/newsfirstlive-kannada/media/media_files/2025/09/06/janardhan-reddy-v_s-sasikanth-senthil-2025-09-06-16-32-28.jpg)
ಸಂಸದ ಶಶಿಕಾಂತ್ ಸೆಂತಿಲ್ ಹಾಗೂ ಶಾಸಕ ಜನಾರ್ಧನ ರೆಡ್ಡಿ
ಗಂಗಾವತಿ ಕ್ಷೇತ್ರದ ಶಾಸಕ, ಬಿಜೆಪಿ ನಾಯಕ ಗಾಲಿ ಜನಾರ್ಧನರೆಡ್ಡಿ ವಿರುದ್ಧ ಮಾಜಿ ಐಎಎಸ್ ಅಧಿಕಾರಿ ಹಾಗೂ ತಮಿಳುನಾಡಿನ ಕಾಂಗ್ರೆಸ್ ಲೋಕಸಭಾ ಸದಸ್ಯ ಶಶಿಕಾಂತ್ ಸೆಂತಿಲ್ ಇಂದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಶಶಿಕಾಂತ್ ಸೆಂತಿಲ್ ಸದ್ಯ ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆ.
ಧರ್ಮಸ್ಥಳದ ಬುರುಡೆ ಗ್ಯಾಂಗ್ ಜೊತೆ ಶಶಿಕಾಂತ್ ಸೆಂತಿಲ್ ಸೇರಿಕೊಂಡು ಪಿತೂರಿ ನಡೆಸಿದ್ದಾರೆ ಎಂದು ಮಾಜಿ ಸಚಿವ ಜನಾರ್ಧನರೆಡ್ಡಿ ಹೇಳಿದ್ದರು. ಈ ಹೇಳಿಕೆಯಿಂದ ತಮ್ಮ ಮಾನನಷ್ಟವಾಗಿದೆ. ಧರ್ಮಸ್ಥಳದ ಬುರುಡೆ ಗ್ಯಾಂಗ್ ಗೂ ನನಗೂ ಯಾವುದೇ ಸಂಪರ್ಕ, ಸಂಬಂಧ ಇಲ್ಲ ಎಂದು ಕೋರ್ಟ್ ನಲ್ಲಿ ಸಂಸದ ಶಶಿಕಾಂತ್ ಸೆಂತಿಲ್ ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸಿದ್ದಾರೆ.
ಇದರಿಂದಾಗಿ ಈಗ ಗಾಲಿ ಜನಾರ್ಧನರೆಡ್ಡಿ ಹಾಗೂ ಶಶಿಕಾಂತ್ ಸೆಂತಿಲ್ ನಡುವೆ ಕಾನೂನು ಸಮರವೇ ಶುರುವಾಗಿದೆ. ಇಬ್ಬರು ಈಗ ಬೇರೇ ಬೇರೆ ಪಕ್ಷಗಳಿದ್ದಾರೆ. ಜನಾರ್ಧನರೆಡ್ಡಿ ಬಿಜೆಪಿ ಪಕ್ಷದಲ್ಲಿದ್ದರೇ, ಶಶಿಕಾಂತ್ ಸೆಂತಿಲ್ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶಿಸಿ, ಕಾಂಗ್ರೆಸ್ ಲೋಕಸಭಾ ಸದಸ್ಯರಾಗಿದ್ದಾರೆ.
ಇಂದು ಶಶಿಕಾಂತ್ ಸೆಂತಿಲ್ ಹೇಳಿದ್ದೇನು?
