/newsfirstlive-kannada/media/post_attachments/wp-content/uploads/2024/08/congress.jpg)
ದೆಹಲಿಯಲ್ಲಿ ಬಿರುಸುಗೊಂಡ ಕ್ಯಾಬಿನೆಟ್ ಪುನರ್ ರಚನೆ ಕಸರತ್ತು
ಕರ್ನಾಟಕದ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಈಗ ಸಚಿವ ಸಂಪುಟ ಪುನರ್ ರಚನೆಯ ಕಸರತ್ತು ಆರಂಭವಾಗಿದೆ. ಒಂದೆಡೆ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ಪಡೆಯುವ ಬಯಕೆ. ಮತ್ತೊಂದೆಡೆ ಹಾಲಿ ಸಚಿವರಿಗೆ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕ್ಯಾಬಿನೆಟ್ ನಲ್ಲಿರುವ 30 ಮಂದಿ ಸಚಿವರ ಪೈಕಿ 8 ರಿಂದ 12 ಮಂದಿಯನ್ನು ಕೈ ಬಿಟ್ಟು ಅವರ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗುತ್ತೆ. ಹೀಗಾಗಿ ಹಾಲಿ ಸಚಿವರುಗಳು ಸಚಿವ ಸ್ಥಾನ ಉಳಿಸಿಕೊಳ್ಳಲು ದೆಹಲಿಯಲ್ಲಿ ಹೈಕಮ್ಯಾಂಡ್ ನಾಯಕರನ್ನು ಭೇಟಿಯಾಗಿ ತಮ್ಮ ಪರವಾಗಿ ಒತ್ತಡ ಹೇರುತ್ತಿದ್ದಾರೆ. ತಮ್ಮನ್ನು ಸಚಿವ ಸ್ಥಾನದಲ್ಲೇ ಮುಂದುವರಿಸಿ , ಯಾವುದೇ ಕಾರಣಕ್ಕೂ ಕೈ ಬಿಡಬೇಡಿ ಎಂದು ಗೋಗೆರೆಯುತ್ತಿದ್ದಾರೆ.
ಮತ್ತೊಂದೆದೆ ಐದಾರು ಭಾರಿ ಶಾಸಕರಾಗಿ ಆಯ್ಕೆಯಾದರೂ ಸಚಿವ ಸ್ಥಾನ ಸಿಗದ ಅನೇಕರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅಂಥ ಶಾಸಕರೆಲ್ಲಾ ಈಗ ನಮಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಬಿಗಿ ಪಟ್ಟು ಹಿಡಿದು ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಮನೆಗಳಿಗೆ ಎಡತಾಕುತ್ತಿದ್ದಾರೆ.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸವೇ ಈಗ ಕಾಂಗ್ರೆಸ್ ನ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದು ಸ್ಥಳವಾಗಿದೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಕೃಷಿ ಸಚಿವ ಚೆಲುವರಾಯಸ್ವಾಮಿ, ಅಬಕಾರಿ ಖಾತೆ ಸಚಿವ ಆರ್.ಬಿ.ತಿಮ್ಮಾಪುರ ಸೇರಿದಂತೆ ಅನೇಕರು ಸಚಿವ ಸ್ಥಾನ ಉಳಿಸಿಕೊಳ್ಳಲು ಲಾಬಿ ಮಾಡುತ್ತಿದ್ದಾರೆ. ತಮ್ಮ ಇಲಾಖೆಯಲ್ಲಿ ತಾವು ಮಾಡಿರುವ ಕೆಲಸ ಕಾರ್ಯಗಳನ್ನು ಹೈಕಮ್ಯಾಂಡ್ ಮುಂದಿಟ್ಟು ಇನ್ನೂ ಬಾಕಿ ಉಳಿದ ಎರಡೂವರೆ ವರ್ಷ ಸಚಿವ ಸ್ಥಾನದಲ್ಲೇ ಮುಂದುವರಿಸುವಂತೆ ಒತ್ತಡ ಹೇರುತ್ತಿದ್ದಾರೆ.
ಇನ್ನೂ ಕಾಂಗ್ರೆಸ್ ಶಾಸಕರುಗಳು ಈ ಭಾರಿಯಾದರೂ ಶತಾಯಗತಾಯ ಸಚಿವ ಸ್ಥಾನ ಪಡೆಯಲೇಬೇಕೆಂದು ದೆಹಲಿಯಲ್ಲಿ ಬೀಡುಬಿಟ್ಟು ಹೈಕಮ್ಯಾಂಡ್ ನಾಯಕರ ಮೇಲೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಶಿರಾ ಶಾಸಕ ಟಿ.ಬಿ.ಜಯಚಂದ್ರಗೆ ಕಳೆದ ಭಾರಿ ಸಚಿವ ಸ್ಥಾನ ಮಿಸ್ ಆಗಿತ್ತು. ದೆಹಲಿ ವಿಶೇಷ ಪ್ರತಿನಿಧಿ ಜವಾಬ್ದಾರಿಯನ್ನು ನೀಡಲಾಗಿದೆ. ಈಗ ಕ್ಯಾಬಿನೆಟ್ ಸೇರ್ಪಡೆಗೆ ಪ್ರಯತ್ನ ನಡೆಸಿದ್ದಾರೆ. ಮುದ್ದೇಬೀಹಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ.ಎಸ್. ಅಪ್ಪಾಜಿ ನಾಡಗೌಡ, ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಮಾಜಿ ಸಚಿವ ಶಾಸಕ ಲಕ್ಷ್ಮಣ ಸವದಿ, ತರೀಕೆರೆ ಶಾಸಕ ಜಿ ಎಚ್ ಶ್ರೀನಿವಾಸ್, ಪರಿಷತ್ ಸದಸ್ಯ ಡಿ ಟಿ ಶ್ರೀನಿವಾಸ್ , ಮಂಜುನಾಥ್ ಭಂಡಾರಿ, ಸುಧಾಮ್ ದಾಸ್, ಪುಟ್ಟಣ್ಣ, ಅಜಯ್ ಧರ್ಮಸಿಂಗ್ ದೆಹಲಿಗೆ ಆಗಮಿಸಿದ್ದು, ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಪರಿಷತ್ ಸದಸ್ಯ ಸಲೀಂ ಅಹಮದ್ ಕೂಡ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದಾರೆ. ಹಂಪನಗೌಡ ಬಾರ್ದಲಿ, ಬಸವನಗೌಡ ದದ್ದಲ್, ಎಮ್ ಎಲ್ ಸಿ ವಸಂತ ಕುಮಾರ್, ಬಸವನಗೌಡ ಬಾರ್ದಲಿ ಸೇರಿದಂತೆ 30 ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ.
ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ, ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ರಿಜ್ವಾಲ್ ಅರ್ಷದ್, ಚಳ್ಳಕೆರೆ ಶಾಸಕ ರಘುಮೂರ್ತಿ , ತಿಪಟೂರು ಕ್ಷೇತ್ರದ ಷಡಕ್ಷರಿ, ಬಸವರಾಜ ರಾಯರೆಡ್ಡಿ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2025/06/CONGRESS.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us