/newsfirstlive-kannada/media/media_files/2025/09/16/dhawana-rakesh-2025-09-16-14-49-01.jpg)
ಮೊಮ್ಮಗ ಧವನ್‌ಗೆ ರಾಜಕೀಯ ಚದುರಂಗ ಕಲಿಸುತ್ತಿರುವ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಕುಟುಂಬದ ಮತ್ತೊಂದು ಕುಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯ ರಾಜಕೀಯ ಪ್ರವೇಶ ಮಾಡಲಿದೆ. ಇದಕ್ಕೆ ಈಗ ಅಖಾಡ ಸಿದ್ದವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಈಗಾಗಲೇ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಈ ಹಿಂದೆ ವರುಣಾ ಕ್ಷೇತ್ರದಿಂದ ಶಾಸಕರಾಗಿದ್ದರು. ಈಗ ಯತೀಂದ್ರ , ವಿಧಾನಪರಿಷತ್ ಸದಸ್ಯರಾಗಿದ್ದಾರೆ. ತಂದೆಯ ಕ್ಷೇತ್ರವಾದ ವರುಣಾ ಕ್ಷೇತ್ರದ ಉಸ್ತುವಾರಿಯಾಗಿ ಅಲ್ಲಿನ ಅಭಿವೃದ್ದಿ ಕೆಲಸಗಳನ್ನು ಯತೀಂದ್ರ ನೋಡಿಕೊಳ್ಳುತ್ತಿದ್ದಾರೆ. ರಾಜಕೀಯವಾಗಿಯೂ ಮೈಸೂರು ಜಿಲ್ಲೆಯಲ್ಲಿ ತಂದೆ ಸಿದ್ದರಾಮಯ್ಯಗೆ ನೆರವಾಗುತ್ತಿದ್ದಾರೆ. ಆದರೇ ಯತೀಂದ್ರ ಇನ್ನೂ ಅವಿವಾಹಿತರಾಗಿಯೇ ಉಳಿದಿದ್ದಾರೆ. ಹೀಗಾಗಿ ಈಗ ಸಿಎಂ ಸಿದ್ದರಾಮಯ್ಯಗೆ ಒಬ್ಬ ರಾಜಕೀಯ ಉತ್ತರಾಧಿಕಾರಿ ಬೇಕಾಗಿದೆ. ಆ ರಾಜಕೀಯ ಉತ್ತರಾಧಿಕಾರಿ ಯಾರು ಎಂಬುದು ಈಗಾಗಲೇ ನಿರ್ಧಾರವೂ ಆಗಿದೆ.
ಸಿದ್ದರಾಮಯ್ಯರ ಮತ್ತೊಬ್ಬ ಪುತ್ರ ರಾಕೇಶ್ ಈ ಮೊದಲು ರಾಜಕೀಯವಾಗಿ ಚಾಮುಂಡೇಶ್ವರಿ ಕ್ಷೇತ್ರ, ವರುಣಾ ಕ್ಷೇತ್ರ ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಸಕ್ರಿಯವಾಗಿದ್ದರು. ಆದರೇ, ರಾಕೇಶ್ ವಿದೇಶ ಪ್ರವಾಸಕ್ಕೆ ಹೋದಾಗ, ಅಕಾಲಿಕ ಸಾವಿಗೀಡಾಗಿದ್ದಾರೆ. ಆದರೇ, ರಾಕೇಶ್ ಪುತ್ರ ಧವನ್ ಈಗ ವಿದೇಶದಲ್ಲಿ ಓದುತ್ತಿದ್ದಾರೆ. ಧವನ್ ಗೆ ರಾಜಕೀಯದ ಬಗ್ಗೆ ಆಸಕ್ತಿಯೂ ಇದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ವರುಣಾ ಕ್ಷೇತ್ರದಲ್ಲಿ ತಾತ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರ ನಡೆಸಿದ್ದರು. ವೇದಿಕೆಯಲ್ಲಿ ಭಾಷಣವನ್ನು ಮಾಡಿದ್ದರು. ಆದರೇ, ಧವನ್ ವಿದೇಶದಲ್ಲೇ ಇದ್ದಿದ್ದರಿಂದ ಕನ್ನಡ ಭಾಷೆಯ ಮೇಲೆ ಹಿಡಿತ ಇಲ್ಲ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಿಲ್ಲ ಎಂದು ಜನರು ಅಸಮಾಧಾನಗೊಂಡಿದ್ದರು. ಸಿದ್ದರಾಮಯ್ಯರನ್ನು ಕನ್ನಡ ರಾಮಯ್ಯ ಅಂತ ಕೂಡ ಅಭಿಮಾನಿಗಳು ಕರೆಯುತ್ತಾರೆ. ಆದರೇ, ಅವರ ಮೊಮ್ಮಗನೇ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಿಲ್ಲ ಎಂದು ಬೇಸರಗೊಂಡಿದ್ದರು. ಸಿಎಂ ಸಿದ್ದರಾಮಯ್ಯ ಕೂಡ ಮೊಮ್ಮಗ ವಿದೇಶದಲ್ಲಿ ಇದ್ದು ಬಂದಿದ್ದರಿಂದ ಕನ್ನಡ ಭಾಷೆಯ ಮೇಲೆ ಹಿಡಿತ ಬಂದಿಲ್ಲ, ಸ್ಪಷ್ಟತೆ ಇಲ್ಲ. ವಿದೇಶಿ ಆಕ್ಸೆಂಟ್ ನಲ್ಲಿ ಮಾತನಾಡುತ್ತಿದ್ದಾನೆ ಎಂದು ಸುಮ್ಮನಾಗಿದ್ದಾರೆ.
