಿ ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಕರ್ನಾಟಕ ಸೋಪ್ ಮತ್ತು ಡಿಟರ್ಜೆಂಟ್ ಲಿಮಿಟೆಡ್ ನಿಂದ ಪ್ರಚಾರಕ್ಕಾಗಿ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ರಾಜ್ಯ ಸರ್ಕಾರ ಲಿಖಿತ ಉತ್ತರವನ್ನು ವಿಧಾನಸಭೆಯಲ್ಲಿ ನೀಡಿದೆ. ಮೂರು ನಾಲ್ಕು ತಿಂಗಳುಗಳ ಹಿಂದೆ ನಟಿ ತಮನ್ನಾ ಭಾಟಿಯಾರನ್ನು ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಮಾಡೆಲ್ ಆಗಿ ನೇಮಿಸಿಕೊಂಡಿದ್ದಕ್ಕೆ ಟೀಕೆ ವ್ಯಕ್ತವಾಗಿತ್ತು. ಆದರೇ, ಮೈಸೂರು ಸ್ಯಾಂಡಲ್ ಸೋಪ್ ಅನ್ನು ರಾಷ್ಟ್ರ ಮಟ್ಟದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಬಹುಭಾಷಾ ನಟಿಯನ್ನು ಸೋಪ್ ಜಾಹೀರಾತು ಮಾಡೆಲ್ ಆಗಿ ನೇಮಿಸಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಸಮರ್ಥನೆ ಮಾಡಿಕೊಂಡಿತ್ತು. ಈಗ ಒಟ್ಟಾರೆಯಾಗಿ ಸೋಪ್ ಜಾಹೀರಾತಿಗಾಗಿ ಬರೋಬ್ಬರಿ 56 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ರಾಜ್ಯ ಸರ್ಕಾರವೇ ಅಧಿಕೃತವಾಗಿ ಒಪ್ಪಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.