/newsfirstlive-kannada/media/media_files/2025/09/04/tumakuru-dcc-bank-chairmen-election02-2025-09-04-13-30-46.jpg)
ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆಎನ್‌ಆರ್ ಪುನಾರಾಯ್ಕೆ
ರಾಜ್ಯದ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸಹಕಾರ ಖಾತೆ ಸಚಿವರಾಗಿದ್ದ ಕೆ.ಎನ್.ರಾಜಣ್ಣ, ವೋಟ್ ಚೋರಿ ವಿಷಯದಲ್ಲಿ ಕೊಟ್ಟ ಹೇಳಿಕೆಯ ಕಾರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೇ, ಕೆ.ಎನ್.ರಾಜಣ್ಣ ರಾಜ್ಯದ ಸಹಕಾರಿ ಕ್ಷೇತ್ರದ ಧುರೀಣ. ತವರು ಜಿಲ್ಲೆ ತುಮಕೂರಿನಲ್ಲಿ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದ ಬಿಗಿ ಹಿಡಿತವನ್ನು ಹೊಂದಿದ್ದಾರೆ. ತುಮಕೂರು ಡಿಸಿಸಿ ಬ್ಯಾಂಕ್ ನಲ್ಲಿ ಕಳೆದ 5 ಅವಧಿಗೆ ಅಧ್ಯಕ್ಷರಾಗಿ ಕೆ.ಎನ್.ರಾಜಣ್ಣ ಆಯ್ಕೆಯಾಗಿದ್ದರು. ಸಚಿವ ಸ್ಥಾನ ಕಳೆದುಕೊಂಡ ಬಳಿಕವೂ ಸತತ 6ನೇ ಭಾರಿಗೆ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕೆ.ಎನ್.ರಾಜಣ್ಣ ಹೊಸ ದಾಖಲೆ ನಿರ್ಮಿಸಿದ್ದಾರೆ.
ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್.ರಾಜಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಎಲ್ಲ 10 ತಾಲ್ಲೂಕುಗಳಲ್ಲೂ ಕೆ.ಎನ್.ರಾಜಣ್ಣ ಬೆಂಬಲಿಗರ ಪಡೆಯೇ ಇದೆ. 14 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿತ್ತು. 8 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ತಿಪಟೂರು ತಾಲ್ಲೂಕಿನಿಂದ ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಹಾಗೂ ಪಾವಗಡ ತಾಲ್ಲೂಕಿನಿಂದ ಕಾಂಗ್ರೆಸ್ ಶಾಸಕ ವೆಂಕಟೇಶ್ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಇನ್ನೂಳಿದ ಬೇರೆ ಬೇರೆ ತಾಲ್ಲೂಕುಗಳಿಂದಲೂ ಕೆ.ಎನ್.ರಾಜಣ್ಣ ಬೆಂಬಲಿಗರೇ ಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಇದರಿಂದಾಗಿ ಕೆ.ಎನ್.ರಾಜಣ್ಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗುವುದು ಖಚಿತವಾಗಿತ್ತು. ಅದರಂತೆ ಇಂದು ಕೆ.ಎನ್.ರಾಜಣ್ಣ ಅವಿರೋಧವಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೆ.ಎನ್.ರಾಜಣ್ಣ ಹಾಗೂ ಬೆಂಬಲಿಗ ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳು.
