ಮತ್ತೆ ಒಂದಾದ ಪವಾರ್ ಪರಿವಾರ: ಕಾರ್ಪೋರೇಷನ್ ಚುನಾವಣೆಯಲ್ಲಿ NCP ಎರಡು ಬಣಗಳ ನಡುವೆ ಮೈತ್ರಿ!

ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನದ ಬೆಳವಣಿಗೆಗಳಾಗುತ್ತಿವೆ. ಒಂದೆಡೆ ಠಾಕ್ರೆಗಳು ಭಿನ್ನಾಭಿಪ್ರಾಯ ಬದಿಗೊತ್ತಿ ಒಂದಾಗಿದ್ದಾರೆ. ಈಗ ಪವಾರ್ ಗಳ ಸರದಿ. ಶರದ್ ಪವಾರ್ ಮತ್ತು ಅಜಿತ್ ಪವಾರ್ ಕೂಡ ಒಂದಾಗುತ್ತಿದ್ದಾರೆ. ಪಿಂಪ್ರಿ ಚಿಂಚವಾಡ ಕಾರ್ಪೋರೇಷನ್ ನಲ್ಲಿ ಎನ್‌ಸಿಪಿ 2 ಬಣಗಳು ಮೈತ್ರಿ ಮಾಡಿಕೊಳ್ಳುತ್ತಿವೆ.