ಸಿಎಂ ಸಿದ್ದರಾಮಯ್ಯರ ಮೊಮ್ಮಗ ಧವನ್ ರಾಜಕೀಯ ಎಂಟ್ರಿ ಖಚಿತ!
ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರು. ಆ ಸಂದರ್ಭದಲ್ಲಿ ಕ್ಷೇತ್ರದವರಿಗೆ ಮೊಮ್ಮಗ ಧವನ್ ಪರಿಚಯಿಸುವ ಕೆಲಸ ಮಾಡಿದ್ದರು ಸಿಎಂ ಸಿದ್ದರಾಮಯ್ಯ. ಆ ಮೂಲಕ ತಮ್ಮ ಮುಂದಿನ ರಾಜಕೀಯ ಉತ್ತರಾಧಿಕಾರಿ ಧವನ್ ಅನ್ನೋ ಮೆಸೇಜ್ ಪಾಸ್ ಮಾಡಿದ್ದರು ಸಿಎಂ ಸಿದ್ದರಾಮಯ್ಯ. ಸಿಎಂ ಸಿದ್ದರಾಮಯ್ಯರ ಮೊಮ್ಮಗ ಧವನ್ ರಾಜಕೀಯ ಎಂಟ್ರಿ ಖಚಿತವಾಗಿದೆ. ಮೊಮ್ಮಗನಿಗೆ ಮನೆಯಲ್ಲೇ ರಾಜಕೀಯ ಪಟ್ಟುಗಳನ್ನು ಸಿಎಂ ಸಿದ್ದರಾಮಯ್ಯ ಕಲಿಸುತ್ತಿದ್ದಾರೆ. ವಿದೇಶದಿಂದ ಬೆಂಗಳೂರಿಗೆ ಬಂದಾಗ ರಾಜಕೀಯದ ಎ, ಬಿ, ಸಿ, ಡಿ ಹೇಳಿಕೊಡುತ್ತಿದ್ದಾರೆ. ಜೊತೆಗೆ ತಾವು ಹೋದ ಸಭೆ, ಸಮಾರಂಭಗಳಿಗೂ ಧವನ್ ನನ್ನು ಕರೆದೊಯ್ಯುತ್ತಿದ್ದಾರೆ. ಆರ್‌ಸಿಬಿ ಆಟಗಾರರ ಸನ್ಮಾನ ಸಮಾರಂಭಕ್ಕೂ ಧವನ್ ನನ್ನು ಕರೆ ತಂದಿದ್ದರು.
ಧವನ್ ಅಖಾಡಕ್ಕಿಳಿಸುವಂತೆ ವರುಣಾ ಕಾಂಗ್ರೆಸಿಗರ ಒತ್ತಾಯ!
ಧವನ್ ಅನ್ನ ವರುಣಾದಿಂದ ಸ್ಪರ್ಧಿಸಲು ತಯಾರಿ ನಡೆಸಲಾಗುತ್ತಿದೆ ಅನ್ನೋ ವಿಚಾರಗಳು ಕೇಳಿಬರ್ತಾ ಇವೆ. ಇತ್ತೀಚೆಗೆ ವರುಣಾದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರು ರಾಕೇಶ್ ಅವರನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ, ಅನೇಕ ನಾಯಕರು ಧವನ್ ಅವರನ್ನು ರಾಜಕೀಯಕ್ಕೆ ಕರೆತರಬೇಕೆಂದು ಒತ್ತಾಯಿಸಿದ್ದಾರೆ.