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಬಳಿ ಇಂದು ಮಾತನಾಡಿದ ಶಶಿಕಾಂತ್ ಸೆಂತಿಲ್, ಗಾಲಿ ಜನಾರ್ಧನರೆಡ್ಡಿ, ವಾಟ್ಸಾಫ್ ನೋಡಿಕೊಂಡು ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ಇದಕ್ಕೆಲ್ಲ ಉತ್ತರ ಕೊಡ್ಬೇಕಾ ...? ಅಂತ ಅಂದ್ಕೊಂಡಿದ್ದೆ. ಆದ್ರೆ ಈಗ ಸಾಕಷ್ಟು ಬಿಲ್ಡಪ್ ಕೊಟ್ಟು ಮಾತಾಡ್ತಿದ್ದಾರೆ . ನನ್ನ ಇಮೇಜ್ ಡ್ಯಾಮೇಜ್ ಮಾಡೋಕೆ ಹೊರಟಿದ್ದಾರೆ . ನಾನು ಕರ್ನಾಟಕದಲ್ಲಿ 10 ವರ್ಷ ಕೆಲಸ ಮಾಡಿದ್ದೇನೆ. ಈ ತರ ಆರೋಪ ಮಾಡ್ತಿರೋದು ಯಾರೂ ಅಂತ ನಿಮಗೆ ಗೊತ್ತಿದೆ . ಕರ್ನಾಟಕದ ಸಂಪತ್ತು ಅನ್ನು ದುರ್ಬಳಕೆ ಮಾಡಿಕೊಂಡಿರೋರು ಆರೋಪ ಮಾಡುತ್ತಿದ್ದಾರೆ. ಕರ್ನಾಟಕದ ಹೆಸರನ್ನು ದೇಶವ್ಯಾಪಿ ಕೆಟ್ಟದಾಗಿ ಬಿಂಬಿಸಿದವರು. ಕರ್ನಾಟಕದ ಸ್ವತ್ತನ್ನು ದೋಚಿ ಏಳು ವರ್ಷ ಜೈಲಿನಲ್ಲಿ ಇದ್ದವರು, ಇಂತವರಿಗೆ ಏನು ಅಂತ ಹೇಳ್ಬೇಕು ಅಂತ ಗೊತ್ತಾಗುತ್ತಿಲ್ಲ. ತಲೆ ಬುರುಡೆ ಎಲ್ಲಿ ಸಿಕ್ಕಿದೆ ಅಂತ ನನಗೆ ಗೊತ್ತಿಲ್ಲ . ಜನಾರ್ದನ್ ರೆಡ್ಡಿಗೆ ಗೊತ್ತಿರಬೇಕು . ತನಿಖೆ ನಡೆಯುತ್ತಿದೆ. ಧರ್ಮಸ್ಥಳದ ಬಗ್ಗೆ ಮಾತನಾಡುವುದಿಲ್ಲ. ನನ್ನ ಹೆಸರು ಬಂದಿದೆ ಎಂಬ ಕಾರಣಕ್ಕೆ ದೂರು ಕೊಡುತ್ತಿದ್ದೇನೆ ಎಂದು ಶಶಿಕಾಂತ್ ಸೆಂತಿಲ್ ಹೇಳಿದ್ದಾರೆ.
ಶಾಸಕ ಜನಾರ್ಧನರೆಡ್ಡಿ ಮತ್ತು ಸಂಸದ ಶಶಿಕಾಂತ್ ಸೆಂತಿಲ್
ಮಾಜಿ ಸಚಿವ ಜನಾರ್ಧನರೆಡ್ಡಿ ಹೇಳಿದ್ದೇನು?
ಇನ್ನೂ ತಮ್ಮ ವಿರುದ್ಧ ಕಾಂಗ್ರೆಸ್ ಲೋಕಸಭಾ ಸದಸ್ಯ ಶಶಿಕಾಂತ್ ಸೆಂತಿಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಜನಾರ್ಧನರೆಡ್ಡಿ ಸಿಡಿಮಿಡಿಗೊಂಡಿದ್ದಾರೆ. ಮಾನನಷ್ಟ ಮೊಕದ್ದಮೆ ವಿಚಾರ ತಿಳಿದು ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ತುರ್ತಾಗಿ ಸುದ್ದಿಗೋಷ್ಠಿ ನಡೆಸಿ, ಶಶಿಕಾಂತ್ ಸೆಂತಿಲ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರದಲ್ಲಿ ಎಡಪಂಥೀಯ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಇದು ಷಡ್ಯಂತ್ರ ಅಂತ ಬಯಲಿಗೆ ಬರಬೇಕು ಅಂತಾ ಹೇಳಿದ್ದೆ. ಸೌಜನ್ಯ ಕೇಸ್ ಬಗ್ಗೆ ಬಳ್ಳಾರಿಯ ಯುವಕ ಸಮೀರ್ ಯೂಟ್ಯೂಬ್‌ನಲ್ಲಿ ಮಾತಾಡಿದ್ದಾನೆ . ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ್ದಾರೆ . ಚೆನ್ನಯ್ಯ ಎಂಬ ವ್ಯಕ್ತಿ ಕರೆದುಕೊಂಡು ಬಂದು ನಾಟಕ ಮಾಡಿದ್ದಾರೆ. ಧರ್ಮಸ್ಥಳದ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ ಎಂದು ಹೇಳಿದ್ದೆ. ಇದರಲ್ಲಿ ಮಾಜಿ IAS ಅಧಿಕಾರಿ ಶಶಿಕಾಂತ್ ಸೆಂತಿಲ್ ಕೈವಾಡ ಇದೆ ಅಂತ ಹೇಳಿದ್ದೆ . ಶಶಿಕಾಂತ್ ಸಿಂಥಲ್ ಎಡಪಂಥೀಯ ವಿಚಾರವಾದಿಯಾಗಿದ್ದ . ನನ್ನ ವಿರುದ್ಧ ಶಶಿಕಾಂತ್ ಸಿಂಥಲ್ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ . ಇಂದು ಕೇಸ್ ಮಾಡಿದ್ದಾರೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.
