/newsfirstlive-kannada/media/media_files/2025/08/02/prajwal-revanna2-2025-08-02-08-06-00.jpg)
ಕೆ.ಆರ್.ನಗರ ಮಹಿಳೆಯ ಅತ್ಯಾಚಾರ ಕೇಸ್ ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿನ್ನೆಯೇ( ಶುಕ್ರವಾರ ) ತೀರ್ಪು ನೀಡಿದೆ. ಇಂದು ಕೋರ್ಟ್ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಹೀಗಾಗಿ ಪ್ರಜ್ವಲ್ ರನ್ನು ಇಂದು ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲಿನಿಂದ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿರುವ ಜನಪ್ರತಿನಿಧಿಗಳ ಕೋರ್ಟ್ ಹಾಲ್ ಗೆ ಕರೆತಂದು ಹಾಜರುಪಡಿಸಲಾಗಿದೆ.
ಜಡ್ಜ್ ಸಂತೋಷ ಗಜಾನನ ಭಟ್ ಅವರ ಎದುರು ಇಂದು ಪ್ರಜ್ವಲ್ ಗೆ ವಿಧಿಸಬೇಕಾದ ಶಿಕ್ಷೆಯ ಪ್ರಮಾಣದ ಬಗ್ಗೆ ಪರ-ವಿರೋಧ ವಾದ ನಡೆದಿದೆ. ಪ್ರಾಸಿಕ್ಯೂಷನ್ ಪರವಾಗಿ ವಕೀಲ ಬಿ.ಎನ್.ಜಗದೀಶ್, ಹಿರಿಯ ವಕೀಲ ಅಶೋಕ್ ನಾಯ್ಕ್ ವಾದ ಮಂಡಿಸಿದ್ದರು. ಪ್ರಜ್ವಲ್ ಗೆ ಕನಿಷ್ಠ ಹತ್ತು ವರ್ಷ ಜೈಲುಶಿಕ್ಷೆ, ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ವಾದಿಸಿದ್ದರು. ಇನ್ನೂ ಪ್ರಜ್ವಲ್ ಪರ ವಕೀಲೆ ನಳಿನಿ ಮಾಯಗೌಡ, ಪ್ರಜ್ವಲ್ ಗೆ ಇನ್ನೂ 34 ವರ್ಷ ವಯಸ್ಸು. ಪ್ರಜ್ವಲ್ ವಿರುದ್ಧ ಷಡ್ಯಂತ್ರ ಮಾಡಿ 2024ರ ಲೋಕಸಭಾ ಚುನಾವಣೆಯ ವೇಳೆಯಲ್ಲೇ ವಿಡಿಯೋಗಳನ್ನು ವೈರಲ್ ಮಾಡಲಾಗಿದೆ. ಚಿಕ್ಕ ವಯಸ್ಸಿನ ಪ್ರಜ್ವಲ್ ರನ್ನು ಜೀವನ ಪರ್ಯಂತ ಜೈಲಿನಲ್ಲಿ ಕೊಳೆಯುವಂತೆ ಮಾಡಬಾರದು ಎಂದು ವಾದಿಸಿದ್ದರು. ಪ್ರಜ್ವಲ್ ಗೆ ಕಡಿಮೆ ಜೈಲುಶಿಕ್ಷೆ ವಿಧಿಸುವಂತೆ ನಳಿನಿ ಮಾಯಗೌಡ ವಾದಿಸಿದ್ದರು. ಶಿಕ್ಷೆಯ ಪ್ರಮಾಣದ ಬಗ್ಗೆ ಪರ- ವಿರೋಧ ವಾದ ಪ್ರತಿವಾದ ಹೇಗೆ ನಡೆಯಿತು ಅನ್ನೋ ಇಂಟರೆಸ್ಟಿಂಗ್ ವಾದದ ಅಂಶಗಳು ಇಲ್ಲಿವೆ ಓದಿ.
ಶಿಕ್ಷೆ ಪ್ರಮಾಣದ ಬಗ್ಗೆ ವಿಚಾರಣೆ ಆರಂಭ ಮೊದಲಿಗೆ ಪ್ರಾಸಿಕ್ಯೂಷನ್ ಪರ ವಕೀಲರಿಗೆ ವಾದಿಸಲು ಕೋರ್ಟ್ ಸೂಚನೆ ನೀಡಿತ್ತು. ಹೀಗಾಗಿ ಪ್ರಾಸಿಕ್ಯೂಷನ್ ಪರ ಎಸ್ ಪಿಪಿ ಬಿ.ಎನ್.ಜಗದೀಶ್, ಅಶೋಕ್ ನಾಯಕ್ ವಾದ ಮಂಡನೆ ಮಾಡಿದ್ದರು.
ಪ್ರಾಸಿಕ್ಯೂಷನ್ ನಿಂದ ಗರಿಷ್ಠ ಶಿಕ್ಷೆಗೆ ಕೋರ್ಟ್‌ಗೆ ಮನವಿ
ಪ್ರಾಸಿಕ್ಯೂಷನ್ ಪರ ಎಸ್ ಪಿಪಿ ಬಿ.ಎನ್.ಜಗದೀಶ್ ವಾದ ಆರಂಭಿಸಿದ್ದರು. ಅಪರಾಧಿ ಪ್ರಜ್ವಲ್ ರೇವಣ್ಣಗೆ ಗರಿಷ್ಟ ಶಿಕ್ಷೆ ಎಷ್ಟು? ಕನಿಷ್ಟ ಶಿಕ್ಷೆ ಎಷ್ಟು ಎಂದು ಕಾನೂನಿನಲ್ಲಿ ಸ್ಪಷ್ಟವಾಗಿದೆ. ಕೇವಲ ಅತ್ಯಾಚಾರವಾಗಿದ್ದರೆ 10 ವರ್ಷದಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸಲು ಅವಕಾಶವಿತ್ತು. ಆದರೆ ಈ ಕೇಸ್ ನಲ್ಲಿ ಪದೇಪದೇ ಅತ್ಯಾಚಾರವಾಗಿದೆ. ಅಧಿಕಾರಯುತ ಸ್ಥಿತಿಯಲ್ಲಿ ಅತ್ಯಾಚಾರದ ಅಪರಾಧ ಸಾಬೀತಾಗಿದೆ . ಹೀಗಾಗಿ ಕನಿಷ್ಟ 10 ವರ್ಷ ಹಾಗೂ ಗರಿಷ್ಟ ಜೀವನ ಪರ್ಯಂತ ಸೆರೆವಾಸದ ಅವಕಾಶವಿದೆ. ಮಹಿಳೆ ಶಿಕ್ಷಿತಳಲ್ಲ, ಬಡ ಕೂಲಿ ಕೆಲಸದ ಮಹಿಳೆ. ದುರದೃಷ್ಟವಶಾತ್ ಆಕೆಗೆ ಯಾವುದೇ ಸ್ಥಾನಮಾನವಿಲ್ಲ. ವಿಡಿಯೋ ನೋಡಿದರೆ ಕೃತ್ಯದ ತೀವ್ರತೆ ಸ್ಪಷ್ಟವಾಗಿದೆ. 10 ಸಾವಿರ ಸಂಬಳಕ್ಕೆ ಇವರು ಕೆಲಸ ಮಾಡುತ್ತಿದ್ದರು. ಪದೇಪದೇ ಅತ್ಯಾಚಾರ ಮಾಡಿದ್ದಾರೆ. ಕೆಲಸ ಬಿಟ್ಟು ಓಡಿಹೋಗುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಆಕೆಯ ಬಟ್ಟೆ ಬರೆಗಳನ್ನು ಬಿಟ್ಟು ಆಕೆ ತನ್ನ ಮನೆಗೆ ಓಡಬೇಕಾಯಿತು ಎಂದು ಪ್ರಾಸಿಕ್ಯೂಷನ್ ಪರ ವಕೀಲ ಬಿ.ಎನ್.ಜಗದೀಶ್ ವಾದಿಸಿದ್ದರು. ಆಕೆಯ ಹೇಳಿಕೆ ಓದಲು ವಕೀಲ ಬಿ.ಎನ್. ಜಗದೀಶ್ ಮುಂದಾದರು. ಆಗ ಮಹಿಳೆಯ ಹೇಳಿಕೆ ಮತ್ತೆ ಓದುವ ಅಗತ್ಯವಿಲ್ಲ ಎಂದು ಜಡ್ಜ್ ಸಂತೋಷ ಗಜಾನನ ಭಟ್ ಹೇಳಿದ್ದರು.
