/newsfirstlive-kannada/media/media_files/2025/11/27/modi-saluting-at-constitution-2025-11-27-11-51-23.jpg)
ಸಂವಿಧಾನದ ಪ್ರತಿಗೆ ನಮಸ್ಕರಿಸಿದ್ದ ಪ್ರಧಾನಿ ಮೋದಿ
ಪ್ರಿಯ ಸಹ ನಾಗರಿಕರೇ,
ನಮಸ್ಕಾರ!
ನವೆಂಬರ್ 26 ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಹೆಮ್ಮೆಯ ದಿನ. 1949ರ ಇದೇ ದಿನದಂದು, ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತು. ಇದು ರಾಷ್ಟ್ರದ ಪ್ರಗತಿಗೆ ಸ್ಪಷ್ಟತೆ ಮತ್ತು ದೃಢತೆಯೊಂದಿಗೆ ಮಾರ್ಗದರ್ಶನ ನೀಡುತ್ತಿರುವ ಒಂದು ಪವಿತ್ರ ಗ್ರಂಥವಾಗಿದೆ. ಆದುದರಿಂದಲೇ, ಸುಮಾರು ಒಂದು ದಶಕದ ಹಿಂದೆ, ಅಂದರೆ 2015ರಲ್ಲಿ, ಎನ್‌ಡಿಎ ಸರ್ಕಾರವು ನವೆಂಬರ್ 26 ಅನ್ನು 'ಸಂವಿಧಾನ ದಿನ'ವನ್ನಾಗಿ ಆಚರಿಸಲು ನಿರ್ಧರಿಸಿತು.
ನನ್ನಂತಹ ಸಾಮಾನ್ಯ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದ ವ್ಯಕ್ತಿ, ಕಳೆದ 24 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಸರ್ಕಾರದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದ್ದು ನಮ್ಮ ಸಂವಿಧಾನದ ಶಕ್ತಿಯಿಂದಲೇ. 2014ರಲ್ಲಿ ನಾನು ಮೊದಲ ಬಾರಿಗೆ ಸಂಸತ್ತಿಗೆ ಬಂದಾಗ, ಪ್ರಜಾಪ್ರಭುತ್ವದ ಅತಿದೊಡ್ಡ ದೇಗುಲದ ಮೆಟ್ಟಿಲುಗಳನ್ನು ಮುಟ್ಟಿ, ಶಿರಬಾಗಿ ನಮಸ್ಕರಿಸಿದ ಆ ಕ್ಷಣಗಳು ನನಗಿನ್ನೂ ನೆನಪಿವೆ. ಮತ್ತೆ 2019ರಲ್ಲಿ, ಚುನಾವಣಾ ಫಲಿತಾಂಶಗಳ ನಂತರ, ನಾನು ಸಂವಿಧಾನ ಸದನದ ಸೆಂಟ್ರಲ್ ಹಾಲ್ ಪ್ರವೇಶಿಸಿದಾಗ, ಸಂವಿಧಾನಕ್ಕೆ ತಲೆಬಾಗಿ, ಅಪಾರ ಗೌರವದ ಸಂಕೇತವಾಗಿ ಅದನ್ನು ನನ್ನ ಹಣೆಗೆ ಒತ್ತಿಕೊಂಡು ನಮಸ್ಕರಿಸಿದೆ. ಈ ಸಂವಿಧಾನವು ನನ್ನಂತಹ ಹಲವಾರು ಜನರಿಗೆ ಕನಸು ಕಾಣುವ ಶಕ್ತಿಯನ್ನು ಮತ್ತು ಅದನ್ನು ನನಸಾಗಿಸಲು ಶ್ರಮಿಸುವ ಬಲ ನೀಡಿದೆ.
