/newsfirstlive-kannada/media/media_files/2025/12/08/belgavi-suvarna-soudha-2025-12-08-12-13-02.jpg)
ಬೆಳಗಾವಿ ಸುವರ್ಣಸೌಧ
ಇಂದಿನಿಂದ 10 ದಿನಗಳ ಕಾಲ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಬೆಳಗಾವಿಯ ಸುವರ್ಣ ಸೌಧ ಸಜ್ಜುಗೊಂಡಿದೆ. ಉತ್ತರ ಕರ್ನಾಟಕದ ಆಶಯಗಳು, ನಿರೀಕ್ಷೆಗಳ ಪೂರಕವಾಗಿ ನಡೆಯುವ ಈ ಅಧಿವೇಶನ ರಾಜಕೀಯವಾಗಿಯೂ ಸದ್ದು ಮಾಡುವುದು ಬಹುತೇಕ ಖಚಿತವಾಗಿದೆ. ದೆಹಲಿ ಬಾಂಬ್ ಬ್ಲಾಸ್ಟ್ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ 6 ಸಾವಿರಕ್ಕೂ ಅಧಿಕ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಸರ್ಕಾರದ ವೈಫಲ್ಯಗಳ ವಿರುದ್ಧ ಧ್ವನಿ ಎತ್ತಲು ಪ್ರತಿಪಕ್ಷಗಳು ಕೂಡ ರೆಡಿ ಆಗಿದ್ದು, ಅದನ್ನು ಎದುರಿಸಲು ಸರ್ಕಾರ ಕೂಡ ತಂತ್ರಗಳನ್ನು ಹೆಣೆದಿದೆ. ಸದನದ ಹೊರಗೆ ನಡೆಯುವ 84 ಪ್ರತಿಭಟನೆಗಳು ಸರ್ಕಾರಕ್ಕೆ ನುಂಗಲಾರದ ಬಿಸಿತುಪ್ಪವಾಗಿದೆ. ಹೇಗಿದೆ ಗೊತ್ತಾ ಅಧಿವೇಶನದ ಸಿದ್ಧತೆ ಅಂತಿರಾ? ಈ ಸ್ಟೋರಿ ಓದಿ.
ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆಯೇ ಇಡೀ ಸರ್ಕಾರ ಇದೀಗ ರಾಜಧಾನಿ ಬೆಂಗಳೂರಿನಿಂದ ಬೆಳಗಾವಿಗೆ ಶಿಫ್ಟ್ ಆಗಿದೆ. ಇಂದಿನಿಂದ ಡಿಸೆಂಬರ್ 19 ರವರೆಗೆ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿಯೂ ಸಜ್ಜುಗೊಂಡಿದೆ. ಅಧಿವೇಶನಕ್ಕೆ ವೇದಿಕೆ ಕಲ್ಪಿಸುವ ಸುವರ್ಣಸೌಧದಲ್ಲಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಹಲವು ಸಚಿವರು ಅಧಿವೇಶನದ ಮುನ್ನಾ ದಿನವೇ ಬೆಳಗಾವಿಗೆ ಬಂದಿಳಿದಿದ್ದಾರೆ. 10 ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಸಮರ ಸಾರಲು ಮೈತ್ರಿ ಪಡೆಯೂ ಸನ್ನದ್ಧವಾಗಿದೆ. ಈ ಸಲ ಸರ್ಕಾರದ ಚಳಿ ಬಿಡಿಸಲು ಸದನದ ಒಳಗೆ ಪ್ರತಿಪಕ್ಷಗಳು ತಂತ್ರ ರೂಪಿಸಿದ್ರೆ, ಮತ್ತೊಂದೆಡೆ ಸರ್ಕಾರದ ವಿರುದ್ಧ ಸಮರ ಸಾರಲು 84 ಸಂಘಟನೆಗಳು ನಿರ್ಧರಿಸಿವೆ. ಪ್ರವಾಹದಿಂದ ಆಗಿರುವ ಅವಾಂತರಗಳು, ಅಪಾರ ಪ್ರಮಾಣದ ಬೆಳೆಹಾನಿ, ಕಬ್ಬು ಬೆಳೆಗಾರರ ಸಮಸ್ಯೆಗಳು, ಉದ್ಯೋಗ ಆಕಾಂಕ್ಷಿಗಳ ಬೇಡಿಕೆಗಳು, ಬೆಳಗಾವಿ ಜಿಲ್ಲಾ ವಿಭಜನೆ ಸಂಬಂಧ ನಡೆಯುತ್ತಿರುವ ಹೋರಾಟಗಳು ಸರ್ಕಾರಕ್ಕೆ ಈ ಸಲ ಬಿಸಿ ತುಪ್ಪವಾಗಿವೆ. ಈಗಾಗಲೇ ಡಿಸಿಎಂ ಡಿಕೆಶಿ ಬೆಂಗಳೂರು ಮನೆಯಲ್ಲಿ ನಡೆದ ಉಪಹಾರ ಚರ್ಚೆಯಲ್ಲಿ ಅಧಿವೇಶನ ಎದುರಿಸುವ ಸಂಬಂಧ ಸಿಎಂ ಹಾಗೂ ಡಿಸಿಎಂ ಚರ್ಚೆ ನಡೆಸಿದ್ದಾರೆ. ಅಧಿವೇಶನ ಎರಡನೇ ದಿನ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಬೃಹತ್ ಪ್ರತಿಭಟನೆಗೆ ನಿರ್ಧರಿಸಿದೆ. ಬಳಿಕ ಸುವರ್ಣಸೌಧ ಮುತ್ತಿಗೆಗೂ ನಿರ್ಧರಿಸಿದ್ದು, ಪೊಲೀಸರು ಮಾತ್ರ ಈವರೆಗೆ ಅವಕಾಶ ನೀಡಿಲ್ಲ. ಬಳಿಕ ಅಧಿವೇಶನ ಮುಗಿಯುವವರೆಗೂ ಸಾಲು ಸಾಲಾಗಿ 84 ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಪ್ರತಿಭಟನೆಗೆ ಸುವರ್ಣಸೌಧ ಸಮೀಪದ ಸುವರ್ಣಗಾರ್ಡನ್ ಹಾಗೂ ಅಲಾರವಾಡ್ ಬಳಿ ಟೆಂಟ್ ನಿರ್ಮಿಸಲಾಗಿದೆ. ರಾಜ್ಯ ರಾಜಕಾರಣದಲ್ಲಿ ಆಗ್ತಿರುವ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆಯಂಥ ಬೆಳವಣಿಗೆಯ ಕಾರಣಕ್ಕೆ ಈ ಸಲದ ಅಧಿವೇಶನವೂ ಹೆಚ್ಚಿನ ಗಮನ ಸೆಳೆದಿದೆ. ಈ ಮಧ್ಯೆ ಬೆಳಗಾವಿ ಸುವರ್ಣಸೌಧ ಈ ಸಲ 13 ಅಧಿವೇಶನಕ್ಕೆ ಸಾಕ್ಷಿ ಆಗ್ತಿದೆ. ಕಳೆದ ವರ್ಷ 15 ಕೋಟಿ ವೆಚ್ಚವಾಗಿದ್ರೆ, ಈ ಸಲ 21 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
/filters:format(webp)/newsfirstlive-kannada/media/media_files/2025/12/08/belgavi-suvarna-soudha-cm-2025-12-08-12-17-07.jpg)
ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್ ದಾಳಿ ದುರ್ಘಟನೆ ಇನ್ನೂ ಮಾಸಿಲ್ಲ. ಈ ಮಧ್ಯೆ ಬೆಳಗಾವಿ ಅಧಿವೇಶನದ ಮೇಲೂ ಉಗ್ರರ ಕರಿನೆರಳು ಬಿದ್ದಿದೆ. ಈಗಾಗಲೇ ಕೇಂದ್ರ ಗುಪ್ತಚರ ಇಲಾಖೆ ಕೂಡ ಈ ಸಂಬಂಧ ಮುನ್ಸೂಚನೆ ನೀಡಿದೆ. ಹೀಗಾಗಿ ಬೆಳಗಾವಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಅಲ್ಲದೇ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ನೇತೃತ್ವದಲ್ಲಿ, ಆರು ಎಸ್ಪಿ ದರ್ಜೆ ಅಧಿಕಾರಿಗಳ ಉಸ್ತುವಾರಿಯಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಉಗ್ರ ದಾಳಿ ಭೀತಿ ಹಾಗೂ ಸಾಲು ಸಾಲು ಪ್ರತಿಭಟನೆ ಕಾರಣಕ್ಕೆ ಈ ಸಲದ ಅಧಿವೇಶನಕ್ಕೆ 6 ಸಾವಿರಕ್ಕೂ ಅಧಿಕ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಇನ್ನೂ 2 ಸಾವಿರ ಪೊಲೀಸರಿಗೂ ರೆಡಿ ಇರುವಂತೆ ಗೃಹ ಇಲಾಖೆ ನಿರ್ದೇಶನ ನೀಡಿದೆ. ಭದ್ರತೆಯ ಕಾರಣಕ್ಕೆ ಅಧಿವೇಶನ ಆರಂಭಕ್ಕೂ ಮುನ್ನವೇ ಸೌಧದ ಸುತ್ತಲೂ 3 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ದಾಖಲೆ ಪ್ರಮಾಣದಲ್ಲಿ ಪೊಲೀಸರ ನಿಯೋಜನೆ ಹಿನ್ನೆಲೆಯಲ್ಲಿ ಸೌಧದ ಹಿಂಭಾಗದಲ್ಲಿ 3 ಸಾವಿರ ಪೊಲೀಸ್ ಅಧಿಕಾರಿಗಳ ವಾಸ್ತವ್ಯಕ್ಕೆ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಬೇರೆ ಭಾಗಗಳಲ್ಲಿ ಕೂಡ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಗಾವಿ ಮಹಾನಗರದಲ್ಲಿರುವ ಎಲ್ಲ ಹೋಟೆಲ್, ಲಾಡ್ಜ್‌ಗಳ 3 ಸಾವಿರ ಕೊಠಡಿಗಳನ್ನು ಜಿಲ್ಲಾಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಸಚಿವರು, ಶಾಸಕರು, ಪ್ರತಿಪಕ್ಷ ನಾಯಕರು, ಅಧಿಕಾರಿ ವರ್ಗದ ವಾಸ್ತವ್ಯಕ್ಕೆ ಈ ಕೊಠಡಿ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
/filters:format(webp)/newsfirstlive-kannada/media/media_files/2025/12/08/belgavi-suvarna-soudha-cm-and-speaker-2025-12-08-12-17-21.jpg)
ಈವರೆಗೆ ಅಧಿವೇಶನಕ್ಕೆ 171 ಕೋಟಿ ಖರ್ಚು ಮಾಡಲಾಗಿದೆ. ಆದರೆ ಈ ಭಾಗದ ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ಸ್ವ ಪಕ್ಷೀಯರೇ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಡುತ್ತಿದ್ದು, ಈ ಸಲವಾದರೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಈ ಅಧಿವೇಶನ ಬೆಳಕು ಚೆಲ್ಲಲಿ ಎಂಬುದು ಈ ಭಾಗದ ಜನರ ಆಶಯವಾಗಿದೆ.
ನಾಗೇಶ ಕುಂಬಳಿ ನ್ಯೂಸ್ ಫಸ್ಟ್ ಬೆಳಗಾವಿ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us