author-image
Chandramohan
NCP TWO FACTION MERGER SOON
Advertisment

ಮಹಾರಾಷ್ಟ್ರ ರಾಜಕೀಯವು ಯಾವಾಗಲೂ ರಾಜಕೀಯ ರೋಮಾಂಚಕತೆಯನ್ನು ಹೊಂದಿರುತ್ತೆ.  ಕಥಾ ವಸ್ತುವು ಇತ್ಯರ್ಥವಾಗಿದೆ ಎಂದು ನೀವು ಭಾವಿಸುತ್ತಿರುವಾಗ ಒಂದು ಟ್ವಿಸ್ಟ್ ಎಲ್ಲವನ್ನೂ ತಲೆಕೆಳಗಾಗಿಸುತ್ತದೆ. ಚುನಾವಣಾ ಸಂದರ್ಭದಲ್ಲಿ ಡ್ರಾಮಾಗಳು ಮತ್ತಷ್ಟು ಹೆಚ್ಚಾಗುತ್ತಾವೆ. ಬೃಹನ್ ಮುಂಬೈ ಕಾರ್ಪೋರೇಷನ್ ಎಲೆಕ್ಷನ್ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳು ಹತ್ತಿರದಲ್ಲಿರುವಾಗ, ಕೌಟುಂಬಿಕ ಸೆಂಟಿಮೆಂಟ್‌, ಬಾಂಧವ್ಯ ಸಾಧಿಸಲಾಗದ್ದನ್ನು ಚುನಾವಣಾ ಆತಂಕ ಸಾಧಿಸಿದೆ. ಚುನಾವಣೆ ವೇಳೆಯಲ್ಲಿ ಮಹಾರಾಷ್ಟ್ರದಲ್ಲಿ ಎರಡು ಪವರ್ ಫುಲ್ ರಾಜಕೀಯ ಕುಟುಂಬಗಳು ತಮ್ಮ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ರಾಜಕೀಯ ಉಳಿವಿಗಾಗಿ ಮತ್ತೆ ಒಂದಾಗಿರುವುದು ವಿಶೇಷ.
ಮೊದಲನೇಯದಾಗಿ ಠಾಕ್ರೆ ಪರಿವಾರ ಒಂದಾಯಿತು. ಈಗ ಪವಾರ್ ಕುಟುಂಬದ ಸರದಿ. ಶರದ್ ಮತ್ತು ಸೋದರನ ಪುತ್ರ ಅಜಿತ್ ಪವಾರ್ ಈಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಂದಾಗುತ್ತಿದ್ದಾರೆ.  ಪಿಂಪ್ರಿ ಚಿಂಚವಾಡ ಕಾರ್ಪೋರೇಷನ್ ಎಲೆಕ್ಷನ್ ನಲ್ಲಿ ಅಜಿತ್ ಪವಾರ್ ಮತ್ತು ದೊಡ್ಡಪ್ಪ ಶರದ್ ಪವಾರ್ ಒಂದಾಗುತ್ತಿದ್ದಾರೆ. ಎನ್‌ಸಿಪಿ ಯ ಎರಡು ಬಣಗಳು ಮೈತ್ರಿ ಮಾಡಿಕೊಂಡಿವೆ.  ರಾಜಕೀಯ ದ್ವೇಷದ ಬಳಿಕ ಅಜಿತ್ ಪವಾರ್ ಅವರು ಶರದ್ ಪವಾರ್ ಜೊತೆ ಕದನ ವಿರಾಮ ಘೋಷಿಸಿದ್ದಾರೆ. ಇದು ಚುನಾವಣೆಗಾಗಿ ನಡೆಯುತ್ತಿರುವ ಮೈತ್ರಿ. 
ಡಿಸೆಂಬರ್ 24 ರಂದು ರಾಜ್ ಠಾಕ್ರೆ ತಮ್ಮ ಎಂಎನ್‌ಎಸ್ ಪಕ್ಷ ಹಾಗೂ ಶಿವಸೇನೆ ಉದ್ಧವ್ ಠಾಕ್ರೆ ಬಣದ ಪಕ್ಷಗಳು ಮೈತ್ರಿ ಪಕ್ಷಗಳು ಎಂದು ಘೋಷಿಸಿದ್ದರು.  ಇದಕ್ಕೂ ಮುನ್ನ 13 ವರ್ಷಗಳ ಬಳಿಕ ಮಾತೋಶ್ರೀಗೆ ರಾಜ್ ಠಾಕ್ರೆ ಭೇಟಿ ನೀಡಿದ್ದರು. ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಸಾರ್ವಜನಿಕವಾಗಿ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಎಂಎನ್ಎಸ್ ಹಾಗೂ ಶಿವಸೇನೆಯ ಮೈತ್ರಿಯನ್ನು ಘೋಷಿಸಿದ್ದರು.
ಈಗ ಅದೇ ಹಾದಿಯಲ್ಲಿ ಎನ್‌ಸಿಪಿ ಪಕ್ಷದ ಎರಡು ಬಣಗಳೂ ಇವೆ. ಪರಿವಾರ ಮತ್ತೆ ಒಂದಾಗುತ್ತಿದೆ. ಬಹಳಷ್ಟು ಮಂದಿ ಇದನ್ನು ಬಯಸಿದ್ದಾರೆ ಎಂದು ಈಗ ಅಜಿತ್ ಪವಾರ್ ಘೋಷಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಹಿನ್ನಡೆಯಾಗಿತ್ತು. ಶರದ್ ಪವಾರ್ ನೇತೃತ್ವದ ಎನ್‌ಸಿಪಿ 8 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದಿತ್ತು. 
ಮಹಾರಾಷ್ಟ್ರದಲ್ಲಿ ಠಾಕ್ರೆ ಮತ್ತು ಪವಾರ್ ಅನ್ನೋದು ಸರ್ ನೇಮ್ ಮಾತ್ರವಲ್ಲ, ಅದೊಂದು ಬ್ರಾಂಡ್ ಎಂದು ಇತ್ತೀಚೆಗೆ ರಾಜ್ ಠಾಕ್ರೆ ಹೇಳಿದ್ದರು. ಮಹಾರಾಷ್ಟ್ರದಲ್ಲಿ ರಾಜಕೀಯ ಅಳಿವು-ಉಳಿವಿಗಾಗಿ ಠಾಕ್ರೆಗಳು ಒಂದಾಗಿದ್ದಾರೆ. ಅದೇ ರೀತಿ ಪವಾರ್ ಪರಿವಾರ ಕೂಡ ಒಂದಾಗಿದೆ.



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

NCP TWO FACTION ALLIANCE SHARAD PAWAR
Advertisment