SIT ಟೀಂ ಶಶಿಕಾಂತ್ ಸೆಂತಿಲ್ ಮನೆ ಮೆಟ್ಟಿಲು ಹತ್ತಬಹುದು . ಶಶಿಕಾಂತ್ ಅವರನ್ನು ವಿಚಾರಣೆಗೆ ಕರೆಬಹುದು ಅನ್ನೋ ಸಂಶಯ ಇದೆ . ಇದು CBI ತನಿಖೆಯಾಗಬೇಕು . ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಮಾಡುವ ಯೂಟ್ಯೂಬರ್‌ಗಳ ಹಣದ ಮೂಲ ಕೆದಕಬೇಕು . ವಿದೇಶಿ ಫಂಡಿಂಗ್ ಬಗ್ಗೆ ಸಂಶಯವಿದೆ . ಎಲ್ಲವೂ ಗೊತ್ತಾಗಬೇಕು ಅಂದ್ರೆ NIA ಹಾಗೂ CBI ತನಿಖೆಯಾಗಬೇಕು ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಹೇಳದ್ದಾರೆ.
ಇಡೀ ವಿಶ್ವಕ್ಕೆ ಹಿಂದೂ ಧರ್ಮದ ಧಾರ್ಮಿಕ ಭಾವನೆಗಳಿಗೆ ಎಡಪಂಥೀಯ ಮನಸ್ಥಿತಿ, ನಗರ ನಕ್ಸಲರು ಧಕ್ಕೆ ತರುತ್ತಿದ್ದಾರೆ. ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದಲ್ಲಿ ಎಡಪಂಥೀಯ ಮನಸ್ಥಿತಿಯವರು ಭಾಗಿಯಾಗಿದ್ದಾರೆ ಎಂಬುದು ಇಡೀ ವಿಶ್ವಕ್ಕೆ ಗೊತ್ತಿದೆ. ಇದು ಷಡ್ಯಂತ್ರ . ಇದು ಹೊರಗಡೆ ಬರಬೇಕು ಎಂದು ಹೇಳಿಕೆ ಕೊಟ್ಟಿದ್ದೆ . ಆಗ ನಾನು ಪ್ರಮುಖವಾಗಿ ಬಳ್ಳಾರಿ ಮೂಲದ ಅನ್ಯಮತೀಯ ವ್ಯಕ್ತಿ ಸೌಜನ್ಯ ಪ್ರಕರಣ ಮಾತಾಡೋ ಮೂಲಕ ಇನ್ನೂ ಇಬ್ಬರನ್ನು ಇಟ್ಟುಕೊಂಡು ಧರ್ಮಸ್ಥಳಕ್ಕೆ ಅಪಖ್ಯಾತಿ ಮೂಢಿಸುವ ಕೆಲಸ ಮಾಡಿದ್ದರು. ಭಯದ ವಾತಾವರಣ ಸೃಷ್ಟಿಸಿದ್ರು, ಅಪಪ್ರಚಾರ ಮಾಡಿದ್ರು . ಚಿನ್ನಯ್ಯ, ಸುಜಾತಾ ಭಟ್ ರನ್ನು ಕರೆದುಕೊಂಡು ಬಂದು ಅಪಪ್ರಚಾರ ಮಾಡಲು ಹೊರಟಿದ್ರು . ಅದು ಮಾಧ್ಯಮ ಹಾಗೂ ಎಸ್ಐಟಿ ಮೂಲಕ ಹೊರಗಡೆ ಬಂತು . ಅದರ ಹಿಂದೆ ಕರ್ನಾಟಕದಲ್ಲಿ ಐಎಎಸ್ ಅಧಿಕಾರಿ ಆಗಿ ಕೆಲಸ ಮಾಡಿದ್ದ ಸಸಿಕಾಂತ್ ಸೆಂತಿಲ್ ಕೈವಾಡ ಇದೆ ಅನ್ನೋದನ್ನ ಹೇಳಿದ್ದೇನೆ. ಮುಸುಕುಧಾರಿ ಮೂಲವನ್ನು ಹೇಳಿದ್ದು ನಾನು. ಎಡಪಂಥೀಯ ವಿಚಾರಾಧಾರೆಗಳನ್ನ ಇಟ್ಕೊಂಡು ಐಎಎಸ್ ಆಗಿ ಕೆಲಸ ಮಾಡಿದ್ರು. ಹಿಂದೂ ಧರ್ಮ, ಸಂಘಪರಿವಾರದ ಬಗ್ಗೆ ಮಾತನಾಡುವ ಮೂಲಕ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿದ್ರು . ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದ ಡಿಎಂಕೆ ಜೊತೆ ಮೈತ್ರಿ ಮಾಡಿದ್ರು ಅಂತಾ ನಾನು ಹೇಳಿದ್ದೆ. ಅದೇ ಸಸಿಕಾಂತ್ ಸೆಂಥಿಲ್ ಇಂದು ನನ್ನ ಮೇಲೆ ಮಾನನಷ್ಡ ಮೊಕದ್ದಮೆ ಹೂಡಿದ್ದಾರೆ . ಸಮೀರ್, ತಿನರೋಡಿ, ಜಯಂತ್, ಮಟ್ಟನ್ನವರ್ ಎಲ್ಲರನ್ನೂ ಎಸ್ಐಟಿಯವರು ಕರೆಯುತ್ತಿದ್ದಾರೆ. ಸಸಿಕಾಂತ್ ಅವರ ಮನೆ ಮೆಟ್ಟಿಲು ಹತ್ತುವುದು ಮಾತ್ರ ಬಾಕಿ ಇತ್ತು . ಸರ್ಕಾರವನ್ನು ಮೀರಿ ಅವರ ಮನೆ ಮೆಟ್ಟಿಲು ಹತ್ತೋದು ಅಷ್ಟು ಸುಲಭ ಅಲ್ಲ . ಹೀಗಾಗಿ ಇದನ್ನ ಎನ್ಐಎ ಗೆ ಕೊಡಬೇಕು . ಸಿಬಿಐ ತನಿಖೆ ಆಗಬೇಕು . ಮಾನನಷ್ಡ ಮೊಕದ್ದಮೆ ಕೇಸ್ ಎದುರಿಸಲು ನಾನು ರೆಡಿ ಇದ್ದೇನೆ. ಅವರು ಕೋರ್ಟ್, ಲಾ ಬಗ್ಗೆ ಮಾತಾಡ್ತಿದ್ದಾರೆ . ಅವರು ಪಾರ್ಲಿಮೆಂಟ್ ಮೇಂಬರ್ ಇದ್ದಾರೆ . ಮಾನನಷ್ಟ ಮೊಕದ್ದಮೆ ಹಾಕಲಿ, ಅದರ ಜೊತೆಗೆ ಇದನ್ನ ಎನ್ಐಎ ಗೆ ಕೊಡಲು ಸಿಎಂ ಬಳಿ ಮನವಿ ಮಾಡಲಿ. ಇದರಲ್ಲಿ ನನ್ನ ಪಾತ್ರ ಇಲ್ಲ ಅನ್ನೋದನ್ನ ತೋರಿಸಲಿ ಎಂದು ಜನಾರ್ದನರೆಡ್ಡಿ, ಸಂಸದ ಶಶಿಕಾಂತ್ ಸೆಂತಿಲ್ ಗೆ ಸವಾಲು ಹಾಕಿದ್ದಾರೆ.
ಸಿಬಿಐಗೆ ಜನಾರ್ದನರೆಡ್ಡಿ ವಿರುದ್ದ ನಾನು ದಾಖಲೆ ಕೊಟ್ಡಿರೋದಕ್ಕೆ ನನ್ನ ಮೇಲೆ ಆರೋಪ ಅಂತಾ ಸಸಿಕಾಂತ್ ಸೆಂಥಿಲ್ ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಜನಾರ್ಧನರೆಡ್ಡಿ, ಸುಮ್ನೇ ಏನೋ ಮಾತನಾಡಬೇಕು ಅಂತಾ ಅವನು ಮಾತಾಡೋದು ಬೇಡ. ನಾನು ಅರೆಸ್ಟ್ ಆದ ಮಾರನೇ ದಿನ ಅವನು ಬಳ್ಳಾರಿಗೆ ಬಂದಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.