ಮುಂದಿನ ಚುನಾವಣೆಗೆ ಸಿದ್ದು ನಿಲ್ಲೋದು ಡೌಟು!
ಕಳೆದ ಚುನಾವಣೆ ಸಂದರ್ಭದಲ್ಲಿ ಇದೇ ನನ್ನ ಕೊನೆಯ ಚುನಾವಣೆ ಅಂತ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಸದ್ಯ ರಾಜಕೀಯ ಪರಿಸ್ಥಿತಿಯನ್ನ ನೋಡ್ತಾ ಇದ್ರೆ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡೋದು ಖಂಡಿತವಾಗಿಯೂ ಡೌಟು. ಆದ್ರೆ, ಇತ್ತೀಚಿನ ದಿನಗಳಲ್ಲಿ ಮಾತ್ರ ತಾವು ಮತ್ತೆ ಸ್ಪರ್ಧೆ ಮಾಡೋ ಸುಳಿವು ಕೊಟ್ಟಿರೋದು ಸತ್ಯ. ಆದ್ರೆ, ಸ್ಪರ್ಧೆ ಸುಲಭವಿಲ್ಲ ಅನ್ನೋದು ಸಿದ್ದುಗೂ ಗೊತ್ತು. ಹಾಗೊಂದು ವೇಳೆ ತಾವು ಸ್ಪರ್ಧೆ ಮಾಡಿ ಗೆದ್ದರೂ, ಸಿಎಂ ಸ್ಥಾನ ಉಳಿಸಿಕೊಳ್ಳುವುದೇ ಸವಾಲಾಗುತ್ತೆ. ಹೀಗಾಗಿ ಮೊಮ್ಮಗನಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ.
ಸಿದ್ದರಾಮಯ್ಯಗೆ ಇರೋ ಏಕೈಕ ಉತ್ತರಾಧಿಕಾರಿ!
ಸಿದ್ದರಾಮಯ್ಯಗೆ ಉತ್ತರಾಧಿಕಾರಿ ರೀತಿಯಲ್ಲಿ ಕಾಣಿಸಿಕೊಂಡಿದ್ದು ಮಗ ರಾಕೇಶ್ . ಯತೀಂದ್ರ ಇದ್ರೂ ರಾಜಕೀಯವಾಗಿ ದೂರವೇ ಇದ್ರು. ಆದರೇ, ರಾಕೇಶ್ ಅಕಾಲಿಕ ಮರಣ ಹೊಂದಿದ್ದಾರೆ. ಹೀಗಾಗಿ ಯತೀಂದ್ರ ಅನಿವಾರ್ಯವಾಗಿ ರಾಜಕೀಯಕ್ಕೆ ಬಂದಿದ್ದಾರೆ. ಇನ್ನು ಯತೀಂದ್ರ ರಾಜಕೀಯ ಎಂಟ್ರಿಯಾದ್ರೂ ನಿರೀಕ್ಷಿತ ಮಟ್ಟದಲ್ಲಿ ಪ್ರಭಾವ ಬೆಳೆಸಿಕೊಂಡಿಲ್ಲ. ರಾಕೇಶ್ ಗೆ ಇದ್ದ ಚಾರಿಷ್ಮಾ, ಚಾರ್ಮ್ ಯತೀಂದ್ರರಲ್ಲಿ ಇಲ್ಲ. ಹೀಗಾಗಿ ಸಿದ್ದರಾಮಯ್ಯಗೆ ಉತ್ತರಾಧಿಕಾರಿ ರಾಕೇಶ್ ಮಗ ಧವನ್ ರಾಕೇಶ್ ಅನ್ನೋ ಮಾತುಗಳು ಕೇಳಿಬರುತ್ತಾ ಇವೆ.
ಜನರ ಪ್ರೀತಿ ನೋಡಿ ರಾಜಕೀಯಕ್ಕೆ ಬರಬೇಕು ಅನ್ನಿಸ್ತು ಎಂದಿದ್ದ ಧವನ್
ಇನ್ನೂ 2023ರ ವಿಧಾನಸಭೆ ಚುನಾವಣೆಯಲ್ಲಿ ಧವನ್ , ಮೈಸೂರಿನ ವರುಣಾ ಕ್ಷೇತ್ರದಲ್ಲಿ ತಾತನ ಪರ ಪ್ರಚಾರ ನಡೆಸಿದ್ದರು. ಆ ವೇಳೆ ಜನರ ಪ್ರೀತಿ ನೋಡಿ ರಾಜಕೀಯಕ್ಕೆ ಬರಬೇಕು ಅನ್ನಿಸಿತು ಎಂದು ಧವನ್ ಹೇಳಿದ್ದರು.
