/newsfirstlive-kannada/media/media_files/2025/09/10/touchables-protest02-2025-09-10-17-37-09.jpg)
ಫ್ರೀಡಂ ಪಾರ್ಕ್ ನಲ್ಲಿ ಸ್ಪೃಶ್ಯ ಜಾತಿಗಳಿಂದ ಪ್ರತಿಭಟನೆ
ಸಿಎಂ ಸಿದ್ದರಾಮಯ್ಯ ಸರ್ಕಾರ ದಲಿತ ಸಮುದಾಯದ ಎಲ್ಲ 101 ಜಾತಿಗಳಿಗೂ ಶೇ.17 ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಿ ಕ್ಯಾಬಿನೆಟ್ ನಲ್ಲಿ ತೀರ್ಮಾನ ಕೈಗೊಂಡಿತ್ತು. ಆದಾದ ಬಳಿಕ ಶೇ.17 ರ ಮೀಸಲಾತಿಯನ್ನು ಮೂರು ವರ್ಗಗಳಿಗೆ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಸ್ಪೃಶ್ಯ ಜಾತಿಗಳಾದ ಬಂಜಾರ, ಬೋವಿ, ಕೊರಮ, ಕೊರಚ ಜಾತಿಗಳನ್ನು ಸಿ ವರ್ಗಕ್ಕೆ ಸೇರ್ಪಡೆ ಮಾಡಿ ಶೇ.5 ರಷ್ಟು ಮೀಸಲಾತಿ ನೀಡಲಾಗಿದೆ. ಆದರೇ, ಹೀಗೆ ಮೀಸಲಾತಿ ಹಂಚಿಕೆ ಮಾಡಿದ್ದರಿಂದ ಸ್ಪೃಶ್ಯ ಜಾತಿಗಳಿಗೆ ಅನ್ಯಾಯ ಆಗಿದೆ ಎಂದು ಇಂದು ಸ್ಪೃಶ್ಯ ಜಾತಿಗಳಾದ ಬಂಜಾರ, ಭೋವಿ, ಕೊರಮ, ಕೊರಚ ಜಾತಿಗಳ ಜನರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಲಂಬಾಣಿ, ಭೋವಿ, ಕೊರಮ, ಕೊರಚ ಈ ನಾಲ್ಕು ಜಾತಿಗಳಿಗೆ ಶೇ.4 ಮೀಸಲು ಪ್ರಮಾಣವನ್ನು ನ್ಯಾ. ನಾಗಮೋಹನದಾಸ್ ಆಯೋಗ ಶಿಫಾರಸ್ಸು ಮಾಡಿತ್ತು. ಪರಿಶಿಷ್ಟರಲ್ಲಿ 28,34,939 ಜನಸಂಖ್ಯೆ ಅಂದ್ರೇ ಶೇ.26.97 ಇದೆ ಎಂದು ಗುರುತಿಸಲಾದ ಈ ಪ್ರವರ್ಗಕ್ಕೆ 59 ಸಣ್ಣ ಜಾತಿಗಳನ್ನು ಸೇರ್ಪಡೆ ಮಾಡುವ ತೀರ್ಮಾನವನ್ನು ಸಂಪುಟ ಕೈಗೊಂಡಿದೆ. ಈ ಮೂಲಕ ಅವುಗಳಿಗೆ ನಿಗದಿಯಾಗಿದ್ದ ಶೇ.1ರಷ್ಟು ಮೀಸಲನ್ನು ಸೇರಿಸಿ ಸ್ಪೃಶ್ಯ ಜಾತಿಗಳಿಗೆ ಶೇ.5 ಮೀಸಲಾತಿ ನೀಡಲಾಗಿದೆ.
ಆದರೇ ಈ ಒಳ ಮೀಸಲಾತಿ ಹಂಚಿಕೆಗೆ ಸ್ಪೃಶ್ಯ ಜಾತಿಗಳಾದ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳು ತೀವ್ರವಾಗಿ ವಿರೋಧಿಸಿ ಪ್ರತಿಭಟನೆಯ ಹಾದಿ ಹಿಡಿದಿವೆ.
