/newsfirstlive-kannada/media/media_files/2025/08/09/obc-creamy-layer-2025-08-09-20-52-11.jpg)
ಓಬಿಸಿ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್ ಸಿಂಗ್
ದೇಶದಲ್ಲಿ ಓಬಿಸಿ ಸಮುದಾಯಗಳ ಕ್ರಿಮಿಲೇಯರ್ ಆದಾಯದ ಮಿತಿಯನ್ನು ಏರಿಕೆ ಮಾಡಬೇಕೆಂದು ಓಬಿಸಿ ಕಲ್ಯಾಣದ ಸಂಸದೀಯ ಸ್ಥಾಯಿ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸು ವರದಿಯನ್ನು ಶುಕ್ರವಾರ ಪಾರ್ಲಿಮೆಂಟ್ ನಲ್ಲಿ ಮಂಡಿಸಲಾಗಿದೆ. ಓಬಿಸಿ ಕ್ರಿಮಿಲೇಯರ್ ಆದಾಯ ಮಿತಿ ಏರಿಕೆಯು ಈ ಕ್ಷಣದ ಅಗತ್ಯವಾಗಿದೆ ಎಂದು ಸಂಸದೀಯ ಸ್ಥಾಯಿ ಸಮಿತಿಯು ತನ್ನ ಶಿಫಾರಸ್ಸಿನಲ್ಲಿ ಹೇಳಿದೆ. ಸದ್ಯ ದೇಶದಲ್ಲಿ ಓಬಿಸಿ ಕ್ರಿಮಿಲೇಯರ್ ವಾರ್ಷಿಕ ಆದಾಯ ಮಿತಿಯು 8 ಲಕ್ಷ ರೂಪಾಯಿ ಇದೆ. ಇದನ್ನು ಏರಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸ್ಸು ಮಾಡಿದೆ. ಓಬಿಸಿ ಸಮುದಾಯಗಳಲ್ಲಿ ವಾರ್ಷಿಕ 8 ಲಕ್ಷ ರೂಪಾಯಿಗಿಂತ ಹೆಚ್ಚಿಗೆ ಆದಾಯ ಇರುವವರು ಓಬಿಸಿ ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಹೆಚ್ಚಿನ ಜನರು ಓಬಿಸಿ ಮೀಸಲಾತಿ ಪಡೆಯಲು ಅನುಕೂಲವಾಗುವಂತೆ ಓಬಿಸಿ ಕ್ರಿಮಿಲೇಯರ್ ಆದಾಯ ಮಿತಿಯನ್ನು 8 ಲಕ್ಷ ರೂಪಾಯಿಯಿಂದ ಏರಿಕೆ ಮಾಡಬೇಕೆಂದು ಸಮಿತಿ ಶಿಫಾರಸ್ಸು ಮಾಡಿದೆ.
ಓಬಿಸಿ ಕಲ್ಯಾಣದ ಸಂಸದೀಯ ಸ್ಥಾಯಿ ಸಮಿತಿಯು ಈ ವರ್ಷದ ಏಪ್ರಿಲ್ ನಲ್ಲೂ ಇದೇ ಶಿಫಾರಸ್ಸು ಅನ್ನು ಮೊದಲ ಭಾರಿಗೆ ಮಾಡಿತ್ತು. ಈಗ ಕ್ರಮ ಕೈಗೊಂಡ ವರದಿಯಲ್ಲೂ ಅದೇ ಶಿಫಾರಸ್ಸು ಅನ್ನು ಮತ್ತೆ ಫುನರುಚ್ಚರಿಸಿದೆ.
ಆದರೇ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಸದ್ಯಕ್ಕೆ ಓಬಿಸಿ ಕ್ರಿಮಿಲೇಯರ್ ಆದಾಯ ಮಿತಿಯನ್ನು ಪರಿಷ್ಕರಿಸುವ ಯಾವುದೇ ಪ್ರಸ್ತಾಪ ತಮ್ಮ ಮುಂದೆ ಇಲ್ಲ ಎಂದು ಹೇಳಿದೆ.