ಗುಬ್ಬಿ, ಕುಣಿಗಲ್ ಶಾಸಕರ ಬೆಂಬಲಿಗರಿಗೆ ಸೋಲು, ಕೆಎನ್‌ಆರ್ ಬೆಂಬಲಿಗರಿಗೆ ಗೆಲುವು
ಕುಣಿಗಲ್ ತಾಲ್ಲೂಕಿನಿಂದ ಕಾಂಗ್ರೆಸ್ ಶಾಸಕ ಎಚ್.ಡಿ. ರಂಗನಾಥ್ ತಮ್ಮ ಬೆಂಬಲಿಗ ಮಧುಸೂದನ್ ಅವರನ್ನು ನಿರ್ದೇಶಕ ಸ್ಥಾನದ ಚುನಾವಣಾ ಅಖಾಡಕ್ಕೆ ಇಳಿಸಿದ್ದರು. ಆದರೇ, ಶಾಸಕರ ಬೆಂಬಲಿಗ ಮಧುಸೂದನ್ , ಹಿರಿಯ ಸಹಕಾರಿ ಧುರೀಣ ಬಿ.ಶಿವಣ್ಣ ಎದುರು ಸೋಲು ಅನುಭವಿಸಿದ್ದಾರೆ. ಬಿ.ಶಿವಣ್ಣ ಸತತ 9ನೇ ಭಾರಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಬಿ.ಶಿವಣ್ಣ ಅವರು ಮಾಜಿ ಸಚಿವ ಡಿ.ನಾಗರಾಜಯ್ಯ ಅವರ ಸೋದರ.
ಇನ್ನೂ ಗುಬ್ಬಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್ ತಮ್ಮ ಬೆಂಬಲಿಗ ಮಧುಸೂದನ್ ಅವರನ್ನು ಕಣಕ್ಕೆ ಇಳಿಸಿದ್ದರು. ಆದರೇ, ಎಚ್.ಸಿ.ಪ್ರಭಾಕರ್ ಮತ್ತೊಮ್ಮೆ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಗುಬ್ಬಿ ಹಾಗೂ ಕುಣಿಗಲ್ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕರುಗಳಿಗೆ ತಮ್ಮ ಬೆಂಬಲಿಗರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಿಂದೆ ಎಸ್.ಆರ್.ಶ್ರೀನಿವಾಸ್ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಬಳಿಕ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರೂ ಆಗಿದ್ದರು. ಆದರೇ, ಈಗ ಕೆ.ಎನ್.ರಾಜಣ್ಣ ಹಾಗೂ ಎಸ್.ಆರ್.ಶ್ರೀನಿವಾಸ್ ನಡುವಿನ ಸಂಬಂಧ ಹಳಸಿದೆ. ಹೀಗಾಗಿ ರಾಜಣ್ಣ ಬೆಂಬಲಿಗರಾಗಿರುವ ಎಚ್.ಸಿ.ಪ್ರಭಾಕರ್ ವಿರುದ್ಧ ಎಸ್.ಆರ್.ಶ್ರೀನಿವಾಸ್, ತಮ್ಮ ಬೆಂಬಲಿಗ ಮಧುಸೂದನ್ ರನ್ನು ಚುನಾವಣಾ ಅಖಾಡಕ್ಕೆ ಇಳಿಸಿದ್ದರು.
ಇನ್ನೂ ಶಿರಾ ಕ್ಷೇತ್ರದಿಂದ ಕೆಎನ್‌ಆರ್ ಬೆಂಬಲಿಗ ಜಿ.ಎಸ್. ರವಿ ಈ ಭಾರಿಯೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಪುನಾರಾಯ್ಕೆ ಆಗಿದ್ದಾರೆ. ಜಿ.ಎಸ್. ರವಿ ಶಿರಾ ಕ್ಷೇತ್ರದ ಕಾಂಗ್ರೆಸ್ ನಾಯಕರಾಗಿದ್ದಾರೆ. ಜೆಡಿಎಸ್ ಪಕ್ಷದ ಎಸ್.ಆರ್. ಗೌಡ ಅವರನ್ನು ಸೋಲಿಸಿ ಜಿ.ಎಸ್.ರವಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ತುರುವೇಕೆರೆ ಕ್ಷೇತ್ರದಿಂದ ಸಿದ್ದಲಿಂಗಪ್ಪ ಪುನಾರಾಯ್ಕೆ ಆಗಿದ್ದಾರೆ