ಬಂಜಾರ ಸಮುದಾಯದವರಾದ ಕುಡುಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ ರಾಜೀವ್ ಇಂದು ಫ್ರೀಡಂ ಪಾರ್ಕ್ ನಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ಸಮಾಜಕ್ಕೆ ಆಗಿರುವ ಅನ್ಯಾಯದ ವಿರುದ್ದ ಹೋರಾಟ ಮಾಡಬೇಕು. ಸಿಎಂಗೆ ಪತ್ರವನ್ನು ಬರೆಯಲಾಗಿದೆ. ಅವೈಜ್ಞಾನಿಕ ಒಳಮೀಸಲಾತಿ ಹಂಚಿಕೆ ವಿರೋಧಿಸಿ ಬೆಂಗಳೂರು ಚಲೋ ಮಾಡಲಾಗ್ತಿದೆ. ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳು ಶತಮಾನಗಳಿಂದ ಶೋಷಣೆಗೆ ಒಳಗಾಗಿವೆ. ಹಿಂದಿನ ಸರ್ಕಾರ ಈ ನಾಲ್ಕು ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ಶಿಫಾರಸು ಮಾಡಿತ್ತು . ಆದರೆ ಕಾಂಗ್ರೆಸ್ ಸರ್ಕಾರ ಮಾಧುಸ್ವಾಮಿ ಉಪಸಮಿತಿಯ ಶಿಫಾರಸುಗಳನ್ನು ಕೈ ಬಿಟ್ಟು ನಾಗಮೋಹನದಾಸ್ ಶಿಫಾರಸು ಗಳನ್ನು ಸ್ವೀಕರಿಸಿತ್ತು . ನಂತರ ನಾಗಮೋಹನದಾಸ್ ವರದಿ ಶಿಫಾರಸುಗಳನ್ನು ಸಹಾ ಕೈ ಬಿಟ್ಟು ಸಚಿವ ಸಂಪುಟದಲ್ಲಿ ಮತ್ತೊಂದು ತೀರ್ಮಾನ ತೆಗೆದುಕೊಂಡಿತು. ಈ ತೀರ್ಮಾನಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದು ಶಾಸಕ ಪಿ.ರಾಜೀವ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದಾರೆ. ಪರಿಶಿಷ್ಟ ಜಾತಿಗಳ ಮೀಸಲಾತಿ ಅವೈಜ್ಞಾನಿಕವಾಗಿ ವರ್ಗೀಕರಣದ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರು ಚಲೋ ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ
ಪ್ರತಿಭಟನಾಕಾರರು ಬಂದಿದ್ದಾರೆ. ತಲೆ ಬೋಳಿಸಿಕೊಳ್ಳುವ ಮೂಲಕ ವಿಭಿನ್ನ ರೀತಿಯ ಪ್ರತಿಭಟನೆ ಮಾಡಿದ್ದಾರೆ. ವೇದಿಕೆ ಮುಂಭಾಗದಲ್ಲಿ ಸ್ಪೃಶ್ಯ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನಿಂದ ತಲೆ ಬೋಳಿಸಿಕೊಂಡು ಪ್ರತಿಭಟನೆ ಮಾಡಲಾಗಿದೆ. ವೇದಿಕೆ ಮುಂಭಾಗ ಹಲವರಿಂದ ಬಾಯಿ ಬಡಿದುಕೊಳ್ಳುವ ಮೂಲಕ ಪ್ರತಿಭಟನೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಬಂದು ಭರವಸೆ ಕೊಡಲು ಒತ್ತಾಯ ಮಾಡಿದ್ದಾರೆ.
ಸ್ಪೃಶ್ಯ ಸಮುದಾಯಗಳ ಬೇಡಿಕೆ ಏನು?