ಸಂವಿಧಾನ ದಿನದಂದು, ಡಾ. ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂವಿಧಾನ ರಚನಾ ಸಭೆಯಲ್ಲಿದ್ದು, ಸಂವಿಧಾನದ ರಚನೆಗೆ ಕೊಡುಗೆ ನೀಡಿದ ಎಲ್ಲ ಸ್ಫೂರ್ತಿದಾಯಕ ಸದಸ್ಯರನ್ನು ನಾವು ಸ್ಮರಿಸುತ್ತೇವೆ. ಕರಡು ಸಮಿತಿಯ ಅಧ್ಯಕ್ಷತೆ ವಹಿಸಿ, ತಮ್ಮ ಅದ್ಭುತ ದೂರದೃಷ್ಟಿಯಿಂದ ಮಾರ್ಗದರ್ಶನ ನೀಡಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಶ್ರಮವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಸಂವಿಧಾನ ರಚನಾ ಸಭೆಯಲ್ಲಿದ್ದ ಹಲವಾರು ಗಣ್ಯ ಮಹಿಳಾ ಸದಸ್ಯರು ಸಹ, ತಮ್ಮ ವಿಚಾರಪೂರ್ಣ ಸಲಹೆಗಳು ಮತ್ತು ಭವಿಷ್ಯದ ದೃಷ್ಟಿಕೋನಗಳ ಮೂಲಕ ಸಂವಿಧಾನವನ್ನು ಶ್ರೀಮಂತಗೊಳಿಸಿದ್ದಾರೆ.
ನನ್ನ ಮನಸ್ಸು 2010ನೇ ವರ್ಷವನ್ನು ನೆನಪಿಸಿಕೊಳ್ಳುತ್ತಿದೆ. ಅದು ಭಾರತದ ಸಂವಿಧಾನವು 60 ವರ್ಷಗಳನ್ನು ಪೂರೈಸಿದ ಸಮಯ. ವಿಷಾದದ ಸಂಗತಿಯೆಂದರೆ, ಆ ಸಂದರ್ಭಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಸಿಗಬೇಕಾದ ಮನ್ನಣೆ ಸಿಗಲಿಲ್ಲ. ಆದರೆ, ಸಂವಿಧಾನದ ಬಗೆಗಿನ ನಮ್ಮ ಸಾಮೂಹಿಕ ಕೃತಜ್ಞತೆ ಮತ್ತು ಬದ್ಧತೆಯನ್ನು ವ್ಯಕ್ತಪಡಿಸಲು, ನಾವು ಗುಜರಾತ್ ನಲ್ಲಿ 'ಸಂವಿಧಾನ ಗೌರವ ಯಾತ್ರೆ'ಯನ್ನು ಆಯೋಜಿಸಿದ್ದೆವು. ನಮ್ಮ ಸಂವಿಧಾನವನ್ನು ಆನೆಯ ಮೇಲೆ ಇರಿಸಿ ಮೆರವಣಿಗೆ ಮಾಡಲಾಯಿತು ಮತ್ತು ಸಮಾಜದ ವಿವಿಧ ಸ್ತರಗಳ ಜನರೊಂದಿಗೆ ನಾನೂ ಕೂಡ ಆ ಮೆರವಣಿಗೆಯಲ್ಲಿ ಭಾಗವಹಿಸುವ ಭಾಗ್ಯ ಪಡೆದಿದ್ದೆ.
ಸಂವಿಧಾನಕ್ಕೆ 75 ವರ್ಷಗಳು ತುಂಬಿದಾಗ, ಇದು ಭಾರತದ ಜನತೆಯ ಪಾಲಿಗೆ ಒಂದು ಅಭೂತಪೂರ್ವ ಮೈಲಿಗಲ್ಲಾಗಬೇಕೆಂದು ನಾವು ಸಂಕಲ್ಪ ಮಾಡಿದ್ದೆವು. ಈ ಐತಿಹಾಸಿಕ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ನಡೆಸಿ, ರಾಷ್ಟ್ರಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸೌಭಾಗ್ಯ ನಮಗೆ ಒಲಿಯಿತು. ಈ ಕಾರ್ಯಕ್ರಮಗಳು ದಾಖಲೆಯ ಮಟ್ಟದ ಸಾರ್ವಜನಿಕರ ಭಾಗವಹಿಸುವಿಕೆಗೆ ಸಾಕ್ಷಿಯಾದವು.
ಈ ಬಾರಿಯ ಸಂವಿಧಾನ ದಿನವು ಅನೇಕ ಕಾರಣಗಳಿಂದ ವಿಶೇಷವಾಗಿದೆ.