ಸದ್ಯ ದೇಶದಲ್ಲಿರುವ ಓಬಿಸಿ ಕ್ರಿಮಿಲೇಯರ್ ವಾರ್ಷಿಕ ಆದಾಯ ಮಿತಿ 8 ಲಕ್ಷ ರೂಪಾಯಿ ಸೂಕ್ತವಾಗಿಲ್ಲ. ಕೆಳವರ್ಗದ ಜನರ ವೈಯಕ್ತಿಕ ಆದಾಯದಲ್ಲಿ ಏರಿಕೆಯಾಗಿದೆ. ಹಣದುಬ್ಬರದ ಇಂಡೆಕ್ಸ್ ನಲ್ಲೂ ಏರಿಕೆಯಾಗಿದೆ. ಹೀಗಾಗಿ ಓಬಿಸಿ ಕ್ರಿಮಿಲೇಯರ್ ಆದಾಯದ ಮಿತಿಯನ್ನು ಏರಿಕೆ ಮಾಡಬೇಕೆಂದು ಶಿಫಾರಸ್ಸು ಮಾಡಿದೆ. ಇದರಿಂದ ಓಬಿಸಿ ಸಮುದಾಯಗಳ ಜನರ ಸಾಮಾಜಿಕ- ಆರ್ಥಿಕ ಪರಿಸ್ಥಿತಿಯು ತೃಪ್ತಿಕರ ಮಟ್ಟಕ್ಕೆ ಸುಧಾರಿಸಲು ಸಾಧ್ಯವಾಗುತ್ತೆ ಎಂದು ಸಮಿತಿಯು ಹೇಳಿದೆ.
2017 ರಲ್ಲಿ ಕೊನೆಯ ಭಾರಿಗೆ ಓಬಿಸಿ ಕ್ರಿಮಿಲೇಯರ್ ಆದಾಯ ಮಿತಿಯನ್ನು ವಾರ್ಷಿಕ 6.5 ಲಕ್ಷ ರೂಪಾಯಿಯಿಂದ 8 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿತ್ತು.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ನಿಯಮದ ಪ್ರಕಾರ, ಓಬಿಸಿ ಕ್ರಿಮಿಲೇಯರ್ ಆದಾಯ ಮಿತಿಯನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕು ಅಥವಾ ಅದಕ್ಕೂ ಮುನ್ನ ಪರಿಷ್ಕರಿಸಬೇಕು ಎಂದು 1993 ಸೆಪ್ಟೆಂಬರ್ ಆದೇಶದಲ್ಲಿ ಹೇಳಲಾಗಿದೆ.
ಸದ್ಯ ಇರುವ 8 ಲಕ್ಷ ರೂಪಾಯಿ ವಾರ್ಷಿಕ ಆದಾಯದ ಮಿತಿಯಿಂದ ಓಬಿಸಿ ಸಮುದಾಯದ ಸ್ಪಲ್ಪ ಪ್ರಮಾಣದ ಜನರು ಮಾತ್ರ ಮೀಸಲಾತಿಯ ಲಾಭ ಪಡೆಯುತ್ತಿದ್ದಾರೆ. 8 ಲಕ್ಷ ರೂಪಾಯಿ ಮಿತಿಯು ಕಡಿಮೆಯಾಯಿತು ಎಂದು ಸಂಸದೀಯ ಸ್ಥಾಯಿ ಸಮಿತಿಯು ಏಪ್ರಿಲ್ ನಲ್ಲಿ ಶಿಫಾರಸ್ಸು ವರದಿಯನ್ನು ಸಲ್ಲಿಸಿತ್ತು.
ಓಬಿಸಿ ಕ್ರಿಮಿಲೇಯರ್ ಆದಾಯ ಮಿತಿ 8 ಲಕ್ಷ ರೂಪಾಯಿ ಇರುವುದರಿಂದ ಓಬಿಸಿ ದೊಡ್ಡ ವರ್ಗ ಕಲ್ಯಾಣ ಸ್ಕೀಮ್ ಗಳಿಂದ ವಂಚಿತವಾಗಿದೆ. ಜೊತೆಗೆ ಸಮಾಜದಲ್ಲಿ ತಮ್ಮ ಸಾಮಾಜಿಕ, ಶಿಕ್ಷಣದ ಸ್ಥಿತಿಗತಿಯನ್ನು ಉತ್ತಮಪಡಿಸಿಕೊಳ್ಳಲು ಮೀಸಲಾತಿಯ ನೀತಿಯಿಂದಲೂ ವಂಚಿತವಾಗಿದೆ ಎಂದು ಸಮಿತಿಯು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.