ಇನ್ನೂ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸಿಂಗದಹಳ್ಳಿ ರಾಜಕುಮಾರ್ ಅವರು ಜೆ.ಸಿ.ಮಾಧುಸ್ವಾಮಿ ಬೆಂಬಲಿಗ ವೈ.ಎಸ್.ನಂಜೇಗೌಡ ಅವರನ್ನು ಸೋಲಿಸಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಡಿಸಿಸಿ ಬ್ಯಾಂಕ್‌ನ ಸಿ ವರ್ಗದಿಂದ ಲಕ್ಷ್ಮಿನಾರಾಯಣ್ ಅವರು ನಿರ್ದೇಶಕರಾಗಿ ಪುನರಾಯ್ಕೆ ಆಗಿದ್ದಾರೆ. ಬಿ ವರ್ಗದಿಂದ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಇನ್ನೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ 6ನೇ ಭಾರಿಗೆ ಆಯ್ಕೆಯಾಗಿರುವ ಕೆ.ಎನ್.ರಾಜಣ್ಣ ಟ್ವೀಟರ್ ನಲ್ಲಿ ಟ್ವೀಟ್ ಮಾಡಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ನನ್ನನ್ನು ಆರನೇ ಬಾರಿಗೆ ಅವಿರೋಧವಾಗಿ ತುಮಕೂರು ಡಿ.ಸಿ.ಸಿ ಬ್ಯಾಂಕ್‌ನ ಅಧ್ಯಕ್ಷ ನನ್ನಾಗಿ ಹಾಗೂ ಉಪಾಧ್ಯಕ್ಷರಾಗಿ ಜಿ.ಜೆ.ರಾಜಣ್ಣ ರವರನ್ನು ಆರಿಸಿದ್ದಕ್ಕಾಗಿ ಧನ್ಯವಾದಗಳು. ಈ ಗೆಲುವಿಗೆ ಕಾರಣರಾದ ಬ್ಯಾಂಕಿನ ನಿರ್ದೇಶಕರಿಗೂ ಹಾಗೂ ಎಲ್ಲಾ ಸಹಕಾರಿಗಳಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಗೆಲುವಿನ ಸ್ಪೂರ್ತಿ ನಮ್ಮೆಲ್ಲರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಬಳಕೆಯಾಗಲಿ ಎಂದು ನಾನು ಈ ಮೂಲಕ ಆಶಿಸುವೆ.ಎಲ್ಲಾ ಸಮುದಾಯಗಳ ಯುವಜನರು ಸಹಕಾರ ಕ್ಷೇತ್ರಕ್ಕೆ ಬಂದು, ಇನ್ನಷ್ಟು ಹೊಸ ಚಿಂತನೆಗಳು ಬರುವ ಹಾಗೆ ದುಡಿಯುವ ಸಂಕಲ್ಪವನ್ನು ನಾವೆಲ್ಲ ಮಾಡಬೇಕಿದೆ.ಆಗ ಮಾತ್ರವೇ ಈ ಸಹಕಾರ ಕ್ಷೇತ್ರ ಉಳಿಯಲು ಸಾಧ್ಯ. ಇನ್ನಷ್ಟು ಹೊಸ ಕನಸುಗಳೊಂದಿಗೆ ಮುಂದುವರೆಯೋಣ. ನಮ್ಮ ಬದ್ದತೆಯ ಕೆಲಸ ಕಾರ್ಯಗಳು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿರಲಿ. ನನ್ನನ್ನು ಮತ್ತೆ ಮತ್ತೆ ಮೇಲೇತ್ತುತಿರುವ ಸಹಕಾರ ಕ್ಷೇತ್ರವನ್ನು ನಾನು ಎಂದಿಗೂ ಮರೆಯುವುದಿಲ್ಲ. ಎಲ್ಲರಿಗೂ ಮತ್ತೊಮ್ಮೆ ಮಗದೊಮ್ಮೆ ತುಂಬು ಹೃದಯದ ಧನ್ಯವಾದಗಳು ಎಂದು ಕೆ.ಎನ್.ರಾಜಣ್ಣ ಟ್ವೀಟ್ ಮೂಲಕ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.