ಅಪರಾಧಿಯ ಕೈಯಲ್ಲಿ ಆಕೆ ಸುಲಭದ ಬಲಿಯಾಗಿದ್ದಳು. ಅತ್ಯಾಚಾರ ಕೇವಲ ದೇಹದ ಮೇಲಲ್ಲ, ಮನಸ್ಸಿನ ಮೇಲಾಗಿದೆ . ವಿಡಿಯೋ ನೋಡಿದ ಬಳಿಕ ಆಕೆ ಆತ್ಮಹತ್ಯೆಗೆ ನಿರ್ಧರಿಸಿದ್ದಳು. ಜೀವಕ್ಕಿಂತ ಹೆಚ್ಚಿನ ಹಾನಿ ಸಂತ್ರಸ್ತ ಮಹಿಳೆಗಾಗಿದೆ. ಒಪ್ಪಿಗೆಯಿಲ್ಲದೇ ಲೈಂಗಿಕ ಕ್ರಿಯೆಯ ಚಿತ್ರೀಕರಣ ಮಾಡಲಾಗಿದೆ. ಆಕೆಯನ್ನು ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಲಾಗಿದೆ. ಅತ್ಯಾಚಾರದ ರೀತಿ ಆತನ ವಕ್ರ ಮನಸ್ಥಿತಿ(ಸ್ಯಾಡಿಸ್ಟ್ ಮನಸ್ಥಿತಿ ) ತೋರಿಸುತ್ತದೆ. ಪ್ರಜ್ವಲ್ ಸಂಸದನಾಗಿದ್ದೂ ಇಂತಹ ದುಷ್ಕೃತ್ಯ ಎಸಗಿದ್ದಾನೆ. ಕಾನೂನು ತಿಳಿದಿದ್ದೂ ಇಂತಹ ನೀಚ ಕೃತ್ಯ ಎಸಗಿದ್ದಾನೆ. ಇದು ಇನ್ನೂ ಗಂಭೀರವಾದ ಅಪರಾಧ. ಈತನ ಮೇಲೆ ಈ ರೀತಿಯ ಇನ್ನಷ್ಟು ಕೇಸ್ ಗಳಿವೆ. ಬಹಳಷ್ಟು ಜನರ ಅಶ್ಲೀಲ ವಿಡಿಯೋ ಮಾಡಿದ್ದಾನೆ. ವಿಡಿಯೋ ಚಿತ್ರೀಕರಿಸಿರುವುದು ಗಂಭೀರ ಅಪರಾಧ . ಪ್ರಜ್ವಲ್ ಗೆ ಗರಿಷ್ಟ ಶಿಕ್ಷೆ ವಿಧಿಸಿ, ಇತರರಿಗೆ ಎಚ್ಚರಿಕೆಯಾಗಬೇಕು. ಜೀವನಪರ್ಯಂತ ಸೆರೆವಾಸದ ಶಿಕ್ಷೆ ವಿಧಿಸಲು ಎಸ್ ಪಿಪಿ ಬಿ.ಎನ್.ಜಗದೀಶ್ ಕೋರ್ಟ್ ಗೆ ಮನವಿ ಮಾಡಿದ್ದರು.
ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿ ಆಕೆಯ ಹೇಳಿಕೆ ಪಡೆದಿದ್ದಾರೆ. ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸಿರುವುದೂ ಗಂಭೀರ ಅಪರಾಧ. ಈತ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ತೋರಿಲ್ಲ. ಈತನಿಗೆ ಕಠಿಣ ಶಿಕ್ಷೆ ಒದಗಿಸಿ ಸಮಾಜಕ್ಕೆ ಸಂದೇಶ ನೀಡಬೇಕು. ಹಣ ಅಧಿಕಾರವಿರುವ ಇವರಿಗೆ ಕಡಿಮೆ ಶಿಕ್ಷೆಯಾಗಬಾರದು ಎಂದು ಪ್ರಾಸಿಕ್ಯೂಷನ್ ಪರ ವಕೀಲ ಬಿ.ಎನ್.ಜಗದೀಶ್ ವಾದಿಸಿದ್ದರು. ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಎಸ್ ಪಿಪಿ ಬಿ.ಎನ್.ಜಗದೀಶ್ ವಾದ ಮಂಡನೆ ಮಾಡಿದ್ದರು. ಕೆಳ ನ್ಯಾಯಾಲಯ ಕಡಿಮೆ ಶಿಕ್ಷೆ ವಿಧಿಸಿದಾಗ ಸುಪ್ರೀಂಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದ ಉದಾಹರಣೆಗಳಿವೆ. ಅಪರಾಧಿಯ ವಕ್ರ ಮನಸ್ಥಿತಿ ಗಮನದಲ್ಲಿಟ್ಟುಕೊಂಡು ಶಿಕ್ಷೆಯ ಪ್ರಮಾಣ ಪ್ರಕಟಿಸಬೇಕೆಂದು ವಕೀಲ ಬಿ.ಎನ್. ಜಗದೀಶ್ ಕೋರ್ಟ್ ಗೆ ಮನವಿ ಮಾಡಿದ್ದರು.
