/newsfirstlive-kannada/media/post_attachments/wp-content/uploads/2025/07/gst.jpg)
ಮುಂದಿನ ತಿಂಗಳು ಜಿಎಸ್‌ಟಿ ಕೌನ್ಸಿಲ್ ಸಭೆ ನಿಗದಿ
ದೇಶದಲ್ಲಿ ಮುಂದಿನ ತಲೆಮಾರಿನ ಜಿಎಸ್‌ಟಿ ಸುಧಾರಣೆ ಜಾರಿಗೆ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯ ತಮ್ಮ ಭಾಷಣದಲ್ಲೇ ಘೋಷಿಸಿದ್ದಾರೆ. ಅದಕ್ಕೆ ಬೇಕಾದ ಸಿದ್ದತೆಗಳನ್ನು ಈಗಾಗಲೇ ಕೇಂದ್ರದ ಹಣಕಾಸು ಇಲಾಖೆ ಹಾಗೂ ಫಿಟಮೆಂಟ್ ಸಮಿತಿಗಳು ನಡೆಸುತ್ತಿವೆ. ಜಿಎಸ್‌ಟಿ ಕೌನ್ಸಿಲ್ ಸಭೆಯೂ ಸೆಪ್ಟೆಂಬರ್ 3 ಮತ್ತು 4 ರಂದು ನಿಗದಿಯಾಗಿದೆ. ಈಗಾಗಲೇ ಸಚಿವರ ತಂಡದ ಸಭೆ ನಡೆದಿದ್ದು, ವಿವಿಧ ಉತ್ಪನ್ನಗಳ ಜಿಎಸ್‌ಟಿ ಇಳಿಕೆಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ದೇಶದಲ್ಲಿ ಶೇ.5 ಮತ್ತು ಶೇ.18 ರ ಜಿಎಸ್‌ಟಿ ಸ್ಲ್ಯಾಬ್ ಮಾತ್ರ ಉಳಿಸಿಕೊಳ್ಳಲು ಎಲ್ಲ ರಾಜ್ಯಗಳ ಹಣಕಾಸು ಸಚಿವರ ತಂಡದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ದೇಶದಲ್ಲಿ ಎಲ್ಲ ಫುಡ್, ಟೆಕ್ಸ್ ಟೈಲ್ ಉತ್ಪನ್ನಗಳ ಮೇಲೆ ಶೇ. 5 ರಷ್ಟು ಜಿಎಸ್ ಟಿ ಸ್ಲ್ಯಾಬ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಮುಂದಿನ ತಿಂಗಳು ನಡೆಯುವ ಜಿಎಸ್ ಟಿ ಮಂಡಳಿಯ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತೆ. ಸೆಪ್ಟೆಂಬರ್ 3 ಮತ್ತು 4 ರಂದು ಮಹತ್ವದ GST ಮಂಡಳಿ ಸಭೆ ನಡೆಯುವ ನಿರೀಕ್ಷೆ ಇದೆ. ಸಿಮೆಂಟ್ ಮೇಲಿನ ಜಿಎಸ್ಟಿ ಕೂಡ ಶೇ.28 ರಿಂದ ಶೇ. 18 ಕ್ಕೆ ಇಳಿಕೆ ಆಗಲಿದೆ. ಸಲೂನ್, ಪಾರ್ಲರ್ ಮೇಲಿನ ಜಿ.ಎಸ್. ಟಿ. ಶೇ. 18 ರಿಂದ ಶೇ.5 ಕ್ಕೆ ಇಳಿಕೆ ಆಗಲಿದೆ. ಏರ್ ಕಂಡೀಷನ್, ಟಿವಿ, ರೆಫ್ರಿಜರೇಟರ್ ಮೇಲಿನ ಜಿಎಸ್.ಟಿ. ಶೇ.28 ರಿಂದ ಶೇ.18 ಕ್ಕೆ ಇಳಿಕೆ ಆಗಲಿದೆ. ಜನರ ಟರ್ಮ್ , ಹೆಲ್ತ್ ಇನ್ಸೂರೆನ್ಸ್ ಮೇಲಿನ ಜಿಎಸ್.ಟಿ. ಶೇ. 18 ರಿಂದ ಶೂನ್ಯಕ್ಕೆ ಇಳಿಕೆ ಆಗಲಿದೆ. ಸಿಮೆಂಟ್ ಮೇಲಿನ GST ಇಳಿಕೆಯಿಂದ ರಿಯಲ್ ಎಸ್ಟೇಟ್, ನಿರ್ಮಾಣ, ಮೂಲಸೌಕರ್ಯ ವಲಯಕ್ಕೆ ಅನುಕೂಲ ಆಗಲಿದೆ. GST ಇಳಿಕೆಯಿಂದ ಅಂತಿಮ ಗ್ರಾಹಕರಿಗೆ ಬೆಲೆ ಇಳಿಕೆಯ ಲಾಭ ಸಿಗಲಿದೆ.
ಐಷಾರಾಮಿ ಹಾಗೂ ಲಕ್ಷುರಿ ಉತ್ಪನ್ನಗಳು, ಶ್ರೀಮಂತರು ಬಳಸುವ ಉತ್ಪನ್ನಗಳು, ಆರೋಗ್ಯಕ್ಕೆ ಹಾನಿಕರವಾದ ಸಿಗರೇಟ್, ತಂಬಾಕು ಉತ್ಪನ್ನಗಳ ಮೇಲೆ ಶೇ.40 ರಷ್ಟು ಜಿಎಸ್‌ಟಿ ಅನ್ನು ವಿಧಿಸಲಾಗುತ್ತೆ. ಈ ಮೂಲಕ ಈ ಉತ್ಪನ್ನಗಳನ್ನು ಬಳಸದಂತೆ ಹೆಚ್ಚಿನ ಜಿಎಸ್‌ಟಿ ವಿಧಿಸಲಾಗುತ್ತೆ. ಇನ್ನೂ ಸೆಪ್ಟೆಂಬರ್ 2 ಮತ್ತು 3 ರಂದು ಜಿಎಸ್‌ಟಿ ಕೌನ್ಸಿಲ್ ಸಭೆ ನಡೆದು ತೀರ್ಮಾನ ಕೈಗೊಂಡರೂ ಕೂಡ ಅದರ ತೀರ್ಮಾನ ಜಾರಿಗೆ ಬರಲು ಸೆಪ್ಟೆಂಬರ್ 22 ರವರೆಗೂ ಸಮಯಾವಕಾಶ ಬೇಕಾಗುತ್ತೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜಿಎಸ್‌ಟಿ ಕೌನ್ಸಿಲ್ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಅಧಿಸೂಚನೆ ಹೊರಡಿಸಬೇಕಾಗುತ್ತೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತೆ. ಹೀಗಾಗಿ ಸೆಪ್ಟೆಂಬರ್ 22 ರಂದು ಜಿಎಸ್‌ಟಿ ಪರಿಷ್ಕೃತ ದರ ಜಾರಿಯಾಗುತ್ತೆ ಎಂದು ಕೇಂದ್ರದ ಹಣಕಾಸು ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಒಟ್ಟಿನಲ್ಲಿ ದೇಶದಲ್ಲಿ ದಸರಾ ವೇಳೆಗೆ ಹೊಸ ಜಿಎಸ್‌ಟಿ ದರಗಳು ಜಾರಿಯಾಗಲಿವೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.