/newsfirstlive-kannada/media/post_attachments/wp-content/uploads/2025/04/Siddaramaiah-Cabinet-Meet.jpg)
ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಕ್ಯಾಬಿನೆಟ್ ಸಭೆ ನಡೆದಿದೆ. ಆದರೇ, ಕ್ಯಾಬಿನೆಟ್ ಸಭೆಯಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮೊನ್ನೆ ಜಸ್ಟೀಸ್ ನಾಗಮೋಹನ್ ದಾಸ್ ಅವರು ನೀಡಿದ್ದ ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣದ ವರದಿಯನ್ನು ಎಲ್ಲ ಕ್ಯಾಬಿನೆಟ್ ಸಚಿವರಿಗೆ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ನೀಡಲಾಗಿದೆ.
1,300 ಪುಟಗಳಷ್ಟು ವಿಸ್ತೃತವಾಗಿರುವ ವರದಿಯನ್ನು ಓದಿ, ಅಧ್ಯಯನ ಮಾಡಿಕೊಂಡು ಮುಂದಿನ ಕ್ಯಾಬಿನೆಟ್ ಸಭೆಗೆ ಬರುವಂತೆ ಕ್ಯಾಬಿನೆಟ್ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಹೀಗಾಗಿ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೇ, ಕ್ಯಾಬಿನೆಟ್ ಸಭೆಯಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿಯ ವರದಿಯನ್ನು ಮಂಡಿಸಲಾಗಿದೆ. ಎಲ್ಲ ಕ್ಯಾಬಿನೆಟ್ ಸಚಿವರಿಗೂ ವರದಿಯ ಪ್ರತಿಯನ್ನು ನೀಡಲಾಗಿದೆ.
ಆಗಸ್ಟ್ 16ರಂದು ವಿಶೇಷ ಕ್ಯಾಬಿನೆಟ್ ಸಭೆ
ಆಗಸ್ಟ್ 16 ರಂದು ವಿಶೇಷ ಕ್ಯಾಬಿನೆಟ್ ಸಭೆಯನ್ನು ಕರೆಯಲಾಗಿದೆ. ಅಂದಿನ ಕ್ಯಾಬಿನೆಟ್ ಸಭೆಯಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಹಂಚಿಕೆ, ವರ್ಗೀಕರಣದ ಬಗ್ಗೆ ರಾಜ್ಯ ಕ್ಯಾಬಿನೆಟ್ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ಸಮಿತಿ ನೀಡಿದ್ದ ವರದಿ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಎಲ್ಲ 101 ಜಾತಿಗಳಿಗೆ ಒಳ ಮೀಸಲಾತಿ ವರ್ಗೀಕರಣ ಮಾಡಿತ್ತು. ಅದು ಪರಿಶಿಷ್ಟ ಜಾತಿಯ ಮೀಸಲಾತಿಯ ಜೇನುಗೂಡಿಗೆ ಕಲ್ಲು ಹೊಡೆದಂತೆ ಆಗಿತ್ತು. ಪರಿಶಿಷ್ಟ ಜಾತಿಗಳಿಗೆ ನೀಡಿರುವ ಶೇ.17 ರಷ್ಟು ಮೀಸಲಾತಿಯನ್ನು ತಮಗೆ ಸರಿಯಾಗಿ ಹಂಚಿಕೆ ಮಾಡಿಲ್ಲ ಎಂದು ರಾಜ್ಯದ ಕೆಲವೆಡೆ ಸ್ಪೃಶ್ಯ ಜಾತಿಗಳೇ ಭಾರಿ ಪ್ರತಿಭಟನೆ ನಡೆಸಿದ್ದವು. ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣವು ಕೆಲ ಬಿಜೆಪಿ ರಾಜಕಾರಣಿಗಳಿಗೆ ವಿಧಾನಸಭಾ ಚುನಾವಣೆಯಲ್ಲೂ ಭಾರಿ ಹೊಡೆತ ನೀಡಿತ್ತು.
ಈಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿದೆ. ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿಯ ದಲಿತ ಎಡಗೈ ಸಮುದಾಯಕ್ಕೆ ಶೇ. 6 ರಷ್ಟು ಮೀಸಲಾತಿ ನೀಡುವಂತೆ ಶಿಫಾರಸ್ಸು ಮಾಡಿದೆ. ಎಡಗೈ ಸಮುದಾಯವು ಶೇ.7 ರಷ್ಟು ಮೀಸಲಾತಿಯನ್ನು ತಮಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ, ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿ ಮುಂದೆ ಬೇಡಿಕೆ ಇಟ್ಟಿತ್ತು. ಆದರೇ, ಈಗ ಶೇ.6 ರಷ್ಟು ಮೀಸಲಾತಿಯನ್ನು ಎಡಗೈ ಸಮುದಾಯಕ್ಕೆ ಹಂಚಿಕೆ ಮಾಡಿರುವುದಕ್ಕೆ ದಲಿತ ಎಡಗೈ ಸಮುದಾಯದ ನಾಯಕ, ಮಾಜಿ ಸಚಿವ ಎಚ್.ಅಂಜನೇಯ, ನಮಗೆ ಖುಷಿಯಾಗಿದೆ, ಆದರೇ, ಇನ್ನೂ ಹೆಚ್ಚಿಗೆ ಮೀಸಲಾತಿಯನ್ನು ನಮಗೆ ನೀಡಬೇಕಾಗಿತ್ತು ಎಂದಿದ್ದಾರೆ.
ಸ್ಪೃಶ್ಯ ಜಾತಿಗಳಾದ ಬೋವಿ, ಕೊರಮ, ಕೊರಚ ಸಮುದಾಯಗಳಿಗೆ ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರವು ಶೇ.4.5 ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಿತ್ತು. ಆದರೇ, ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿಯು ಬೋವಿ, ಕೊರಮ, ಕೊರಚ ಸಮುದಾಯಗಳಿಗೆ ಶೇ.4 ರಷ್ಟು ಮೀಸಲಾತಿ ಹಂಚಿಕೆಗೆ ಶಿಫಾರಸ್ಸು ಮಾಡಿದೆ. ಹೀಗಾಗಿ ಜಸ್ಟೀಸ್ ನಾಗಮೋಹನ್ ದಾಸ್ ವರದಿಯನ್ನು ಅಂಗೀಕಾರ ಮಾಡಬಾರದು ಎಂದು ಬೋವಿ, ಲಂಬಾಣಿ ಸಮುದಾಯಗಳ ನಾಯಕರು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಒತ್ತಡ ಹೇರಿದ್ದಾರೆ. ವಿಧಾನಸಭೆ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಕಾಂಗ್ರೆಸ್ ನಾಯಕ ಪ್ರಕಾಶ್ ರಾಠೋಡ್, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ್ ಸೇರಿದಂತೆ ಅನೇಕರು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ.