ಇನ್ನೂ ಪ್ರಾಸಿಕ್ಯೂಷನ್ ಪರ ಬಿ.ಎನ್.ಜಗದೀಶ್ ಬಳಿಕ ಪ್ರಾಸಿಕ್ಯೂಷನ್ ಪರ ಹಿರಿಯ ವಕೀಲ ಅಶೋಕ್ ನಾಯ್ಕ್ ವಾದ ಮಂಡಿಸಿದ್ದರು. ಜೀವಾವಧಿ ಶಿಕ್ಷೆ, ಜೊತೆಗೆ ಅತಿ ಹೆಚ್ಚು ದಂಡ ವಿಧಿಸಬೇಕು. ಒಂದು ಕೇಸ್ ನಲ್ಲಿ 25 ಲಕ್ಷ ದಂಡ ವಿಧಿಸಿದ ಉದಾಹರಣೆ ಇದೆ . ಪ್ರಜ್ವಲ್ ಬಡವನಲ್ಲ ಕರೋಡ್ ಪತಿಯಾಗಿದ್ದಾನೆ. ಹೀಗಾಗಿ ಹೆಚ್ಚಿನ ದಂಡ ವಿಧಿಸಿ ಅದರ ದೊಡ್ಡ ಭಾಗ ಮಹಿಳೆಗೆ ನೀಡಬೇಕು . ವಿಡಿಯೋ ವೈರಲ್ ಆಗಿ ಆಕೆ ದುಡಿಯಲು ಎಲ್ಲೂ ಹೋಗದಂತಾಗಿದೆ . ಹೀಗಾಗಿ ಗರಿಷ್ಟ ಶಿಕ್ಷೆ ಹಾಗೂ ಹೆಚ್ಚು ದಂಡ ವಿಧಿಸಬೇಕು. ಸೆಕ್ಷನ್ 357 ರಡಿಯಲ್ಲಿ ದೊಡ್ಡ ಮೊತ್ತದ ದಂಡ ವಿಧಿಸಬೇಕು ಎಂದು ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡನೆ ಮಾಡಿದ್ದರು.
ರೇಪ್ ಸಂತ್ರಸ್ತೆಗಿಂತ ಪ್ರಜ್ವಲ್‌ಗೆ ಹೆಚ್ಚಿನ ಹಾನಿ ಎಂದ ಪ್ರಜ್ವಲ್ ಪರ ವಕೀಲರು
ಬಳಿಕ ಪ್ರಜ್ವಲ್ ಪರ ಹಿರಿಯ ವಕೀಲೆ ನಳಿನಾ ಮಾಯಗೌಡ ವಾದಿಸಿದ್ದರು. ಎಸ್ ಪಿಪಿ ಗಳು ಸಮಾಜಕ್ಕೆ ಸಂದೇಶ ನೀಡಬೇಕೆಂದು ವಾದಿಸಿದ್ದಾರೆ. ಯುವ ಸಂಸದನಾಗಿ ಪ್ರಜ್ವಲ್ ಜನಸೇವೆ ಮಾಡಿದ್ದಾನೆ. ಹಣ ಮಾಡಲೆಂದು ಆತ ರಾಜಕಾರಣಕ್ಕೆ ಸೇರಿಲ್ಲ . 2024 ರ ಲೋಕಸಭಾ ಚುನಾವಣೆ ವೇಳೆಯೇ ವಿಡಿಯೋಗಳು ಏಕೆ ವೈರಲ್ ಆದವು. ಪ್ರಜ್ವಲ್ ವಿರುದ್ಧ ರಾಜಕೀಯ ಪ್ರೇರಿತ ಕ್ರಮವಾಗಿದೆ . ಆರೋಪಿಯ ರಾಜಕೀಯ ಸ್ಥಾನಮಾನ ಶಿಕ್ಷೆಗೆ ಕಾರಣವಾಗಬಾರದು . ಇಷ್ಟು ದಿನದ ಒಳ್ಳೆ ಹೆಸರು ಏನಾಗಬೇಕು . ಪ್ರಜ್ವಲ್ ವಯಸ್ಸು ಕೇವಲ 34 ವರ್ಷ . ಸಂತ್ರಸ್ತೆ ಸಮಾಜದಿಂದ ತಿರಸ್ಕೃತಗೊಂಡಿಲ್ಲ . ತನ್ನ ಸಂಸಾರದೊಂದಿಗೇ ಎಂದಿನಂತೆ ಜೀವ ಸಾಗಿಸುತ್ತಿದ್ದಾರೆ. ಆಕೆಗೆ ವಿವಾಹವಾಗಿ ಮಕ್ಕಳಾಗಿವೆ,ಜೀವನ ನಡೆಯುತ್ತಿದೆ. ಆದರೆ ಪ್ರಜ್ವಲ್ ಜೀವನ ಹೆಸರು ಹಾಳಾಗಿದೆ. ಪ್ರಜ್ವಲ್ ಯುವಕನಾಗಿದ್ದು ಆತನ ಭವಿಷ್ಯವನ್ನೂ ಗಮನದಲ್ಲಿಡಬೇಕು. ಈಗಾಗಲೇ ಮಾಧ್ಯಮಗಳಲ್ಲಿ ಆತನ ತೇಜೋವಧೆಯಾಗಿದೆ . ಬಂಧನವಾದ ದಿನದಿಂದಲೂ ಜೈಲಿನಲ್ಲಿದ್ದಾನೆ. ಪ್ರಜ್ವಲ್ ಗೆ ವಯಸ್ಸಾದ ತಂದೆ ತಾಯಿ ಇದ್ದಾರೆ . ಇವರ ತಾತ ಮಾಜಿ ಪ್ರಧಾನಿಯಾಗಿದ್ದಾರೆ. ಅವರ ರಾಜಕೀಯ ಸ್ಥಾನಮಾನ ತೀವ್ರ ಶಿಕ್ಷೆಗೆ ಕಾರಣವಾಗಬಾರದು. ಚುನಾವಣೆ ಗೆಲ್ಲುವ ವೇಳೆಯೇ ಇಂತಹ ವಿಡಿಯೋ ಹರಿಬಿಡಲಾಗಿದೆ. ಸಂತ್ರಸ್ತೆ ಗಿಂತ ಅಪರಾಧಿಗೇ ಹೆಚ್ಚಿನ ಹಾನಿಯಾಗಿದೆ ಎಂದು ಪ್ರಜ್ವಲ್ ಪರ ವಕೀಲೆ ನಳಿನಿ ಮಾಯಗೌಡ ವಾದಿಸಿದ್ದರು.
ಪ್ರಜ್ವಲ್ ಪರ ವಕೀಲರ ಈ ವಾದಕ್ಕೆ ಎಸ್ ಪಿಪಿ ಬಿ.ಎನ್. ಜಗದೀಶ್ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂತ್ರಸ್ತೆ ಸಾಮಾನ್ಯ ಜೀವನ ಸಾಗಿಸುತ್ತಿದ್ದಾಳೆಂಬ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅತ್ಯಾಚಾರಕ್ಕೊಳಗಾದ ಮಹಿಳೆಗೆ ಹೀಗೆ ಹೇಳುವುದು ಸರಿಯಲ್ಲವೆಂದು ಬಿ.ಎನ್. ಜಗದೀಶ್ ಆಕ್ಷೇಪಿಸಿದ್ದರು.