ಇದು ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಭಗವಾನ್ ಬಿರ್ಸಾ ಮುಂಡಾ ಅವರಂತಹ ಇಬ್ಬರು ಮಹಾನ್ ಚೇತನಗಳ 150ನೇ ಜಯಂತಿಯ ವರ್ಷವಾಗಿದೆ. ಇವರಿಬ್ಬರೂ ನಮ್ಮ ರಾಷ್ಟ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಸರ್ದಾರ್ ಪಟೇಲರ ದೂರದೃಷ್ಟಿಯ ನಾಯಕತ್ವವು ಭಾರತದ ರಾಜಕೀಯ ಏಕೀಕರಣವನ್ನು ಸಾಧ್ಯವಾಗಿಸಿತ್ತು. 370 ಮತ್ತು 35(ಎ) ವಿಧಿಗಳನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ನಾವು ದಿಟ್ಟ ಹೆಜ್ಜೆ ಇಡಲು ಅವರ ಸ್ಫೂರ್ತಿ ಮತ್ತು ದೃಢ ನಿಲುವುಗಳು ನಮಗೆ ಮಾರ್ಗದರ್ಶನ ನೀಡಿತು. ಭಾರತದ ಸಂವಿಧಾನವು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪೂರ್ಣವಾಗಿ ಜಾರಿಯಲ್ಲಿದ್ದು, ಅಲ್ಲಿನ ಜನರಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಹಿಂದುಳಿದ ಸಮುದಾಯಗಳಿಗೆ ಎಲ್ಲ ಸಾಂವಿಧಾನಿಕ ಹಕ್ಕುಗಳನ್ನು ಒದಗಿಸುತ್ತಿದೆ. ಹಾಗೆಯೇ, ನಮ್ಮ ಬುಡಕಟ್ಟು ಸಮುದಾಯಗಳಿಗೆ ನ್ಯಾಯ, ಘನತೆ ಮತ್ತು ಸಬಲೀಕರಣವನ್ನು ಒದಗಿಸುವ ಭಾರತದ ಸಂಕಲ್ಪಕ್ಕೆ, ಭಗವಾನ್ ಬಿರ್ಸಾ ಮುಂಡಾ ಅವರ ಜೀವನವು ಸದಾ ಸ್ಫೂರ್ತಿ ನೀಡುತ್ತಲೇ ಇದೆ.
ಈ ವರ್ಷ ನಾವು, ಒಂದುವರೆ ಶತಮಾನದಿಂದಲೂ ಭಾರತೀಯರ ಸಾಮೂಹಿಕ ಸಂಕಲ್ಪವನ್ನು ಪ್ರತಿಧ್ವನಿಸುತ್ತಿರುವ 'ವಂದೇ ಮಾತರಂ' ಗೀತೆಯ 150ನೇ ವಾರ್ಷಿಕೋತ್ಸವವನ್ನೂ ಆಚರಿಸುತ್ತಿದ್ದೇವೆ. ಅದೇ ಸಮಯದಲ್ಲಿ, ತಮ್ಮ ಜೀವನ ಮತ್ತು ತ್ಯಾಗದ ಮೂಲಕ ನಮಗೆ ಧೈರ್ಯ, ಕರುಣೆ ಮತ್ತು ಶಕ್ತಿಯ ಬೆಳಕನ್ನು ನೀಡುತ್ತಲೇ ಇರುವ ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಬಲಿದಾನ ದಿನವನ್ನೂ ನಾವಿಂದು ಸ್ಮರಿಸುತ್ತಿದ್ದೇವೆ.