>ಬಂಜಾರ, ಭೋವಿ, ಕೊರಚ, ಕೊರಮ - ಈ ನಾಲ್ಕು ಸಮುದಾಯಗಳಿಗೆ ಪ್ರತ್ಯೇಕವಾಗಿ 5% ಒಳಮೀಸಲಾತಿ ಕೊಡಬೇಕು
>ನ್ಯಾ.ನಾಗಮೋಹನದಾಸ್ ಆಯೋಗದ ವರದಿಯಲ್ಲಿ ಬಳಸಲಾದ ಸ್ಪೃಶ್ಯ, ಅಸ್ಪೃಶ್ಯ ಪದಗಳನ್ನು ಕೈ ಬಿಡಬೇಕು
>ವಾಸ್ತವ ದತ್ತಾಂಶಗಳ ಆಧಾರದಲ್ಲಿ ಮೀಸಲಾತಿ ಪ್ರಾತಿನಿಧ್ಯತೆ ಬೇಕು
>ಖುದ್ದು ಸಿಎಂ ಅವರೇ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಸಬೇಕು
ಇನ್ನೂ ಶಾಸಕ ಕೃಷ್ಣ ನಾಯಕ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಸದನ ನಡೆಯುವ ಸಮಯದಲ್ಲಿ ಮೀಸಲಾತಿ ಜಾರಿ ಮಾಡ್ತೀನಿ ಅಂದಾಗ ನಾವೆಲ್ಲ ಶಾಸಕರು ಬೇಡ ಅಂತ ಹೇಳಿದ್ದೇವು. ಮೊದಲೇ ಸಿಎಂ ಸಿದ್ದರಾಮಯ್ಯಗೆ ಮನವರಿಕೆ ಆಗುವ ರೀತಿಯಲ್ಲಿ ಹೇಳಿದ್ದೇವು. ಒಳಮೀಸಲಾತಿ ಜಾರಿ ಮಾಡಬೇಕು ಅಂದಾಗ ನಾಲ್ಕು ಸಮುದಾಯಕ್ಕೆ ಆಗುವ ಪರಿಣಾಮ ಬಗ್ಗೆ ಗಮನಕೊಡಬೇಕು. 4.5% ಮೀಸಲಾತಿ ಕೊಡಲಿಲ್ಲ ಅಂದರೆ, ನಮಗೆ ಬಂದಿರುವ ಪರಿಸ್ಥಿತಿ ನಿಮಗೂ ಬರಲಿದೆ. ನಮ್ಮ ಸಮುದಾಯ ಯಾವುದರಲ್ಲಿ ಮುಂದಿಲ್ಲ . ಸಿದ್ದರಾಮಯ್ಯ ಅವರೇ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ . ಇಲ್ಲವಾದರೆ ನಮಗೆ ಅನ್ಯಾಯ ಆಗುತ್ತೆ . ಒಳಮೀಸಲಾತಿ ಜಾರಿ ಮಾಡಿ ಅಂತ ಎಲ್ಲೂ ಸುಪ್ರೀಂ ಕೋರ್ಟ್ ಹೇಳಿಲ್ಲ . ಯಾರದೋ ಒತ್ತಡಕ್ಕೆ ಮಣಿದು ತೀರ್ಮಾನ ಮಾಡಬೇಡಿ . ಮುಂದಿನ ದಿನಗಳಲ್ಲಿ ಈ ನಾಲ್ಕು ಜಾತಿಗಳ ಜೊತೆಗೆ 59 ಜಾತಿಗಳು ಸರ್ಕಾರಕ್ಕೆ ಪಾಠ ಕಲಿಸುತ್ತವೆ ಎಂದು ಬಿಜೆಪಿ ಶಾಸಕ ಕೃಷ್ಣ ನಾಯಕ್ ಹೇಳಿದ್ದರು.
