/newsfirstlive-kannada/media/post_attachments/wp-content/uploads/2025/07/dharamshala-case-police.jpg)
ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು
ರಾಜ್ಯದಲ್ಲಿ ಈಗ ಧರ್ಮಸ್ಥಳದಲ್ಲಿ ಎಸ್‌ಐಟಿ ನಡೆಸುತ್ತಿರುವ ತನಿಖೆಯ ಬಗ್ಗೆಯೇ ಭಾರಿ ಕುತೂಹಲ ಮೂಢಿದೆ. ಅನಾಮಿಕ ದೂರುದಾರ ಮಾಸ್ಕ್ ಹಾಕಿಕೊಂಡು ಬಂದು ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತ್ತಿದ್ದೇನೆ ಎಂದು ಹೇಳಿದ್ದ. ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದ. ಬಳಿಕ ಕೋರ್ಟ್ ಗೆ ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸಿದ್ದ. ಈತನ ಹೇಳಿಕೆಯ ಬಗ್ಗೆ ತನಿಖೆಗಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಮಾಡಿಸುತ್ತಿದೆ.
ಈ ಎಸ್‌ಐಟಿ ತನಿಖಾ ವರದಿಯ ಬಗ್ಗೆ ಈಗ ಕುತೂಹಲ ಉಂಟಾಗಿದೆ. ಈಗಾಗಲೇ 15 ದಿನದಿಂದ ದಿನವೂ ಧರ್ಮಸ್ಥಳದ ವಿವಿಧ ಸ್ಥಳಗಳಲ್ಲಿ ಕಾರ್ಮಿಕರು ಹಾಗೂ ಜೆಸಿಬಿ ಬಳಸಿಕೊಂಡು ಭೂಮಿಯನ್ನು ಅಗೆಯಲಾಗುತ್ತಿದೆ. ಈಗ ಎಸ್‌ಐಟಿ ನೀಡುವ ವರದಿಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಬೇಕು. ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಯ ಫಲಶ್ರುತಿ ಏನೆಂದು ರಾಜ್ಯ ವಿಧಾನಸಭೆಗೆ ತಿಳಿಸಬೇಕೆಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಹೀಗಾಗಿ ಇಂದು ಗೃಹ ಸಚಿವ ಪರಮೇಶ್ವರ್ ರಾಜ್ಯ ವಿಧಾನಸಭೆಗೆ ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ ನಡೆಸಿ, ಪತ್ತೆ ಹಚ್ಚಿದ್ದೇನು ಎನ್ನುವ ಬಗ್ಗೆ ಇಂದು ಉತ್ತರ ನೀಡುವರು.
ಇದಕ್ಕೂ ಮೊದಲು ಇಂದು ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ, ವಿಧಾನಸೌಧದಲ್ಲಿ ಗೃಹ ಸಚಿವ ಪರಮೇಶ್ವರ್ ರನ್ನು ಭೇಟಿಯಾಗಿ ತನಿಖೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ತನಿಖೆ ವೇಳೆ ಯಾವ ಸ್ಥಳದಲ್ಲಿ ಮೂಳೆ ಸಿಕ್ಕಿದೆ, ಶವದ ಅಸ್ಥಿಪಂಜರಗಳು ಸಿಕ್ಕಿವೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿ, ವರದಿ ನೀಡಿದ್ದಾರೆ. ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ನೀಡಿದ ವರದಿಯ ಆಧಾರದ ಮೇಲೆ ಗೃಹ ಸಚಿವ ಪರಮೇಶ್ವರ್ ವಿಧಾನಸಭೆಯಲ್ಲಿ ಉತ್ತರ ನೀಡುವರು. ಸದನಕ್ಕೆ ಉತ್ತರ ನೀಡುವುದಕ್ಕೂ ಮೊದಲು ಗೃಹ ಸಚಿವ ಪರಮೇಶ್ವರ್, ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿರನ್ನು ವಿಧಾನಸೌಧದ ತಮ್ಮ ಕಚೇರಿಗೆ ಕರೆಸಿಕೊಂಡು ಮಾಹಿತಿ, ವರದಿ ಪಡೆದುಕೊಂಡಿದ್ದಾರೆ.
ಈಗ ರಾಜ್ಯ ಸರ್ಕಾರವು ಎಸ್‌ಐಟಿ ತನಿಖೆಯನ್ನು ಮುಂದುವರಿಸುತ್ತಾ ಇಲ್ಲವೇ ಸ್ಥಗಿತಗೊಳಿಸುತ್ತಾ ಎಂಬ ಕುತೂಹಲ ಇದೆ. ಜೊತೆಗೆ ದೂರುದಾರನ ದೂರಿನಲ್ಲಿ ಸತ್ಯಾಂಶ ಇಲ್ಲದೇ ಇದ್ದರೇ, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಇದೆ. ಹೀಗಾಗಿ ದೂರುದಾರನ ವಿರುದ್ಧ ಏನಾದರೂ ಕಾನೂನು ಕ್ರಮದ ಭರವಸೆಯನ್ನು ಗೃಹ ಸಚಿವ ಹಾಗೂ ಸಿಎಂ ಸಿದ್ದರಾಮಯ್ಯ ನೀಡುತ್ತಾರಾ ಎಂಬ ಕುತೂಹಲವೂ ಇದೆ. ಇವೆಲ್ಲದಕ್ಕೂ ಇಂದು ಸಂಜೆಯೊಳಗೆ ತೆರೆ ಬೀಳುವ ನಿರೀಕ್ಷೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.