ಈ ಎಲ್ಲಾ ಮಹಾನ್ ವ್ಯಕ್ತಿಗಳು ಮತ್ತು ಐತಿಹಾಸಿಕ ಮೈಲಿಗಲ್ಲುಗಳು ನಮಗೆ ನಮ್ಮ ಕರ್ತವ್ಯಗಳ ಪ್ರಾಮುಖ್ಯತೆಯನ್ನು ನೆನಪಿಸುತ್ತವೆ. ನಮ್ಮ ಸಂವಿಧಾನ ಕೂಡ 51ಎ ವಿಧಿ ಅಡಿಯಲ್ಲಿ 'ಮೂಲಭೂತ ಕರ್ತವ್ಯ'ಗಳ ಕುರಿತ ಪ್ರತ್ಯೇಕ ಅಧ್ಯಾಯದ ಮೂಲಕ ಇದಕ್ಕೇ ಒತ್ತು ನೀಡಿದೆ. ನಾವು ಸಾಮೂಹಿಕವಾಗಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಹೇಗೆ ಸಾಧಿಸಬಹುದು ಎಂಬುದಕ್ಕೆ ಈ ಕರ್ತವ್ಯಗಳು ನಮಗೆ ದಾರಿ ತೋರಿಸುತ್ತವೆ. ಮಹಾತ್ಮ ಗಾಂಧೀಜಿಯವರು ಯಾವಾಗಲೂ ನಾಗರಿಕರ ಕರ್ತವ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ನಾವು ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಅದಕ್ಕನುಗುಣವಾಗಿ ಹಕ್ಕು ಸೃಷ್ಟಿಯಾಗುತ್ತದೆ ಮತ್ತು ನಿಜವಾದ ಹಕ್ಕುಗಳು ಕರ್ತವ್ಯ ಪರಿಪಾಲನೆಯ ಫಲವಾಗಿಯೇ ದೊರೆಯುತ್ತವೆ ಎಂದು ಅವರು ನಂಬಿದ್ದರು.
ಈ ಶತಮಾನ ಪ್ರಾರಂಭವಾಗಿ ಈಗಾಗಲೇ 25 ವರ್ಷಗಳು ಕಳೆದಿವೆ. ಇನ್ನು ಕೇವಲ ಎರಡು ದಶಕಗಳ ನಂತರ, ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಲಭಿಸಿ 100 ವರ್ಷಗಳ ಸಂಭ್ರಮವನ್ನು ನಾವು ಆಚರಿಸಲಿದ್ದೇವೆ. 2049ಕ್ಕೆ, ನಮ್ಮ ಸಂವಿಧಾನವನ್ನು ಅಂಗೀಕರಿಸಿ ಶತಮಾನವೇ ಪೂರೈಸಲಿದೆ. ಇಂದು ನಾವು ರೂಪಿಸುವ ನೀತಿಗಳು, ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ನಮ್ಮೆಲ್ಲರ ಸಾಮೂಹಿಕ ಪ್ರಯತ್ನಗಳು ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸಲಿವೆ.
ಈ ಮಹತ್ತರ ಗುರಿಯಿಂದ ಪ್ರೇರಿತರಾಗಿ, 'ವಿಕಸಿತ ಭಾರತ'ದ ಕನಸನ್ನು ಸಾಕಾರಗೊಳಿಸುವ ಹಾದಿಯಲ್ಲಿ ಮುನ್ನಡೆಯುವಾಗ, ದೇಶದ ಬಗೆಗಿನ ನಮ್ಮ ಕರ್ತವ್ಯಗಳಿಗೆ ನಾವು ಸದಾ ಅಗ್ರಸ್ಥಾನ ನೀಡಬೇಕು.
ನಮ್ಮ ದೇಶ ನಮಗೆ ಅಪಾರವಾದುದ್ದನ್ನು ನೀಡಿದೆ, ಇದು ನಮ್ಮ ಅಂತರಾಳದಲ್ಲಿ ಕೃತಜ್ಞತಾ ಭಾವವನ್ನು ಮೂಡಿಸುತ್ತದೆ. ನಾವು ಈ ಕೃತಜ್ಞತಾ ಭಾವನೆಯೊಂದಿಗೆ ಬದುಕಿದಾಗ, ಕರ್ತವ್ಯ ನಿರ್ವಹಣೆಯು ನಮ್ಮ ಸಹಜ ಸ್ವಭಾವವೇ ಆಗಿಬಿಡುತ್ತದೆ. ನಮ್ಮ ಕರ್ತವ್ಯಗಳನ್ನು ಪರಿಪಾಲಿಸಲು, ಪ್ರತಿಯೊಂದು ಕೆಲಸದಲ್ಲೂ ನಮ್ಮ ಪೂರ್ಣ ಸಾಮರ್ಥ್ಯ ಮತ್ತು ಸಮರ್ಪಣಾ ಮನೋಭಾವವನ್ನು ಧಾರೆ ಎರೆಯುವುದು ಅತ್ಯಗತ್ಯ. ನಮ್ಮ ಪ್ರತಿಯೊಂದು ನಡೆಯೂ ಸಂವಿಧಾನಕ್ಕೆ ಬಲ ತುಂಬುವಂತಿರಬೇಕು ಹಾಗೂ ರಾಷ್ಟ್ರದ ಗುರಿ ಮತ್ತು ಹಿತಾಸಕ್ತಿಗಳನ್ನು ಎತ್ತಿ ಹಿಡಿಯುವಂತಿರಬೇಕು. ನಮ್ಮ ಸಂವಿಧಾನದ ಶಿಲ್ಪಿಗಳು ಕಂಡ ಕನಸುಗಳನ್ನು ನನಸಾಗಿಸುವುದು ಅಂತಿಮವಾಗಿ ನಮ್ಮದೇ ಹೊಣೆಗಾರಿಕೆ. ಯಾವಾಗ ನಾವು ಇಂತಹ ಕರ್ತವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸುತ್ತೇವೆಯೋ, ಆಗ ನಮ್ಮ ರಾಷ್ಟ್ರದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯು ಹಲವು ಪಟ್ಟು ಹೆಚ್ಚುತ್ತದೆ.