ಕೊನೆಗೆ ಕೋರ್ಟ್ ನೀವು ಹೇಳುವುದು ಏನಾದರೂ ಇದೆಯಾ ಎಂದು ಅಪರಾಧಿ ಪ್ರಜ್ವಲ್ ರೇವಣ್ಣಗೆ ಪ್ರಶ್ನೆ ಮಾಡಿತು. ಇದಕ್ಕೆ ಉತ್ತರಿಸಿದ ಪ್ರಜ್ವಲ್, ನಾನು ಹಲವು ಮಹಿಳೆಯರೊಂದಿಗೆ ಇಂತಹ ಕೃತ್ಯ ನಡೆಸಿದ್ದೇನೆ ಎಂದಿದ್ದಾರೆ. ನಾನು ಸಂಸದನಾದ ವೇಳೆ ಯಾರೂ ಇಂತಹ ಆರೋಪ ಮಾಡಿರಲಿಲ್ಲ . ನಾನು ರೇಪ್ ಮಾಡಿದ್ದರೆ ಅವರು ಯಾರಿಗೂ ಏಕೆ ಹೇಳಲಿಲ್ಲ? ನಾವಣೆ ವೇಳೆಯೇ ಇಂತಹ ಆರೋಪ ಮಾಡಿದ್ದಾರೆ . ಯಾವ ಮಹಿಳೆಯೂ ತನಗೆ ರೇಪ್ ಮಾಡಿದ್ದೇನೆ ಎಂದು ಹೇಳಲು ಮುಂದೆ ಬಂದಿರಲಿಲ್ಲ . ಆದರೆ ಪೊಲೀಸರು ಇಂತಹ ಕೆಲಸಮಾಡಿದ್ದಾರೆ . ಕೋರ್ಟ್ ಆದೇಶಕ್ಕೆ ನಾನು ತಲೆಬಾಗುತ್ತೇನೆ ಎಂದು ಇಂಗ್ಲೀಷ್ ನಲ್ಲಿ ಪ್ರಜ್ವಲ್ ರೇವಣ್ಣ, ಕೋರ್ಟ್ ಗೆ ತಿಳಿಸಿದ್ದರು.
ಬಳಿಕ ಅಳುತ್ತಾ ಕನ್ನಡದಲ್ಲಿ ಪ್ರಜ್ವಲ್ ಮಾತನಾಡಿದ್ದರು. ತಂದೆತಾಯಿಗಳನ್ನು 6 ತಿಂಗಳಿಂದ ನೋಡಿಲ್ಲ ಎಂದು ಪ್ರಜ್ವಲ್ ಕೋರ್ಟ್ ಗೆ ಹೇಳಿದ್ದರು.
ಏನು ಓದಿದ್ದೀರಾ ಎಂದು ಜಡ್ಜ್ ಸಂತೋಷ್ ಗಜಾನನ ಭಟ್, ಅಪರಾಧಿ ಪ್ರಜ್ವಲ್ ರನ್ನು ಕೇಳಿದ್ದರು.
ನಾನು ಮೆಕ್ಯಾನಿಕಲ್ ಎಂಜಿನಿಯರ್ ಓದಿದ್ದೇನೆ. ನನ್ನ ರೆಕಾರ್ಡ್ ಪರಿಶೀಲಿಸಿ, ನಾನು ಮೆರಿಟ್ ವಿದ್ಯಾರ್ಥಿ.
ನಾನು ಮಾಡಿದ ಒಂದೇ ತಪ್ಪೆಂದರೆ ರಾಜಕೀಯದಲ್ಲಿ ಬೇಗ ಬೆಳೆದದ್ದು. ಅದೇ ನನಗೆ ಇಂದು ಮುಳುವಾಗಿದೆ ಎಂದು ಅಳುತ್ತಾ ಪ್ರಜ್ವಲ್ ಹೇಳಿದ್ದರು. ನಾನು ಮಾಧ್ಯಮಗಳನ್ನೂ ಈ ವಿಚಾರದಲ್ಲಿ ದೂಷಿಸುವುದಿಲ್ಲ ಎಂದು ಪ್ರಜ್ವಲ್ ಹೇಳಿದ್ದರು.
ಹೀಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಪ್ರಜ್ವಲ್ ಗೆ ವಿಧಿಸಬೇಕಾದ ಶಿಕ್ಷೆಯ ಪ್ರಮಾಣದ ಬಗ್ಗೆ ವಾದ- ಪ್ರತಿವಾದ ನಡೆದಿದೆ. ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಇಂದು(ಆಗಸ್ಟ್ 2) ಮಧ್ಯಾಹ್ನ 2.45 ಕ್ಕೆ ಪ್ರಕಟಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