ಮತ್ತೊಂದೆಡೆ ದಲಿತ ಬಲಗೈ ಮತ್ತು ದಲಿತ ಎಡಗೈ ನಾಯಕರಿಂದ ಜಸ್ಟೀಸ್ ನಾಗಮೋಹನ್ ದಾಸ್ ವರದಿಯನ್ನು ಒಮ್ಮತದಿಂದ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ದಲಿತ ಬಲಗೈಗೆ ಶೇ.5 ರಷ್ಟು ಹಾಗೂ ದಲಿತ ಎಡಗೈ ಸಮುದಾಯಕ್ಕೆ ಶೇ.6 ರಷ್ಟು ಮೀಸಲಾತಿ ನೀಡುವಂತೆ ಜಸ್ಟೀಸ್ ನಾಗಮೋಹನ್ ದಾಸ್ ಅವರು ಶಿಫಾರಸ್ಸು ಮಾಡಿದ್ದಾರೆ. ಪರಿಶಿಷ್ಟ ಜಾತಿಯ ಅತಿ ಹಿಂದುಳಿದ ಜಾತಿಗಳಿಗೆ ಶೇ.1 ರಷ್ಟು, ಲಂಬಾಣಿ, ಬೋವಿ, ಬಂಜಾರ, ಕೊರಮ, ಕೊರಚ ಸೇರಿದಂತೆ ಸ್ಪಶ್ಯ ಜಾತಿಗಳಿಗೆ ಶೇ.4 ಹಾಗೂ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಗಳಿಗೆ ಶೇ.1 ರಷ್ಟು ಮೀಸಲಾತಿ ನೀಡುವಂತೆ ಜಸ್ಟೀಸ್ ನಾಗಮೋಹನ್ ದಾಸ್ ಅವರು ಶಿಫಾರಸ್ಸು ಮಾಡಿದ್ದಾರೆ. ದಲಿತ ಸಮುದಾಯದ 101 ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಿ, ಯಾವ್ಯಾವ ಗುಂಪಿಗೆ ಎಷ್ಟೆಷ್ಟು ಮೀಸಲಾತಿ ಹಂಚಿಕೆ ಮಾಡಬೇಕೇಂದು ಜಸ್ಟೀಸ್ ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ಶಿಫಾರಸ್ಸು ಮಾಡಿ ತಮ್ಮ ವರದಿಯನ್ನು ಸಿಎಂ ಸಿದ್ದರಾಮಯ್ಯಗೆ ನೀಡಿದ್ದಾರೆ. ಇದರ ಬಗ್ಗೆ ಈಗ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆಯಾಗಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಸುಪ್ರೀಂಕೋರ್ಟ್ ಸಂವಿಧಾನಿಕ ಪೀಠ ಕೂಡ ಈಗಾಗಲೇ ಪರಿಶಿಷ್ಟ ಜಾತಿಗೆ ನೀಡಿರುವ ಮೀಸಲಾತಿಯಲ್ಲೇ ಎಲ್ಲ ದಲಿತ ಜಾತಿಗಳಿಗೂ ಒಳ ಮೀಸಲಾತಿ ನೀಡುವ ಹಕ್ಕು , ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಮಹತ್ವದ ತೀರ್ಪು ನೀಡಿದೆ. ಹೀಗಾಗಿ ಈಗ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ದಲಿತ ಜಾತಿಗಳಿಗೆ ಒಳ ಮೀಸಲಾತಿ ನೀಡಲು ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ, ಸರ್ಕಾರದ ಪಾಲಿಗೆ ದಲಿತ ಒಳ ಮೀಸಲಾತಿ ಹಂಚಿಕೆಯು ಜೇನುಗೂಡಿಗೆ ಕಲ್ಲು ಹೊಡೆದಂತೆ ಆಗುತ್ತಾ ಇಲ್ಲವೇ ಜೇನುಗೂಡಿನ ಸಿಹಿ ಕಾಂಗ್ರೆಸ್ ಬಾಯಿಗೆ ಬೀಳುತ್ತಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ಈ ಹಿಂದಿನ ಬಸವರಾಜ ಬೊಮ್ಮಾಯಿ ಅವರು ಜೇನುಗೂಡಿಗೆ ಕೈ ಹಾಕಿ ಜೇನುತುಪ್ಪವನ್ನು ನಾವು ತಿನ್ನುತ್ತೇವೆ ಎಂದು ಹೇಳಿದ್ದರು. ಆದರೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಬಸವರಾಜಬೊಮ್ಮಾಯಿ ಇಬ್ಬರು ಜೇನುಗೂಡಿಗೆ ಕಲ್ಲು ಹೊಡೆದು ಜೇನು ಕಚ್ಚಿಸಿಕೊಂಡರು. ಜೇನು ತುಪ್ಪ ತಿನ್ನಲಿಲ್ಲ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