ಪ್ರತಿಭಟನೆಯ ವೇಳೆ ವೀಣಾ ಎಂಬ ಮಹಿಳೆ ಮೈ ಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ರಕ್ಷಿಸಿ, ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಯಿತು.
ಇನ್ನೂ ಸ್ಪೃಶ್ಯ ಜಾತಿಗಳು ಪ್ರತಿಭಟನೆ ನಡೆಸುತ್ತಿರುವ ಫ್ರೀಡಂ ಪಾರ್ಕ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನಾಕಾರರನ್ನು ಉದ್ದೇಶಿಸಿ ಬಿ.ವೈ.ವಿಜಯೇಂದ್ರ ಮಾತನಾಡಿದ್ದರು. ರಾಜ್ಯದ ಮೂಲೆ ಮೂಲೆಗಳಿಂದ ನಾಲ್ಕು ಸಮುದಾಯ ಮುಖಂಡರು ಬಂದಿದ್ದಾರೆ . ಇಲ್ಲಿರುವ ಜನಸ್ತೋಮ ನೋಡಿದ್ರೆ, ಇವರ ಭಾವನೆ ಅರ್ಥ ಮಾಡಿಕೊಂಡು ವೇದಿಕೆಗೆ ಬರಬೇಕಾಗಿತ್ತು. ಸಿಎಂ ಸಿದ್ದರಾಮಯ್ಯ ಅವರೇ ಎಷ್ಟು ದಿನ ಆ ಖುರ್ಚಿಯಲ್ಲಿ ಕುಳಿತಿರುತ್ತೀರಾ ಎಂಬುದು ಮುಖ್ಯ ಅಲ್ಲ. ಇರುವಷ್ಟು ದಿನ ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದೀರಾ ಎಂಬುದು ಮುಖ್ಯ. ಮನೆ ಮುರಿಯೋದು ಸುಲಭ, ಆದರೆ ಮನೆ ಕಟ್ಟೋದು ತುಂಬಾ ಕಷ್ಟ. ಎಸ್. ಸಿ ಪಟ್ಟಿಯಲ್ಲಿ ಭೋವಿ, ಬಂಜಾರ ಕೊರಮ, ಕೊರಚ ಸಮುದಾಯವನ್ನು ಕೈ ಬೀಡ್ತಾರೆ ಎಂದು ಬಿಜೆಪಿ ಮೇಲೆ ಅಪಪ್ರಚಾರ ಮಾಡಿದ್ರು. ಆದರೆ ಇವತ್ತು ಸಿದ್ದರಾಮಯ್ಯ ನೀವು ಏನ್ ಮಾಡ್ತಿದ್ದೀರಾ..? ಆ ಭಗವಂತ ಕೂಡ ನಿಮ್ಮನ್ನು ಕ್ಷಮಿಸಲ್ಲ . ಅಲೆಮಾರಿ ಸಮುದಾಯ ಕಣ್ಣೀರು ಹಾಕ್ತಿದ್ದಾರೆ . ಸಿಎಂ ಖುರ್ಚಿಯಲ್ಲಿ ಕುಳಿತು ಈ ಸಮುದಾಯಕ್ಕೆ ಅನ್ಯಾಯ ಮಾಡಲು ಹೋಗ್ತಿದ್ದಾರೆ. ಈ ಸಮುದಾಯ ಯಾವುದೇ ಕ್ಷಣದಲ್ಲೂ ನಿಮ್ಮನ್ನು ಕ್ಷಮಿಸಲ್ಲ . ಇಷ್ಟೊಂದು ಜನ ಇಲ್ಲಿ ಇದ್ದಾರೆ. ಸಿಎಂ ಸಿದ್ದರಾಮಯ್ಯ ಇಲ್ಲಿ ಬರಲಿಕ್ಕೆ ಆಗುತ್ತಿಲ್ಲ ಅಂದರೆ ಸಿಎಂ ಸಿದ್ದರಾಮಯ್ಯ ಮಾನಸಿಕ ಸ್ಥಿತಿ ಹೇಗಿದೆ ನೋಡಿ. ಆ ತಾಯಿ ಪಾಪ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಲಂಬಾಣಿ ತಾಯಿ ಕೂಗು ಕೇಳದೇ ಇರುವ ಪರಿಸ್ಥಿತಿ ಈ ಸರ್ಕಾರಕ್ಕೆ ಇದೆ . ನೀವು ಒಗ್ಗಟ್ಟಿನಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಜೊತೆಗೆ ಇರುತ್ತೇವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಇನ್ನೂ ಪ್ರತಿಭಟನಾಕಾರರು ಟೈಯರ್ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ತಡೆಯಲು ಪೊಲೀಸರು ಯತ್ನಿಸಿದ್ದಾರೆ. ಇದಕ್ಕೆ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅರೆಬೆತ್ತಲೆಯಾಗಿ ವಿಧಾನಸೌಧ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಹೊರಟಿದ್ದರು. ಅಂಥ ಪ್ರತಿಭಟನಾಕಾರರನ್ನು ಅಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫ್ರೀಡಂ ಪಾರ್ಕ್ ರಸ್ತೆಯಲ್ಲೇ ಪ್ರತಿಭಟನೆಗೂ ಪ್ರತಿಭಟನಾಕಾರರು ಮುಂದಾದರು. ನಡು ರಸ್ತೆಯಲ್ಲೇ ಕುಳಿತ ಸಮುದಾಯದ ಸ್ವಾಮೀಜಿಗಳು ಹೋರಾಟ ನಡೆಸಿದ್ದರು. ಸಂಬಂಧಪಟ್ಟ ಸಚಿವರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದಿದ್ದರು. ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ಸ್ಥಳಕ್ಕೆ ಆಗಮಿಸುವಂತೆ ಆಗ್ರಹಿಸಿದ್ದರು. ಕೊನೆಗೆ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಸರ್ಕಾರದ ಪರವಾಗಿ ಫ್ರೀಡಂ ಪಾರ್ಕ್ ನ ಪ್ರತಿಭಟನಾ ಸ್ಥಳಕ್ಕೆ ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಆಗಮಿಸಿದ್ದರು. ರಾಮಲಿಂಗಾರೆಡ್ಡಿ ಅವರಿಗೆ ಸ್ಪೃಶ್ಯ ಸಮುದಾಯದ ಮಠಾಧೀಶರು ತಮ್ಮ ಮನವಿ ಪತ್ರ ನೀಡಿದ್ದರು. ಮುಂದಿನ ಒಂದು ವಾರದೊಳಗಾಗಿ ನಾಲ್ಕು ಸ್ಪೃಶ್ಯ ಜಾತಿಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ.
ಸರ್ಕಾರ ನಮ್ಮ ಪ್ರತಿಭಟನೆಗೆ ಸ್ಪಂದಿಸಿದೆ. ಸರ್ಕಾರಕ್ಕೆ ಒಂದು ವಾರದ ಗಡುವು ನೀಡೋಣ. ನಮ್ಮ ವಿರುದ್ಧವಾಗಿ ತೀರ್ಮಾನ ತೆಗೆದುಕೊಂಡರೇ, ಮತ್ತೆ ಹೋರಾಟ ಮಾಡೋಣ ಎಂದು ಕುಡುಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಸ್ಪೃಶ್ಯ ಸಮುದಾಯದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಹೇಳಿದ್ದರು.
ಸಚಿವ ರಾಮಲಿಂಗಾರೆಡ್ಡಿ ಮನವಿ ಸ್ವೀಕರಿಸಿದ ನಂತರ ಸ್ಪೃಶ್ಯ ಸಮುದಾಯಗಳು ತಮ್ಮ ಪ್ರತಿಭಟನೆಯನ್ನು ಕೈ ಬಿಟ್ಟಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.