ಮನರೇಗಾ ವರ್ಸಸ್ ವಿಬಿ ಜಿ ರಾಮ್‌ : ರಾಜ್ಯ ‘ಕೈ’-‘ಕಮಲ’ ನಡುವೆ ಜಾಹೀರಾತು ವಾರ್​!

ಮನರೇಗಾ ಮತ್ತು ವಿಬಿ ಜಿ ರಾಮ್ ಯೋಜನೆ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಗುದ್ದಾಟ ನಡೆಯುತ್ತಿದೆ. ಇತ್ತ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜಾಹೀರಾತು ಸಮರ ನಡೆಸುತ್ತಿವೆ. ಇಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಿಬಿ ಜಿ ರಾಮ್ ಯೋಜನೆ ಸಮರ್ಥಿಸಿ ಜಾಹೀರಾತು ನೀಡಿದೆ.

author-image
Chandramohan
VB RAM G AD WAR IN KARNATAKA
Advertisment

ರಾಜ್ಯ ರಾಜಕೀಯದಲ್ಲಿ ಮನ್ರೇಗಾ ವಾರ್ ತಾರಕಕ್ಕೇರಿದೆ. ಬಡ ಜನರಿಗೆ ಆಸರೆಯಾಗ್ತಿರೋ ಯೋಜನೆಯ ಹೆಸರು ಬದಲಾವಣೆ ಮಾಡಿರೋದು ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ರಾಜಕೀಯ ನಾಯಕರ ಕಿತ್ತಾಟದಲ್ಲಿ ಗಾಂಧೀಜಿಯನ್ನೂ ಬೀದಿಗೆ ತಂದಿದ್ದಾರೆ. ಏಟು-ಎದುರೇಟಿಗೆ ಮಹಾತ್ಮನನ್ನ ಬಳಸಿಕೊಂಡು ಗುದ್ದಾಡುತ್ತಿದ್ದಾರೆ. ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದ್ದಾರೆ. 
ರಾಜ್ಯ ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯೆ ಜಾಹೀರಾತು ಸಮರ ಶುರುವಾಗಿದೆ. ಮನ್ರೇಗಾ ವರ್ಸಸ್ ವಿಬಿ ಜಿ ರಾಮ್‌ ಜಿ ಹೆಸರು ವಿಚಾರಕ್ಕೆ ಮಾತಿನ ಮಲ್ಲಯುದ್ಧ ಮತ್ತಷ್ಟು ಹೆಚ್ಚಾಗಿದೆ. ಮನ್ರೇಗಾ ಕದನಕ್ಕೆ ಗಾಂಧೀಜಿಯನ್ನೂ ಎಳೆದು ತಂದಿದ್ದಾರೆ. ಜಾಹೀರಾತಿಗೆ ಮಹಾತ್ಮನ ಚಿತ್ರ ಬಳಸಿ ಕೈ-ಕಮಲ ಕೆಸರೆರಚಾಟದಲ್ಲಿ ನಿರತವಾಗಿದೆ.