ನಮ್ಮ ಸಂವಿಧಾನವು ನಮಗೆ ಮತದಾನದ ಹಕ್ಕನ್ನು ನೀಡಿದೆ. ನಾಗರಿಕರಾಗಿ, ನಾವು ನೋಂದಾಯಿಸಿಕೊಂಡಿರುವ ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಚುನಾವಣೆಗಳಲ್ಲಿ ಮತ ಚಲಾಯಿಸುವ ಅವಕಾಶವನ್ನು ಎಂದಿಗೂ ತಪ್ಪಿಸಿಕೊಳ್ಳಬಾರದು ಎಂಬುದು ನಮ್ಮ ಕರ್ತವ್ಯ. ಇತರರಿಗೂ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ, 18 ವರ್ಷ ತುಂಬುತ್ತಿರುವ ಯುವಜನರನ್ನು ಅಭಿನಂದಿಸಲು, ಪ್ರತಿ ವರ್ಷ ನವೆಂಬರ್ 26ರಂದು ಶಾಲಾ-ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ನಾವು ಆಲೋಚಿಸಬಹುದು. ಈ ಮೂಲಕ, ತಾವು ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ, ರಾಷ್ಟ್ರ ನಿರ್ಮಾಣ ಕಾರ್ಯದ ಸಕ್ರಿಯ ಪಾಲುದಾರರು ಎಂಬ ಭಾವನೆ ನಮ್ಮ ನವ ಮತದಾರರಲ್ಲಿ ಮೂಡುತ್ತದೆ.
ನಾವು ನಮ್ಮ ಯುವಜನರಲ್ಲಿ ಜವಾಬ್ದಾರಿ ಮತ್ತು ಹೆಮ್ಮೆಯ ಭಾವನೆಯನ್ನು ತುಂಬಿ ಸ್ಫೂರ್ತಿ ನೀಡಿದಾಗ, ಅವರು ತಮ್ಮ ಜೀವನಪರ್ಯಂತ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧರಾಗಿ ಉಳಿಯುತ್ತಾರೆ. ಈ ಬದ್ಧತೆಯೇ ಒಂದು ಬಲಿಷ್ಠ ರಾಷ್ಟ್ರದ ಭದ್ರ ಬುನಾದಿಯಾಗಿದೆ.
ಬನ್ನಿ, ಈ ಸಂವಿಧಾನ ದಿನದಂದು, ಈ ಮಹಾನ್ ರಾಷ್ಟ್ರದ ಪ್ರಜೆಗಳಾಗಿ ನಮ್ಮ ಕರ್ತವ್ಯಗಳನ್ನು ನಿಭಾಯಿಸುವ ಪ್ರತಿಜ್ಞೆಯನ್ನು ಪುನರುಚ್ಚರಿಸೋಣ. ಹೀಗೆ ಮಾಡುವುದರಿಂದ, ಅಭಿವೃದ್ಧಿ ಹೊಂದಿದ ಮತ್ತು ಸಶಕ್ತವಾದ ವಿಕಸಿತ ಭಾರತದ ನಿರ್ಮಾಣಕ್ಕೆ ನಾವೆಲ್ಲರೂ ಅರ್ಥಪೂರ್ಣವಾಗಿ ಕೊಡುಗೆ ನೀಡಬಹುದು.
ನಿಮ್ಮ,
ನರೇಂದ್ರ ಮೋದಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us