ಇನ್ನೂ ಸಿಎಂ ಸಿದ್ದರಾಮಯ್ಯ ಕೂಡ ನನ್ನ ನಂತರ ಮಗ ಯತೀಂದ್ರ ಹಾಗೂ ಧವನ್ ಗೆ ಆಶೀರ್ವಾದ ಮಾಡಿ ಎಂದು ಜನರಿಗೆ ಬಹಿರಂಗ ವೇದಿಕೆಯಲ್ಲೇ ಕರೆ ಕೊಟ್ಟಿದ್ದರು. ಈ ಮೂಲಕ ತಮ್ಮ ರಾಜಕೀಯ ಉತ್ತರಾಧಿಕಾರಿ ಧವನ್ ಎಂದು ಈ ಹಿಂದೆಯೇ ಘೋಷಿಸಿದ್ದಾರೆ.
ಲಾ ಓದಿ ರಾಜಕೀಯಕ್ಕೆ ಬರುತ್ತೇನೆ ಎಂದಿದ್ದ ಧವನ್
ಇನ್ನೂ ಸಿದ್ದರಾಮಯ್ಯ ಮೊಮ್ಮಗ ಧವನ್ ಕೂಡ ನಾನು ಕೂಡ ತಾತ ಸಿದ್ದರಾಮಯ್ಯ ರೀತಿಯ ಲಾ ಓದಿ ನಂತರ ರಾಜಕೀಯಕ್ಕೆ ಬರುತ್ತೇನೆ. ನಮ್ಮ ತಂದೆ ರಾಕೇಶ್ ಗೆ ರಾಜಕೀಯದಲ್ಲಿರಲು ತುಂಬ ಆಸಕ್ತಿ ಇತ್ತು. ಆದರೇ, ಅವರು ತೀರಿಕೊಂಡರು. ಅವರ ಕನಸು ಅನ್ನು ನಾನು ನನಸು ಮಾಡುತ್ತೇನೆ. ನಮ್ಮಪ್ಪ ರಾಕೇಶ್ ರಕ್ತವೇ ನಂದು. ನನಗೆ ರಾಜಕೀಯದಲ್ಲಿ ತುಂಬ ಆಸಕ್ತಿ ಇದೆ. ಈಗ ನಾನು ಸೆಕೆಂಡ್ ಪಿಯುಸಿ ಓದುತ್ತಿದ್ದೇನೆ ಎಂದು 2023ರಲ್ಲಿ ಟಿವಿ ಚಾನಲ್ ಗಳಿಗೆ ನೀಡಿದ್ದ ಸಂದರ್ಶನದಲ್ಲಿ ಧವನ್ ಹೇಳಿದ್ದರು. ರಾಜಕೀಯದ ಬಗ್ಗೆ ತಾತನ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದೇನೆ ಎಂದು ಧವನ್ ಹೇಳಿದ್ದರು.
ಹೀಗಾಗಿ ಸಿದ್ದರಾಮಯ್ಯ ಮೊಮ್ಮಗ ಧವನ್ ರಾಜಕೀಯ ಎಂಟ್ರಿ ಖಚಿತವಾಗಿದೆ. ರಾಜಕೀಯ ಉತ್ತರಾಧಿಕಾರಿಯಾಗಿ ಧವನ್ ಬೆಳೆಯುವ ಲಕ್ಷಣವೂ ಇದೆ. ಆದರೇ, ಸ್ಪಷ್ಟ ಕನ್ನಡ ಭಾಷೆ ಮಾತನಾಡಬೇಕು. ಇಲ್ಲದಿದ್ದರೇ, ಮೈಸೂರು ಜಿಲ್ಲೆಯ ಜನರ ಧವನ್ ರನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತೆ. ಆದರೇ, ಒರಿಸ್ಸಾದಲ್ಲಿ ನವೀನ್ ಪಾಟ್ನಾಯಕ್ , ಒರಿಯಾ ಭಾಷೆ ಮಾತನಾಡದೇ, ಒರಿಸ್ಸಾದಲ್ಲಿ 20 ವರ್ಷ ಸಿಎಂ ಆಗಿಯೇ ಆಳ್ವಿಕೆ ನಡೆಸಿದ್ದು ಕೂಡ ಕಣ್ಣ ಮುಂದೆಯೇ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.