 ರಾಜ್ಯ ‘ಕೈ’-‘ಕಮಲ’ ನಡುವೆ ಜಾಹೀರಾತು ವಾರ್​!
ವಿಬಿ-ಜಿ ರಾಮ್ ಜಿ VS ಮನ್ರೇಗಾ ಮಹಾಯುದ್ಧ!
ಕೇಂದ್ರದ ಎನ್‌ಡಿಎ ಸರ್ಕಾರ ಮನ್ರೇಗಾ ಯೋಜನೆಯ ಹೆಸರನ್ನ ಬದಲಿಸಿದೆ. ಇದು ಕಾಂಗ್ರೆಸ್ ನಾಯಕರ ಹೋರಾಟಕ್ಕೆ ದಾರಿ ಮಾಡಿಕೊಟ್ಟಿದೆ. ಇದನ್ನ ಟೀಕಿಸಲು ಕಾಂಗ್ರೆಸ್ ಜಾಹೀರಾತು ಮೊರೆ ಹೋಗಿದೆ. ವಿಬಿ-ಜಿ ರಾಮ್ ಜಿ ಯೋಜನೆ ವಿರುದ್ಧ ಗಾಂಧಿ ಫೋಟೋ ಹಾಕಿ ಬಿಜೆಪಿಗೆ ಪ್ರಶ್ನೆ ಕೇಳುವ ರೀತಿಯಲ್ಲಿ ಕಾಂಗ್ರೆಸ್‌ ಜಾಹೀರಾತು ನೀಡಿದೆ. 
ಗಾಂಧಿ ‘ಕೈ’ಗೆ ಕೋಲು ಕೊಟ್ಟು ಬಿಜೆಪಿಯಿಂದ ಏಟು!
ಕಾಂಗ್ರೆಸ್ ಕೊಟ್ಟಿರೋ ಜಾಹೀರಾತಿಗೆ ಬಿಜೆಪಿ ಅದೇ ಸ್ಟೈಲ್‌ನಲ್ಲೇ ಡಿಚ್ಚಿ ಹೊಡೆದಿದೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ, ಮಲ್ಲಿಕಾರ್ಜು ಖರ್ಗೆಗೆ, ಗಾಂಧೀಜಿ ಕೋಲಿನಿಂದ ಹೊಡೆಯುವ ಫೋಟೋ ಜಾಹೀರಾತು ನೀಡಿ ಕೌಂಟರ್ ಅಟ್ಯಾಕ್ ಮಾಡಿದೆ. ಸಿದ್ದಪ್ಪ, ರಾಗಪ್ಪ, ಮಲ್ಲಪ್ಪ ಅಂತ ಹೆಸರು ಹಾಕಿ BJP ವ್ಯಂಗ್ಯವಾಡಿದೆ. 
ಕಾಂಗ್ರೆಸ್ಸಿಗರು ನುಂಗಣ್ಣರು ಎಂದ ಬಿಜೆಪಿ.. ‘ಕೈ’ ಕಿಡಿ!
ಗಾಂಧಿ ಹೆಸರಲ್ಲಿ ಕಾಂಗ್ರೆಸ್ಸಿಗರು ನುಂಗಣ್ಣರು ಅಂತ ಬಿಜೆಪಿ ಜಾಹೀರಾತು ಮೂಲಕ ಗೇಲಿ ಮಾಡಿದೆ. ಕಮಲ ಪಾಳಯದ ಈ ವ್ಯಂಗ್ಯ ಕಾಂಗ್ರೆಸ್ ನಾಯಕರ ಕೋಪಾಗ್ನಿಗೆ ಗುರಿಯಾಗಿದೆ. ಗಾಂಧಿ ಬಗ್ಗೆ ಬಿಜೆಪಿಗೆ ಯಾವ ಗೌರವ ಭಾವನೆ ಇದೆ ಎಂಬುದು ಜಗತ್ತಿಗೆ ಗೊತ್ತಿದೆ ಅಂತ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗುಡುಗಿದ್ದಾರೆ. ಇತ್ತ ಬಿಜೆಪಿಯವರು ಗಾಂಧಿಯನ್ನೇ ಮುಗಿಸಿದ್ದರು, ಈಗ ಗಾಂಧಿ ತತ್ವವನ್ನೂ ಮುಗಿಸಲು ಹೊರಟಿದ್ದಾರೆ ಅಂತ ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ. 


ಬಿಜೆಪಿ ವಿಬಿಜಿ ರಾಮ್‌ಜಿ ಜಾಹೀರಾತು.. ‘ಕೈ’ ದೂರು!
ವಿಬಿಜಿ ರಾಮ್‌ಜಿ ಜಾಹೀರಾತು ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮಹಾತ್ಮ ಗಾಂಧಿಜೀ ಭಾವಚಿತ್ರವನ್ನು ಜಾಹೀರಾತಿಗೆ ಹಾಕಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಅಂತ ರಾಜ್ಯ ಪೋಲಿಸ್ ಮಹಾನಿರ್ದೇಶಕರಿಗೆ ಕಾಂಗ್ರೆಸ್ ದೂರು ನೀಡಿದೆ. ರಾಜ್ಯ ಬಿಜೆಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. 
ಕೈ-ಕಮಲ ಕಿತ್ತಾಟದಲ್ಲಿ ಗಾಂಧೀಜಿಯನ್ನ ಮಧ್ಯೆ ಎಳೆದು ತಂದಿದ್ದಾರೆ.. ಇವರ ಬೇಳೆ ಬೇಯಿಸಿಕೊಳ್ಳಲು ಎರಡೂ ಪಕ್ಷಗಳು ಮಹಾತ್ಮನ ದುರ್ಬಳಕೆ ಮಾಡ್ತಿದ್ದಾರೆ. ಈ ಮನ್ರೇಗಾ ಕದನ ಮತ್ಯಾವ ಹಂತಕ್ಕೆ ತಲುಪುತ್ತೋ? ನೋಡ್ಬೇಕು.


ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯುರೋ, ನ್ಯೂಸ್‌ಫಸ್ಟ್‌..


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MNREGA NAME CHANGES AS VB RAM G SCHEME CONGRESS -BJP FIGHT OVER VB G RAM G BILL VB RAM G BILL
Advertisment